
CHITRADURGA NEWS | 28 JULY 2025
ಚಿತ್ರದುರ್ಗ: ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಡಿಯಲ್ಲಿ ಸೆಪ್ಟಂಬರ್ 1 ರಿಂದ ಅಕ್ಟೋಬರ್ 5 ರವರೆಗೆ ಬಸವ ಸಂಸ್ಕೃತಿ ಅಭಿಯಾನ ನಡೆಸುವ ಸಂಬಂಧ ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಇದನ್ನೂ ಓದಿ: ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸ್ಪರ್ಧೆ | ವಿದ್ಯಾ ವಿಕಾಸ ಶಾಲೆಗೆ ಪ್ರಥಮ ಸ್ಥಾನ
ಸಭೆಯಲ್ಲಿ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಎಂಎಲ್ಸಿ ಕೆ.ಎಸ್.ನವೀನ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.
ಸೆ.16 ರಂದು ಚಿತ್ರದುರ್ಗದಲ್ಲಿ ಅರ್ಥಪೂರ್ಣ ಹಾಗೂ ಸಡಗರದಿಂದ ಕಾರ್ಯಕ್ರಮ ನಡೆಸಲಿದ್ದು, ತಯಾರಿಗಾಗಿ ಕಾರ್ಯಕಾರಿ ಸಮಿತಿ ನೇಮಕ ಮಾಡಿಕೊಳ್ಳಲಾಯಿತು.
ಸಭೆಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ, ಲಿಂಗಾಯಿತ ಎನ್ನುವುದು ಜಾತಿಯಲ್ಲ. ಅದೊಂದು ತತ್ವ, ಸಿದ್ಧಾಂತ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಇದನ್ನೂ ಓದಿ: ದಿಶಾ ಸಮಿತಿಗೆ 8 ಜನರ ನಾಮನಿರ್ದೇಶನ | ಜಿಪಂ ಸಿಇಓ ಆದೇಶ
ಬಸವ ಸಾಂಸ್ಕೃತಿಕ ಅಭಿಯಾನ ನಡೆಸುವ ಉದ್ದೇಶದಿಂದ ಲಿಂಗಾಯಿತ ವiಠಾಧಿಪತಿಗಳ ಒಕ್ಕೂಟ ರಚಿಸಿ 3-4 ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಅಭಿಯಾನ ಯಶಸ್ವಿಗೊಳಿಸುವ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲೂ ನಡೆಸುವ ಆಶಯ ಹೊಂದಲಾಗಿದೆ ಎಂದು ಹೇಳಿದರು.
ಇಲ್ಲಿ ಯಾರು ನಾಯಕರಲ್ಲ. ನಮ್ಮ ನಾಯಕ ಬಸವಣ್ಣನವರೇ ಆಗಿದ್ದಾರೆ. ನಾವು ಅವರ ಅನುಯಾಯಿಗಳು. ಇಲ್ಲಿ ನಾವು ಸಾಮಾನ್ಯರಾಗಿ ಕೆಲಸ ಮಾಡಬೇಕಿದೆ. ಇಲ್ಲಿ ಯಾವುದೇ ಕುರ್ಚಿ ಅಮಿಷಗಳಗೆ ಬರುವುದು ಬೇಡ. ಸ್ಥಾನಮಾನಕ್ಕಿಂತ ಸಂಘಟನೆ ಮುಖ್ಯ. ಜಾತಿ ಸಂಘರ್ಷವಿಲ್ಲದೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಎಂದರು.
ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಉದಾತ್ತ ತತ್ವ ನೀಡಿದ ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಾಗುವುದಕ್ಕಿಂತ ದೇಶದ ಸಾಂಸ್ಕೃತಿಕ ನಾಯಕರಾದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಡಿಕೆ ರೇಟ್ | ಜುಲೈ 28| ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ
ಸಂವಿಧಾನದ ವಿಚಾರಗಳನ್ನು ಅಂದು ಅನುಭವ ಮಂಟಪದಲ್ಲಿ ಜಾರಿಗೆ ತಂದರು. ಆ ಹಿನ್ನಲೆಯಲ್ಲಿ ಬಸವ ಸಾಂಸ್ಕೃತಿಕ ಅಭಿಯಾನ ಏರ್ಪಟ್ಟಿದೆ. ಬಸವಣ್ಣನವರು ಹೇಗೆ ಸರ್ವಸಮಾಜದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೋ ಅದೇ ರೀತಿ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ವಹಿಸಿ ಅರ್ಥಪೂರ್ಣವಾಗಿಸಬೇಕಿದೆ.
ಈ ನಿಟ್ಟಿನಲ್ಲಿ ಬಸವಣ್ಣನವರ ಚಿಂತನೆ, ಸಂವಾದ, ಜನಜಾಗೃತಿ ಸೇರಿದಂತೆ ವಿಶಿಷ್ಟ ರೀತಿಯಲ್ಲಿ ಆಚರಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಬಸವ ಸಾಂಸ್ಕೃತಿಕ ಅಭಿಯಾನ ಒಂದು ಒಳ್ಳೆಯ ಪರಿಕಲ್ಪನೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ಈ ಕಾರ್ಯಕ್ರಮ ಎಲ್ಲರಿಗೂ ಮಾರ್ಗದರ್ಶಿಯಾಗಬೇಕು. ಇದರಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ನಾನು ಶಾಸಕನಾಗಿ ಅನ್ನುದಕ್ಕಿಂತ ಒಬ್ಬ ಬಸವ ಅನುಯಾಯಿಯಾಗಿ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವೀರಶೈವ ಸಮಾಜದ ಮುಖಂಡ ಕೆ.ಸಿ.ನಾಗರಾಜ್, ಹಿರಿಯ ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಉಪಾಧ್ಯರ ಚುನಾವಣೆ | ಶಕೀಲಾಬಾನು ಅವಿರೋಧ ಆಯ್ಕೆ
ಬಸವಪರ ಸಂಘಟನೆಗಳು, ಬಸವಕೇಂದ್ರ, ಬಸವದಳ, ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ಮಹಿಳಾಪರ ಸಂಘಟನೆಗಳು, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಹಾಗೂ ಜಿಲ್ಲಾ ಘಟಕ ಸ್ಥಳೀಯ ವೀರಶೈವ ಸಮಾಜ ಹಾಗೂ ವಿವಿಧ ಸಮಾಜಗಳು ಭಾಗವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಸಮಾಜದ ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ, ಸ್ಥಳೀಯ ವೀರಶೈವ ಸಮಾಜದ ಕಾರ್ಯದರ್ಶಿ ವೀರೇಂದ್ರ ಕುಮಾರ್, ಖಜಾಂಚಿ ತಿಪ್ಪೇಸ್ವಾಮಿ, ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಕೆಂಚವೀರಪ್ಪ, ವಿವಿಧ ಸಂಘಟನೆ ಹಾಗೂ ಸಮಾಜಗಳ ಪಧಾಧಿಕಾರಿಗಳಾದ ದ್ಯಾಮಣ್ಣ, ರಾಗಿ ಶಿವಲಿಂಗಪ್ಪ, ಎಸ್.ವಿ.ಕಲ್ಲೇಶ್, ಪಿ.ವಿ.ಕರಿಯಪ್ಪ ಮತ್ತಿತರರಿದ್ದರು.
ಕಾರ್ಯಕಾರಿ ಸಮಿತಿ ಆಯ್ಕೆ:
ಕಾರ್ಯಕ್ರಮದ ಕಾರ್ಯಕಾರಿ ಸಮಿತಿ ರಚಿಸಿದ್ದು, ಅಧಕ್ಷರಾಗಿ ಹನುಮಲಿ ಷಣ್ಮುಖಪ್ಪ, ಗೌರವ ಕಾರ್ಯದರ್ಶಿಯಾಗಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ಗೌರವ ಉಪಾಧ್ಯಕ್ಷರಾಗಿ ಕೆ.ಎಸ್.ನವೀನ್, ಜಿ.ಎಂ.ಅನಿತ್ ಕುಮಾರ್, ಖಜಾಂಚಿಯಾಗಿ ಕೆ.ಎಂ.ವೀರೇಶ್ ಅವರನ್ನು ನೇಮಕ ಮಾಡಲಾಯಿತು ಮತ್ತು ಮುಂದೆ ಉಪಸಮಿತಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
