
CHITRADURGA NEWS | 23 NOVEMBER 2025
ಚಿತ್ರದುರ್ಗ: ಆಟೋ ಚಾಲಕ ಮಾಳಪ್ಪನಹಟ್ಟಿ ತಿಪ್ಪೇಸ್ವಾಮಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.
ಈ ವೇಳೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂಧಿಗಳ ತಪ್ಪಿದ್ದರೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಆಟೋ ಬಂದಿದ್ದರಿಂದ ಸ್ಥಳದಲ್ಲಿದ್ದ ಪೊಲೀಸರು ತಡೆದಿದ್ದಾರೆ. ಈ ವೇಳೆ ಆತನ ವರ್ತನೆ ನೋಡಿದಾಗ ಕುಡಿದಿರುವ ಅನುಮಾನ ಬಂದು ತಪಾಸಣೆ ನಡೆಸಲು ಮುಂದಾದಾಗ ಆಟೋ ನಿಲ್ಲಿಸಿ ಹೋಗಲು ಯತ್ನಿಸಿದ್ದು, ಪೊಲೀಸರು ಹಿಡಿದುಕೊಂಡು ಆಟೋ ಬಳಿ ಕರೆತರುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಆಟೋ ಚಾಲಕ ಆತ್ಮಹತ್ಯೆಗೆ ಯತ್ನ | ಗಾಂಧಿ ವೃತ್ತದಲ್ಲಿ ನಡೆದ ಘಟನೆ | ಪೊಲೀಸರೊಂದಿಗೆ ವಾಗ್ವಾದ
ಈ ವೇಳೆ ಹಲ್ಲೆಯಾಗಿದ್ದರೆ ಸಿ.ಸಿ.ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ರಾತ್ರಿ 9.50 ರ ಸುಮಾರಿನಲ್ಲಿ ಗಾಂಧಿ ವೃತ್ತದಲ್ಲಿ ಸುತ್ತಲೂ ಬೆಂಕಿ ಹಾಕಿಕೊಂಡು ಮಧ್ಯೆ ನಿಂತು ಪೆಟ್ರೋಲ್ ಬಾಟಲಿ ಹಿಡಿದು ಮೈ ಮೇಲೆ ಸುರಿದುಕೊಳ್ಳುತ್ತಿರುವಾಗಲೇ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಆತನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್.ಎಸ್.ಆಸ್ಪತ್ರೆಗೆ ಕಳಿಸಲಾಗಿದೆ.
ಅಲ್ಲಿನ ವೈದ್ಯರ ಜೊತೆ ಮಾತನಾಡಿದ್ದು, ಚಿಕಿತ್ಸೆಗೆ ಇಲಾಖೆಯಿಂದ ಸಹಾಯ ಮಾಡಲಾಗುತ್ತಿದೆ. ಈ ಸಂಬಂಧ ದಾವಣಗೆರೆ ಎಸ್ಪಿ ಅವರ ಜೊತೆಗೂ ಮಾತನಾಡಿದ್ದೇವೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಸಾರ್ವಜನಿಕರ ಉದಾಸೀನಕ್ಕೆ ಬೇಸರ:
ನಡು ರಸ್ತೆಯಲ್ಲಿ ಸುತ್ತಲೂ ಬೆಂಕಿ ಹಾಕಿಕೊಂಡು ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಳ್ಳುವಾಗ ಸಾರ್ವಜನಿಕರು ತಡೆಯುವ ಪ್ರಯತ್ನ ಮಾಡಬಹುದಿತ್ತು. ಬೆಂಕಿ ಹಚ್ಚಿಕೊಂಡಾಗಲೂ ತಕ್ಷಣ ನೆರವಿಗೆ ಧಾವಿಸಿಲ್ಲ ಎಂದು ಎಸ್ಪಿ ಬೇಸರ ವ್ಯಕ್ತಪಡಿಸಿದರು.
ಗಾಂಧಿ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ:
ಇದೇ ವೇಳೆ ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿರುವ ನೂರಾರು ಆಟೊ ಚಾಲಕರು ರಸ್ತೆ ತಡೆ ನಡೆಸಿ, ಬೆಳಗಿನಿಂದಲೇ ಧರಣಿ ನಡೆಸುತ್ತಿದ್ದಾರೆ.
ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನ್ಯಾಯಬೇಕು ಎಂದು ಘೋಷಣೆ ಕೂಗಿದರು. ಶೇ.50ಕ್ಕಿಂತ ಹೆಚ್ಚು ಸುಟ್ಟು ಹೋಗಿದ್ದು, ಚಿಕಿತ್ಸೆಗೆ ನೆರವಾಗಬೇಕು.
ಆಟೋ ಚಾಲಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು. ಆಟೋ ನಿಲ್ಲಿಸಲು ಸ್ಥಳಗಳನ್ನು ಗುರುತಿಸಬೇಕು.
ಆಟೋ ಚಾಲಕರು, ಮಾಲೀಕರ ಪರವಾಗಿ ದೂರು ನೀಡಲಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
