ಮುಖ್ಯ ಸುದ್ದಿ
ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ನೇತೃತ್ವದಲ್ಲಿಂದು ಬೈಕ್ ರ್ಯಾಲಿ

CHITRADURGA NEWS | 25 JANUARY 2024
ಚಿತ್ರದುರ್ಗ: ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಶೋಷಿತ, ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ವೇಳೆ ಹೆಚ್ಚು ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಲೋಕಸಭೆ ಟಿಕೇಟ್ ಆಕಾಂಕ್ಷಿ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಜ.24 ಬುಧವಾರ ಪ್ರವಾಸಿ ಮಂದಿರದಲ್ಲಿ ಬೆಂಬಗಲಿಗರ ಸಭೆ ನಡೆಸಿದ ಡಾ.ಬಿ.ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಆಯೋಗದ ವರದಿ ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ ಎಂದಿದ್ದಾರೆ.

ಇದನ್ನೂ ಓದಿ: ನಾಗರಹಾವು ಕಚ್ಚಿ 11 ವರ್ಷದ ಬಾಲಕ ಸಾವು
ಜೊತೆಗೆ ಲೋಕಸಭೆ ಚುನಾವಣೆಯೂ ಹತ್ತಿರದಲ್ಲಿರುವುದರಿಂದ ಶಕ್ತಿ ಪ್ರದರ್ಶನ ಆಗಬೇಕಿದೆ. ಸಮಾವೇಶದಲ್ಲಿ ಜನ ಸೇರಿಸುವ ನಿಟ್ಟಿನಲ್ಲಿ ಜ.25(ಇಂದು) ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಚಿತ್ರದುರ್ಗ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.

ಕನಿಷ್ಟ 500 ಬೈಕುಗಳು ಸೇರಬೇಕು. ನಗರಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಮಾವೇಶಕ್ಕೆ ಬರುವಂತೆ ಮಾಡಬೇಕು ಎಂದು ತಿಪ್ಪೇಸ್ವಾಮಿ ಬೆಂಬಲಿಗರಿಗೆ ತಿಳಿಸಿದ್ದಾರೆ.
ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದರಿಂದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸೋಣ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು
ಜ.27 ರಂದು ಮತ್ತೊಮ್ಮೆ ಬೈಕ್ ರ್ಯಾಲಿ ನಡೆಸಿ ಜನಜಾಗೃತಿ ಮೂಡಿಸುವ ಮೂಲಕ ಸಮಾವೇಶದಲ್ಲೆ ಹೆಚ್ಚು ಜನ ಸೇರುವಂತೆ ಮಾಡಬೇಕಾಗಿದೆ ಎಂದು ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ಚಿತ್ರದುರ್ಗದಲ್ಲಿ ಈವರೆಗೆ ಹೊರಗಿನಿಂದ ಬಂದವರೇ ಸಂಸದರಾಗಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ನೀಡುವುದು ಬೇಡ. ಚಿತ್ರದುರ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ದಿ ಆಗಬೇಕಾದರೆ ಸ್ಥಳೀಯರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರೇ ನಮ್ಮ ಅಭ್ಯರ್ಥಿಯಾಗಬೇಕು ಎನ್ನುವ ಕೂಗು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಬಂದಾಗ ಹೊರಗಿನಿಂದ ಬಂದವರು ಇಲ್ಲಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸುತ್ತಾರೆ. ಆನಂತರ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಮರೆಯುತ್ತಾರೆ. ಈ ಪರಿಪಾಠ ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕು. ಈ ಕಾರಣಕ್ಕೆ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಅವರಿಗೆ ಬೆಂಬಲವಾಗಿ ನಿಲ್ಲೋಣ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಭೀಕರ ಕಾರು ಅಪಘಾತ | ಮೂರು ಪುಟ್ಟ ಕಂದಮ್ಮಗಳು ಅಪಘಾತಕ್ಕೆ ಬಲಿ
ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಚಿತ್ರದುರ್ಗದಲ್ಲಿ ಸ್ಥಳೀಯರಿಗೆ ಟಿಕೇಟ್ ಸಿಗಬೇಕು ಎನ್ನುವ ನಮ್ಮ ಬೇಡಿಕೆ ಹೈಕಮಾಂಡ್ ಅಂಗಳ ತಲುಪುವಂತೆ ನಾವೆಲ್ಲಾ ಕೆಲಸ ಮಾಡೋಣ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚೌಳೂರು ಪ್ರಕಾಶ್, ತುರುವನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಆರ್.ಮಂಜುನಾಥ್, ಗ್ರಾಪಂ ಸದಸ್ಯ ಕೆ.ಮಂಜುನಾಥ್, ಕಿರಣ್ಯಾದವ್, ಹಿರೇಗುಂಟನೂರು ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ, ರಾಜು ಯಾದವ್, ರಾಜಶೇಖರ್, ಮಲ್ಲೇಶ್, ಬಿ.ರಾಜಣ್ಣ ಮತ್ತಿತರರಿದ್ದರು.
