ಕ್ರೈಂ ಸುದ್ದಿ
ಹಣದ ವಿಚಾರ ಕೊಲೆಯಲ್ಲಿ ಅಂತ್ಯ | ತುರುವನೂರು ಪೊಲೀಸರಿಂದ ಆರೋಪಿ ಬಂಧನ

CHITRADURGA NEWS | 10 JANUARY 2024
ಚಿತ್ರದುರ್ಗ: ಒಂದು ಲಕ್ಷ ಸಾಲದ ವಿಚಾರವಾಗಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿಯನ್ನು ತುರುವನೂರು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ತಾಲೂಕು ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದವ್ವನದುರ್ಗ ಗ್ರಾಮದಲ್ಲಿ 63 ವರ್ಷದ ಬಸವರಾಜಪ್ಪ ಎಂಬ ವೃದ್ಧರೊಬ್ಬರ ಕೊಲೆ ಮಾಡಿ ಜಮೀನಿನಲ್ಲಿ ಹೂತಿಟ್ಟಿದ್ದ ಪ್ರಕರಣ ನಡೆದಿತ್ತು.

ಕೊಲೆ ಆರೋಪಿ 45 ವರ್ಷದ ಚಂದ್ರಣ್ಣನನ್ನು ಪೊಲೀಸರು ಬಂದಿಸಿದ್ದಾರೆ.
ಕೊಲೆಯಾದ ಬಸವರಾಜಪ್ಪನಿಗೆ ಚಂದ್ರಣ್ಣ 1 ಲಕ್ಷಕ್ಕೂ ಹೆಚ್ಚು ಸಾಲ ನೀಡಿದ್ದು, ಸಾಲದ ಹಣ ಮರುಪಾವತಿ ವಿಚಾರವಾಗಿ ಇಬ್ಬರ ನಡುವೆ ಜಮೀನಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ಎದೆಗೆ ಬಲವಾದ ಹೊಡೆತ ಬಿದ್ದು, ಬಸವರಾಜಪ್ಪ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಈ ಸಲ ಅಭ್ಯರ್ಥಿಗೆ ವೆಚ್ಚದ ಮಿತಿ ಎಷ್ಟು ಗೊತ್ತಾ ?
ಈ ಘಟನೆಯಿಂದ ಗಾಬರಿಯಾದ ಆರೋಪಿ ಚಂದ್ರಣ್ಣ ಉಳುಮೆ ಮಾಡಿದ ಭೂಮಿಯಲ್ಲಿ ಶವ ಹೂತು ಹಾಕಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸವರಾಜಪ್ಪ ಅವರಿಗೆ ಎರಡು ದಿನ ಹುಡುಕಾಟ ನಡೆಸಿದ ಕುಟುಂಬ, ಡಿ.4ರಂದು ತುರುವನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಳವಾದ ಗುಂಡಿ ತೆಗೆದು ಹೂಳದ ಪರಿಣಾಮವಾಗಿ ಮೃತದೇಹದ ಕೆಲ ಭಾಗಗಳನ್ನು ಪ್ರಾಣಿಗಳು ತಿಂದಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಡಿ.31 ರಂದು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಮೃತದೇಹವನ್ನು ಹೊರತೆಗೆಯುವಾಗ ಕೊಲೆ ಆರೋಪಿ ಚಂದ್ರಣ್ಣ ಕೂಡಾ ಕುಟುಂಬದವರ ಜೊತೆಗೆ ಸೇರಿ ಅನುಮಾನ ಬಾರದಂತೆ ವರ್ತನೆ ಮಾಡಿದ್ದ. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
