CHITRADURGA NEWS | 09 JULY 2025
ಚಿತ್ರದುರ್ಗ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಒಂದೇ ದಿನ ಜಿಲ್ಲೆಯ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)ಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲೂಕು ತಾಳ್ಯ ಹೋಬಳಿ ಉಪ್ಪರಿಗೇನಹಳ್ಳಿ ಪಿಡಿಓ ಜಿ.ಎಂ. ಕರಿಯಪ್ಪ ಹಾಗೂ ದೇವರೆಡ್ಡಿಹಳ್ಳಿ ಪಿಡಿಓ ವೇದವ್ಯಾಸಲು ಅಮಾನತುಗೊಂಡವರು.
ಉಪ್ಪರಿಗೇನಹಳ್ಳಿ ಪಿಡಿಓ ಜಿ.ಎಂ.ಕರಿಯಪ್ಪ 2021 ಸೆಪ್ಟಂಬರ್‌ನಿಂದ ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾಮಾನ್ಯ ಸಭೆ, ವಿಶೇಷ ಸಭೆ, ತುರ್ತು ಸಭೆಗಳಲ್ಲಿ ಚರ್ಚಿಸದೆ ಸಭೆಯ ಗಮನಕ್ಕೆ ತಾರದೆ ವಿವಿಧ ಯೋಜನೆಗಳಡಿ ಕ್ರಿಯಾ ಯೋಜನೆ ತಯಾರಿಸಿ ಖರ್ಚು ಮಾಡಿದ್ದು, ಸಂಪೂರ್ಣ ದುರುಪಯೋಗವಾಗಿದೆ.
ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡಿದರೂ ಮಾಹಿತಿ ನೀಡಿಲ್ಲ. ಅಕ್ರಮವಾಗಿ ಇ-ಸ್ವತ್ತು ವಿತರಿಸಿದ್ದಾರೆ. ೧೫ನೇ ಹಣಕಾಸು ಯೋಜನೆಯನ್ನು ಕೂಡಾ ಸಭೆಯ ಗಮನಕ್ಕೆ ಬಾರದಂತೆ ಕ್ರಿಯಾ ಯೋಜನೆ ರೂಪಿಸಿ, ಅಂದಾಜು ಪಟ್ಟಿ, ಎಂ.ಬಿ.ಬುಕ್ ಬರೆಯದೆ, ಚೆಕ್ ಮೆಜರ್‌ಮೆಂಟ್ ಇಲ್ಲದೆ, ಮೇಲಾಧಿಕಾರಿಗಳ ಸಹಿ ಇಲ್ಲದೆ, ವೋಚರ್ ಇಲ್ಲದೆ ಪ್ರಾರಂಭಿಕ ಮತ್ತು ಮುಕ್ತಾಯದ ಪೋಟೋ ಇಲ್ಲದೆ ಹಣ ಪಾವತಿಸಿ ಅವ್ಯವಹಾರ ಎಸಗಲಾಗಿದೆ ಎಂದು ಉಲ್ಲೇಖಿಸಿ ಶಿಸ್ತು ಕ್ರಮ ಕೈಗೊಳ್ಳಲು ಕೋರಲಾಗಿತ್ತು.
ಈ ಸಂಬಂಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿ.ಎಂ. ಕರಿಯಪ್ಪ, ಪಿಡಿಓ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಇವರನ್ನು ಅಮಾನತು ಮಾಡಿ ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ದೇವರೆಡ್ಡಿಹಳ್ಳಿ ಪಿಡಿಓ ಅಮಾನತು
ಚಳ್ಳಕೆರೆ ತಾಲೂಕು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ, ೧೫ನೇ ಹಣಕಾಸು ಯೋಜನೆ, ನರೇಗಾ ಇನ್ನಿತರೆ ಯೋಜನೆಗಳಲ್ಲಿ ಅವ್ಯವಹಾರ ಆಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ವಿಶೇಷ ಲೆಕ್ಕ ತನಿಖೆ ಕೈಗೊಂಡಾಗ, ತನಿಖಾ ತಂಡಕ್ಕೆ ದಾಖಲೆಗಳನ್ನು ಒದಗಿಸಿಲ್ಲ.
ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಿಎ ಭರಿಸಲಾದ 2,31,54,326 ರೂ.ಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ೧೫ನೇ ಹಣಕಾಸು ಯೋಜನೆಯಲ್ಲಿ 84,40,121 ರೂ.ಗಳಿಗೆ ಒದಗಿಸಿರುವ ಓಚರ್‌ಗಳು ಮತ್ತು ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಟೆಂಡರ್ ಕರೆಯದೆ ೧ ಲಕ್ಷಕ್ಕಿಂತಲೂ ಹೆಚ್ಚು ಮೊತ್ತವನ್ನು ನಿಯಮಾನುಸಾರ ಕ್ರಮ ವಹಿಸದೆ ಭರಿಸಿರುವುದು ಕಂಡು ಬಂದಿರುತ್ತದೆ.
ಜವಾಬ್ದಾರಿಯುತ ಅಧಿಕಾರಿಯಾಗಿ ಪಿಡಿಓ ವೇದವಾಸಲು ಲೆಕ್ಕ ಪರಿಶೋಧನಾ ತಂಡಕ್ಕೂ ದಾಖಲೆ ಒದಗಿಸುವುದು ಸೇರಿ ಎಲ್ಲಾ ವಿಚಾರಗಳನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಮಾಡಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

