
CHITRADURGA NEWS | 31 DECEMBER 2025
ಚಿತ್ರದುರ್ಗ: ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ರುಚಿ ರುಚಿಯಾದ ವಿವಿಧ ಸಿರಿಧಾನ್ಯ ಪಾಕಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಇದನ್ನೂ ಓದಿ: ವಸತಿ ಶಾಲೆ ಅವ್ಯವಸ್ಥೆಗೆ ರಾಜ್ಯ ಆಹಾರ ಆಯೋಗ ಅಸಮಧಾನ
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ವತಿಯಿಂದ ಮಂಗಳವಾರ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆ ನಡೆಯಿತು.
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 41 ಜನರು ಭಾಗವಹಿಸಿದ್ದರು. 16 ಜನರು ಸಿಹಿ ಖಾದ್ಯ, 15 ಜನರು ಖಾರ ಖಾದ್ಯದ ವಿವಿಧ ಪದಾರ್ಥಗಳು ಹಾಗೂ 10 ಜನರು ಮರೆತುಹೋದ ಖಾದ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು.
ಸಿರಿಧಾನ್ಯ ಸಿಹಿ ಖಾದ್ಯದಲ್ಲಿ ಬರಗು ಹಲ್ವ ತಯಾರಿಸಿದ ಹೊಸದುರ್ಗ ತಾಲ್ಲೂಕಿನ ಆತ್ರಿಕಟ್ಟೆ ಗ್ರಾಮದ ಎಂ.ಮಂಜುಳ ಪ್ರಥಮ ಬಹುಮಾನ ಪಡೆದರು. ರಾಗಿ ಹಲ್ವ ತಯಾರಿಸಿದ ಹೊಳಲ್ಕೆರೆ ತಾಲ್ಲೂಕಿನ ಹನುಮನಕಟ್ಟೆ ಗ್ರಾಮದ ಎನ್.ಸೌಭಾಗ್ಯ ದ್ವಿತೀಯ ಬಹುಮಾನ ಪಡೆದರು. ಸಿರಿಧಾನ್ಯ ನಿಪ್ಪಟ್ಟು ತಯಾರಿಸಿದ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದ ಎಂ.ವಿದ್ಯಾ ತೃತೀಯ ಬಹುಮಾನ ಪಡೆದರು.
ಇದನ್ನೂ ಓದಿ: ಆಗ್ನೇಯ ಪದವೀಧರರ ಕ್ಷೇತ್ರ | ಮತದಾರರ ಅಂತಿಮ ಪಟ್ಟಿ ಪ್ರಕಟ | ಜಿಲ್ಲೆಯಲ್ಲಿ 41,358 ಮತದಾರರು
ಸಿರಿಧಾನ್ಯ ಖಾರ ಖಾದ್ಯದಲ್ಲಿ ಸಿರಿಧಾನ್ಯ ನಿಪ್ಪಟ್ಟು ತಯಾರಿಸಿದ ಹೊಳಲ್ಕೆ ತಾಲ್ಲೂಕು ರಾಮಗಿರಿಯ ಓಂಕಾರಮ್ಮ ಪ್ರಥಮ, ಸಿರಿಧಾನ್ಯ ಪಿಜ್ಜ ತಯಾರಿಸಿದ ಹೊಸದುರ್ಗದ ಪಿ.ಶ್ರೀದೇವಿ ದ್ವೀತಿಯ ಹಾಗೂ ಸಿರಿಧಾನ್ಯ ಮಸಾಲ ರೊಟ್ಟಿ ತಯಾರಿಸಿದ ಹೊಸದುರ್ಗ ತಾಲ್ಲೂಕಿನ ದೊಡ್ಡತೇಕಲವಟ್ಟಿಯ ಯಶೋಧಮ್ಮ ತೃತೀಯ ಬಹುಮಾನ ಪಡೆದರು.
ಮರೆತುಹೋದ ಖಾದ್ಯದಲ್ಲಿ ಆಳ್ವಿಪಾಯಸ ತಯಾರಿಸಿದ ಚಿತ್ರದುರ್ಗ ತಾಲ್ಲೂಕಿನ ಓಬವ್ವನಾಗ್ತಿಹಳ್ಳಿಯ ಬಿ.ಎಸ್.ಅನಿತ ಶಿವಕುಮಾರ್ ಪ್ರಥಮ ಬಹುಮಾನ ಪಡೆದರು. ಹುರಳಿ ತೊಕ್ಕು ತಯಾರಿಸಿದ ಹೊಳಲ್ಕೆರೆ ತಾಲ್ಲೂಕಿನ ಹನುಮನಕಟ್ಟೆಯ ದಿವ್ಯಶ್ರೀ ಸಂತೋಷ್ ದ್ವಿತೀಯ ಬಹುಮಾನ ಪಡೆದರು. ಕಡಬು ತಯಾರಿಸಿದ ಚಿತ್ರದುರ್ಗ ತಾಲ್ಲೂಕಿನ ಓಬವ್ವನಾಗ್ತಿಹಳ್ಳಿಯ ಎಂ.ಟಿ.ಶೈಲಜಾ ತೃತೀಯ ಬಹುಮಾನ ಪಡೆದರು.
ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಸಿರಿಧಾನ್ಯ ಬೆಳೆಗಳನ್ನು ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು | ಹೊಸ ವರ್ಷದ ಮುನ್ನಾ ದಿನ ಬಿಡುಗಡೆ
ವಿಶೇಷವಾಗಿ ನವಣೆ ಹಾಗೂ ಸಾವೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಕ್ಕೆ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಿರಿಧಾನ್ಯಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, 2016ನೇ ಸಾಲಿನಿಂದಲೂ ಸಿರಿಧಾನ್ಯ ಪಾಕಸ್ಪರ್ಧೆ ಏರ್ಪಡಿಸಿದ್ದು, ಅದರಂತೆ ಪ್ರತಿ ವರ್ಷವೂ ಸಿರಿಧಾನ್ಯ ಪಾಕಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ಮರೆತು ಹೋಗಿದೆ. ಸಿರಿಧಾನ್ಯಗಳು ಪೌಷ್ಠಿಕತೆಗೆ ಹೆಸರುವಾಸಿ. ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶವಿರುತ್ತದೆ ಎಂದು ತಿಳಿಸಿದ ಅವರು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ರೈತರು, ಉದ್ಯಮಿಗಳು ಗಮನಹರಿಸಬೇಕು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 30 | ರಾಜ್ಯದ ಅಡಿಕೆ ಮಾರುಕಟ್ಟೆಗಳ ಪೂರ್ಣ ವಿವರ
ಇದೇ ಸಂದರ್ಭದಲ್ಲಿ 2024ನೇ ಸಾಲಿನ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಪ್ರಶಸ್ತಿ ಹಾಗೂ ನೆನಪಿನ ಕಾಣಿಕ ನೀಡಿದರು. 2025ನೇ ಸಾಲಿನ ಸಿರಿಧಾನ್ಯ ಪಾಕಸ್ಪರ್ಧೆ ವಿಜೇತರಿಗೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಪ್ರಶಸ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಆಹಾರ ತಜ್ಞೆ ಸರಸ್ವತಿ ಸೇರಿದಂತೆ ಮತ್ತಿತರರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
