ಕ್ರೈಂ ಸುದ್ದಿ
SSLC ಫೇಲಾಗಿದ್ದಕ್ಕೆ ಮನನೊಂದು ಸಾವಿಗೆ ಶರಣಾದ ವಿದ್ಯಾರ್ಥಿನಿ

CHITRADURGA NEWS | 12 MAY 2024
ಹೊಸದುರ್ಗ: ಮೇ.8 ರಂದು ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಮನನೊಂದು ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.
ಹೊಸದುರ್ಗ ಪಟ್ಟಣದ ಕೊಬ್ಬರಿ ಪೇಟೆಯಲ್ಲಿ ವಾಸವಿದ್ದ ನಾಗರಾಜ್ ಎಂಬುವವರ ಪುತ್ರಿ 16 ವರ್ಷದ ಧನುಶ್ರೀ ಮೃತ ಬಾಲಕಿ.
ಮೇ.11 ರಂದು ತಂದೆ ನಾಗರಾಜ್ ಶಿವಮೊಗ್ಗಕ್ಕೆ ಆಸ್ಪತ್ರೆಗೆಂದು ತೆರಳಿದ್ದರು. ತಾಯಿ ಸಂಘದ ಹಣ ಕಟ್ಟಲು ಮನೆಯಿಂದ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಧನುಶ್ರೀ ಅಡುಗೆ ಮನೆಯ ಮೇಲ್ಛಾವಣಿಯ ತೀರಿಗೆ ವೇಲಿನಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.
ಮೇ.8 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದಾಗ ಧನುಶ್ರೀ 4 ವಿಷಯಗಳಲ್ಲಿ ಫೇಲಾಗಿದ್ದಳು. ಅಂದಿನಿಂದ ಮನೆಯ ಹೊರಗೆ ಬಾರದೆ ಖಿನ್ನತೆಗೆ ಒಳಗಾಗಿದ್ದಳು.
ತಂದೆ, ತಾಯಿ ಸಮಾಧಾನ ಮಾಡಿ ಮತ್ತೆ ಪರೀಕ್ಷೆ ಕಟ್ಟಿ ಬರೆದು ಪಾಸು ಮಾಡಿಕೊ ಎಂದು ಸಮಾಧಾನ ಮಾಡಿದ್ದರು. ಆದರೂ, ಧನುಶ್ರೀ ಆತುರದ ನಿರ್ಧಾರ ತೆಗೆದುಕೊಂಡಿದ್ದಾಳೆ.
ಈ ಬಗ್ಗೆ ಹೊಸದುರ್ಗ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ರದುರ್ಗ ನ್ಯೂಸ್ ಕಳಕಳಿ: ಬದುಕಿಗೆ ಪರೀಕ್ಷೆ, ಅಂಕಗಳೇ ಮುಖ್ಯವಲ್ಲ. ಬದುಕುವ ಛಲ ಮಾತ್ರ ಮುಖ್ಯ. ಪರೀಕ್ಷೆಗಳಲ್ಲಿ ಫೇಲಾದವರು, ಕಡಿಮೆ ಅಂಕ ಗಳಿಸಿದವರು ಇಂದು ಯಶಸ್ವಿ ಉದ್ಯಮಿಗಳಾಗಿ ದೊಡ್ಡ ಸಾಧನೆ ಮಾಡಿರುವ ಸಾವಿರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಪರೀಕ್ಷೆ ಫೇಲಾದರೆ ಬದುಕು ಮುಗಿದು ಹೋಗುವುದಿಲ್ಲ. ಇಲ್ಲಿಂದ ನಿಜವಾದ ಬದುಕು ಪ್ರಾರಂಭವಾಗುತ್ತದೆ. ಇದನ್ನು ಮೀರಿದ ಸಾಧನೆ ಮಾಡಿ ತೋರಿಸುವ ಛಲ ತೊಡಿ. ಬದುಕಿಗೆ ಬೆನ್ನು ತೋರಿಸಿ, ಸಾಯುವ ನಿರ್ಧಾರ ಮಾಡಿ, ಬದುಕಿನಲ್ಲಿ ಫೆಆಲಾಗುವ ತೀರ್ಮಾನ ಸುತಾರಾಂ ಒಳ್ಳೆಯದಲ್ಲ.
ನಿಮಗಾಗಿ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ಬಂಧು, ಬಳಗ, ಸ್ನೇಹಿತರು ಇದ್ದಾರೆ. ಅವರಿಗಾಗಿ ನೀವು ಬದುಕುವ ಸಂಕಲ್ಪ ಮಾಡಿ ಎನ್ನುವುದು ಚಿತ್ರದುರ್ಗ ನ್ಯೂಸ್ ಕಳಕಳಿ.
ಇದನ್ನೂ ಓದಿ:
