ಮುಖ್ಯ ಸುದ್ದಿ
ಚಿತ್ರದುರ್ಗದ ಇಂಚಿಂಚೂ ಮಾಹಿತಿ ಕಲೆ ಹಾಕಿರುವ ಬುಕಾನನ್ | ಎಂ.ಜಿ.ಆರ್

CHITRADURGA NEWS | 23 MARCH 2025
ಚಿತ್ರದುರ್ಗ: ಹಳೆ ಮೈಸೂರು ಭಾಗದಲ್ಲಿ ಡಾ.ಬುಕಾನನ್ ಒಂದು ವರ್ಷ ಎರಡು ತಿಂಗಳು ಹದಿಮೂರು ದಿನಗಳ ಕಾಲ ಪ್ರವಾಸ ಮಾಡಿ ಅನೇಕ ಮಾಹಿತಿಗಳನ್ನು ಪಡೆದು ತಮ್ಮ ಬರವಣಿಗೆಯಲ್ಲಿ ದಾಖಲಿಸಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ.ಎಂ.ಜಿ.ರಂಗಸ್ವಾಮಿ ತಿಳಿಸಿದರು.
Also Read: Kannada Novel: 25. ಉತ್ತರೆ ಮಳೆ ಸುರಿಯಿತು

ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನದ ಸಹಯೋಗದಲ್ಲಿ ನಗರದ ಐ.ಎಂ.ಎ. ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 50ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ ಡಾ.ಬುಕಾನನ್ ಮತ್ತು ಡಾಬ್ಸ್ ಕುರಿತು ಮಾತನಾಡಿದರು.
ವೃತ್ತಿಯಿಂದ ವೈದ್ಯರಾಗಿದ್ದ ಡಾ.ಬುಕಾನನ್ ಅವರದ್ದು ವಿಶಿಷ್ಟವಾದ ವ್ಯಕ್ತಿತ್ವ. ವೈದ್ಯಕೀಯ ಶಾಸ್ತ್ರ ಓದಿದ್ದರೂ ಬಟಾನಿಸ್ಟ್ ಆಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ, ಡಾ.ಬುಕಾನನ್ ಬರೆಯದ ವಿಚಾರಗಳಿಲ್ಲ. ಕರ್ನಾಟಕದ ಭಾಗದ ಬೆಳೆಗಳಿಂದ ಹಿಡಿದು ಉತ್ತರಾಣಿ ಕಡ್ಡಿಯವರೆಗೂ ಬರೆದಿದ್ದಾರೆ.
ಯಾರ್ಯಾರು ಕತ್ತೆಗಳನ್ನು ಸಾಕುತ್ತಿದ್ದರು ಎನ್ನುವುದನ್ನು ಬಿಟ್ಟಿಲ್ಲ. ಎಲ್ಲವನ್ನು ಬರವಣಿಗೆ ಮೂಲಕ ದಾಖಲು ಮಾಡಿದ್ದಾರೆ. ವಿರಾಟ ಸ್ವರೂಪದ ವ್ಯಕ್ತಿತ್ವವುಳ್ಳ ಡಾ.ಬುಕಾನನು ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಯುದ್ದದಲ್ಲಿ ಸೆಣಸಾಡಿದ ಮಾಹಿತಿಯನ್ನು ಸಂಗ್ರಹಿಸಿದ್ದಾರೆಂದರು.
Also Read: ಏಪ್ರಿಲ್ 16, 17 ಸರ್ಕಾರಿ ನೌಕರರ ಕ್ರೀಡಾಕೂಟ | ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ
ಮಂಡ್ಯ, ಮೈಸೂರಿಗೆ ಆಗಮಿಸಿದ ಡಾ.ಬುಕಾನನ್ ರಾಜಾಜ್ಞೆ ಪಡೆದುಕೊಂಡು ಅನೇಕ ಊರುಗಳಿಗೆ ಸಂಚರಿಸಿ ಎಲ್ಲೆಲ್ಲಿ ಏನೇನು ಮಾಹಿತಿಯಿದೆ ಎನ್ನುವುದನ್ನು ಸಂಗ್ರಹಿಸುವುದು ಆತನ ಗುಣ. 18 ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ಅಧ್ಯಯನ ನಡೆಸಿ ನಂತರ ಮಂಡ್ಯ, ಬೆಂಗಳೂರಿಗೆ ಬರುತ್ತಾನೆ.
ಶಿರಾ, ತುಮಕೂರು, ಗುಬ್ಬಿ, ಕರೂರು, ಮಂಗಳೂರು, ಉಡುಪಿ, ಬನವಾಸಿ, ಇಕ್ಕೇರಿ, ಶಿವಮೊಗ್ಗ, ಸೂಳೆಕೆರೆ, ಬಸವಾಪಟ್ಟಣ, ಹರಿಹರದಲ್ಲಿ ಪ್ರಯಾಣಿಸುವ ಡಾ.ಬುಕಾನನ್ 1801 ಏ.15 ರಂದು ಚತ್ರದುರ್ಗ ಜಿಲ್ಲೆ ಪ್ರವೇಶಿಸಿ ಎರಡು ದಿನ ಉಳಿದುಕೊಂಡು ಶಿವುಪ್ಪ ಎನ್ನುವ ಶಾನುಭೋಗನನ್ನು ಹಿಡಿದು ಇಲ್ಲಿನ ಮಾಹಿತಿ ಪಡೆದುಕೊಳ್ಳುತ್ತಾರೆ ಎಂದರು.
ದೊಡ್ಡಸಿದ್ದವ್ವನಹಳ್ಳಿಯಲ್ಲಿ ಒಂದು ದಿನ ತಂಗಿದ್ದ ಡಾ.ಬುಕಾನನ್ ಚಳ್ಳಕೆರೆಯ ನನ್ನಿವಾಳದ ಗುಡ್ಡದ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಾರೆ. ಐಮಂಗಲಕ್ಕೆ ಹೋಗಿ ಅಲ್ಲಿನ ಕೋಟೆಯ ಬಗ್ಗೆಯೂ ಬರೆಯುತ್ತಾರೆ.
Also Read: ಯುಗಾದಿ ಹಬ್ಬಕ್ಕೆ ಮೈಸೂರಿನಿಂದ 2 ವಿಶೇಷ ರೈಲು | ಚಿತ್ರದುರ್ಗಕ್ಕೆ ಯಾವಾಗ ಮತ್ತು ಎಷ್ಟು ಗಂಟೆಗೆ ಬರಲಿದೆ?
ಬೆನ್ನಿಗೆ ಕೊಕ್ಕೆ ಹಾಕಿ ಸಿಡಿ ಆಡಿಸುವ ಕ್ರೂರ ಪದ್ದತಿಯನ್ನು ತಮ್ಮ ಬರವಣಿಗೆಯಲ್ಲಿ ಖಂಡಿಸಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ ವರ್ಷವಿಡಿ ಹರಿಯುವ ವೇದಾವತಿ ನದಿಯ ಬಗ್ಗೆಯೂ ಉಲ್ಲೇಖಿಸಿ ಮೂರು ಬಗೆಯ ಮೀನುಗಳನ್ನು ಕಂಡಿರುವುದನ್ನು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣತೆಲಗಾವಿ, ಪ್ರೊ.ಹೆಚ್.ಲಿಂಗಪ್ಪ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಪ್ರೊ.ವೀರಣ್ಣ, ಪ್ರೊ.ವೀರನಾಯಕ, ಡಾ.ತಿಪ್ಪೇಸ್ವಾಮಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
