Connect with us

    Kannada Novel: 15. ಹಿರೇ ಬಡಗಿ ಗೌನಳ್ಳಿಗೆ ಬಂದರು | ಹಬ್ಬಿದಾ ಮಲೆ ಮಧ್ಯದೊಳಗೆ

    ಹಬ್ಬಿದಾ ಮಲೆಮಧ್ಯದೊಳಗೆ

    ಸಂಡೆ ಸ್ಪಷಲ್

    Kannada Novel: 15. ಹಿರೇ ಬಡಗಿ ಗೌನಳ್ಳಿಗೆ ಬಂದರು | ಹಬ್ಬಿದಾ ಮಲೆ ಮಧ್ಯದೊಳಗೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 5 JANUARY 2024

    ಹೊಸ ಗಾಡಿಗಳಿಗೆ ಹೂಡಿದ್ದ ಚೆಂಬಸಣ್ಣನ ಎತ್ತುಗಳಿಗೆ ಗಾಡಿ ಎಳೆಯುವುದೇ ತಮ್ಮ ಕಾಯಕವೆಂಬಂತೆ ಚುರುಕಾಗಿ ನಡೆಯುತ್ತಿದ್ದವು.

    ಗಾಡಿ ತಯಾರಿಸಿದ್ದ ಹಿರೇ ಬಡಗಿಯವರು ತಯಾರಿಸಿದ ಬಳಿಕ ಪ್ರಯೋಗಾರ್ಥ ಊರ ಸುತ್ತಾ ಒಮ್ಮೆ ಗಾಡಿಯಲ್ಲಿ ಕುಳಿತು ಹೋಗಿ ಪರೀಕ್ಷಿಸುತ್ತಿದ್ದರು.

    ಈಗ ಅವೇ ಗಾಡಿಯಲ್ಲಿ ಕುಳಿತು ಚಕ್ರಗಳು ತಿರುಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಗಾಡಿ ಅಚ್ಚಿಗೆ ಕೀಲೆಣ್ಣೆ ಸವರಿದ್ದರಿಂದ ಸದ್ದು ಮಾಡುತ್ತಿರಲಿಲ್ಲ.

    ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ.

    ತುಂಬಾ ಹೊತ್ತು ಸಿದ್ದಣ್ಣ ಮತ್ತು ಚೆಂಬಸಣ್ಣ ಬಡಗೀರನ್ನೇ ನೋಡುತ್ತಿದ್ದವರು ಅವರನ್ನು ಮಾತಾಡಿಸದಿರುವುದೇ ಸರಿ ಎಂಬಂತೆ ಅವರೂ ಸುಮ್ಮನೇ ಹಾದಿ ಪಕ್ಕದ ಗಿಡಮರಗಳನ್ನು ನೋಡುತ್ತಿದ್ದರು. ಹಿರೇ ಬಡಗಿಯವರು ಹಿಂದೆ ಬರುತ್ತಿದ್ದ ಗಾಡಿಯನ್ನು ಪರಿಶೀಲಿಸಿದ ಬಳಿಕ ತಾವು ಕುಳಿತಿದ್ದ ಗಾಡಿಯ ಚಕ್ರಗಳನ್ನು ಪರಿಶೀಲಿಸಿದ್ದರು.

    ತಮ್ಮ ಕೈಚಳಕದಿಂದ ಕೂಡಿಸಿದ್ದ ಗುಂಭ, ಆರೇಕಾಲು, ಹೊಟ್ಟೆಮರದ ಚಕ್ರಗಳು ನೆಟ್ಟಗೆ ತಿರುಗುತ್ತಿದ್ದುದು ಅವರಿಗೆ ಸಮಾಧಾನ ತಂದಿತ್ತು.

    ದೀರ್ಘವಾದ ನಿಟ್ಟುಸಿರನ್ನು ಹೊರಸೂಸಿ ಗಾಡಿಯಲ್ಲಿದ್ದವರತ್ತ ನೋಡಿದ್ದರು. ಈಗ ಸಿದ್ದಣ್ಣ ಚೆಂಬಸಣ್ಣರಿಗೆ ನಿರಾಳವಾದಂತಾಗಿ ಮಾತಾಡುವ ಉಮೇದು ಬಂದಿತ್ತು.

    ಬಡಗಿಯವರು ಎಷ್ಟು ದೂರ ಬಂದಿದೀವಪ್ಪಾ” ಅನ್ನುತ್ತಾ ತಲೆ ಎತ್ತಿ ನೆತ್ತಿಗೆ ಬರುತ್ತಿದ್ದ ಸೂರದೇವನನ್ನು ನೋಡಿದರು. “ಒಂದೇಳೆಂಟು ಮೈಲಿ ಬಂದಿರಬೇದು ಕಣಣ್ಣಾ” ಚಂಬಸಣ್ಣ ಉತ್ತರಿಸಿ ತಾನೂ ತಲೆ ಎತ್ತಿ ನೋಡಿದ, “ನಾನು ಸಣ್ಣುಡುಗನಾಗಿದ್ದಾಗ ಗಾಡಿ ಪಯಣ ಮಾಡಿದ್ದೆ. ಎಡೆಯೂರಿಗೆ ಒಂದು ರಾತ್ರಿ ಒಂದು ಹಗಲು ಪಯಣ ಮಾಡಿ ಸಿದ್ಧಲಿಂಗೇಶ್ವರನ ಜಾತ್ರೆ ಮಾಡ್ತಿದ್ವಿ.

    ಹಿಂದಿನ ಸಂಚಿಕೆ:2. ಕರುವುಗಲ್ಲು ನೆಟ್ಟು ಊರು ಕಟ್ಟಿದರು.

    ಇಷ್ಟು ದೂರಬಂದಿದ್ದೀವಿ ಅಂತ ಶಿವಗಂಗೆಗೂ ಹೋಗಿ ಬರಿದ್ವಿ. ಹಿರೇ ಬಡಗಿಯವರು ತಮ್ಮ ಬಾಲ್ಯದ ಗಾಡಿ ಪಯಣವನ್ನು ನೆನೆದಿದ್ದರು. ಚೆಂಬಸಣ್ಣ ತನ್ನ ಬಾಲ್ಯದಲ್ಲಿ ಒಂದೆರಡು ಗಾಡಿಗಳನ್ನು ನೋಡಿದ್ದನಾದರೂ ಗಾಡಿ ಪ್ರಯಾಣ ಮಾಡಿರಲಿಲ್ಲ. ಸಿದ್ದಣ್ಣ ಗಾಡಿಗಳನ್ನೇ ನೋಡಿರಲಿಲ್ಲ.

    “ಚಂದ್ರನ ಬೆಳಕಿನಾಗೆ ಗಾಡಿ ಪಯಣ ಬಾಳ ಸೆಂದಾಕಿರತಿತ್ತು. ನಾವು ಹುಡುಗ್ರು ಬೇಗ ಮನಿಕೆಂಡ್ ಬಿಡತಿದ್ವಿ, ಎಚ್ಚರಾದಾಗ ಗಾಡಿ ಮುಂದೆ ಹೋಗ್ತಿರೋದು. ಎಲ್ಲೆರಾ ಒಂದು ತಾವು ನಿಲ್ಲಿಸಿ ಎಲ್ಲಾರೂ ಇಳಿದೋಗಿ ಒಂದ ಪಂದ ಮಾಡತಿದ್ರು, ಎತ್ತುಗಳು ಗಾಡಿ ಎಳೆದೂ ಎಳೆದು ಮುಸಗರೀತಿದ್ದು, ಕೆಲವು ಸಲ ಸುಧಾರಿಸಿಗೆಮ್ಮಿ ಅಂತ ಕೊಳ್ಳರಿಯೋರು”. ಹಿರೇ ಬಡಗಿ ಮಾತಾಡತಿದ್ರು. ಇಂಥಾ ಅನುಭವಗಳನ್ನು ಅರಿಯದ ಸಿದ್ದಣ್ಣ ಚೆಂಬಸಣ್ಣ ಕುತೂಹಲಿಗಳಾಗಿ ಆಲಿಸುತ್ತಿದ್ದರು.

    ಅವರಿಗೆ ಹಿರಿಯ ಬಡಗಿ ಇಷ್ಟು ಸಲೀಸಾಗಿ ಮಾತಾಡತಿರೋದೇ ಹೊಸಾ ಅನುಭವ. ಒಂದೋ ಎರಡೋ ಮಾತಾಡತಿದ್ದೋರು ಈವಾಗ ಮನಸ್ ಬಿಚ್ಚಿ ಮಾತಾಡತಿದಾರೆ ಅಂದುಕೊಂಡಿದ್ದರು.

    “ಅಪ್ಪೋರೆ ನಿಮ್ಮ ಅಪ್ಪೋರೆ ಗಾಡಿ ಕೂಡಿಸುತಿದ್ದರಂತೆ ಹೌದೆ”, ಚೆಂಬಸಣ್ಣ ಮೈಚಳಿಬಿಟ್ಟು ಕೇಳಿದ್ದ. “ಹೌದಪ್ಪಾ ಅವರೇ ನನಿಗೆ ಗುರುಗಳು ಮತ್ತೆ ಅಪ್ಪ. ಆ ಮಾರಾಯ್ತು ಯಾವ ನಕ್ಷತ್ರದಾಗೆ ಹುಟ್ಟಿದ್ರೋ ಏನೋ ಗಾಡಿ ಚಕ್ರದ ಗುಂಭಾ ಅಂದ್ರೆ ಅದೇ ಮುಖ್ಯ ಭಾಗ. ಹನ್ನೆರಡು ಆರೇಕಾಲ ಗುಂಭದೊಳಗೆ ಸೇರಿಸಬೇಕು. ಗುಂಭ ಬಿಟ್ಟು ಇನ್ನೆಂಗೂ ಅವನ್ನ ಕೂಡೋಕಾಗಲ್ಲ.

    ಹಿಂದಿನ ಸಂಚಿಕೆ:3. ಎಲ್ಲರೂ ಲಿಂಗವಂತರಾದರು.

    ಒಂದು ಆರೇಕಾಲಿಗೂ ಇನ್ನೊಂದಕ್ಕೂ ಇಷ್ಟಿμÉ್ಟ ಅಂತರ. ಎಳಿಂಚು ಉಗುಲು ತೋಡಿ ಅದರಾಗೇ ಆರೇಕಾಲ ಕೂಡಿಸಬೇಕು. ಅಂಗಿಂಗಲ್ಲ, ಮರ ಸಂದಾ ಒಣಗಿರಬೇಕು. ಇದನ್ನೆಲ್ಲಾ ನಮ್ಮಪ್ಪ ಪೇಪರಾಗೆ ಬರು ತೋರಿಸ್ತೀರಾ”,

    “ಗುಂಭಕ್ಕೆ ಎರಡು ಕಬ್ಬಿಣದ ಕಟ್ಟು ಬಿಗಿಯಾಗಿ ಆರೇಕಾಲ ಪಕ್ಕ ಕೂಡಿಸಬೇಕು. ಆಮೇಲೆ ಅಳತೆಗೆ ತಕ್ಕಂತೆ ಮುಂದಿನ ಕೆಲಸ, ಇದೆಲ್ಲಾ ಮಾಡಬೇಕಾದರೆ ಕಣ್ಣಲ್ಲಿ ಕಣ್ಣಿಟ್ಟು ನಿಧಾನವಾಗಿ ಮಾಡಬೇಕು. ಇದನ್ನ ಅಪ್ಪಾಜಿ ಹತ್ರಾನೇ ಕಲಿತಿದ್ದು, ನಿಧಾನವಾಗಿ ಮಾತಾಡತಿದ್ರು ಹಿರೇಬಡಗಿಯವರು, ಚೆಂಬಸಣ್ಣ ಮೇಲೆ ಹೊತ್ತು ತೋರಿಸಿ ಹಗಲೂಟ ಮಾಡತೀರಾ ಎಂದು ಸಿದ್ದಣ್ಣನಿಗೆ ಸನ್ನೆ ಮಾಡಿದ್ದ. ಇದನ್ನ ಗಮನಿಸಿದ್ದ ಬಡಗಿಯವರು ಮಾತು ನಿಲ್ಲಿಸಿ ತಾನು ಹಗಲೂಟ ಮಾಡುವುದಿಲ್ಲವೆಂದು ಸನ್ನೆ ಮೂಲಕವೇ ತಿಳಿಸಿದರು.

    ಸಿದ್ದಣ್ಣ ಪಕ್ಕಕ್ಕೆ ಸರಿದು ತನಗೂ ಊಟ ಬೇಡ ಎಂದ. ಹಿಂದಿನ ಗಾಡಿಯವರಿಗೆ ಸನ್ನೆ ಮಾಡಿ ಹಗಲೂಟ ಮಾಡ್ತೀರಾ ವಿಚಾರಿಸಿದ್ದ. ಅವರೂ ಯಾರಿಗೂ ಹಸಿವಾಗಿಲ್ಲ ಎಂದರು. ಸರಿ ಸಂಜೆ ಚಿಕ್ಕನಹಳ್ಳಿಗೋಗಿ ಊಟ ಮಾಡಾನ ಅಂದುಕೊಂಡ.

    ಚಿಕ್ಕನಹಳ್ಳಿ ಸಮೀಪಿಸುತ್ತಿದ್ದಂತೆ ಚೆಂಬಸಣ್ಣ ಮುತ್ತುಗದ ಮರದ ಸಮಾಪ ಗಾಡಿ ನಿಲ್ಲಿಸಿ ಮರಹತ್ತಿ ಕೆಲವು ಎಲೆಗಳನ್ನು ಕಿತ್ತು ತಂದ. ಸಂಜೆಯಾಗುತ್ತಿದ್ದಂತೆ ಬಡಗಿಯವರಿಗೆ ಅವರ ರೂಢಿಯಂತೆ ಕಣ್ಣು ಮುಚ್ಚಿ ಬಂದವು.

    ಅವರು ಗಾಡಿಯಲ್ಲೇ ಅಡ್ಡಾದರು. ಸ್ವಲ್ಪ ಹೊತ್ತಿನಲ್ಲೇ ಚಿಕ್ಕನಹಳ್ಳಿ ತಲುಪಿ ದೇವಸ್ಥಾನದ ಬಳಿಗೆ ಹೋಗಿ ಎತ್ತುಗಳ ಕೊಳ್ಳರಿದರು. ಪರಿಚಯದ ಮನೆಯಿಂದ ಸೇದೋ ಹಗ್ಗ ಬಿಂದಿಗೆ ಕಡಾಯಿ ಇಸಗೊಂಡು ಬಾವಿಯ ನೀರು ಸೇದಿ ನಾಲ್ಕೂ ಎತ್ತುಗಳಿಗೆ ನೀರು ಕುಡಿಸಿದರು. ಬಡಗಿಯವರು ಇನ್ನೂ ಜೊಂಪಿನಲ್ಲಿದ್ದಂತೆ ಕಂಡರು. ಅವರನ್ನ ಎಬ್ಬಿಸದೆ ಎತ್ತುಗಳಿಗೆ ಹುಲ್ಲು ಹಾಕಿ ನೀರು ತಂದು ಬುತ್ತಿ ಗಂಟು ಬಿಚ್ಚಿದರು.

    ಹಿರಿಯ ಬಡಗಿಯವರಿಗೆ ನಾಲ್ಕು ಸಜ್ಜೆ ರೊಟ್ಟಿ ಕೆಂಪಿಂಡಿ, ತುಪ್ಪ ಎತ್ತಿಟ್ಟು ಗೌನಳ್ಳಿ ಬುತ್ತಿ ಅನ್ನವನ್ನು ಮುಗಿಸಿದ್ದರು. ಯಜಮಾನರು ಎಚ್ಚರಾದ ಬಳಿಕ ಗಾಡಿ ಬಳಿ ಸೇರಿದ್ದ ಚಿಕ್ಕನಹಳ್ಳಿಯವರನ್ನು ಕಂಡು “ಸೆಂದಾಕಿದ್ದೀರೇನಪ್ಪಾ ಈ ವರ್ಷ ಫಸಲು ಸೆಂದಾಕಿದಾವ. ನೀವು ರಾಗಿ ಜತಿಗೆ ಹೊಗೆಸೊಪ್ಪು ಬೆಳೀತೀರಲ್ವಾ” ಅಂತ ಅವರನ್ನು ವಿಚಾರಿಸಿದ್ದರು. “ಅಪ್ಪೊರೆ ಇತ್ತಿತ್ತಾಗಿ ರಾಗಿಗೆ ಬೆಂಕಿರೋಗ ಕಾಣಿಸಿಕೊಳ್ಳುತ್ತೆ. ಹೊಗೇಗಿಡಕ್ಕೂ ರೋಗ ಬೀಳುತ್ತೇ ಅಂದ್ರೆ ನಾವೆಲ್ಲಿಗೋಗನಾ”, ಒಬ್ಬ ಹಿರಿಯ ಮಾತಾಡಿದ್ದ.

    ಹಿಂದಿನ ಸಂಚಿಕೆ:4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ.

    “ಹಿರಿವೂರತ್ರ ಗೌನಕ್ಕೇರು ಹೊಸಾಗಾಡಿ ಹೊಡಕಂಡು ಹೋಗ್ತಾಲೇ ಐದಾರೆ. ಅಲ್ಲೆಲ್ಲೂ ಹೊಸಾ ಗಾಡಿ ಕೂಡೋರು ಇರಾಕಿಲ್ಲ. ಅದ್ಯೆ ಇಷ್ಟೊಂದು ದೂರದ ಗುಬ್ಬಿ ಗಾಡಿ ಹೊಡಕಂಡ್ ಹೋಗ್ತಿದಾರೆ”, ಇನ್ನೊಬ್ಬಾತ ಮಾತಾಡಿದ್ದ. “ನಮ್ಮಿಗೂ ಎಲ್ಲ ಹೊಸಗಾಡಿ ಬೇಕಾಗಿದಾವೆ.

    ಗುಬ್ಬಿಗಾಡಿ ಬಾಳ ದುಪ್ಪಟ್ಟು ಅಯ್ತಾರೆ. ಏನ್ ಮಾಡೋದು ಇಲ್ಲೆಲ್ಲೂ ಹೊಸಾಗಾಡಿ ಕೂಡೋರೇ ಇಲ್ಲ” ಅನ್ನುತ್ತಾ ಒಬ್ಬಾತ ಗಾಡಿಯ ಗಾಲಿಗಳ ಆರೇಕಾಲು, ಹೊಟ್ಟೆಮರಗಳನ್ನು ಕೈಯಿಂದ ಬಡಿದು “ಎಲ್ಲಾ ಸಾಗುವಾನಿಮರದ ಮುಟ್ಟು, ಸೆಂದಾಕಿ ಒಣಗೈತೆ. ಹೊಟ್ಟೆಮರ ಆರೇಕಾಲು ಬ್ಯಾರೆಬ್ಯಾರೆ ಅಂಬಂಗಿಲ್ಲ ಹಂಗೆ ಕೂಡ್ತಿದಾರೆ”. “ಬಾಳ ಚೆಂದಾಗಿ ಕೂಡ್ಲಿದಾರೆ” ಅಂದ. ಇವರ ಮಾತುಗಳನ್ನು ಆಲಿಸಿದ್ದ ಹಿರೇ ಬಡಗಿಯವರಿಗೆ ಸಮಾಧಾನ ಸಂತೋಷ ಎರಡೂ ಆಗಿದ್ದವು.

    “ಅದ್ಧೂರೇ ಬುತ್ತಿ ಉಣಬರಿ” ಎಂಬ ಚೆಂಬಸಣ್ಣನ ಮಾತಿನಿಂದ ಎದ್ದು ಗಾಡಿ ಇಳಿದು ದೇವಸ್ಥಾನದ ಪ್ರಾಂಗಣಕ್ಕೆ ಬಂದವರಿಗೆ ಕೈಕಾಲು ಮುಖ ತೊಳೆಯಲು ನೀರು ಕೊಟ್ಟ ಚೆಂಬಸಣ್ಣ “ಈ ಊರ ಜನ ಬಾಳ ಬಡವರಂಗೆ ಕಾಣಿಸ್ತಾರೆ” ಅಂದಿದ್ದ.

    ಅವನ ಮಾತನ್ನು ಮೆಲುಕು ಹಾಕಿದ ಬಡಗಿಯವರಿಗೆ ಕೂಡಾ ಹಾಗೇ ಕಂಡಿದ್ದರು. “ರಾಗಿ ಪೈರಿಗೆ ಬೆಂಕಿರೋಗ ಬೀಳಬೇಕಾದ್ರೆ, ಮಳೆಗಾಲ ಸರಿಯಾಗಿ ನಡೆಸಿರಾಕಿಲ್ಲ” ಅಂದುಕೊಂಡಿದ್ದರು. ಈ ಮಧ್ಯೆ ಸಿದ್ದಣ್ಣ, ಸಿದ್ದಿಂಗಪ್ಪ ಸಜ್ಜೆರೊಟ್ಟಿ ಕೆಂಪಿಂಡಿ, ತುಪ್ಪವನ್ನು ಅವರಿಗೆ ಮುತ್ತುಗದ ಇಸ್ತ್ರದಲ್ಲಿ ಬಡಿಸಿದ್ದರು. “ನೀವೆಲ್ಲಾರು ಊಟ ಮಾಡಿದಿರಾ” ಇವರನ್ನು ವಿಚಾರಿಸಿಕೊಂಡಿದ್ದರು. ಮೂರು ರೊಟ್ಟಿ ಉಂಡು ಒಂದೀಟು ಬುತ್ತಿ ಅನ್ನಕೊಡ್ರಿ” ಎಂದು ಊಟ ಮುಗಿಸಿದ್ದರು.

    “ಬುತ್ತಿ ಅನ್ನದ ರುಚಿ ಬದಲಾಗೈತೆ” ‘ಚೆಂಬಸಣ್ಣಂದಿರಬೇಕು’ ಅಂದುಕೊಂಡ ಅವರು ಕೈ ತೊಳೆದು ನೀರು ಕುಡಿದು ಚಿಕ್ಕನಹಳ್ಳಿ ಗ್ರಾಮದಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿದರು. ಎಲ್ಲೋ ಎರಡು ಮನೆ ಮುಂದೆ ನಿಲ್ಲಿಸಿದ್ದ ಗಾಡಿಗಳು ಕಂಡಿದ್ದವು. ಕತ್ತಲಲ್ಲಿ ಸರಿಯಾಗಿ ಅವುಗಳನ್ನು ನೋಡಲಾಗಲಿಲ್ಲ.

    ದೇವಸ್ಥಾನದ ಬಳಿ ಬಂದರೆ ಎತ್ತುಗಳು ಮಲಗಿ ಎದ್ದು ಮೇವು ತಿನ್ನುತ್ತಿದ್ದವು. ಜತೆಗಾರರೆಲ್ಲಾ ಗಾಡಿ ಮೇಲೆ ಕೆಲವರು, ಎತ್ತುಗಳ ಮುಂದೆ ಇಬ್ಬರು, ಉಳಿದವರು ದೇವಸ್ಥಾನದ ಮುಂದೆ ಕಲ್ಲು ಹಾಸಿನ ಮೇಲೆ ಮಲಗಿಕೊಂಡು ಮಾತಾಡುತ್ತಿದ್ದರು. ಹಿರೇ ಬಡಗಿಯವರೂ ದೇವಸ್ಥಾನದ ಮುಂದೆ ಹಾಸಿದ್ದ ಕಂಬಳಿ ಜಮಖಾನದ ಮೇಲೆ ಅಡ್ಡಾಗಿ ಆಕಾಶದಲ್ಲಿನ ನಕ್ಷತ್ರಗಳನ್ನು ನೋಡುತ್ತಿದ್ದರು.

    ಹಿಂದಿನ ಸಂಚಿಕೆ:5. ಕೆನ್ನಳ್ಳಿಯ ದುರಂತ.

    ಮಾಯದ ನಿದ್ದೆ ಯಾವಾಗ ಎಲ್ಲರನ್ನೂ ಆವರಿಸಿತ್ತೋ ನಡುರಾತ್ರಿ ಒಂದು ಎತ್ತು ಬೆದರಿದಾಗ ಸಿದ್ದಣ್ಣನಿಗೆ ಎಚ್ಚರವಾಗಿತ್ತು. ಹತ್ತಿರದಲ್ಲಿ ಕಂಬಳಿ ಹೊದ್ದವರಾರೋ ಸರಿದು ಹೋದಂತಾಗಿತ್ತು. ಆತ ಬೆಳಗಿನ ತನಕ ನಿದ್ದೆ ಮಾಡಲಿಲ್ಲ. ಎತ್ತುಗಳಿಗೆ ಮೇವು ಹಾಕುತ್ತಾ ಓಡಾಡಿಕೊಂಡಿದ್ದ.

    ಬೆಳಗಿನ ಜಾವದ ಕೋಳಿ ಕೂಗುತ್ತಲೇ ಎಲ್ಲರನ್ನೂ ಏಳಿಸಿದ. ಸಿದ್ದಣ್ಣ ಬಾವಿಯಿಂದ ನೀರು ಸೇದಿ ಎತ್ತುಗಳಿಗೆ ನೀರು ಕುಡಿಸಿ ಎಲ್ಲರಿಗೂ ಮುಖತೊಳೆಯಲು ಸೂಚಿಸಿದ. ದಡಾಬಡಾ ಎದ್ದ ಎಲ್ಲರೂ ಕೈಕಾಲು ಮುಖ ತೊಳೆದರು.

    ಶಿವಪೂಜೆ ಶಾಸ್ತ್ರ ಮಾಡುವ ಸಮಯಕ್ಕೆ ಹಿರೇಬಡಗಿಯವರು ಎದ್ದು ವಂದಕ್ಕೆ ಹೋಗಿ ಬಂದು ಮೂಡಲ ದಿಕ್ಕು ನೋಡಿದ್ದರು. ಬೆಳ್ಳಿ ಇನ್ನೂ ಮೂಡಿರಲಿಲ್ಲ. ಅವರೂ ಮುಖ ಕೈಕಾಲು ತೊಳೆದು ಮೂಡಲಿಗೆ ನಮಸ್ಕರಿಸಿದ್ದರು. ಅಗಾ ಇಗಾ ಅನ್ನುವುದರೊಳಗೆ ಎತ್ತುಗಳ ಕೊರಳ ಮೇಲೆ ಗಾಡಿ ನೊಗಗಳನ್ನೇರಿಸಿ, “ಏಳುಕೋಟಿ ನಡಿಯಪ್ಪ” ಅಂದಿದ್ದ ಸಿದ್ದಣ್ಣ.

    ಚೆಂಬಸಣ್ಣ ಸೇದೋ ಹಗ್ಗ, ಬಿಂದಿಗೆ ಕಡಾಯಿಗಳನ್ನು ಅವುಗಳ ವಾರಸುದಾರರಿಗೆ ತಲುಪಿಸಿ ಬಂದಿದ್ದ. ಯಜಮಾನರು ಮುಂದಿನ ಗಾಡಿಯನ್ನು ಏರುತ್ತಲೇ ಗಾಡಿಗಳು ಸೀರ್ಯ ಹಾದಿ ಹಿಡಿದಿದ್ದವು. ಚಿಕ್ಕನಹಳ್ಳಿಯ ಜನ ಇನ್ನೂ ಮಲಗಿದ್ದರು.

    ಸೀರಾ ತಲುಪುವ ಸಮಯಕ್ಕೆ ಬೆಳ್ಳಂಬೆಳಕಾಗಿತ್ತು. ಹಿರೇಬಡಗಿಯವರು ತಮ್ಮ ಬಾಲ್ಯದ ಪಯಣಗಳನ್ನು ನೆನಪಿಸಿಕೊಳ್ಳುತ್ತಿದ್ದರು. ‘ಸಿದ್ದಣ್ಣನ ಊರಿನಲ್ಲಿ ಎಲ್ಲ ನಿವಾಸಿಗಳೂ ಹೀಗೆಯೇ ಬೆಳಗಿನಲ್ಲಿ ಎದ್ದು ತಮ್ಮ ಕೆಲಸ ಕಾವ್ಯಗಳನ್ನು ಮಾಡುತ್ತಿರಬಹುದು’ ಅಂದುಕೊಂಡಿದ್ದರು.

    ‘ನಾವು ಚಿಕ್ಕನಹಳ್ಳಿ ಬಿಡುವಾಗ ಆ ಊರ ಮಂದಿ ಇನ್ನೂ ನಿದ್ದೆ ಮಾಡುತ್ತಿದ್ದರು. ರೈತ ಮಕ್ಕಳು ಹೀಗೆ ಮಲಗಿ ತಡವಾಗಿ ಎದ್ದರೆ ಬೇಸಾಯ ಕಾರ್ಯಗಳಿಗೆ ತಡವಾಗುವುದಿಲ್ಲವೆ, ಸೋಮಾರಿತನವನ್ನೂ ದರಿದ್ರಲಕ್ಷ್ಮಿ ಅಂತ ಕರೆದಿದ್ದಾರೆ ಎಂಥಾ ಹುಚ್ಚರಿರಬೌದು’ ಅಂದುಕೊಳ್ಳುತ್ತಾ ಮುಗುಳ್ನಕ್ಕರು.

    ಹಿಂದಿನ ಸಂಚಿಕೆ:6. ಎಲ್ಲೆಲ್ಲಿಂದಲೋ ಬಂದರು.

    ಚಂಬಸಣ್ಣ, ಸಿದ್ದಣ್ಣರಿಗೆ “ಯಜಮಾನಿಗೆ ಮುಂಚೆ ಏಳಿಸಿ ತೊಂದ್ರೆ ಕೊಟ್ಟಂಗಾತು. ಏನು ಮಾಡುವುದು ತಂಪೊತ್ತಿನಲ್ಲಿ ದಾರಿ ಸಾಗುತ್ತದೆ” ಅಂದುಕೊಂಡಿದ್ದರು. ಗಾಡಿ ಹೊಡೆಯುವವರು ರಸ್ತೆ ಪಕ್ಕದ ಹೊಂಗೆ ಮರಗಳನ್ನು ನೋಡುತ್ತಾ ಎತ್ತುಗಳನ್ನು ಅಧಿಸದೆ ಅವುಗಳ ನಡಿಗೆಯನ್ನೇ ಗಮನಿಸುತ್ತಿದ್ದರು.

    ‘ರೈತರಿಗೆ ದನಕರುಗಳು ಅದರಲ್ಲೂ ಎತ್ತುಗಳು ಹೆಂಗೆ ಹೊಂದಿಕೆಂಡ್ ಬಿಡ್ತಾವೆ. ನಮ್ಮೆಜಮಾನು ಇಂಗಿಂಗೇ ಹೋಗ್ತಾರೆ ಅಮ್ಮ ಎತ್ತುಗಳಿಗೆ ಗೊತ್ತಾಗಿ ಬಿಟ್ಟಿರುತ್ತೆ. ಅದ್ರೆ ಅವು ಕೊಸರಾಡದೇ ಸುಮ್ಮನೇ ಗಾಡಿ ಎಳೀತಿದಾವೆ’ ಅಂದ್ಯಂಡ್ರು, ಹಿರೇ ಬಡಗಿಯವರಿಗೆ ಗುಬ್ಬಿ ಸುತ್ತಮುತ್ತಲ ಪ್ರದೇಶದಾಗೇ ಕಂಡಿತ್ತು.

    ಚಿಕ್ಕುಂಬೊತ್ತಿಗೆ ಗಾಡಿಗಳು ತಾವರೆಕೆರೆ ತಲುಪಿದ್ದು, ರಸ್ತೆ ಪಕ್ಕದಾಗೆ ರೋಣುಗಲ್ಲುಗಳು ಕಂಡಿದ್ದವು. ‘ಎಂಗಿದ್ರೂ ಖಾಲಿಗಾಡಿ ಹೋಗ್ತಾ ಇದಾವೆ. ಇನ್ನೊಂದೆಲ್ಡ್ ರೋಣಗಲ್ ತಗಂಡೋಗಬೌದಲ್ಲ’, ಸಿದ್ದಣ್ಣನ ಆಲೋಚನೆ. ಗಾಡಿ ನಿಲ್ಲಿಸಿ ರೋಣುಗಲ್ ಮಾರಾಟಗಾರರು ಇದ್ದಾರೋ ಹೆಂಗೋ ಅನ್ನುತ್ತಾ ಅವುಗಳ ಬಳಿಗೆ ನಡೆದ.

    ಅದೆಲ್ಲಿದ್ರೋ ಮಾರಾಯರು ಓಡೋಡಿ ಬಂದು “ಅಣ್ಣಾ ರೋಣು ಬೇಕಾಗಿತ್ತೇನಣ್ಣಾ” ವಿಚಾರಿಸಿದ್ದರು. “ಎರಡು ರೋಣುಗಲ್ ಕೊಂಡುಕಂಡು ಹೋಗಿದ್ದಿವಿ, ಸುಮ್ಮೆ ನೋಡಿದೆ”, ಸಿದ್ದಣ್ಣ ನೀರಸವಾಗಿ ಪ್ರತಿಕ್ರಿಯಿಸಿದ.

    “ಹೂಂಕಣಣ್ಣಾ ಎಳ್ಳು ಹೊಸಗಾಡಿ ತಗಂಡೋಗರಿಗೆ ಎಳ್ಳು ರೋಣುಗಲ್ ಗಾಡೇಗೆ ಹಾಕಿಕೊಟ್ಟಿದ್ವಿ, ಅದೇ ರೇಟಿಗೆ ತಗಂಡೋಗ್ರಣ್ಣ ಹಾಕಿಕೊಡ್ತೀವಿ” ಎಂದು ವಿನಂತಿಸಿದ್ದರು. ‘ಎಲ್ಡ್ ರೋಣುಗಲ್ ತಗಂಡ್ರೆ ಬಡಗಿ ಯಜಮಾನರಿಗೆ ಗಾಡಿಯಲ್ಲಿ ಕೂತು ಕಾಲು ಚಾಚಲು ಆಗುವುದಿಲ್ಲ’ ಎಂದು ಯೋಚಿಸಿ “ಒಂದು ರೋಣುಗಲ್ಲಿಗೆ ಏನು ಕೊಡಬೇಕು ಹೇಳಿ” ಸಿದ್ದಣ್ಣ ಹೇಳಿದ್ದ.

    ಅಷ್ಟೊತ್ತಿಗೆ ಅಲ್ಲಿಗೆ ಬಂದಿದ್ದ ಹಿರೇ ಬಡಗಿ ಮತ್ತು ಸಿಲ್ಲಿಂಗಪ್ಪರು “ಹೆಂಗೂ ಕಾಲಿಗಾಡಿ ಹೋಗ್ತಾ ಇದಾವೆ ಬೇಕಾಗಿದ್ರೆ ಎರಡೂ ಕೊಂಡುಬಿಡ್ರಿ”. ಯಜಮಾನರು ಸಲಹೆ ನೀಡಿದ್ದರು. “ಗಾಡಿ ನಡಂತ್ರ ರೋಣುಗಲ್ಲು ಕಟ್ಟಿಗಂಡ್ರೆ ನಿಮಿಗೆ ಕಾಲು ಚಾಚಕೆ ತೊಂದ್ರೆ ಆಗುತ್ತೇನೋ” ಸಿದ್ದಣ್ಣ ತನ್ನ ಆತಂಕವನ್ನು ಹೊರಹಾಕಿದ್ದ.

    “ಏನೂ ಆಗಲ್ಲ ಹಿಂದೋ ಮುಂದೋ, ಕುತ್ಕಂಡು ಕಾಲು ಚಾಚಬೌದು ಎರಡನ್ನೂ ಕೊಂಡ್ ಬಿಡಿ. ಮುಂದೇ ಬೇಕಾದಾಗ ಇಷ್ಟುದೂರ ಖಾಲಿ ಗಾಡಿ ಬರಬೇಕಾಗುತ್ತೆ”, ಬಡಗಿ ಯಜಮಾನರೇ ಸಲಹೆ ನೀಡಿದ್ದರು. ದೊಡ್ಡದು ಮತ್ತೊಂದು ಸಣ್ಣದು ರೋಣಗಲ್ಲುಗಳಿಗೆ ನಾಲ್ಕು ರೂಪಾಯಿ ಕೊಟ್ಟು ಕೊಂಡಿದ್ದಾಯ್ತು.

    ಹಿಂದಿನ ಸಂಚಿಕೆ:7. ಊರು ತೊರೆದು ಬಂದವರು.

    “ಏನ್ರಪ್ಪಾ ಉಂಬೊತ್ತಾಗೈತೆ ಹೊಟ್ಟೆಗೆ ಒಂದೀಟು ಹಾಕ್ಯಂಬಿಡನಾ”, ಸಿದ್ದಣ್ಣನ ಸಲಹೆಯನ್ನು ಎಲ್ಲರೂ ನಿರಾಕರಿಸದೆ ಸ್ವಲ್ಪ ಸ್ವಲ್ಪ ಬುತ್ತಿಯನ್ನು ಉಂಡಿದ್ದರು. ಅನಂತರ ರೋಣುಗಲ್ಲುಗಳನ್ನು ಗಾಡಿಗಳ ಮೂಕಾರಿಸಿ ಗಾಡಿಯೊಳಗೆ ಉರುಳಿಸಿ ಮಧ್ಯಭಾಗದ ಅಚ್ಚಿನ ಮೇಲೆ ಹಗ್ಗಗಳಿಂದ ಬಿಗಿಯಾಗಿ ಬಂಧಿಸಿ ಗಾಡಿ ಹೂಡಿ ಮುಂದೆ ಹೊರಟಿದ್ದರು. ಮುಂದಿನ ಗಾಡಿಯಲ್ಲಿ ಬಡಗಿ ಯಜಮಾನರನ್ನು ರೋಣಗಲ್ಲ ಮುಂದೆ ಕೂರಿಸಿ ಸಿದ್ದಣ್ಣ ಚೆಂಬಸಣ್ಣ ರೋಣಗಲ್ಲ ಹಿಂದೆ ಕುಳಿತರು.

    ಸಿಲ್ಲಿಂಗಪ್ಪ ಮತ್ತು ಉಳಿದವರು ಹಿಂದಿನ ಗಾಡಿಯಲ್ಲಿ ಕುಳಿತಿದ್ದರು. ಅವನು ಇದೇ ರಸ್ತೆಯಲ್ಲಿ ಬಸ್‍ನಲ್ಲಿ ಬರುವಾಗ ಪಕ್ಕದ ಗಿಡ ಮರಗಳನ್ನು ನೋಡಲಾಗಿರಲಿಲ್ಲ. ರಸ್ತೆ ಬದಿ ಸಾಲು ಮರಗಳಿದ್ದವು. ಗಾಡಿ ಪ್ರಯಾಣಿಕರಿಗೆ ಆಯಾಸವಾಗದ ರೀತಿ ಹರಕು ನೆರಳು ನೀಡುತ್ತಿದ್ದವು. ಜವನಗೊಂಡನಹಳ್ಳಿ ಬಳಿಯ ಹೊಳೆಯನ್ನು ದಾಟುವಾಗ ನಿಧಾನವಾಗಿ ದಾಟಿಸಿದ್ದರು.

    ಈಚೆ ದಡಕ್ಕೆ ಬಂದರೆ ಹಿಂದಿನಂತೆ ರಸ್ತೆ ಬದಿ ಮರಗಳು ಒತ್ತಾಗಿರಲಿಲ್ಲ. ಅಲ್ಲೊಂದು ಇಲ್ಲೊಂದು ಮರಗಳಿದ್ದವು. ಹಿರೇಬಡಗಿಯವರಿಗೆ ತಾವು ಚಿಕ್ಕಂದಿನಲ್ಲಿ ಎಡಿಯೂರಿಗೆ ಹೋಗುವಾಗ ಕಂಡಿದ್ದಂತಹ ಮರಗಳು ಇಲ್ಲಿರಲಿಲ್ಲ. ಬಹುಶಃ ಇದು ಬೆಂಗಾಡಿರಬೇಕು ಅಂದುಕೊಂಡಿದ್ದರು.

    ಹಗಲೂಟದೊತ್ತಿಗೆ ಆದಿವಾಲ ದಾಟಿ ಹಿರಿಯೂರು ತಲುಪಿದ್ದರು. ‘ತ್ಯಾರ ಮಲ್ಲೇಶ್ವನ ಗುಡಿ ಬಳಿಗೆ ಹೋಗುವುದೋ ಬ್ಯಾಡವೋ’ ಎಂದು ಯೋಚಿಸಿ “ಜೆಂಬಸಣ್ಣಾ ಗುಡೀತಕೋಗಿ ಕೊಳ್ಳರಿಯನೋ ಅಥಾ ಮುಂದುಕ್ಕೋಗಿ ಗಾಡಿ ನಿಲ್ದಾನೋ”, ಸಿದ್ದಣ್ಣ ಚೆಂಬಸಣ್ಣನನ್ನು ವಿಚಾರಿಸಿದ.

    ಆತ ತಲೆ ಎತ್ತಿ ನೋಡಿ “ಹಸಿವಾದಂಗೆ ಕಾಣ್ಣಲ್ಲ ಊರು ದಾಟಿ ಊಟ ಮಾಡನಾ” ಅಂದ. ಆದರೂ, ಗಾಡಿ ನಿಲ್ಲಿಸಲು ಸೂಚಿಸಿ ಹಿರೇಬಡಗೀರನ್ನ ಒಂದ್ ಮಾತ್ ಕೇಳೋನಾ ಅಂದ್ಯಂಡು “ಅಪ್ಪೋರೆ ಈ ಊರಾಗೇ ತ್ಯಾರಮಲ್ಲೇಶ್ವರನ ಗುಡಿ ಅಂತ ಐತೆ. ಅಲ್ಲೋಗಿ ಗಾಡಿ ನಿಲ್ಲಿ ಊಟ ಮಾಡೋನೋ, ಇಲ್ಲ ಊರು ದಾಟಿಮುಂದೆ ಒಂದು ಮರದಡೆ ನಿಲ್ಲಿ ಊಟ ಮಾಡೋನೋ”, ಸಿದ್ದಣ್ಣ ವಿಚಾರಿಸಿದ್ದ.

    ಹಿಂದಿನ ಸಂಚಿಕೆ:8. ಮೋಜಣಿಕೆ ಮಾಡಿದರು .

    ಅವರೂ “ಊಟ ಈಗ್ಲೆ ಬೇಡ. ಮುಂದುಕ್ಕೋಗಿ ಎಲ್ಲೆನಾ ಒಂದು ಮರದಡಿ ನಿಲ್ಲಿಸಿ ಅಲ್ಲಿ ಮಾಡೋನಾಂತೆ” ಅಂದಿದ್ದರು. ಹಿಂದಿನ ಗಾಡಿಯವರಿಗೆ ಸನ್ನೆ ಮೂಲಕ ಸೂಚನೆ ರವಾನಿಸಿ ಮುಂದೆ ಗಾಡಿ ನಡೆಸಲು ಸೂಚಿಸಿದ್ದರು.

    ಹಿರಿಯೂರು ದಾಟಿ ನೀರು ಹರಿಯುತ್ತಿರುವ ಸಮಾಪ ಒಂದು ದೊಡ್ಡ ಬೇವಿನ ಮರದಡಿ ಗಾಡಿಗಳನ್ನು ತರುಬಿ ಎತ್ತುಗಳ ಕೊಳ್ಳರಿದರು. ಕೂಡಲೇ ಚೆಂಬಸಣ್ಣ ಮಗುದೊಬ್ಬರು ಎತ್ತುಗಳಿಗೆ ನೀರು ಕುಡಿಸಲು ಒಯ್ದರು, ಏಳೆಂಟು ಮುತ್ತುಗದ ಎಲೆ ಇದ್ದವು. ಅವುಗಳನ್ನೇ ತಟ್ಟೆಯಂತೆ ಮಾಡಿಕೊಂಡು ಎಲ್ಲರಿಗೂ ಬುತ್ತಿ ಅನ್ನ ವಿತರಿಸಿದರು. ಪುಣ್ಯಕ್ಕೆ ಕೆಂಪಿಂಡಿ ಇತ್ತು.

    ಇದ್ದುದರಲ್ಲೇ ಎಲ್ಲರೂ ಸಮಾಧಾನಪಟ್ಟುಕೊಂಡರು. ಹೊಟ್ಟೆತುಂಬಾ ನೀರು ಕುಡಿದು ಎತ್ತರವಾಗಿ ಬೆಳೆದಿದ್ದ ಬೇವಿನ ಮರವನ್ನು ನೋಡಿದರು. ಚೆಂಬಸಣ್ಣನ ಎತ್ತುಗಳು ಕಣ್ಣು ಮುಚ್ಚಿಕೊಂಡು ಮಲಗಿದ್ದವು. ಅವು ಸ್ವಲ್ಪ ಸುಧಾರಿಸಿಕೊಳ್ಳಲಿ ಎಂದು ಎಲ್ಲರೂ ನಿರೀಕ್ಷೆ ಮಾಡಿದರು.

    ಸುಮಾರು ಹೊತ್ತಾದ ಮೇಲೆ “ಎದ್ದೇಳಪ್ಪಾ, ಮುಂದುಕ್ಕೋಗನಾ” ಚೆಂಬಸಣ್ಣ ಎತ್ತುಗಳನ್ನುದ್ದೇಶಿಸಿ ಸ್ವಲ್ಪ ಗಟ್ಟಿಯಾಗಿ ಕರೆದ. ಎರಡು ಎತ್ತುಗಳು ಕಣ್ಣು ತೆರೆದು ತಲೆಯಲ್ಲಾಡಿಸಿದ್ದವು. “ಇನ್ನೂ ಸ್ವಲ್ಪ ಹೊತ್ತು ಎತ್ತುಗಳು ಸುಧಾರಿಸಿಕೊಳ್ಳಲಿ” ಎಂದು ಅತ್ತಿತ್ತ ನೋಡುತ್ತಾ ಹಿರೇ ಬಡಗೀರು ಕುಳಿತಿದ್ದ ಮರದ ಬೊಡ್ಡೆಯ ಬಳಿಗೆ ಸರಿದರು. ಸಿದ್ದಣ್ಣ ಪಡುವಲ ದಿಕ್ಕಿಗೆ ಕೈ ತೋರಿಸಿ “ಅಗೋ ನೋಡಣ್ಣಾ ದೂರದಾಗೆ ಗುಡ್ಡ ಕಾಣಿಸ್ತಿದಾವಲ್ಲ ಅವುಗಳ ಹಿಂದೇನೇ ನಮ್ಮೂರು.

    ಈವಾಗ ಹೊಳ್ಳರೂ ರಾತ್ರುಂಬೋ ಹೊತ್ತಿಗೆ ಊರು ಸೇವಿ” ಎಂದು ತಿಳಿಸಿದ. ಹಿರೇ ಬಡಗಿಯವರು ಪಡುವಲ ದಿಕ್ಕಗೆ ದಿಟ್ಟಿ ಹರಿಸಿ ನೋಡೇ ನೋಡುತ್ತಿದ್ದರು.

    ‘ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಚಂಬಸಣ್ಣ “ಎದ್ದೇಳಪ್ಪಾ, ರಾತ್ರಿಗೆ ಮನಿಕೈಮಿರಂತೆ” ಮತ್ತೊಮ್ಮೆ ಎತ್ತುಗಳನ್ನು ಕರೆದ. ಆವಾಗ ನಾಲ್ಕೂ ಎತ್ತುಗಳೂ ನಿಧಾನವಾಗಿ ಎದ್ದು ಸಗಣಿ ಹಾಕಿ ಗಂಜು ಹೊಯ್ದವು. ಮತ್ತೊಮ್ಮೆ ಎತ್ತುಗಳಿಗೆ ನೀರು ಕುಡಿಸಿ ಗಾಡಿ ನೊಗಗಳಿಗೆ ತೊಡರಿಸಿದರು. ಈಗ ಚೆಂಬಸಣ್ಣನೇ ಗಾಡಿ ನಡೆಸಲು ಕುಳಿತ.

    ಹಿಂದಿನ ಸಂಚಿಕೆ:9. ಊರಿಗೊಬ್ಬ ಅಕ್ಕಸಾಲಿಯ ಆಗಮನ.

    ಎತ್ತುಗಳ ಅಲ್ಲಿಸಿದ್ರೆ ಪ್ರಯೋಜನ ಇಲ್ಲ. ಅವು ನಡೆದಂಗೆ ನಡೀಲಿ’ ಅಂದುಕೊಂಡು ಮುಂದಿನ ಹಾದಿಯತ್ತಲೇ ದಿಟ್ಟಿಹರಿಸಿದ್ದ ಆತ. ಗುಬ್ಬಿಯ ಇನ್ನೊಬ್ಬಾತ ಬಂದು ಸಿದ್ದಣ್ಣನ ಪಕ್ಕ ಕುಳಿತ.

    “ರಾತ್ರುಂಬೋ ಹೊತ್ಗೆ ನಿಮ್ಮೂರು ತಲುಪಬೌದು ಅಲ್ಲವೇನಣ್ಣಾ”, ಸಿದ್ದಣ್ಣನನ್ನು ಮಾತಿಗೆ ಎಳೆದ, “ಹಿರೇ ಬಡಗೀರ ಮುಂದೆ ಕೂಡ್ಲಿ ಅವರಿಗೆ ಬೇಜಾರಾಗಂಗೆ ಮಾಡಿದೆಬೇಕೋ ಅನ್ಸುತ್ತೆ” ಸಿದ್ದಣ್ಣ ತನ್ನ ಬೇಜಾರು ತೋಡಿಕೊಂಡಿದ್ದ, ಇದಕ್ಕೆ ತಲೆಯಾಡಿಸಿ ಪ್ರತಿಕ್ರಿಯಿಸಿದ ಗುಬ್ಬಿ ಅಸಾಮಿ “ಅವರಿಗೆ ಒಬ್ಬೊಬ್ರೇ ಇದ್ದು ರೂಢಿಯಾಗೈತ” ಅಂದು ಸಿದ್ದಣ್ಣನನ್ನು ಸಮಾಧಾನಪಡಿಸಲು ಯತ್ನಿಸಿದ್ದ.

    ಹೊತ್ತು ಮುಳುಗಾಕೆ ಒಂದಾಳುದ್ದ ಇದ್ದಾಗ ಗೌವಳ್ಳಿ ಕಡೀಕೆ ಗಾಡಿ ತಿರುಗಿದವು. ಹಿರೇ ಬಡಗಿಗೆ ಗುಡ್ಡಗಳು ಇನ್ನೂ ಹತ್ತಿರದಲ್ಲಿ ಕಂಡಿದ್ದವು. ಸೂರನ ಬಿಸಿಲು ಗುಡ್ಡಗಳ ಮೈಮೇಲಿಂದ ಮರೆಯಾಯಿತು. ಬಿಸಿಲು ಮರೆಯಾದಾಗ ಗುಡ್ಡಗಳ ಬಣ್ಣ ಬೂದುಗವಿಯುತ್ತಿತ್ತು. ಗಾಡಿಗಳು ಗುಡ್ಡಗಳ ದಿಕ್ಕಿನಲ್ಲೇ ಚಲಿಸುತ್ತಿದ್ದವು.

    ಹಿಂದಿನ ಸಂಚಿಕೆ:10. ಹೊಸ ಬಂಡಿಗಳ ಆಗಮನ.

    ಮುಂದೊಂದು ಬರೀ ಈಚಲು ಮರಗಳಿರುವ ಹಳ್ಳ ಎದುರಾಗಿತ್ತು. ಅದನ್ನು ದಾಟಿ ಸ್ವಲ್ಪ ದೂರಹೋಗುವಷ್ಟರಲ್ಲಿ ಹೊತ್ತು ಮುಳುಗಿತ್ತು. ಗಾಡಿಗಳು ಗುಡ್ಡದ ಸಮೀಪಕ್ಕೆ ಹೋಗುತ್ತಿದ್ದವು. ಮೂರು ನಾಲ್ಕು ಕಾಲು ಹಾದಿಗಳು ಮುಂದೆ ಹೋದಂತೆಲ್ಲಾ ಒಂದರೊಳಗೊಂದು ಸೇರಿಕೊಳ್ಳುತ್ತಾ ಬೇರೆಯಾಗುತ್ತಿದ್ದವು.

    ಚೆಂಬಸಣ್ಣನಿಗೆ ಈ ಮೊದಲು ಎರಡು ಬಾರಿ ಈ ದಾರಿಯಲ್ಲಿ ಬಂದಿದ್ದರಿಂದ ಗಾಡಿ ನಡೆಸುತ್ತಿದ್ದ, ಕಳ್ಗಣಿವೆ ದಾಟಿ ಗಾಡಿಗಳು ಇಳಿಜಾರಿನಲ್ಲಿ ಹೋಗುತ್ತಿರುವಾಗ ಸಿದ್ದಣ್ಣ ಗಾಡಿ ಇಳಿದು ಮುಂದೆ ಬಂದು “ಎಡಗಡೆ ತಿರಿಗಿದರೆ ಕಲ್ಲುಂಡಿ ಬರುತ್ತೆ. ಅಲ್ಲಿ ಕಲ್ಲು, ಗುಂಡು ಐದಾವೆ. ಅಲ್ಲೋಗದು ಬ್ಯಾಡ. ನನ್ನಿಂದ ಹೊಡಕಂಡ್ ಬರಿ, ಊರ ಮುಂದ್ಕೆ ಹಳ್ಳದಾಟಿ ಊರಾಕೋಗಾನ” ಎಂದು ಸೂಚಿಸಿ ಗಾಡಿ ಮುಂದೆ ನಡೆದ.

    ಆತನ ಹಿಂದೆ ಹಿಂದೆ ಗಾಡಿ ನಡೆಸಿಕೊಂಡು ಊರ ಮುಂದಲ ಹಳ್ಳ ತಲುಪಿದರು. ಹಿಂದಿನ ಗಾಡಿಯಲ್ಲಿದ್ದ ಸಿದ್ದಿಂಗಪ್ಪ ಮತ್ತೆ ಮೂವರು ಕೇಕೇ ಹಾಕಿ ಶಿಳ್ಳು ಹೊಡೆದರು. ಗುಬ್ಬಿಯಿಂದ ಹೊಸಾಗಾಡಿ ತಂದಿರುವ ಸಂದೇಶವನ್ನು ಊರವರಿಗೆ ತಲುಪಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಊರಕಡೆಯಿಂದಲೂ ಶಿಳ್ಳು ಕೇಕೆಗಳು ಮೊಳಗಿದವು.

    ಹಿರೇ ಬಡಗಿಯವರು ಗಾಡಿ ಇಳಿದು “ಊರು ಹತ್ತಿರಕೆ ಬಂತೇನಪ್ಪಾ” ಸಿದ್ದಣ್ಣನನ್ನು ಕೇಳಿದ್ದರು. “ಅಣ್ಣಾ ಊರಿಗೇ ಬಂದಿದೀವಿ”. ಸಿದ್ದಣ್ಣ ತಿಳಿಸಿ ಹಳ್ಳದ ನೀರಲ್ಲಿ ಮುಖ ಕೈಕಾಲು ತೊಳೆದುಕೊಂಡ. ಬಡಗೀರು ಅವನನ್ನೇ ಅನುಸರಿಸಿದರು.

    ಸಿಲ್ಲಿಂಗಪ್ಪ ಮತ್ತುಳಿದವರು ಮುಖ ಕೈಕಾಲು ತೊಳೆದುಕೊಂಡು ಹೊಟ್ಟೆ ತುಂಬಾ ತಿಳಿನೀರನ್ನು ಕುಡಿದು ಗಾಡಿಗಳ ಹಿಂದಕ್ಕೆ ನಿಂತರು, ಅದೇ ಸಮಯಕ್ಕೆ ಊರೊಳಗಿಂದ ನಾಲ್ಕಾರು ಮಂದಿ ಆಗಮಿಸಿ ಗಾಡಿಗಳನ್ನು ಹಳ್ಳದ ದಡ ಹತ್ತಿಸಲು ಸಿದ್ಧರಾದರು.

    ಹಿಂದಿನ ಸಂಚಿಕೆ:11. ಬಂಡಿ ತಂದ ಬದಲಾವಣೆ.

    ಎಲ್ಲರೂ ಹುಮ್ಮಸ್ಸಿನಿಂದ ನಾಡಿಗಳನ್ನು ಹಿಂದಿನಿಂದ ತಳ್ಳಿ ದಡ ಹತ್ತಿಸಿದರು, ಚೆಂಬಸಣ್ಣನಿಗೆ ಸಮಾಧಾನವಾಗಿತ್ತು, ಗಾಡಿಗಳು ಕರುವುಗಲ್ಲು ಸಮೀಪಿಸುವ ಹೊತ್ತಿಗೆ ಇನ್ನೂ ಐದಾರು ಮಂದಿ ಆಗಮಿಸಿ ಸ್ವಾಗತಿಸಿದ್ದರು.

    ಮುಂದಿನ ಗಾಡಿಯನ್ನು ನೇರವಾಗಿ ಯಜಮಾನಪ್ಪರ ಮನೆ ಬಳಿಗೆ ಒಯ್ಯಲಾಯಿತು. ಹಿಂದೆಯೇ ಬಂದಿದ್ದ ಸಿದ್ದಣ್ಣ ಹಿರೇಬಡಗಿಯನ್ನು ಗಾಡಿಯಿಂದಿಳಿಸಿ, ಯಜಮಾನಪ್ಪರಿಗೆ ಪರಿಚಯಿಸಿ “ಅಣ್ಣೂರು ರಾತ್ರಿ ಇಲ್ಲೇ ಇದ್ದಾರೆ” ಎಂದು ತಿಳಿಸಿದ. ಹಿರೇ ಬಡಗಿಯರನ್ನು ಹಾರ್ದಿಕವಾಗಿ ಬರಮಾಡಿಕೊಂಡ ಯಜಮಾನಪ್ಪರು “ಅಪ್ಪೊರೆ ಗಾಡಿ ಪ್ರಯಣದಾಗೆ ಮೈ ನೋವಾಗಿರುತ್ತೆ.

    ನೀರು ಕಾಸಿದೀವಿ, ಮೈ ತೊಳಕಂಡ್ ಬಿಡ್ರಿ, ಒಂದಿಟು ಮೈ ಆಳಾರಾಗುತ್ತೆ” ಎಂದು ಆತ್ಮೀಯತೆಯಿಂದ ಆಹ್ವಾನಿಸಿದ್ದರು. ಹಿರೇ ಬಡಗಿಯರಿಗೆ ಈ ಆತ್ಮೀಯತೆಯ ಆಹ್ವಾನವನ್ನು ತಿರಸ್ಕರಿಸಲಾಗಲಿಲ್ಲ.

    “ಆಯಿತು ಮೈ ತೊಳಕಮನ” ಎಂದು ತಮ್ಮ ಕೈಚೀಲದಿಂದ ಬಟ್ಟೆ ತೆಗೆದರು. “ಸಿದ್ದಿಂಗಪ್ಪ, ಅಪ್ಪೊರಿಗೆ ಬಚ್ಚಲು ತೋರ್ಸಪ್ಪಾ” ಎಂದು ತಿಳಿಸಿದ ಯಜಮಾನಪ್ಪರು ಗಾಡಿಯಿಂದ ರೋಣುಗಲ್ಲು ಇಳಿಸುತ್ತಿದ್ದ ಕಡೆಗೆ ನಡೆದರು. ಸಿದ್ದಿಂಗಪ್ಪ ತೋರಿಸಿದ್ದ ಬಚ್ಚಲಿಗಿಳಿದ ಬಡಗೀರು ಮನದಣಿಯ ಮೈತೊಳೆದುಕೊಂಡು ಹಜಾರಕ್ಕೆ ಬಂದರು. ಅದೇ ಸಮಯಕ್ಕೆ ತಾನೂ ಮೈ ಕೊಳೆದುಕೊಂಡು ಸಿದ್ದಣ್ಣನೂ ಆಗಮಿಸಿದ್ದ.

    ಹಿಂದಿನ ಸಂಚಿಕೆ:12. ಜಂಗಮಯ್ಯರ ಆಗಮನ.

    ಚೆಂಬಸಣ್ಣ ತನ್ನ ಎತ್ತುಗಳ ಮೈ ಒರೆಸಿ ಗ್ವಾಂದಿಗೆ ತುಂಬಾ ಮೇವು ತುಂಬಿ ತನ್ನ ಸಂಗಡಿಗರೊಂದಿಗೆ ಯಜಮಾನಪ್ಪರ ಮನೆಗೆ ಬಂದ. ಕೂಡಲೇ ಸಿದ್ದಣ್ಣ ಮತ್ತು ಸಿಲ್ಲಿಂಗಪ್ಪರು “ಎಲ್ಲರೂ ಮೈ ತೊಳೆಯಿರಿ.

    ಸುಡಸುಡಾ ನೀರು ಹಾಕ್ಕೊಂಡ್ರೆ ಮೈ ಅಳಾರಾಗುತ್ತೆ, ಸೆಂದಾಗಿ ನಿದ್ದೆ ಬರುತ್ತೆ” ಎಂದು ಗುಬ್ಬಿಯಿಂದ ಬಂದಿದ್ದವರನ್ನು ಕಕ್ಕುಲತೆಯಿಂದ ಆಹ್ವಾನಿಸಿದರು. ಆಗಲೇ ಸ್ನಾನ ಮಾಡಿದ್ದ ಹಿರಿಯ ಬಡಗೀರು “ಮೈ ತೊಳಕಳ್ಳಪ್ಪಾ ಮೈ ನೋವು ಹೊರಟೋಗುತ್ತೆ” ಎಂದು ಅವರೂ ದನಿಗೂಡಿಸಿದರು. “ನಾವು ನಾಲಕ್ಕು ಜನ ಇದೀವಿ. ಎಲ್ಲಿಗೂ ಬಿಸಿ ನೀರು ಐದಾವ” ಚೆಂಬಸಣ್ಣ ತನ್ನ ಆತಂಕ ವ್ಯಕ್ತಪಡಿಸಿದ.

    “ನಾಕ್ ಜನ ಅಲ್ಲ ಎಂಟು ಜನ ತೊಳಕಂಡ್ರ ಐದಾವೆ ತೊಳಕ”, ಸಿಲ್ಲಿಂಗಪ್ಪ ಅವರಿಗೆ ತಿಳಿಸಿ ಹಿತ್ತಿಲಿಗೆ ಹೋಗಿ ನೀರೊಲೆ ಬೆಂಕಿಯನ್ನು ಇನ್ನಷ್ಟು ಬೆದರಿಸಿದೆ. ಗುಬ್ಬಿಯ ಮಂದಿ ಒಬ್ಬರಾಗುತ್ತೂ ಇನ್ನೊಬ್ಬರು ಬಚ್ಚಲಿಗಿಳಿದು ಬಿಸಿ ನೀರಲ್ಲಿ ಮಿಂದು ಬಂದರು.

    ಹಿಂದಿನ ಸಂಚಿಕೆ:13. ಮತ್ತೆರಡು ಬಂಡಿ ತಂದರು.

    ಅಷ್ಟೊತ್ತಿಗೆ ಮೊದಲು ಗಾಡಿ ಕೊಂಡಿದ್ದ ಗೌಡ್ರು, ಗೊಂಚಿಕಾರರು ಮತ್ತು ಮತ್ತಿಬ್ಬರು ಆಗಮಿಸಿ ಹಜಾರದಲ್ಲಿ ಕುಳಿತಿದ್ದ ಹಿರೇ ಬಡಗೀರಿಗೆ ನಮಸ್ಕರಿಸಿದ್ದರು. “ದೊಡ್ ಮನಸ್ ಮಾಡಿ ನಮ್ಮೂರಿಗೆ ಬಂದ್ ಬಿಟ್ರಿ”, ಗೌಡ್ರು ಮುಗುಲ್ನಗುತ್ತಾ ಮಾತಾಡಿದರು. “ನಿಮ್ಮ ಬಾವುಣಿಕೆ ನನ್ನ ಇಷ್ಟು ದೂರ ಕರಕಂಡು ಬಂದೈತೆ”, ಬಡಗಿಯವರು ಮನತುಂಬಿ ಪ್ರತಿಕ್ರಿಯಿಸಿದ್ದರು.

    “ಸಿದ್ದಣ್ಣ ಸುದ್ದಿ ಕೊಟ್ಟಾಗ ನನಗೆ ನಂಬಿಕೇನೇ ಬರಲಿಲ್ಲ. ಪಾಪ ಎಳ್ ದಿವ್ವ ಗಾಡ್ಯಾಗ್ ಕುತಗಂಡು ಮೈ ನೊಯ್ಲಿಗಂಡಿದೀರ”, ಗೊಂಚಿಕಾರರ ಹಿರಿಯರು ಮಾತಾಡಿದ್ದರು. ಸಿದ್ದಿಂಗಪ್ಪ ಬಂದು ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದ. “ನಮ್ಮು ಊಟ ಆಗೈತೆ ಇವರಿಗೆ ಊಟ ಮಾಡ್ಲಿರಿ”, ಗೌಡ್ರು ಗೊಂಚಿಕಾರು, ತಿಳಿಸಿ, “ಎದ್ದೇಳಿ ಊಟ ಮಾಡ್ರಿ” ಅಂದರು.

    ಬಿಸಿಬಿಸಿ ರಾಗಿ ಮುದ್ದೆ ಕುಸುಮೆ ಹಿಂಡಿ, ಮೇಲೊಂದಿಷ್ಟು ನವಣೆ ಅನ್ನ, ಹಾಲು ಮೊಸರು ಊಟ ತೃಪ್ತಿದಾಯಕವಾಗಿತ್ತು. “ನಮ್ಮ ಕಡೆ ಕುಸುಮೆ ಚಟ್ನಿ ಮಾಡೋದೇ ಇಲ್ಲ. ನವಣೆ ಅನ್ನಕ್ಕೆ ಬಿಸಿಹಾಲು ಮೊಸರು ಏಟೊಂದು ರುಚಿಕಟ್ಟಾಗಿರುತ್ತೆ. ಬಾಳ ಸಂತೋಸಾತು” ಅನ್ನುತ್ತಾ ಹಿರೇ ಬಡಗಿ ತೇಗಿದ್ದರು.

    ಹಿಂದಿನ ಸಂಚಿಕೆ:14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ.

    ಹಜಾರದಲ್ಲಿದ್ದ ಗೌಡ್ರು, ಗೊಂಚಿಕಾರು ಮತ್ತಿಬ್ಬರು ತಮ್ಮಲ್ಲಿಗೆ ಬಂದ ಹಿರೇ ಬಡಗಿ ಮತ್ತು ಚೆಂಬಸಣ್ಣಾ ತಂಡದವರಿಗೆ “ಈಗ ನೀವು ಮಲಿಕ್ಕೆಳಿ, ಚೆಂಬಸಣ್ಣಾ ನೀವು ಬೆಳಿಗ್ಗೆನೆ ಹೊರಟು ಬಿಡಬಾಡ್ರಿ. ನಾಳೆ ಮಧ್ಯಾನ್ನದ ಮ್ಯಾಲೆ ಹೊರಡಬೌದು. ಯಜಮಾನ್ರಿಗೆ ನಮ್ಮೂರ ವಿಶೇಷಗಳ ತೋರಿಸ್‍ಬೇಕು.

    ಬೆಳಿಗ್ಗೆ ನಮ್ಮ ಕಮರ ತೋರಿಸ್ತೀವಿ, ಅದನ್ನ ನೋಡಿಕೆಂಡ್ ನೀವು ಹೊರಡಬೌದು. ಯಜಮಾನನ್ನ ಎಲ್ಡ್ ಮೂರ್ ದಿನ ಇರಿಸಿಗಂಡ್ ಕಳಸೋ ವ್ಯವಸ್ಥೆ ಮಾಡತೀವಿ” ಎಂದು ಅಭಿಮಾನದಿಂದ ಮಾತಾಡಿದ್ದರು. ಚೆಂಬಸಣ್ಣ ಮೌನವಾಗಿ ಸಮ್ಮತಿಸಿದ್ದ.

    Click to comment

    Leave a Reply

    Your email address will not be published. Required fields are marked *

    More in ಸಂಡೆ ಸ್ಪಷಲ್

    To Top