
CHITRADURGA NEWS | 1 JULY 2024
ಚಿತ್ರದುರ್ಗ: ಯಾವುದೇ ಕೋಟೆಗೆ ಏಳು ಸುತ್ತುಗಳಿರಬೇಕು. ಏಳು ಬಾಗಿಲುಗಳಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಈ ಎಲ್ಲಾ ಹೋಲಿಕೆಗಳಿರುವ ಕೋಟೆ ಚಿತ್ರದುರ್ಗದ ಐತಿಹಾಸಿಕ ಕೋಟೆ ಮಾತ್ರ ಎಂದು ಇತಿಹಾಸ ಸಂಶೋಧಕ ಡಾ.ಎಸ್.ಎನ್.ಮಹಾಂತೇಶ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜಾವೀರ ಮದಕರಿ ನಾಯಕರ 270ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದಲ್ಲಿ ಈ ಅಂಶ ಉಲ್ಲೇಖಿಸಿದರು.

ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಇಂತಹ ಐತಿಹಾಸಿಕ ಉಕ್ಕಿನ ಕೋಟೆಯನ್ನು ಶತೃಗಳಿಂದ ಹಾಳು ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇಂದಿನ ಪೀಳಿಗೆ ಜನ ನಾವು ಹಾಳು ಮಾಡುತ್ತಿದ್ದೇವೆ. ಕೋಟೆಯ, ಐತಿಹಾಸಿಕ ಕುರುಹುಗಳನ್ನು ಅಭಿವೃದ್ಧಿಯ ನೆಪದಲ್ಲಿ ಹಾಳು ಮಾಡುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗದ ಕೋಟೆಯನ್ನು 13 ಜನ ಪಾಳೇಗಾರರು ಆಳ್ವಿಕೆ ಮಾಡಿದ್ದಾರೆ. ಮೈಸೂರಿನಲ್ಲಿ ಒಡೆಯರ್ ಸ್ಮರಣೆ ಮಾಡಿದಂತೆ ಚಿತ್ರದುರ್ಗದಲ್ಲೂ ಪಾಳೇಗಾರರನ್ನು ನೆನಪಿಸುವ ಕೆಲಸ ಆಗಬೇಕು. ಇಲ್ಲಿನ 13 ವೃತ್ತಗಳಿಗೆ ಈ 13 ಪಾಳೇಗಾರರ ಹೆಸರಿಡಬೇಕು ಎಂದರು.
ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಕದಂಬರು, ಶಾತವಾಹನರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ ಎನ್ನುವುದಕ್ಕೆ ಶಾಸನಗಳು ಸಾಕ್ಷಿ. 20ನೇ ಶತಮಾನದ ಉತ್ತರಾರ್ಧ ಭಾಗದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಪ್ರಜಾಪ್ರಭುತ್ವ ಕಲ್ಯಾಣ ಬಂದಿದ್ದು, ಪಾಳೆಯಗಾರರ ಮನೆತನದಿಂದ. ವಿಜಯನಗರದ ಸಾಮ್ರಾಜ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದವರು ಪಾಳೆಯಗಾರರು ಎನ್ನುವುದನ್ನು ಮರೆಯುವಂತಿಲ್ಲ ಎಂದು ನೆನಪಿಸಿದರು.
ದಕ್ಷಿಣ ಭಾರತದ 77 ಪಾಳೇಗಾರರ ಗಂಡ ಮದಕರಿ ನಾಯಕ:
ಕೇವಲ 12ನೇ ವಯಸ್ಸಿಗೆ ಪಟ್ಟಾಭಿಷೇಕವಾದ ಮದಕರಿ ನಾಯಕ ಮುಂದೆ ರಾಜಾವೀರ ಮದಕರಿ ನಾಯಕರಾಗಿ ಬೆಳೆಯುತ್ತಾರೆ. ಆತನಿಗೆ ಪಟ್ಟ ಕಟ್ಟಿದ ತಾಯಿ ಗಂಡೋಬಳವ್ವ ನಾಗತಿ 2 ವರ್ಷಗಳ ಕಾಲ ಆಡಳಿತ, ಯುದ್ಧದ ತರಬೇತಿ ನೀಡಿ ನಂತರ ಮರಣಿಸುತ್ತಾಳೆ.
ಇದನ್ನೂ ಓದಿ: ಹಂಪಿ ಉತ್ಸವದ ಮಾದರಿಯಲ್ಲಿ ಮದಕರಿ ನಾಯಕ ಉತ್ಸವ | ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಆನಂತರ ಸರಿಸುಮಾರು 33-34 ವರ್ಷಗಳ ಕಾಲ ಮದಕರಿ ನಾಯಕ ಅತ್ಯುತ್ತಮ ಆಡಳಿತ ನೀಡುತ್ತಾರೆ. ಕೋಟೆಯ ಮೇಲೆ ಅನೇಕ ಸಾಮಂತರು ದಾಳಿ ಮಾಡಿದಾಗ ಹಿಮ್ಮೆಟ್ಟಿಸಿ ಉತ್ತರ ಕೊಡುತ್ತಾನೆ. ಹೈದಾರಾಲಿಗೆ ಒಂದು ಯುದ್ಧದಲ್ಲಿ ಮದಕರಿ ನಾಯಕ ಸಹಾಯ ಮಾಡುವ ಮೂಲಕ ಮದಕರಿ ಎನ್ನುವ ಹೆಸರಿಗೆ ಶಕ್ತಿ ತುಂಬಿದ್ದರು ಎಂದು ಸ್ಮರಿಸಿದರು.
ಆದರೆ, ಆನಂತರ ಹೈದಾರಾಲಿ ಚಿತ್ರದುರ್ಗದ ಕೋಟೆ ಮೇಲೆ ಅನೇಕ ಸಲ ದಂಡತ್ತಿ ಬರುತ್ತಾನೆ. ಕೆಲವು ಸಲ ಕೆಲ ಪ್ರದೇಶಗಳನ್ನು ಬಿಟ್ಟುಕೊಟ್ಟು ಕಳಿಸಲಾಗಿತ್ತು. ಕಾರಣ ಆತ, ಮದಕರಿ ನಾಯಕರ ಸ್ನೇಹಿತನಾಗಿದ್ದ. ಕೊನೆಗೆ ಚಿತ್ರದುರ್ಗ ಹಾಗೂ ಮದಕರಿ ನಾಯಕರಿಗೆ ಹೈದರಾಲಿಯೇ ಮುಳ್ಳಾದ. ಮದಕರಿ ನಾಯಕರನ್ನು ಅನ್ನಕ್ಕೆ ವಿಷ ಹಾಕಿ ಕೊಲ್ಲಲಾಯಿತು ಎಂದರು.
ಇದನ್ನೂ ಓದಿ: ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ
ಪಾಳೆಯಗಾರರನ್ನು ನಿರ್ಲಕ್ಷಿಸಿದ್ದಕ್ಕೆ ವಿಜಯನಗರ ಸಾಮ್ರಾಜ್ಯ ಪಥನವಾಯಿತು. 211 ವರ್ಷಗಳ ಕಾಲ ಹನ್ನೊಂದು ಅರಸರು ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಹುಲ್ಲೂರು ಶ್ರೀನಿವಾಸ್ ಜೋಯಿಸ್, ಲಕ್ಷ್ಮಣ ತೆಲಗಾವಿ, ಸಾಹಿತಿ ಬಿ.ಎಲ್.ವೇಣು ಇವರುಗಳು ಚಿತ್ರದುರ್ಗದ ಇತಿಹಾಸವನ್ನು ಸರಣಿಯಾಗಿ ಬರೆದಿದ್ದಾರೆ.
ತರಾಸು ಅವರು ದುರ್ಗಾಸ್ತಮಾನ ಕಾದಂಬರಿ ಬರೆಯದಿದ್ದರೆ ಚಿತ್ರದುರ್ಗದ ಇತಿಹಾಸ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಜವೀರ ಮದಕರಿ ನಾಯಕ ಸಿನಿಮಾ | ನಟ ದರ್ಶನ್ ಹೇಳಿದ್ದೇನು ?
ಮತ್ತಿ ತಿಮ್ಮಣ್ಣನಾಯಕ, ಭರಮಣ್ಣನಾಯಕ, ಹಿರೇಮದಕರಿನಾಯಕ ಪರಾಕ್ರಮಿಗಳಾಗಿದ್ದರು. ಪಾಳೇಗಾರರ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಉಚ್ಚೆಂಗೆಲ್ಲಮ್ಮ ದೇವಸ್ಥಾನ, ಕೋಟೆಯಲ್ಲಿರುವ ಹೊಂಡ, ಪುಷ್ಕರಣಿಗಳು ಇದಕ್ಕೆ ನಿದರ್ಶನ.
ಕೋಟೆಯಲ್ಲಿ ಅತ್ಯಂತ ವೈಜ್ಞಾನಿಕವಾಗಿ ಹೊಂಡಗಳನ್ನು ನಿರ್ಮಿಸಲಾಗಿತ್ತು. ಎಂದೂ ಬತ್ತದ ಗೋಪಾಲಸ್ವಾಮಿ ಹೊಂಡ ವಿಶೇಷವಾಗಿದೆ. ಈ ಕಾರಣಕ್ಕೆ ಕೋಟೆಯ ಮೇಲೆ ಯಾರೂ, ಎಂದೂ ಆಕ್ರಮಣ ಮಾಡಿ ಗೆಲ್ಲಲು ಸಾಧ್ಯವಾಗಲಿಲ್ಲ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
