
CHITRADURGA NEWS | 23 FEBRUARY 2026
ಚಿತ್ರದುರ್ಗ: ಜೆಡಿಎಸ್ ಚಿತ್ರದುರ್ಗ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಹಿರಿಯೂರು ತಾಲೂಕಿನ ಕೆ.ಮಂಜುನಾಥ್ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು | ₹36,000 ಕೋಟಿ ಬಾಕಿ ಬಿಲ್‌ಗಾಗಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಇದೇ ವೇಳೆ ಚಿತ್ರದುರ್ಗ ತಾಲೂಕು ಘಟಕದ ಅಧ್ಯಕ್ಷರಾಗಿ ಸಣ್ಣ ತಿಮ್ಮಪ್ಪ ಅವರು ಜವಾಬ್ದಾರಿ ವಹಿಸಿಕೊಂಡರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಕೆ.ಮಂಜುನಾಥ್, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಪಕ್ಷ ಮುನ್ನಡೆಸಲಾಗುವುದು ಎಂದರು.
ನಗರದ ಜೆಡಿಎಸ್ ಕಚೇರಿಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಧ್ಯಕ್ಷರಾಗಿ ಕೆ.ಮಂಜುನಾಥ ಹಾಗೂ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾಗಿ ಸಣ್ಣತಿಮ್ಮಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಪಕ್ಷದ ವರಿಷ್ಟರು ನನಗೆ ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ಇದನ್ನು ಎಲ್ಲರ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸುತ್ತೇನೆ. ಒಂದು ಕಾಲದಲ್ಲಿ ಚಿತ್ರದುರ್ಗ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ, ಈಗ ಬದಲಾವಣೆಯಾಗಿದೆ. ಪುನಃ ಜೆಡಿಎಸ್‍ನ ಭದ್ರ ಕೋಟೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 23 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಮ್ಮ ಪಕ್ಷದ ಶಾಸಕರಿಲ್ಲ. ಆದರೂ, ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಅವರನ್ನು ಹುರಿದುಂಬಿಸಿ ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ತಾಲೂಕಿಗೆ ಭೇಟಿ ನೀಡಿ ಅಲ್ಲಿಯೂ ಪಕ್ಷ ಸಂಘಟನೆ ಮಾಡಲಾಗುವದು. ಶೀಘ್ರದಲ್ಲಿ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಮಂಜುನಾಥ್ ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಗೆಲ್ಲಬೇಕಿದೆ. ಒಂದು ಸಮುದಾಯದ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮುದಾಯದವರ ಮತಗಳು ಅಗತ್ಯ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಎಲ್ಲರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದರು.
ಈ ಬಾರಿ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಯಾವುದಾದರೂ ಒಂದು ಕ್ಷೇತ್ರಕ್ಕೆ ನಮ್ಮವರು ಹಾಗೂ ಮೈತ್ರಿ ಪಕ್ಷದವರು ಸಹ ಟೀಕೇಟ್ ಕೇಳಬಹುದು. ಈ ಸಮಯದಲ್ಲಿ ನಮ್ಮವರು ಜೋರಾಗಿದ್ದು, ಜನಮನ್ನಣೆ ಗಳಿಸಿದ್ದರೆ ಮಾತ್ರ ಟೀಕೇಟ್ ಪಡೆಯಬಹುದಾಗಿದೆ.
ಇದನ್ನೂ ಓದಿ: ಸ್ಫೋಟಕ ಸೇವಿಸಿ ಮುಧೋಳ ನಾಯಿ ಸಾವು!
ಈ ಹಿನ್ನಲೆಯಲ್ಲಿ ಈಗಿನಿಂದಲೇ ಜನಸಂಪರ್ಕ ಬೆಳೆಸಿಕೊಳ್ಳಬೇಕು. ಮುಂಬರುವ 2028ರ ಚುನಾವಣೆಯಲ್ಲಿ ನಮ್ಮ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಾಜಿ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರು ಹಲವು ವರ್ಷಗಳಿಂದ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ಈಗ ಜಿಲ್ಲಾಧ್ಯಕ್ಷರಾಗಿದ್ದಾರೆ. ನಮ್ಮ ಪಕ್ಷದ ವರಿಷ್ಟರು ಅಳೆದು ತೂಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾನು ಎರಡುವರೆ ವರ್ಷ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದು, ನೂತನ ಅಧ್ಯಕ್ಷರಿಗೆ ಸಹಕಾರ ನೀಡುತ್ತೇನೆ ಎಂದರು.
ಪದಗ್ರಹಣ ಸಮಾರಂಭದಲ್ಲಿ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಣ್ಣತಿಮ್ಮಪ್ಪ, ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್, ಮುಖಂಡರಾದ ತಿಪ್ಪೇಸ್ವಾಮಿ, ರವೀಂದ್ರಪ್ಪ ಮಾತನಾಡಿದರು.
ಇದನ್ನೂ ಓದಿ: ಎತ್ತಿನ ಗಾಡಿಗೆ ಬಸ್ ಡಿಕ್ಕಿ ಒಬ್ಬರು ಮೃತ, ಐದು ಜನ ಗಂಭೀರ
ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮಠದ ಹಟ್ಟಿವೀರಣ್ಣ, ನಗರಸಭೆ ಮಾಜಿ ಸದಸ್ಯರಾದ ನಸುರುಲ್ಲಾ, ದೀಪಕ್, ತಿಪ್ಪೇಸ್ವಾಮಿ, ಪ್ರತಾಪ್‍ಜೋಗಿ, ಅಬ್ಬು ಲಲಿತಾ ಕೃಷ್ಣಮೂರ್ತಿ, ಗೀತಮ್ಮ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
