
CHITRADURGA NEWS | 07 December 2025
ಚಿತ್ರದುರ್ಗ: ಸಂವಿಧಾನದ ಮೂಲಕ ಸಮಾಜದಲ್ಲಿ ಶೋಷಿತರು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ವಿನಾಯಕ ತೊಡರನಾಳ್ ಹೇಳಿದರು.
ಇದನ್ನೂ ಓದಿ: ಸುಲಿಗೆ ಮಾಡಿದ್ದ ಮೂರು ಜನರಿಗೆ ಮೂರು ವರ್ಷ ಜೈಲು ಶಿಕ್ಷೆ | 50 ಸಾವಿರ ದಂಡ

ನಗರದ ಜಿಲ್ಲಾ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ದಲಿತರು, ಶೋಷಿತರು ಹಾಗೂ ದೇಶದ ಸಮಸ್ತ ಸ್ತ್ರೀ ಕುಲದ ವಿಮೋಚಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಆತ್ಮಸ್ಥೈರ್ಯ ತುಂಬಿದರು. ಸಮಾಜದಲ್ಲಿ ಶೋಷಣೆ ಹಾಗೂ ದಬ್ಬಾಳಿಕೆ ಹೋಗಲಾಡಿಸಲು ಪ್ರಯತ್ನಿಸಿದರು. ಸಂವಿಧಾನದಲ್ಲಿ ಸಮಾನತೆ ತತ್ವ ಸಾಕಾರಗೊಳಿಸಿ ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಕರೆ ನೀಡಿದರು.
ಮುಂದುವರಿದ ಸಮುದಾಯಗಳ ನಡುವೆ ದಮನಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ಧ್ವನಿಯಾಗಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಬದುಕು ಹಾಗೂ ಹಕ್ಕು ಕೊಟ್ಟ ಮಹಾನ್ ಚೇತನಕ್ಕೆ ನಾವೆಲ್ಲರೂ ಋಣಿಯಾಗಿರಬೇಕು ಎಂದು ಹೇಳಿದರು.
ಇದನ್ನೂ ಓದಿ: ಡಿಸೆಂಬರ್ 7 ರಂದು ಚಿತ್ರದುರ್ಗದ ವಿವಿಧೆಡೆ ನಿಷೇಧಾಜ್ಞೆ | ಡಿಸಿ ಟಿ.ವೆಂಕಟೇಶ್
ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎಂ.ಎನ್.ಅಹೋಬಳಪತಿ ಮಾತನಾಡಿ, ಪ್ರಸ್ತುತ ಜನಸಾಮಾನ್ಯರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಬಾಲಿಶವಾದ ಚರ್ಚೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ.
ಅಂಬೇಡ್ಕರ್ ಸಮಗ್ರ ದೇಶದ ಪ್ರಗತಿ ಕುರಿತು ಚಿಂತಿಸಿದವರು. ಕಾರ್ಮಿಕರ ಕಾನೂನುಗಳು, ಹೆಣ್ಣುಮಕ್ಕಳಿಗೆ ಆಸ್ತಿಹಕ್ಕು, ಕೈಗಾರಿಕರಣ, ಆರ್ಥಿಕ ನೀತಿಗಳು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಅಂಬೇಡ್ಕರ್ ತಳಸ್ಪರ್ಶಿಯಾಗಿ ಅಧ್ಯಯನ ನಡೆಸುವುದರೊಂದಿಗೆ ಕಾರ್ಯನಿರ್ವಹಿಸಿದರು.
ಸಮಾಜದ ಏಣಿಶ್ರೇಣಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಸ್ಥರಕ್ಕೆ ಸೇರಿದ ಅಂಬೇಡ್ಕರ್, ಧರ್ಮ ಹಾಗೂ ಸಂಪ್ರಾದಾಯಗಳ ಹೆಸರಿನಲ್ಲಿದ್ದ ಅಸಮಾನತೆಗಳನ್ನು ವಿಮರ್ಶಾತ್ಮಕ ದೃಷ್ಠಿಯಿಂದ ನೋಡಿ, ಅವುಗಳ ವಿರುದ್ಧ ಹೋರಾಟ ನಡೆಸಿದರು.
ಇದನ್ನೂ ಓದಿ: 1.50 ಕೋಟಿ ವೆಚ್ಚದಲ್ಲಿ ಹೊಸಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ
ಅಂಬೇಡ್ಕರ್ ಹೋರಾಟ ಮಾಡುವುದರ ಜೊತೆಗೆ ತಮ್ಮ ವಿಚಾರಗಳಿಗೆ ಬರಹದ ರೂಪ ನೀಡಿದ್ದಾರೆ. ತಮ್ಮ ಜೀವಿತ ಕೊನೆಗಾಲದಲ್ಲಿ ಸಮಾನತೆಯನ್ನು ಎತ್ತಿ ಹಿಡಿದ ಬೌದ್ಧಧರ್ಮ ಸ್ವೀಕರಿಸಿ, ಬುದ್ದ ವಿಚಾರಗಳನ್ನು ತಮ್ಮ ಬೌದ್ಧ ಹಾಗೂ ದಮ್ಮ ಗ್ರಂಥ ಕೃತಿಯಲ್ಲಿ ಸಂಗ್ರಹಿಸಿದರು. 1956 ಡಿ.06 ರಂದು ಅಂಬೇಡ್ಕರ್ ಮರಣ ಹೊಂದಿದ ನಂತರ ಮಹಾಪರಿನಿರ್ವಾಣ ದಿನ ಎಂದು ಗೌರವದಿಂದ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ದೇಶದ ಧರ್ಮಗ್ರಂಥವಾಗಿದೆ. ಈ ಸಂವಿಧಾನದ ಆಶಯದಲ್ಲಿ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತಿವೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆಯೇ ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಅಂಬೇಡ್ಕರ್ ಅವರ ಆಶಯ ಈಡೇರಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಇದನ್ನೂ ಓದಿ: ಸೈಬರ್ ವಂಚನೆ ದೂರುಗಳಿಗೆ 198 ಸಂಖ್ಯೆಗೆ ಕರೆ ಮಾಡಿ | ಬ್ರಜೇಂದ್ರ ಕುಮಾರ್
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ವಿ.ಅಪ್ಪು, ಖಜಾಂಚಿ ಡಿ.ಕುಮಾರಸ್ವಾಮಿ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿ ವಿ.ಚಂದ್ರಪ್ಪ, ಹೆಚ್.ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ನಾಕಿಕೆರೆ, ನಿರ್ದೇಶಕರಾದ ಜಿ.ಓ.ಎನ್.ಮೂರ್ತಿ, ಜಡೇಕುಂಟೆ ಮಂಜುನಾಥ, ಟಿ.ದರ್ಶನ್, ಎಸ್.ಬಿ.ರವಿಕುಮಾರ್ ಉಗ್ರಾಣ, ಪತ್ರಕರ್ತರಾದ ಗೊಂಡಬಾಳ ಬಸವರಾಜ್, ಸುರೇಶ್ ಪಟ್ಟಣ್, ಹನುಮಂತರಾಜ, ಆರ್.ಶಿವರಾಜ್ ಸೇರಿದಂತೆ ಮತ್ತಿತರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
