ಸಂಡೆ ಸ್ಪಷಲ್
Kannada Novel: 10. ಹೊಸ ಬಂಡಿಗಳ ಆಗಮನ | ಹಬ್ಬಿದಾ ಮಲೆ ಮಧ್ಯದೊಳಗೆ

CHITRADURGA NEWS | 24 NOVEMBER 2024
ಕೃಷಿ ಬದುಕಿಗೆ ಪೂರಕವಾದ ಕಮ್ಮಾರಿಕೆ, ಚಮ್ಮಾರಿಕೆಯವರು, ಮಣ್ಣು ಒಡ್ಡರು ಮತ್ತು ಮಡಿವಾಳರು ಗೌನಳ್ಳಿಗೆ ಬಂದು ನೆಲಸಿದ ಸುಮಾರು ತಿಂಗಳು, ವರ್ಷ ಕಳೆದ ಬಳಿಕ ಭೂಮಾಪನಾ ತಂಡದವರು ಆಗಮಿಸಿದ್ದರು.
ಇವರು ಜಮೀನುಗಳಿಗೆಲ್ಲಾ ಬಾಂದು, ಹದ್ದುಬಸ್ತು ಇತ್ಯಾದಿ ಗುರುತಿಸಿ ಹೋದ ಮೇಲೆ ಅಕ್ಕಸಾಲಿಗರ ಕುಟುಂಬ ಆಗಮಿಸಿ ಊರಲ್ಲಿ ಮಿಂಚಿನ ಸಂಚಲನೆ ಉಂಟು ಮಾಡಿತ್ತು. ಹೆಣ್ಣು ಮಕ್ಕಳು ಕಿವಿ ಮೂಗುಗಳಿಗೆ ತೂತು ಮಾಡಿಕೊಂಡು ಬಂಗಾರದ ಒಡವೆಗಳಿಂದ ಅಲಂಕೃತರಾಗಿದ್ದರು. ಗುಂಡಾಚಾರಿಯ ಹೆಂಡತಿ ಸುಂದರವಾದ ಕುಬುಸಗಳನ್ನು ಕೈಯಿಂದಲೇ ಹೊಲಿದುಕೊಡುತ್ತಿದ್ದಳು. ಬಣ್ಣಬಣ್ಣದ ಕುಬುಸದ ಕಣಗಳು ಮತ್ತು ಸೀರೆಗಳನ್ನು ಮಾರಲು ಹೊತ್ತು ತರುತ್ತಿದ್ದ ಸಾಲುಣಿಸೆ ನೇಕಾರರು ಆಶ್ಚರಿಪಡುವಂತೆ ಹುಡುಗಿಯರು, ಹೆಂಗಸರು ಒಪ್ಪವಾದ ಕುಬುಸಗಳನ್ನು ತೊಟ್ಟು ತಿರುಗಾಡುತ್ತಿದ್ದರು.

ಗೌನಳ್ಳಿಯಿಂದ ಯಾವು ದಿಕ್ಕಿಗೂ ರಸ್ತೆ ಇರಲಿಲ್ಲ. ಊರಿಗೆ ವಾಯಾವ್ಯ ದಿಕ್ಕಿಗಿದ್ದ ಕೆನ್ನಳ್ಳಿ ಕಡೆಯಿಂದ ಮತ್ತು ಗೌನಳಿಗೆ ವಲಸೆ ಬರುವುದು ನಿರಾತಂಕವಾಗಿ ನಡೆದಿತ್ತು. ಸಂಗೇನಹಳ್ಳಿಯಿಂದ ಒಂದು ನಾಯ್ಕರ ಕುಟುಂಬ, ಹೊಸೂರಾ ಬೋವಿ, ಹನುಮಂತ ನೋವಿ ಕುಟುಂಬಗಳು ಬಂದು ನೆಲಸಿದ್ದವು.
ಹಿಂದಿನ ಸಂಚಿಕೆ ಓದಿ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಹೀಗೆ ಬಂದವರು ತಮಗೆ ಸರಿಕಂಡಲ್ಲಿ ಗುಡಿಸಲು ಕಟ್ಟಿಕೊಳ್ಳುವುದು. ಗಿಡ ಕಡಿದು ಜಮೀನು ಹಸು ಮಾಡಿಕೊಳ್ಳುವುದು ಮಾಡುತ್ತಿದ್ದರು. ಊರಿನಲ್ಲಿ ಗೌಡ್ರು ಗೊಂಚಿಕಾರದ ಎಂದುಕೊಂಡವರಿದ್ದರೂ ಯಾರ ತಂಟೆಗೂ ಹೋಗದೆ ತಮ್ಮ ತಮ್ಮ ಕೃಷಿ ಬದುಕಿನಲ್ಲಿ ನಿರತರಾಗಿರುತ್ತಿದ್ದರು. ಎಷ್ಟೋ ಸಲ ಊರಿನಲ್ಲಿ ಹೊಸಾ ಗುಡಿಸಲುಗಳು ಏಳುತ್ತಿದ್ದರೂ ಅವರ ಗಮನಕ್ಕೆ ಬರುತ್ತಿರಲಿಲ್ಲ.
ಇಂಥಾ ಸನ್ನಿವೇಶದಲ್ಲಿ ಊರಿನಲ್ಲಿ ಯಥೇಚ್ಚವಾಗಿ ಬೆಳೆಯುತ್ತಿದ್ದ ಒಣ ಮೆಣಸಿನಕಾಯಿ ಕೊಳ್ಳಲು ದಾಸಣ್ಣನೆಂಬ ವ್ಯಾಪಾರಿ ತನ್ನ ಗೂಡಿನ ಗಾಡಿಯೊಂದಿಗೆ ಕಳ್ಳಣಿವೆ ಮೂಲಕ ಊರಿಗೆ ಬಂದರೆ ವಾರಕಾಲ ಊರಲ್ಲಿ ತಂಗಿದ್ದು ಮೆಣಸಿನಕಾಯಿ ವ್ಯಾಪಾರ ಮಾಡಿಕೊಂಡು ಮಾಲು ಸಮೇತ ಹಿಂತಿ ರುಗುತ್ತಿದ್ದ. ದಾಸಣ್ಣ ತರುತ್ತಿದ್ದ ಗೂಡಿನ ಗಾಡಿಯನ್ನು ಹಳ್ಳಿಗರು ಆಶ್ಚರದಿಂದ ನೋಡುತ್ತಿದ್ದರು. ‘ಅಂಥಾ ಗಾಡಿಯನ್ನು ತಾವೂ ಕೊಳ್ಳಲು ಸಾಧ್ಯವೆ. ಈ ಗಾಡಿಯನ್ನು ಎಲ್ಲಿ ಮಾಡುತ್ತಾರೆ’ ಇತ್ಯಾದಿ ಮಾತಾಡಿಕೊಳ್ಳುತ್ತಿದ್ದರು.
ಗೌಡರ ಗುಂಪಿನವರೂ ಮತ್ತು ಗೊಂಚಿಕಾರರ ಗುಂಪಿನವರು ತಲಾ ಒಂದೊಂದು ಹೊಸ ಗಾಡಿ ಕೊಳ್ಳಲು ಯೋಚಿಸುತ್ತಿದ್ದರು. ಅವರು ತೇರಿನ ಗಾಲಿಯಂಥಾ ಸಣ್ಣ ಮರದ ಗಾಲಿಯ ಮರಬಂಡಿಯಲ್ಲಿ ಕಣಗಳಿಂದ ಕಾಳು ಕಡಿ ಹೇರಿಕೊಳ್ಳುವುದು ತ್ರಾಸದಾಯಕವಾಗಿತ್ತು. ಬೆಳಿಗ್ಗೆಯಿಂದ ಸಂಜೆಯ ತನಕ ಮರಬಂಡಿಯಲ್ಲಿ ಆರೇಳು ಪಲ್ಲಾ ಧಾನ್ಯ ಹೇರಬಹುದಿತ್ತು.
ಹೊಸ ಗಾಡಿ ಕೊಂಡರೆ ಏಳೆಂಟು ಪಲ್ಲಾ ಹಿಡಿಯುವ ಮಂಕರಿಯನ್ನು ಗಾಡಿಯಲ್ಲಿಟ್ಟು ಅದರಲ್ಲಿ ನಾಕೈದು ಸರ್ತಿ ಓಡಾಡಿ ಎಲ್ಲಾ ಧಾನ್ಯ ಹೇರಿಕೊಳ್ಳಬಹುದೆಂದು ಆಲೋಚನೆ ಮಾಡಿ ಹೊಸಾ ಬಂಡಿಕೊಳ್ಳುವ ಕುರಿತು ದಾಸಣ್ಣನಲ್ಲಿ ಪ್ರಸ್ತಾಪಿಸಿದ್ದರು. ಆತ ಹುಸಿನಗೆ ನಗುತ್ತಾ “ನೀವಿನ್ನಾ ಯಾವ ಕಾಲದಾಗಿದೀರಾ? ದೇಶದ ತುಂಬಾ ಗುಬ್ಬಿ ಗಾಡಿ ಅಮ್ಮ ಹೆಸರಾಗದಾವೆ. ಈ ಬಂಡಿ ಮಾಟ ನೋಡ್ರಿ, ಗಾಡಿ ಅಂದರೆ ಗಾಲಿ, ಗುಂಭ, ಆರೇಕಾಲು, ಹೊಟ್ಟೆಮರ ಬಾಳ ಮುಖ್ಯ.
ಇಲ್ಲಿ ನೋಡ್ರಿ ಎಲ್ಡ್ ಗಾಲಿ ಹೆಂಗ್ ಕೂಡ್ತಿದಾರೆ. ಎಲ್ಲಾ ಸಾಗುವಾನಿ ಮುಟ್ಟು, ಎಲ್ಡೊರ್ಸ ಒಣಗಿಸಿದ್ದು. ನೀವೊಂದು ಸರ್ತಿ ನನ್ ಜತಿಗೆ ಗುಬ್ಬಿಗೆ ಬರ್ರಿ. ಅಲ್ಲಿ ಏಳೆಂಟು ಜನ ಬಡಗಿಗಳು ಸೇರ್ಕಂಡು ಎಷ್ಟು ಬುದ್ದಿವಂತಿಕೆಯಿಂದ ಗಾಡಿ ಕೂಡಿಸ್ತಾರೆ ಅಮ್ಮ ಗೊತ್ತಾಗುತ್ತೆ”, ತನ್ನ * ಗಾಡಿಯನ್ನು ತೋರಿಸಿ ಬಡಗಿಗಳ ಕಾರ್ಯ ನಿಪುಣತೆಯನ್ನು ತಾರೀಫ್ ಮಾಡಿ ಮಾತಾಡಿದ್ದ.
ಹಿಂದಿನ ಸಂಚಿಕೆ ಓದಿ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು.
“ಇದರ ಕಿಮ್ಮತ್ ಎಷ್ಟಾಗಬೌದು” ಗೌಡರ ಪ್ರಶ್ನೆಗೆ “ಆಗಬೌದು ಒಂದು ತೊಂಬತ್ತೋ ನೂರೋ ಆಗಬೌದು. ನಾನು ಕೊಂಡಾಗ ಎಂಭತ್ತೈದು ಇತ್ತು. ನಾನು ಕೊಂಡೇ ನಾಕೈದು ವರ ಆಗೈತೆ”. ದಾಸಣ್ಣ ಉತ್ತರಿಸಿದ್ದ, “ಗುಬ್ಬಿ ಇಲ್ಲಿಗೇಟು ದೂರ, ಗಾಡಿ ಇಲ್ಲಿಗೆ ಹೊಡಕಂಡ್ ಬರದೆಂಗೆ?” ಗೌಡ್ರ ಪ್ರಶ್ನೆಗೆ “ನೀವೇನೂ ಯೋಚೆ ಮಾಡಬೇಡಿ ಅಲ್ಲಿ ಗಾಡಿ ಹೊಡಕಂಡ್ ಬರಾಕೆ ಜನ ಸಿಗತಾರೆ. ನೀವು ಮನಸ್ ಮಾಡ್ರಿ”. ದಾಸಣ್ಣ ಹುರಿದುಂಬಿಸಿದ್ದ.
ಗೌಡ್ರ ಮನೆಯವರು ಮತ್ತು ಗೊಂಚಿಕಾರರ ಮನೆಯವರು ಕುಲ ಬೆಡಗುಗಳಲ್ಲಿ ಆವಿನೋರು ಮತ್ತು ಬೆಳ್ಳೆನೋರು ಆಗಿದ್ದು ನೆಂಟರಿಷ್ಟರೇ ಆಗಿದ್ದರು. ಆದರೆ ಈತನಕ ವೈವಾಹಿಕ ಸಂಬಂಧಗಳನ್ನು ಬೆಳೆಸಿರಲಿಲ್ಲ. ಮಾತಾಡುವಾಗ “ನೆಂಟರೆ” ಎಂದು ಸಂಬೋಧಿಸುತ್ತಿದ್ದರು. ಈಗ “ನೆಂಟರೇ ನೆಂಟರೇ” ಎಂದು ಮಾತಾಡಿಕೊಂಡು ಒಂದೊಂದು ಹೊಸ ಗುಬ್ಬಿ ಗಾಡಿ ಕೊಳ್ಳಲು ಮುಂದಾಗಿದ್ದರು. ದಾಸಣ್ಣ ವ್ಯಾಪಾರ ಮುಗಿಸಿ ಹೊರಟಾಗ ಅವನ ಜತೆಯಲ್ಲಿ ಗೌಡ್ರ ಗುಂಪಿನ ಇಬ್ಬರು ಮತ್ತು ಗೊಂಚಿಕಾರ ಗುಂಪಿನ ಇಬ್ಬರು ತಲಾ ಅರುವತ್ತು ಅರುವತ್ತು ಬೆಳ್ಳಿ ರೋಕಡಿಗಳನ್ನು ಇಮ್ಮಣಿಯಲ್ಲಿ ಸೇರಿಸಿ ಸೊಂಟಕ್ಕೆ ಸುತ್ತಿಕೊಂಡು ಹೊರಟಿದ್ದರು. ದಾಸಣ್ಣ ಹಿರಿಯೂರು ತಲುಪಿದ ಬಳಿಕ ತನ್ನ ಗಾಡಿ ಮತ್ತು ಒಣ ಮೆಣಸಿನಕಾಯಿಯನ್ನು ತಾಬಂದ್ ಮಾಡಿ ಇವರ ಜತೆಯಲ್ಲಿ ತುಮಕೂರಿಗೆ ಹೊರಟಿದ್ದ.
ಆಗಿನ ಕಾಲದ ಇದ್ದಿಲು ಬೆಂಕಿಯ ಹಬೆಯಿಂದ ಓಡುವ ಬಸ್‌ಗಳು ಅಪರೂಪಕ್ಕೆ ತಿರುಗಾಡುತ್ತಿದ್ದವು. ಅಂಥದೊಂದು ಬಸ್‌ನಲ್ಲಿ ತುಮಕೂರು ತಲುಪಿ, ಅಲ್ಲಿಂದ ಬಾಡಿಗೆ ಜಟಕಾ ಗಾಡಿಯಲ್ಲಿ ಗುಬ್ಬಿ ಊರನ್ನು ತಲುಪಿದ್ದರು. ಎತ್ತಿನ ಬಂಡಿ ಮಾಡುವ ಜಾಗಕ್ಕೆ ಹೋದರೆ ಏಳೆಂಟು ಜನ ಬಡಗಿಗಳು
ಆದೂ ಇದೂ ಮಾತಾಡುತ್ತಾ ಬಂಡಿ ಕೂಡಿಸುವ ಕೆಲಸದಲ್ಲಿ ನಿರತರಾಗಿದ್ದರಿ ಒಂದು ಕಡೆ ಗಾಡಿಯ ಅಚ್ಚು ಕಾಯಿಸಿ ತಟ್ಟುವ, ಅದಕ್ಕೆ ತೊಡಿಸುವ ಬಳಿಳಣ. ಮುಂತಾದುವನ್ನು ಪಕ್ಕಾ ಉಕ್ಕಿನಲ್ಲಿ ಕುಲುಮೆಯಲ್ಲಿ ಕಾಯಿಸಿ ಅಳತೆಗೆ ತಕ್ಕಂತೆ ಬಡಿದು ಮಂಡಾಡಿ ಪಕ್ಷಕ್ಕೆಸೆಯುತ್ತಿದ್ದರು. ಅಚ್ಚಿನ ತೂಕವನ್ನು ಕೂಡಾ ತೂಗಿ ನೋಡುತ್ತಿದ್ದರು.
ಪಕ್ಷದಲ್ಲಿ ಗಾಡಿಯ ಗಾಲಿಗಳ ಗುಂಭದ ಮರಗಳಿಗೆ ರಂಧ್ರ ಕೊನೆಯನ ಕಾಯವನ್ನು ಮಟ್ಟಡಿಯಲ್ಲಿ ಮಾಡುತ್ತಿದ್ದರು. ಗುಂಭದ ಮರವನ್ನು ಮಟ್ಟಡಿಯ ಮಂಡಗೆ ಕೊರೆದು ಅದಕ್ಕೆ ಎರಡೂ ಕಡೆ ರೂಪಾಯಿ ದಪ್ಪದ ಒತ್ತಾ ಆಣಸುಗಳನ್ನು ಕುಟ್ಟಿ ತೊಡಿಸಿದ ಬಳಿಕ ಹಿರಿಯ ಬಡಗಿಯ ಬಳಿಗೆ ತಂದು ಹಾಕುತ್ತಿದ್ದರು. ಕೆಲವರು, ಹೊಟ್ಟೆ ಮರಗಳನ್ನು ಉಜ್ಜುತ್ತಿದ್ದರೆ ಮತ್ತೆ ಕೆಲವರು ಆರೇಕಾಲುಗಳನ್ನು ಉಜ್ಜಿ ಉಜ್ಜಿ ಅಳತೆ ನೋಡುತ್ತಿದ್ದರು. ಸ್ವಲ್ಪ ಹೊತ್ತು ಅಲ್ಲಿ ನಿಂತರೆ ಬಡಗಿಗಳು ಜೋಡಿಸಲು ಮಾಡುತ್ತಿದ್ದ ಸಾಗುವಾನಿ ಮರದ ವಾಸು ಮೂಗಿಗೆ ಬಡಿದಿತ್ತು.
ಹಿಂದಿನ ಸಂಚಿಕೆ ಓದಿ: 3. ಎಲ್ಲರೂ ಲಿಂಗವಂತರಾದರು
ಹೊಸದಾಗಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ತದೇಕ ದೃಷ್ಟಿಯಿಂದ ಗಮನಿಸುತ್ತಿದ್ದ ಈ ಆಗಂತುಕರನ್ನು ಹಿರಿಯ ಬಡಗಿ ವಿಚಾರಿಸಿಕೊಂಡರು. “ಯಾವುರವರಪ್ಪಾ ಗಾಡಿ ಕೊಳ್ಳಬೇಕಾಗಿತ್ತೇ?” ಇದನ್ನು ಕೇಳಿದ ದಾಸಣ್ಣ “ಹಿರಿವೂರ ಕಡೇಲರು ಕಾಣಣ್ಣಾ. ಇವರಿಗೆ ಎಲ್ಡ್ ಹೊಸಗಾಡಿ ಬೇಕಾಗಿತ್ತು. ಅದಕಅಯ್ತ ಬಂದಿದ್ದೀವಿ” ಉತ್ತರಿಸಿದ್ದ. “ಹೊಸ ಗಾಡಿ ಬೇಕಾದ್ರೆ ಅದೋ ನೋಡಿ ಆ ಚಪ್ಪರದಡೇಲಿ ನಿಲ್ಲಿದ್ದೀವಿ. ಅವನ್ನ ಮಾಡಾಕೆ ಹೇಳಿರೋರು ಈ ವೊತ್ತು ಬರಬೇಕಾಗಿತ್ತು. ಅವರು ಬರದಿದ್ರೆ ಕೊಡ್ತೀವಿ”. ಚಪ್ಪರ ತೋರಿಸಿ ಮಾತಾಡಿದ್ದ.
ಇವರಿಗೆ ಆ ಗಾಡಿಗಳನ್ನು ನೋಡುವ ಕುತೂಹಲ. ಅಲ್ಲಿಗೆ ತೆರಳಿ ಆರೇ ಕಾಲು, ಹೊಟ್ಟೆಮರ ಮುಂತಾದುವನ್ನು ಕೈಯಿಂದ ಬಡಿದು ಟಣ್ ಟಣ್ ದನಿಯನ್ನು ಆಲಿಸಿದರು. “ಇವನ್ನ ಮಾಡಕೆ ಹೇಳಿರೋರು ಬರದಿದ್ರೆ, ನಾವು ಈ ಗಾಡಿಗಳನ್ನ ನಮಿಗೆ ಕೊಡ್ರಿ ಅಂತ ಕೇಳಬೌದಲ್ಲಾ ದಾಸಣ್ಣ. ಗೊಂಚಿಕಾರರಲ್ಲೊಬ್ಬರು ತಮ್ಮ ಇರಾದೆಯನ್ನು ವ್ಯಕ್ತಪಡಿಸಿದ್ದರು. “ಇವತ್ ರಾತ್ರಿ ಇಲ್ಲಿ ಉಳಕಂಡ್ ನಾಳಿಕ್ಕೆ ಅವರೇನನಾ ಬಾ ಇದ್ರೆ ಗಾಡಿ ಕೊಡ್ತಿರಾ ಅಮ್ಮ ಕೇಳಬೌದು” ದಾಸಣ್ಣ ತನ್ನ ಅಭಿಪ್ರಾಯ ತಿಳಿಸಿದ್ದ.
ಸಂಜೆಯಾಗುತ್ತಿತ್ತು. “ಏನ್ನಣ್ಣಾ ರಾತ್ರಿ ಊಟಕ್ಕೆ ಹೆಂಗ್ ಮಾಡ್ತೀರಾ ಚೆನ್ನಬಸವೇಶ್ವರ ಸ್ವಾಮಿ ದೇವಸ್ಥಾನ ಐತೆ. ಅಲ್ಲಿ ಪಾಗರದಾಗೆ ಸುಖವಾಗಿ ಮನಿಕ್ಯಬೌದು. ಅಲ್ಲಿ ಬ್ಯಾಡಾ ಅಂದ್ರೆ ಇಲ್ಲೆ ಚಪ್ಪರದಾಗೆ ಹೊಸಗಾಡಿ ಮ್ಯಾಲೆ ಮಲಗಬೌದು. ಅದೇನೂ ಸಮಸ್ಯೆ ಅಲ್ಲ. ನೀವು ನಮ್ಮ ಹತ್ರ ಊಟ ಮಾಡೋದಾದ್ರೆ ನಾವು ಐದು ಜನಕ್ಕೂ ಅಡಿಗೆ ಮಾಡಿಸ್‌ತೀವಿ. ಇಲ್ಲಿ ನಿಮಿಗೆ ಮುಜುಗರ ಆದ್ರೆ ದೇವಸ್ಥಾನದ ಪೂಜಾರಿ ಜಂಗಮರು, ಅವರಿಗೆ ಒಂದು ಸೇರು ಅಕ್ಕಿ ತಂದುಕೊಟ್ರೆ ಅಡಿಗೆ ಮಾಡಿ ಊಟಕ್ಕೆ ನೀಡುತ್ತಾರೆ”. ಹಿರಿಯ ಬಡಗಿ ಪ್ರಸ್ತಾಪಿಸಿದ್ದರು. ಇವರು ಮುಖ ಮುಖಾ ನೋಡಿಕೊಂಡು “ಎಲ್ಲುಂಡೂ ಒಂದೆ ಇವರತಾಗೆ ಊಟ ಮಾಡಾನಾ” ಅಂತ ಗೌಡ್ರು ಹಿರಿಯರು ಮಾತಾಡಿ “ಅಣ್ಣೂರೇ ಹೆಂಗಾದ್ರೂ ಸೇರಕ್ಕಿ ಖರ್ಚಾಗ್ತವೆ.
ಹಿಂದಿನ ಸಂಚಿಕೆ ಓದಿ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಇವತ್ ರಾತ್ರಿ ಮತ್ತೆ ನಾಳೆ ಬೆಳಿಗ್ಗೆಗೆ ಎಲ್ಡ್ ಸೇರು ಅಕ್ಕಿ ತತ್ತೀವಿ. ನೀವೇ ಐದು ಜನಕ್ಕೂ ಊಟಕ್ಕಿಟ್‌ಬಿಡಿ” ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಕೂಡಲೇ “ಯಜಮಾನೆ ಸೇರಕ್ಕೇನೂ ಬ್ಯಾಡಾ ಯಾತ್ತೂ ಬ್ಯಾಡಾ. ನೀವು ನಮ್ಮ ಹತ್ರ ಊಟ ಮಾಡೋದೇ ಹೆಚ್ಚುಗಾರಿಕೆ. ರಾಗಿ ಮುದ್ದೆ ಬ್ಯಾಳೆ ಸಾರು ಮಾಡಿಸ್‌ತೀವಿ, ಉಂಡು ಮಲಿಕ್ಯಳಿ ಬೆಳಿಗ್ಗೆ ಗಾಡಿ ಹೊಡಕಂಡ್ ಹೋಗೀರಂತೆ”. ಹಿರಿಯ ಬಡಗಿ ನಗುತ್ತಾ ಮಾತಾಡಿದ್ದರು.
“ಕತ್ತಲಾಗೋಕೆ ಮುಂಚೆ ಹೋಗಿ ದೇವಸ್ಥಾನ ನೋಡ್ಕಂಡ್ ಬರಿ, ಜತೇಲಿ ಊಟ ಮಾಡಾನ”
ಬಡಗಿ ಸೂಚಿಸಿದ್ದರು. ಅವರ ಸಲಹೆಯಂತೆ ದಾಸಣ್ಣನ ಜತೆಗೂಡಿ ಗೌಡ್ರು ಮತ್ತು ಗೊಂಚಿಕಾದ್ರೂ ಚನ್ನಬಸವೇಶ್ವರ ದೇವಸ್ಥಾನ ನೋಡಿಕೊಂಡು ಬರಲು ತೆರಳಿದರು. ದೇವಸ್ಥಾನದಲ್ಲಿ ಪೂಜಾರರು ಸಂಜೆಯ ಪೂಜೆಗೆ ಅಣಿಯಾಗುತ್ತಿದ್ದರು. ಅಲ್ಲಿಗೆ ತಲುಪಿದ ಇವರನ್ನು ನೋಡಿ ‘ಎಲ್ಲಿಯವರು ಸಂಜೆ ಇಲ್ಲಿಗೇಕೆ ಬಂದಿರಿ’ ಇತ್ಯಾದಿ ವಿಚಾರಿಸಿಕೊಂಡರು. ದಾಸಣ್ಣ ತಾವು ಹಿರಿಯೂರಿನವರು ಹೊಸಾಗಾಡಿ ಕೊಳ್ಳಲು ಬಂದಿರುವುದಾಗಿ ತಿಳಿಸಿದರು. “ಯಾಕೆ ನಿಮ್ಮ ಕಡೆ ಹೊಸ ಗಾಡಿ ತಯಾರಿಸುವವರಿಲ್ಲವೆ? ಎಷ್ಟು ದೂರದಿಂದ ಬಂದಿದ್ದೀರಿ. ನೀವು ರಾತ್ರಿ ಇಲ್ಲಿ ತಂಗಬಹುದು. ಬುತ್ತಿ ತಂದಿದ್ದರೆ ಊಟ ಮಾಡಿ ಇಲ್ಲಿ ಮಲಗಬಹುದು. ಅಥವಾ ಊಟ ಬೇಕಿದ್ದರೆ ಹೇಳಿ ಮಾಡಿಸುತ್ತೇನೆ” ಅಂತ ತಿಳಿಸಿ ತಮ್ಮ ಕಾವ್ಯಗಳಲ್ಲಿ ಮಗ್ನರಾದರು.
ಅನಂತರ ಹೊರಗೆ ಬಂದು “ಕಲ್ಯಾಣದ ಶರಣದಲ್ಲಿ ಚೆನ್ನಬಸವೇಶ್ವರರು ಮಹಾಜ್ಞಾನಿಯಾಗಿದ್ದರು. ಇವರು ಮಖಾ ಮಾನವರ ವಾದಿ ಬಸವೇಶ್ವರ ಅಕ್ಕ ನಾಗಲಾಂಬೆಯ ಒಬ್ಬನೇ ಮಗ. ಇವರನ್ನು ಎಲ್ಲಾ ಶರಣು ಮಹಾಜ್ಞಾನಿ ಎಂದೇ ಕರೆದಿದ್ದಾರೆ. ವಿವ್ಯಚ್ಚಾಗಿ ಅಲ್ಲವಾ ಗಭುವೇವರು ಕೂಡಾ ಚೆನ್ನಬಸವಣ್ಣರನ್ನು ಕೊಂಡಾಡಿದ್ದಾರೆ. ಈ ಮಹಾ ಶರಣನ ಪೂಜೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಸಿಕ್ಕಿದೆ” ಎಂದು ತಿಳಿಸಿ ಪೂಚೆಗೆ ಆರಂಭಿಸಿದರು. ಇವರೆಲ್ಲಾ ಪೂಜೆ ಮುಗಿಯುವ ತನಕ ದೇವಸ್ಥಾನದಲ್ಲಿ ಕುಳಿತಿದ್ದು ತೀರ್ಥ ಪ್ರಸಾದಗಳನ್ನು ಪಡೆದುಕೊಂಡು ಬಡಗಿಗಳ ಕಾರ್ಯಸ್ಥಾನಕ್ಕೆ ತೆರಳಿದರು.
ಹಿಂದಿನ ಸಂಚಿಕೆ ಓದಿ: 5. ಕೆನ್ನಳ್ಳಿಯ ದುರಂತ
ಇವರ ಆಗಮನವನ್ನು ನಿರೀಕ್ಷಿಸುತ್ತಿದ್ದ ಎಲ್ಲಾ ಬಡಗಿಗಳು ಸ್ನಾನ ಮಾಡಿ ಅರ್ಧ ಬರಿಮೈಯಲ್ಲಿ ಕುಳಿತಿದ್ದರು. ಇವರು ಅಲ್ಲಿಗೆ ತಲುಪಿದ ಕೂಡಲೇ ಬರ್ರಿ ಕೈಕಾಲು ತೊಳೆದುಕೊಳ್ಳಿ, ಇಲ್ಲಿ ಕೂಡ್ರಿ, ಮುಂತಾಗಿ ಕರೆದರು. ಇವರೆಲ್ಲಾ ಸದ್ದಿಲ್ಲದೇ ಒಬ್ಬೊಬ್ಬರೆ ಮುಖ ಕೈಕಾಲು ತೊಳೆದುಕೊಂಡು ಶಿವಪೂಜೆ ಮಾಡಲು ವಿಭೂತಿ, ಪತ್ರ, ಊದುಖತ್ತಿ ಪಡೆದು ತಮ್ಮ ಇಷ್ಟಲಿಂಗಗಳನ್ನು ಪೂಜಿಸಿ ಕಣ್ಣಿಗೊತ್ತಿಕೊಂಡು ಕರಡಿಗೆಗಳಲ್ಲಿ ಸೇರಿಸಿ ಊಟ ಮಾಡಲು ಸಿದ್ಧರಾದರು.
ಹಿರಿಯೂರು ಬಿಟ್ಟಾಗಿಂದ ಎಲ್ಲೂ ಊಟ ತಿಂಡಿ ಮಾಡಿರಲಿಲ್ಲ. ಬಿಟ್ಟು ರಾಗಿ ಮುದ್ದೆ ಬೇಳೆ ಸಾರು ತುಂಬಾ ರುಚಿಯಾಗಿತ್ತು, ಆದರ ಮೇಲೆ ಸ್ವಲ್ಪ ಅನ್ನ ಸಾರು ಮಜ್ಜಿಗೆಯ ಊಟ ವೈನಾಗಿತ್ತು, ‘ಯಾರಾದ್ರೂ ಅಡಿಕೆ ಎಳೆ ಜಗೀತೀರಾ’ ಬಡಗಿ ವಿಚಾರಿಸಿಕೊಂಡರು. ಇವರಿಗೆ ಕಣ್ಣು ಮುಚ್ಚಿಕೊಂಡು ಬರುತಿದ್ದು, “ನಮಗ್ಯಾರಿಗೂ ಅಭ್ಯಾಸ ಇಲ್ಲ” ಅನ್ನುತ್ತಲೇ ಚಪ್ಪರದ ಬಳಿ ಸಾರಿ ಹೊಸಗಾಡಿಗಳನ್ನೇರಿದ್ದರು. “ಹಾಸಿಗೆ ಇಳಿಚಾರಿದ್ರೆ ನನಿಗೆ ನಿದ್ದೆ ಬರಲ್ಲ ನೀವೇ ನಾಕು ಜನ ಗಾಡಿ ಮ್ಯಾಲೆ ಮಲಗ್ರಿ ನಾನು ಈ ಕಟ್ಟೆ ಮ್ಯಾಲೆ ಅಡ್ಲಾಗ್‌ನಿ” ಅಂದು ದಾಸಣ್ಣ ಅಲ್ಲಿದ್ದ ಕಟ್ಟೆ ಮೇಲೆ ಆಡ್ವಾದ, ಆಗಾಇಗಾ ಅಂಬವಾಗ ಎಲ್ಲರೂ ಗೊರಕೆ ಹೊಡೆಯಲು ಆರಂಭಿಸಿದ್ದರು. ಹಿರಿಯ ಬಡಗಿ ಇವರಲ್ಲ ಸುಖವಾಗಿ ಮಲಗಿರುವುದನ್ನು ಖಾತರಿಪಡಿಸಿಕೊಂಡು ಇನ್ನೊಂದು ಸೂಚ್ ಗಾಡಿಯ ಹಲಗೆ ಮೇಲೆ ಮಲಗಿದನು.
ಗೌನಹಳ್ಳಿಯವರಿಗೆ ನಸಿಗ್ಗೆಲೇ ಎದ್ದು ರೂಢಿ. ಬೆಳಗೀಲೆ ಎದ್ದು – ಹೊಲಗದ್ದೆಗಳ ಕಡೆ ನಡೆದು ತಮ್ಮ ಬೆಳಗಿನ ಕರಗಳನ್ನು ಮುಗಿಸಿ ಹೊಲದಲ್ಲಿದ್ದ – ಬಾವಿಯಲ್ಲಿಳಿದು ಮುಖ ಕೈಕಾಲು ತೊಳೆದುಕೊಂಡು ಬಡಗಿಗಳ ಕಾರ್ಯಾಗಾರಕ್ಕೆ 1 ಮರಳಿದರು. ಅಷ್ಟೊತ್ತಿಗೆ ಎದ್ದಿದ್ದ ಎಲ್ಲಾ ಬಡಗಿಗಳು ಅವರ ಸಹಾಯಕರು ಕಸಗುಡಿಸಿ ಪೂಜೆ ಮಾಡುತ್ತಿದ್ದರು. ಹಿಂತಿರುಗಿದ ಇವರನ್ನು ಸ್ವಾಗತಿಸಿದ ಹಿರಿಯ ಬಡಗಿ “ಸುಖವಾಗಿ ನಿದ್ದೆ ಮಾಡಿದಿರಾ, ಹೊಸಾ ಜಾಗದಲ್ಲಿ ಕೆಲವರಿಗೆ ನಿದ್ದೆ ಬರೋಲ್ಲ” ಎಂದು ವಿಚಾರಿಸಿಕೊಂಡರು “ನೀವು ನಮಿಗೆ ಗಾಡಿ ಕೊಟ್ರೆ ನಾವು ನಮ್ಮೂರಿಗೆ ಹೊಲ್ಟ್ ಬಿಡ್ತೀವಿ”. ದಾಸಣ್ಣ ಪೀಠಿಕೆ ಹಾಕಿದ್ದರು.
ಹಿಂದಿನ ಸಂಚಿಕೆ ಓದಿ: 6. ಎಲ್ಲೆಲ್ಲಿಂದಲೋ ಬಂದರು
ಹಿರಿಯ ಬಡಗಿಯವರು ಒಳಗೆ ಹೋಗಿ ತಮ್ಮವರೊಂದಿಗೆ ಸಮಾಲೋಚಿಸಿ ಹೊಸಾ ಗಾಡಿಗಳನ್ನು ಇವರೂರಿಗೆ ತಲುಪಿಸಲು ಎತ್ತು ಮತ್ತು ಆಳುಗಳನ್ನು ಕರೆತರಲು ಸಹಾಯಕರಿಬ್ಬರನ್ನು ಕಳಿಸಿ “ಇಲ್ಲಿ ಕೇಳಿ, ಗಾಡಿ ಅಚ್ಚಿಗೆ ಎಣ್ಣೆ ಹಚ್ಚದಲೆ ಗಾಡಿ ಹೂಡಬಾರು. ಕಲ್ಲು ಗುಡ್ಡದಾಗೆ ಹೊಡದಾಡಬಾರು. ಆರು ಪಲ್ಲಾ ಕಾಳು ಹೇರಬೌದು. ಹುಲ್ಲು ಹೇರಬೇಕಾದ್ರೆ ಸಿಕ್ಕಾಪಟ್ಟೆ ಎತ್ತರಕ್ಕೆ ತುಂಬಿದರೆ ಗುಂಡಿ, ತಗ್ಗಿನಾಗೆ ಗಾಡಿ ಉಳಿಕೆಮುತ್ತೆ. ಒಂದ್ ಸರ್ತಿ ಗಾಡಿ ಬಿತ್ತು ಅಂದ್ರೆ ಗಾಲಿ ಗುಂಭಕ್ಕೆ ಪೆಟ್ಟು ಬೀಳುತ್ತೆ. ಆರೇಕಾಲುಗಳು ಸಡ್ಲ ಆಗಬೌದು, ಗಾಡಿ ಗುಟ್ಟು ಇರೋದೆ ಗಾಲಿ ಗುಂಭದಾಗೆ, ಇಷ್ಟು ಆಗದಂತೆ ನೀವು ಹೆಂಗಾದ್ರೂ ಗಾಡಿ ಹೊಡೆದಾಡಬೌದು”. ಹಿರಿಯ ಬಡಗಿ ಗಾಡಿಕೊಳ್ಳುವವರಿಗೆ ಸೂಚನೆ ಕೊಟ್ಟರು.
ಅಷ್ಟೊತ್ತಿಗೆ ಗಾಡಿ ಊರಿಗೆ ತಲುಪಿಸುವ ಜನರನ್ನು ಸಹಾಯಕರು ಕರೆತಂದಿದ್ದರು. ಅವರು ಬರುತ್ತಲೇ “ಚೆಂಬಸಣ್ಣಾ ಇವು ಹಿರಿವೂರ ಕಡೆ ಜನ, ಎಲ್ಡ್ ಹೊಸ ಗಾಡಿ ಕೊಳ್ಳಾಕೆ ಬಂದಿದಾರೆ. ನೀವು ಗಾಡಿಗಿಬ್ರಂಗೆ ನಾಲ್ಕು ಜನ ಎಳ್ ಜತೆ ಎತ್ತು ಹೋಗಿ ಗಾಡಿ ಮುಟ್ಟಿಸ್ ಬರಬೇಕು ಹೆಂಗ್ ಮಾಡ್ತೀರಾ?” ಹಿರಿಯ ಬಡಗಿ ವಿಚಾರಿಸಿದ್ದರು. ಚೆನ್ನಬಸಣ್ಣ ಹೆಸರಿನವರು “ಯಾ ಊರು ಎಲ್ಲೆತೆ ದೂರ ಎಷ್ಟು” ವಿಚಾರಿಸಿದ. “ಊರು ಗೌನಳ್ಳಿ ಅಮ್ಮ, ಹಿರಿವೂರಿಂದ ಆಚೆಗೆ. ದೊಡ್ಡೆಜ್ಜೆ ಮ್ಯಾಲೆ ಹೋದ್ರೆ ಒಂದು ಹಗಲು, ಒಂದು ರಾತ್ರಿಗೆ ಹೋಗಬೌದು, ಎತ್ತು ಸುಧಾರಿಸಿಗಾಬೇಕು ಅಂತ ಎಲ್ಲೆನಾ ಉಳಕಂಡ್ರೆ ಇನ್ನೊಂದಿನ ಆಗುತ್ತೆ”, ಎಂದು ದಾಸಣ್ಣ ತಿಳಿಸಿದ. “ಉಳಕೊಳ್ಳಬೇಕು ಅಂದ್ರೆ ಎಲ್ಡ್ ದಿನದ ಹುಲ್ಲು ಹಾಕ್ಕೋಬೇಕು.
ಹೊದಿಕೆ ಎಲ್ಲಾ ತಗೋಬೇಕು. ನಾಲಕ್ ಜನ ಎರಡು ಜೋಡಿ ಎತ್ತು ಅಂದ್ರೆ ಇಪ್ಪತ್ತೈದು ರೂಪಾಯ್ ಕೊಡಬೇಕು” ಚೆನ್ನಬಸಣ್ಣ ತಿಳಿಸಿದ್ದ. “ನೀನಿನ್ನೇನ್ ಬಾಳ ಕೇಳಿಲ್ಲಾ ಹದಿನೈದು ರೂಪಾಯ್ ಕೊಡ್ಲನಾ ಹೊಳ್ ಬರಿ”. ಹಿರಿಯ ಬಡಗಿ ತೀರಾನಿಸಿದರು. “ಅಣ್ಣಾ ತಿರಿಗಿಕ್ಯಂಡ್ ಬರಬೇಕಾದ್ರೆ ಎಳ್ ದಿನದ ಹುಲ್ಲು, ನಾಕಾಳಿಗೆ ಎಷ್ಟೂಟಿಕೆ ಬುತ್ತಿ ಕಟ್ಟಿ ಕೊಡಬೇಕು. ಯಜಮಾನ ಹೇಳಿದಮ್ಯಾಗೆ ನಾನು ಮಾತಾಡಲ್ಲ. ನಿಮ್ಮ ಖುಷಿ” ಎಂದು ತನ್ನ ಒಪ್ಪಿಗೆಯನ್ನು ಸೂಚಿಸಿ “ಊಟ ಮಾಡಿಕೊಂಡ್ ಬುತ್ತಿಕಟ್ಟಿಸ್ಟಂಡ್ ಬತ್ತೀನಿ” ಎಂದು ತನ್ನ ಮನೆ ಕಡೆ ಚನ್ನಬಸಣ್ಣ ನಡೆದುಹೋದ.
ಗೌನಹಳ್ಳಿಯವರಿಗೆ ಮತ್ತು ದಾಸಣ್ಣನಿಗೆ ಸಮಾಧಾನವಾಗಿತ್ತು. ಅವರಿಂದ ಮಾತೇ ಹೊರಡಲಿಲ್ಲ. “ಊಟ ಮಾಡಿಕೆಂಡ್ ಹೊಲ್ಡ್ ಬಿಡ್ರಿ ಸಿಗನಾಯ್ಕನಹಳ್ಳಿ ಮ್ಯಾಲೆ ಹೋಗ್ತಿರೋ ಇಲ್ಲ ಸೀರ್ಯದ ಮ್ಯಾಲೆ ಹೋಗೀರೊ ಹೆಂಗೆ ಹೋದ್ರೆ ನಿಮಿಗೆ ಅನುಕೂಲ ನೋಡ್ರಿ. ಸೀಯಾದ ಮ್ಯಾಲೆ ಹೋದ್ರೆ ರಸ್ತಿ ಸೆಂದಾಗೈತೆ” ಎಂದು ಹಿರಿಯ ಬಡಗಿ ಮಾತಾಡಿ “ಎಲೆ ರಾಜ ಐದು ಜನಕ್ಕೆ ಬುತ್ತಿ ಕಟ್ಟಿಕೊಡಾಕೇಳಪ್ಪಾ” ತಮ್ಮ ಸಹಾಯಕನನ್ನು ಮನೆಯೊಳಗೆ ಕಳಿಸಿದರು.
ಹಿಂದಿನ ಸಂಚಿಕೆ ಓದಿ: 7. ಊರು ತೊರೆದು ಬಂದವರು
“ಈ ಎರಡು ಗಾಡಿಗಳಿಗೆ ತೊಂಭತ್ತೈದರಂಗೆ ಮುಂಗಡ ಇಸಗಂಡಿದ್ವಿ, ಅವರಿಗೆ ರಿಣ ಇಲ್ಲ. ನೀವೂ ಅಷ್ಟೆ ಕೊಡ್ರಿ. ಬಾಳ ದೂರದಿಂದ ಬಂದಿದೀರಾ. ಸುಖವಾಗಿ ಹೋಗಿ ಊರು ಸೇರಳಿ” ಹಿರಿಯ ಬಡಗಿ ಮಾತಾಡಿದ್ದರು. ಚೌಕಾಸಿ ಮಾಡಲು ಗೌನಳ್ಳಿಯವರ ಬಾಯಿ ಕಟ್ಟಿಹಾಕಿದಂತಿತ್ತು ಹಿರಿಯ ಬಡಗಿಯವರ ಮಾತಿನಿಂದ ಗೌಡ್ರು ಮತ್ತು ಗೊಂಚಿಕಾರರು ತಮ್ಮತಮ್ಮ ಸೊಂಟಕ್ಕೆ ಕಟ್ಟಿಕೊಂಡಿದ್ದ ಇಮ್ಮಣ್ಣಿಗಳನ್ನು ಬಿಚ್ಚಿ ತಲಾ ತೊಂಬತ್ತೈದು ಬೆಳ್ಳಿ ರೋಕಡಿಗಳನ್ನು ಎಣಿಸಿ ಬಡಗಿಯರ ಮುಂದಿಟ್ಟರು. “ಇಲ್ಲೆ ಹತ್ತಿರದಾಗೆ ಅಂಗಡಿ ಮನೆ ಐತೆ. ಹೋಗಿ ಎಲ್ಡ್ ತೆಂಗಿನಕಾಯಿ ಬಾಳೆಹಣ್ಣು ವೀಳೇದೆಲೆ ಅಡಿಕೆ ಮತ್ತು ಪೂಜೆ ಸಾಮಾನು ತರಿ, ರಾಜಾ ಇವರಿಗೆ ಅಂಗ್ಲಿ ತೋರೊ”. ಹಿರಿಯ ಬಡಗಿ ಸೂಚಿಸಿದ್ದರು.
ಕೂಡಲೇ ಗೌಡರ ಹಿರಿಯ ಹುಡುಗನನ್ನು ಹಿಂಬಾಲಿಸಿ ಹೊರಟರು. ಅವರು ಹಿಂದಿರುಗಿ ಬರುವ ತನಕ ಬಡಗಿಯವರು ಬೆಳ್ಳಿ ರೂಪಾಯಿಗಳನ್ನು ಮುಟ್ಟಿರಲಿಲ್ಲ. “ವೀಳೆದೆಲೆ ಅಡಿಕೆಗೆ ಒಂದೀಸ್ ರೂಪಾಯಿ ಇಟ್ಟು ಕೊಡ್ರಿ” ಎಂದು ಅವರು ತಿಳಿಸಿದಂತೆ ಗೌಡ್ರು ಮತ್ತು ಗೊಂಚಿಕಾರರು ಹಾಗೆಯೇ ಮಾಡಿದರು. “ತಗಳ್ಳಪ್ಪಾ ಇವನ್ನ ಪೆಟಾರಿಗಾಕು” ಎಂದು ಎಲ್ಲಾ ಹಣವನ್ನು ಒಂದು ಚೀಲಕ್ಕೆ ಸೇರಿಸಿ ಅವರ ಹುಡುಗನಿಗೆ ಕೊಟ್ಟು “ಎದ್ದಳಿ ಊಟ ಮಾಡಾನಾ” ಎಂದು ಎದ್ದರು.
“ಎಲ್ಲಾರೂ ಬರ್ರೆಪ್ಪಾ ಊಟಕ್ಕೆ” ಅನ್ನುತ್ತಲೇ ಆಗಲೇ ಕೆಲಸದಲ್ಲಿ 1 ತೊಡಗಿದ್ದವರೆಲ್ಲಾ ಬಂದು ಊಟಕ್ಕೆ ಕುಳಿತರು. “ಇಗಾ ನೋಡಿ ಹಿಂಗೆ – ಜತೇಲಿ ಉಳ್ಳೋದೇ ಸುಖ. ಇದನ್ನ ಪಡಕಂಡ್ ಬಂದಿರಬೇಕು” ಅನ್ನುತ್ತಾ ಎಲ್ಲಾರ ಕಡೆ ನೋಡುತ್ತಾ ನಿಧಾನವಾಗಿ ಊಟ ಮಾಡಿದರು. ಊಟ ಮಾಡಿದ ಬಳಿಕ “ಗಾಡಿಗಳ ಬಯಲೀಗೆ ತರೆಪ್ಪಾ” ಎಂದು ಚಪ್ಪರದಿಂದ ಹೊರಗೆ ತರಿಸಿ “ಇವರಿಗೆ ನೀರು ಹೂವು ಪತ್ರೆ ಕೊಡ್ರಿ ಪೂಜೆ ಮಾಡ್ತಾರೆ” ಎಂದು ಅವೆಲ್ಲವನ್ನೂ ತರಿಸಿದರು.
ಹಿಂದಿನ ಸಂಚಿಕೆ ಓದಿ: 8. ಮೋಜಣಿಕೆ ಮಾಡಿದರು
ಗೌಡರು ಮತ್ತು ಗೊಂಚಿಕಾರರು ಭಕ್ತಿಯಿಂದ ಗಾಡಿಗಳಿಗೆ ನೀರು ಚಿಮುಕಿಸಿ ವಿಭೂತಿ ಧರಿಸಿ, ಹೂ ಪತ್ರೆ ಮುಡಿಸಿ ತೆಂಗಿನಕಾಯಿಗಳನ್ನು ಒಡೆದು ಹೋಳು ಮಾಡಿ ಗಾಡಿಯ ಮುಂದಿರಿಸಿ ಊದು ಬತ್ತಿ ಬೆಳಗಿದರು. ಅನಂತರ ಅಲ್ಲಿದ್ದ ಎಲ್ಲರಿಗೆ ಕಾಯಿ ಕುಟ್ಟಿ ಚೂರು ಮಾಡಿ, ಬಾಳೆಹಣ್ಣು, ಕಾಯಿ ಚೂರು ವಿತರಿಸಿ ಹಿರಿಯ ಬಡಗಿಯವರ ಪಾದ ಮುಟ್ಟಿ ನಮಸ್ಕರಿಸಿದರು. ಅಷ್ಟೊತ್ತಿಗೆ ಹುಲ್ಲಿನ ಹೊರೆಗಳ ಸಮೇತ ನಾಲ್ಕು ಎತ್ತುಗಳ ಜತೆ ಚೆನ್ನಬಸಣ್ಣ ಮತ್ತೆ ಮೂವರು ಆಗಮಿಸಿದ್ದರು. ಅವರಿಗೂ ಹಣ್ಣುಕಾಯಿ ವಿತರಿಸಿ ಎಲ್ಲರಿಗೂ ಕೈಮುಗಿದು ಹುಲ್ಲನ್ನು ಗಾಡಿಗಳಲ್ಲಿ ಹರಡಿ ಎತ್ತುಗಳನ್ನು ನೊಗಗಳಿಗೆ ಎತ್ತಿಕಟ್ಟಿದರು.
ಗಾಡಿ ಏರಿ ಮತ್ತೆಲ್ಲರಿಗೂ ನಮಸ್ಕರಿಸಿ “ಸೀಮಾದ ಮ್ಯಾಲೆ ಗಾಡಿ ನಡ್ಲಪ್ಪಾ” ಎಂದು ಹೊರಟಿದ್ದರು. ಕೂಡಲೇ ಹಿರಿಯ ಬಡಗಿ ಕೂಗು ಹಾಕಿ ಗಾಡಿಗಳನ್ನು ನಿಲ್ಲಿಸಿದ್ದರು. ಒಂದಿಬ್ಬರಿಗೆ ಹಿಂದಕ್ಕೆ ಬರಲು ತಿಳಿಸಿ ಹೊಸಾಗಾಡಿ ಮಾರಾಟದ ರಸೀದಿ ರಹದಾರಿ ಪತ್ರ ನೀಡಿದ್ದರು. “ಹಾದ್ಯಾಗೆ ಹೇಳೋಕ್ ಬರಲ್ಲ, ಯಾರಾದ್ರೂ ಪೋಲೀಸೋ ಗೀಲಿಸೋ ನಿಲ್ಲಿಸಿ ಕೇಳಬೌದು ಆವಾಗ ಇವನ್ನ ಅವರಿಗೆ ತೋರಿ ಮುಂದಕ್ಕೋಗ್ರಿ” ಎಂದು ಎಚ್ಚರಿಕೆ ಮಾತು ಹೇಳಿದ್ದರು.
ಮಧ್ಯ ಎಲ್ಲೂ ನಿಲ್ಲದೆ ಹಗಲೂಟದ ಬುತ್ತಿ ಸಹಾ ಉಣ್ಣದೆ ರಾತ್ರಿ ಉಂಬತ್ತಿಗೆ ಚಿಕ್ಕನಹಳ್ಳಿ ತಲುಪುವ ಹೊತ್ತಿಗೆ ಎತ್ತುಗಳು ಮುಂದೆ ನಡೆಯದಾದವು. ಅಲ್ಲಿನ ದೇವಸ್ಥಾನದ ಬಳಿ ಗಾಡಿ ನಿಲ್ಲಿಸಿ ಎತ್ತುಗಳನ್ನು ಬಿಚ್ಚಿ ಹತ್ತಿರದ ಮನೆಯಿಂದ ಹಗ್ಗ ಬಿಂದಿಗೆ, ಕಡಾಯಿ ತಂದು ಬಾವಿಯಿಂದ ನೀರು ಸೇದಿ ಎತ್ತುಗಳಿಗೆ ನೀರು ಕುಡಿಸಿ, ಅವುಗಳ ಮುಂದೆ ಹುಲ್ಲು ಹಾಕಿದರೆ ದಣಿದ ಎತ್ತುಗಳು ಸುಧಾರಿಸಿಕೊಳ್ಳಲು ಮಲಗಿದ್ದವು. ಇವರೂ ಕೂಡಾ ತಮ್ಮ ಬುತ್ತಿಗಳನ್ನು ಬಿಟ್ಟ ತಾವೂ ಊಟದ ಶಾಸ್ತ್ರ ಮಾಡಿದರು.
ದೇವಸ್ಥಾನದ ಮಗ್ಗುಲಲ್ಲಿ ಎತ್ತುಗಳನ್ನು ಕಟ್ಟಿ ಎತ್ತುಗಳ ಬಳಿ ಇಬ್ಬರು ಉಳಿದವರು ಗಾಡಿಗಳಲ್ಲಿ ಮತ್ತು ದೇವಸ್ಥಾನದಲ್ಲಿ ಮಲಗಿದರು. ಸುತ್ತಲೆ ಎದ್ದು ನೋಡಿದರೆ ಎತ್ತುಗಳು ತಮ್ಮ ಮುಂದೆ ಹರಡಿದ್ದ ಹುಲ್ಲನ್ನೆಲ್ಲಾ ಖಾಲಿ ಮಾಡಿದ್ದವು. ಎತ್ತುಗಳಿಗೆ ನೀರು ಕುಡಿಸಿಕೊಂಡು ಗಾಡಿಗೆ ಕಟ್ಟಿ ಮುಂದೆ ಹೊರಟರು. ಸೀರ್ಯ್ಯಕ್ಕೆ ತಲುಪುವ ಹೊತ್ತಿಗೆ ಬೆಳ್ಳಂಬೆಳಕಾಗಿತ್ತು. ತಿಂಡಿ ಮಾರಾಟ ಮಾಡುವ ಮನೆ ಬಳಿ ಗಾಡಿಗಳನ್ನು ನಿಲ್ಲಿಸಿ ಅಲ್ಲಿ ಚಿತ್ರಾನ್ನ ತಿರ- ದು ನೀರು ಕುಡಿದು ಮುಂದೆ ಹೊರಟರು. ಖಾಲಿ ಗಾಡಿಗಳು ಸದ್ದಿಲ್ಲವೆ ಸಾಗುತ್ತಿದ್ದವು. ಕೀಲಿ ಎಣ್ಣೆ ಹಾಕದೆ ಗಾಡಿ ಕಟ್ಟಕೂಡದೆಂದು ಹಿರಿಯ ಬಡಗಿ ತಿಳಿಸಿದ್ದುದು ನೆಪ್ಪಿಗೆ ಬಂತು. ಮುಂದೆ ಯಾವುದಾದರೂ ಊರು ತಲುಪಿದಾಗ ಅಚ್ಚಿಗೆ ಎಣ್ಣೆ ಹಳ್ಳೋಣವೆಂದು ಸುಮ್ಮನಾದರು.
ಹಿಂದಿನ ಸಂಚಿಕೆ ಓದಿ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಸಂಜೆ ಸೂರ ಆಳುದ್ದ ಇರೋ ಸಮಯಕ್ಕೆ ಆದಿವಾಲ ತಲುಪಿದ್ದರು. “ಅಲ್ಲಿನ ಯರಗುಂಟೇಶ್ವರ ದೇವಾಲಯದ ಪೂಜಾರಿಗಳ ಮನೆ ಹುಡುಕಿ ಗಾಡಿಗೆ ಕೀಲೆಣ್ಣೆ ಕೇಳಿ ಪಡೆದು ಮುಂದೆ ಸಾಗೋಣವೆಂದು ಅವರ ಮನೆ ಬಳಿ ಹೋದರೆ “ಗೌನಕ್ಕೇರು ಹೊಸಾ ಗಾಡಿ ಕೊಂಡ್ಕಂಡ್ ಊರಿಗೆ ಹೊಲಿದಾರೆ. ಊಟ ಮಾಡ್ಕಂಡೇ ಹೋಗಬೇಕು. ಎತ್ತುಗಳೂ ಸುಧಾರಿಸಿಗಳ್ತಾವೆ” ಎಂದು ಆಗ್ರಹಿಸಿ ತಡೆದರು. ಇವರೂ ಕೂಡ ಹಗಲೂಟ ಉಂಡಿರಲಿಲ್ಲ. ಆದ್ದರಿಂದ ಸಮ್ಮತಿಸಿದ್ದರು. ಕೇರಿಯ ಜನ ಹೊಸಾ ಗಾಡಿಗಳನ್ನು ನೊಡಲು ಕಿಕ್ಕಿರಿದಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆ ಸಮಯೋಚಿತ ಉತ್ತರ ನೀಡಿದ್ದರು. ದಾಸಣ್ಣ ಊಟ ಮಾಡಿ ತಾನು ಹಿರಿಯೂರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದ.
ಉಳಿದ ಎಂಟು ಜನ ಗಾಡಿಯಲ್ಲಿ ಗುಡಿಯೊಳಗೆ ಅಡ್ಡಾದರು. ಎಂದಿನಂತೆ ಕೋಳಿ ಕೂಗುತ್ತಲೂ ಎದ್ದು ಎತ್ತುಗಳಿಗೆ ನೀರು ಕುಡಿಸಿಕೊಂಡು ಹೊರಟು ಹಿರಿಯೂರ ಹಾದಿ ಹಿಡಿದರು. ಹಿರಿಯೂರು ತಲುಪಿದಾಗ ಇನ್ನೂ ಕತ್ತಲಿತ್ತು. ಹಿರಿಯೂರ ಬಳಿಯ ಸೇತುವೆ ದಾಟಿ ಕರೇಮಲ್ಲನಾಯ್ಕನ ಕೆರೆ ಕೋಡಿಯಲ್ಲಿ ಹೋಗದೆ ರಸ್ತೆಯಲ್ಲಿ ಹೋಗಿ ಮುಂದೆ ಹುಚ್ಚವ್ವನಹಳ್ಳಿ ಅಡ್ಡರಸ್ತೆಯಲ್ಲಿ ಗಾಡಿಗಳನ್ನು ತಿರುಗಿಸಿದರು.
ಗಾಡಿ ನಡೆಸುತ್ತಿದ್ದ ಚನ್ನಬಸಣ್ಣನಿಗೆ “ನೀವು ವಾಪಾಸು ಹೋಗುವಾಗ ಈ ರಸ್ತೆಯಲ್ಲೇ ಹೋಗಿರಿ” ಎಂದು ಸಲಹೆ ನೀಡಿದ್ದರು ಗೌಡರು. ಮಾಯಸಂದ್ರ ಬೀರೇನಹಳ್ಳಿ ಪಕ್ಕದ ರಸ್ತೆಯಲ್ಲಿ ಗಾಡಿ ಹೊಡೆದುಕೊಂಡು ಈಚಲಹಳ್ಳ ದಾಟಿ ಕಳ್ಳಣಿವೆ ತಲುಪುವ ಹೊತ್ತಿಗೆ ಉಂಬೊತ್ತಾಗಿತ್ತು. ಎಲ್ಲರಿಗೂ ಹೊಟ್ಟೆ ಹಸಿದಿದ್ದವು. “ಅಗೋ ನೋಡ್ರಿ ಅಲ್ಲಿ ಹೊಗೆ ಏಳ್ತಾ ಇದೆಯಲ್ಲಾ ಅದೇ ನಮ್ಮೂರು, ಇನ್ನೇನು ಹೋಗಿ ಬಿಡ್ತೀವಿ. ಮನೆಗೋಗಿ ಊಟ ಮಾಡಾನಾ” ಎಂಬ ಗೌಡರ ಸಲಹೆಗೆ ಚೆನ್ನಬಸಣ್ಣ ತಲೆಯಾಡಿಸಿದ್ದರು.
ಅವರಿಗೂ ಮತ್ತು ಅವರ ಜತೆಗಾರರಿಗೂ ಮೂಡಲಗುಡ್ಡ, ಪಡುವಲಗುಡ್ಡಗಳ ಸಾಲು ಮಧ್ಯದಲ್ಲಿ ಹಸಿರುಕ್ಕಿಸುವ ಗಿಡಮರಗಳನ್ನು ಕಂಡು ವಿಸ್ಮಯಗೊಂಡಿದ್ದರು. ಬಂಡಿ ಜಾಡು ರಸ್ತೆಯ ರೀತಿ ಇರಲಿಲ್ಲ. ಅದರಲ್ಲೇ ಗಾಡಿ ಹೊಡೆದುಕೊಂಡು ಊರ ಬಳಿಯ ಓಣಿಗೆ ಸೇರಿದಾಗ ಇದಿರಿಗೆ ಬಂದ ಊರ ಜನರಿಗೆ ಆಶ್ಚರವಾಗಿತ್ತು. ಗಾಡಿಗಳಲ್ಲಿ ಗೌಡ್ರು ಮತ್ತು ಗೊಂಚಿಗಾರರ ಮನೆಯವರು ಇದ್ದುದು ಮತ್ತು ಇವರು ಹೊಸಾ ಗಾಡಿಗಳನ್ನು ಕೊಂಡುತರಲು ಹೋಗಿದ್ದುದು ಊರಲ್ಲಿ ಸುದ್ದಿಯಾಗಿತ್ತು. ಅವರು ಮುಗುಳ್ಳಗೆಯಿಂದಲೇ ಸ್ವಾಗತಿಸಿದ್ದರು.
ದನದ ಮಂದೆಯ ಜತೆ ಬರುತ್ತಿದ್ದ ಹುಡುಗರಿಬ್ಬರು ಕೇಕೆ ಹಾಕಿ ಸಿಳ್ಳು ಹೊಡೆದು ಇವರನ್ನು ಸ್ವಾಗತಿಸಿದ್ದರು ಬೇಸಾಯಕ್ಕೆ ಹೊರಟು ಬಂದಿದ್ದವರು ನಗೆಮುಖದಿಂದ ಇವರನ್ನು ಸ್ವಾಗತಿಸಿದ್ದರು. ಓಣಿ ಬಾಯಿಗೆ ಓಡಿ ಬಂದಿದ್ದ ಗೌಡ್ರ ಮತ್ತು ಗೊಂಚಿಕಾರರ ಮನೆಗಳ ಹುಡುಗರು ಹೊಸಾ ಗಾಡಿಗಳ ಸಮೇತ ಊರಿಗೆ ಬಂದಿದ್ದವರ ಆಗಮನವನ್ನು ಓಡೋಡಿ ತಮ್ಮ ಮನೆಗಳಿಗೆ ಮುಟ್ಟಿಸಿದ್ದರು. ಎರಡೂ ಮನೆಗಳಲ್ಲಿ ಸುದ್ದಿ ತತ್‌ಕ್ಷಣವೇ ಆಶ್ಚರ ಸಡಗರ ಸಂತೋಷಗಳು ಹರಿದಾಡಿ ಮನೆ ಮಂದಿ ಮುಂಬಾಗಿಲಿಗೆ ಬಂದರು. ಅಷ್ಟೊತ್ತಿಗೆ ಎರಡು ಹೊಸಾ ಗಾಡಿಗಳ ಸಮೇತ ಮನೆಮಂದಿ ಬಂದಿಳಿದರು. ಎರಡೂ ಮನೆಗಳು ಇದಿರಿಗಿದ್ದು ಎರಡೂ ಮನೆಗಳಲ್ಲಿ ಹೊಸಾ ಗಾಡಿ ತಂದವರಿಗೆ ಆರತಿ ಎತ್ತಿ ಬರಮಾಡಿಕೊಂಡರು.
ಕೂಡಲೇ “ಊಟಕ್ಕೆ ನೀಡಿರಿ, ಬೆಳಿಗ್ಗೆಯಿಂದ ಹಸಗೊಂಡ್ ಬಂದಿದ್ದೀವಿ” ಎಂದು ಗೌಡು, ಗೊಂಚಿಕಾರು ಏಕಕಾಲದಲ್ಲಿ ಸೂಚಿಸಿದ್ದರು. ಎರಡೂ ಮನೆಗಳಲ್ಲಿ ಸಜ್ಜೆರೊಟ್ಟಿ, ಪಡವಲಕಾಯಿ ಪಲ್ಯ ಮಾಡಿದ್ದರು. ಗೌಡ್ರಮನೆಯಿಂದ ರೊಟ್ಟಿ ಪಲ್ಯಗಳು ಗೊಂಚಿಕಾರರ ಮನೆಗೆ ಬಂದವು. ಗುಬ್ಬಿಯ ಮಂದಿ ಇವು ಅನ್ನೋನ್ಯತೆಯನ್ನು ನೋಡಿ ಸಂತಸಗೊಂಡಿದ್ದರು.
ಎಲ್ಲರೂ ಕೂಡಿ ಆಟ ಕುಳಿತು ‘ಗುಬ್ಬಿಯಿಂದ ಹೊರಟಾಗಿನಿಂದ ಗೌನಹಳ್ಳಿ ತಲುಪುವ ತನಕ ನಡೆದಿದ್ದ ಘಟನೆಗಳನ್ನು ನೆಪಿಸಿಕೊಂಡು ಎಲ್ಲೂ ಕಿಂಚಿತ್ ತೊಂದರೆಯಾಗದೆ ಸಲೀಸಾಗಿ ಊರು ಸೇರಿದ್ದುದು ದೇವರ ದಯ’ ಮುಂತಾಗಿ ಮಾತಾಡಿಕೊಂಡರು, ಪಡುವಲ ಕಾಯಿ ಪಲ್ಯಕ್ಕೆ ಕಿತ್ತಳೆ ಹಣ್ಣಿನ ಗಾತ್ರದ ಬೆಣ್ಣೆ ನೀಡಿದ್ದುದು ಗುಬ್ಬಿ ಜನಕ್ಕೆ ಆಶ್ಚಯ್ಯ ಉಂಟುಮಾಡಿತ್ತು. ಒತ್ತಾಯ ಮಾಡಿ ಊಟಕ್ಕೆ ನೀಡಿದ ಇವರ ಆತಿಥ್ಯಕ್ಕೆ ಮನಸೋತರು. ಇವರ ಊಟ ಮುಗಿಯುವ ಸಮಯಕ್ಕೆ ಎರಡು ಜೊತೆ ಎತ್ತುಗಳನ್ನು ಹಜಾರದಲ್ಲಿ ಗ್ವಾಂದಿಗೆಗೆ ಕಣ್ಣಿ ಹಾಕಿ ಬಿಳಿಜೋಳದ ಸೊಪ್ಪೆಯನ್ನು ಹಾಕಲಾಗಿತ್ತು.
ಎತ್ತುಗಳು ಸೊಪ್ಪೆಯನ್ನು ರಾಪಾಡಿಕೊಂಡು ಮೆಯ್ದಿದ್ದವು. ಊಟ ಮುಗಿಸಿ ಹೊರಗೆ ಬರುವ ಸಮಯಕ್ಕೆ ಆಗಲೇ ಊರಜನ ಹೊಸಗಾಡಿಗಳನ್ನು ನೋಡುತ್ತಾ ತಾರೀಫ್ ಮಾಡುತ್ತಿದ್ದರು. ಗುಂಡಾಚಾರಿ ಆಗಮಿಸಿ “ಎಲ್ಲಾ ಸಾಗುವಾನಿ ಮರದ ಮುಟ್ಟು, ಗಾಲಿಯ ಗುಂಭ ಮಾತ್ರ ಜಾಲಿ ಮರದ್ದಿರಬಹುದು. ತುಂಬಾ ವೈನಾಗಿ ಮಾಡಿದ್ದಾರೆ. ನಮ್ಮ ಊರ ಕಡೆ ಎಲ್ಲಾ ಗುಬ್ಬಿ ಗಾಡೀನೇ ಉಪಯೋಗಿಸೋದು. ಅಲ್ಲಿಂದ ಇಲ್ಲಿಗೆ ತರೋದೇ ತ್ರಾಸಿನ ಪಯಣ” ಮುಂತಾಗಿ ಮಾತಾಡಿದ್ದರು.
ಗೌನಳ್ಳಿ ನಿವಾಸಿಗಳು ಈ ಹೊಸಾ ಗಾಡಿಗಳು ಆಗಮಿಸಿ, ಊರಲ್ಲಿ ಹೊಸಾ ವಾತಾವರಣವನ್ನು ತರುವುದು ಖಂಡಿತಾ ಎಂದು ಉದ್ಗಾರವೆತ್ತಿದ್ದರು. ಹೊಸಾ ಗಾಡಿಗಳಿಗೆ ತಮ್ಮ ಮನೆಯ ಎತ್ತುಗಳನ್ನು ಹೂಡಿ ಮಾರಿಗುಡಿಹಳ್ಳದೆ ಮರಳಿನಲ್ಲಿ ಎಳೆದಾಡಿದ್ದರು.
ಗುಬ್ಬಿ ಜನಕ್ಕೆ ಅವರ ಪಯಣದಲ್ಲಿ ಊಟಕ್ಕೆ ಅನುವಾಗಲು ಐವತ್ತು ಸಜ್ಜೆ ರೊಟ್ಟಿ, ಕೆಂಪಿಂಡಿ, ಎರಡು ಗಿಂಡಿ ತುಪ್ಪ ಇತ್ಯಾದಿಗಳನ್ನು ಮಾಡಿಸಿದ್ದಲ್ಲದೆ ಎರಡೂಟಕ್ಕೆ ಬುತ್ತಿಯನ್ನು ಕಟ್ಟಿಸಿದರು. ಗುಬ್ಬಿಯ ಜನ ಊಟ ಮಾಡಿ ಸುಧಾರಿಸಿಕೊಂಡು ಹೊತ್ತುವಾಲಿದ ಮೇಲೆ ಹೊರಡಲು ಯೋಚಿಸುತ್ತಿದ್ದರು. ಅವರಿಗೆ ಹೊಸಾ ಸಮಸ್ಯೆಯೊಂದು ಕಂಡಿತು. ಬರುವಾಗ ಗಾಡಿಗಳಲ್ಲಿ ಹೊರೆ ಹುಲ್ಲು ಹಾಕಿಕೊಂಡು ಬಂದಿದ್ದೆವು. ಈಗ ಗಾಡಿ ಇಲ್ಲದೆ ಎತ್ತುಗಳನ್ನು ನಡೆಸಿಕೊಂಡು ಹೋಗಬೇಕು.
ರಾತ್ರಿ ತಂಗಿದಾಗ ಎತ್ತುಗಳಿಗೆ ಹುಲ್ಲಿನ ಗತಿ ಹೆಂಗೆ. ಇದನ್ನು ಗೌನಳ್ಳಿಯವರೂ ಯೋಚಿಸಿದರು. ಹುಲ್ಲಿನ ಹೊರೆಗಳನ್ನು ತಲೆ ಮೇಲೆ ಎಷ್ಟು ದೂರಾಂತ ಹೊರುವುದು. ಇದು ಆಗದ ಮಾತು. ಎಂಥಾ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡೆವೆಲ್ಲಾ ಎಂದು ಚಿಂತಿತರಾದರು. ‘ಆದದ್ದಾಗಲಿ ರಾತ್ರಿ ತಂಗಿದ ಊರಲ್ಲಿ, ಊರವರನ್ನು ಕೇಳಿ ಎತ್ತುಗಳಿಗೆ ಮೇವು ಜೋಡಿಸಿಕೊಳ್ಳಬೇಕು’ ಎಂಬ ಆಲೋಚನೆಯೂ ಸುಳಿದಿತ್ತು.
“ಚೆಂಬಸಣ್ಣ ಬರ್ರಿ ಇವೊತ್ತು ಉಳಕಂಡಿದ್ದು ಬೆಳಿಗ್ಗೆ ಹೊರಡಬೌದಲ್ಲಾ”. ಗೌಡ್ರು ಗೊಂಚಿಕಾರರ ಹಿರಿಯರು ಮನೆ ಮುಂದಿನ ಚಪ್ಪರದಲ್ಲಿ ಕುಳಿತು ಊರ ಸುತ್ತಾ ಮುತ್ತಾ ನೋಡುತ್ತಾ ನಿಂತಿದ್ದ ಗುಬ್ಬಿಯ ಚೆನ್ನಬಸಣ್ಣರನ್ನು ಹತ್ತಿರಕ್ಕೆ ಕರೆದರು. “ಹಂಗೇ ಮಾಡಬೌದಿತ್ತು. ಎತ್ತು ಸುಧಾರಿಸ್ಕಂಡಿದಾವೆ. ಗಾಡಿಪಾಡಿ ಎಳೆಯಂಗಿಲ್ಲ ಸುಮ್ಮನೆ ಹಾದಿ ನಡೆಯೋದು ಮಾತ್ರ. ನೀವು ಕಳಿಸಿಕೊಟ್ರೆ ಹೊಲ್ಟ್ಬಿಡ್ತೀವಿ”. ಚೆನ್ನಬಸಣ್ಣ ಹತ್ತಿರಕ್ಕೆ ಬಂದು ಕುಳಿತು ತಮ್ಮ ಅಭಿಪ್ರಾಯ ತಿಳಿಸಿದರು.
“ಈಗ ಹೊರೆ ಹುಲ್ಲು ಒಯ್ಯೋದೇ ಒಂದು ಸಮಸ್ಯೆ. ಇವೊತ್ತು ರಾತ್ರಿ ಆದಿವಾಲದ ಯರಗುಂಟೇಶ್ವರ ಪೂಜಾರ ಹತ್ರ ಇದ್ದು ಬಿಡಿ, ಅವರು ಮೇವು ಕೊಡ್ತಾರೆ. ಇನ್ನ ನಾಳೆ ರಾತ್ರಿದೇ ಸಮಸ್ಯೆ. ಚಿಕ್ಕನಹಳ್ಳಿ, ಕಳ್ಳಂಬೆಳ್ಳದ ಗೌಡ್ರು ದೊಡ್ ಮನುಷ್ಟು ನಿಮಿಗೆ ಆಸ್ಕರ ಆಗ್ತಾರೆ” ಅಂದು ಮೊದಲೇ ಸಿದ್ದಮಾಡಿಕೊಂಡಿದ್ದ ಇಪ್ಪತ್ತು ಬೆಳ್ಳಿ ರೂಪಾಯಿಗಳನ್ನು ವೀಳೇದೆಲೆ ಅಡಿಕೆಯಲ್ಲಿಟ್ಟು “ತಗಳಿ ನಿಮ್ಮಿಂದ ಬಾಳ ಉಪಕಾರ ಆಗೈತೆ” ಎನ್ನುತ್ತಾ ಎತ್ತಿಕೊಟ್ಟರು. ಇಪ್ಪತ್ತು ರೂಪಾಯಿಗಳನ್ನು ಎಣಿಸಿದ ಚೆನ್ನಬಸಣ್ಣ ಮರು ಮಾತಾಡಲಿಲ್ಲ. “ಲೇ ತಮ್ಮಾ ಇಮ್ಮಣ್ಣಿ ತಂದು ಕೊಡಪ್ಪಾ” ಎಂದು ಮನೆಯೊಳಗಿಂದ ಸೊಂಟಪಟ್ಟಿಯಂತಹ ಇಮ್ಮಿಣಿಯನ್ನು ತರಿಸಿ “ಇದರೊಳಗೆ ಇಳಿಬಿಟ್ಟು ಇದನ್ನ ಸೊಂಟಕ್ಕೆ ಕಟ್ಟಿಗಳಿ ಗುಬ್ಬಿಗೋಗೋ ತನಕ ಎಲ್ಲೂ ಸಡಿಲಿಸಬಾರದು” ಎಂದು ಸೂಚನೆ ಕೊಟ್ಟರು.
ಅಷ್ಟೊತ್ತಿಗೆ ಐವತ್ತು ಸಜ್ಜೆ ರೊಟ್ಟಿ ಕೆಂಪಿಂಡಿ ತುಪ್ಪದ ಗಿಂಡಿ, ನಾಲ್ಕು ಲಟ್ಟಾಗಳನ್ನು ತಂದಿರಿಸಲಾಯಿತು. “ಇವನ್ನ ಕೋಲಿಗೆ ನೇತಾಕ್ಯಂಡು ಹೆಗಲ ಮೇಲೆ ಹಾಕ್ಯಳಿ. ಈ ತುಪ್ಪದ ಗಿಂಡಿ ಕೆಂಪಿಂಡಿಗಾಕ್ಯಂಡು ಸಜ್ಜೆರೊಟ್ಟಿ ತಿನ್ನಿ ವೈನಾಗಿರುತ್ತೆ. ಬಡಗಿ ಅಣ್ಣಾರಿಗೆ ಈ ತುಪ್ಪದ ಮಗಿ ಕೊಟ್ಟು ನಮ್ಮ ನಮಸ್ಕಾರ ತಿಳಿಸಿ” ಅಂದಿದ್ದರು. ಇವರನ್ನ ಈಳ್ಳ ದಾಟಿಸಿ, ರಸ್ತಿಗೆ ಮುಟ್ಟಿಸಿ ಬರೆಪ್ಪಾ” ಎಂದು ಗೌಡ್ರ ಮತ್ತು ಗೊಂಚಿಕಾರರ ನಾಲ್ಕು ಯುವಕರಿಗೆ ಸೂಚಿಸಿದರು. ಅಷ್ಟೊತ್ತಿಗೆ ಎತ್ತುಗಳಿಗೆ ನೀರು ಕುಡಿಸಿ ಅವನ್ನು ಚಪ್ಪರದ ಮುಂದಕ್ಕೆ ಕರೆತರಲಾಯಿತು. ಗೌಡ್ರು ಮತ್ತು ಗೊಂಚಿಕಾರರ ಹಿರಿಯರು ಗುಬ್ಬಿಗೆ ಹೊರಟಿದ್ದವರ ಜತೆ ಓಣಿ ಬಾಯಿವರೆಗೆ ನಡೆದು ಕೈಮುಗಿದು ಬೀಳ್ಕೊಟ್ಟರು. ಚೆನ್ನಬಸಣ್ಣ ಮತ್ತು ಅವರ ಅನುಯಾಯಿಗಳು ಕೂಡಾ ಅವರಿಗೆ ನಮಸ್ಕರಿಸಿ ಮುಂದೆ ನಡೆದಿದ್ದರು.
ಗುಬ್ಬಿ ತಂಡವನ್ನು ಕಳ್ಳಣಿವೆ ದಾಟಿ ಈಚಲಹಳ್ಳದ ಆಚೆ ದಡ ಹತ್ತಿಸಿ ಹಿರಿಯೂರು, ಹೊಸದುರ್ಗ ರಸ್ತೆಗೆ ಮುಟ್ಟಿಸಿ ಯುವಕರು ಊರಿಗೆ ಹಿಂತಿರುಗಿದಾಗ ಧೂಳು ಸಂಜೆಯಾಗಿತ್ತು. ‘ಗುಬ್ಬಿಯ ಮಂದಿ ಇಷ್ಟೊತ್ತಿಗೆ ಹಿರಿಯೂರಿಗೆ ಹೋಗಿದ್ದಾರೆ’ ಅಂದುಕೊಂಡಿದ್ದರು, ಅವರೆಲ್ಲಾ.

Dayananda Patel Thippayya
25 November 2024 at 00:17
Nice story 👌