ಚಿತ್ರದುರ್ಗ ನ್ಯೂಸ್.ಕಾಂ: ಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಿರುವ ಸಮಸ್ಯೆಗಳ ನಿವಾರಣೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನವರಿ 2ನೇ ವಾರದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಶನಿವಾರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳ ಜೊತೆಗೆ ಚರ್ಚಿಸಿದ ಅವರು, ತರೀಕೆರೆ ತಾಲೂಕಿನಲ್ಲಿ ಭೂ ಸ್ವಾಧೀನ ಸಮಸ್ಯೆ ಇದೆ. ಹಾಗಾಗಿ ಸಮನ್ವಯ ಸಮಿತಿ ಸಭೆಯನ್ನು ಚಿತ್ರದುರ್ಗ ಅಥವಾ ಚಿಕ್ಕಮಗಳೂರು ಎಲ್ಲಿ ನಡೆಸಬೇಕು ಎನ್ನುವ ಬಗ್ಗೆ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು
ಈಗಾಗಲೇ ಬೆಳಗಾವಿ ಅಧಿವೇಶನದಲ್ಲೂ ಭದ್ರಾ ಮೇಲ್ದಂಡೆ ವಿಚಾರ ಚರ್ಚೆಯಾಗಿದೆ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸುಧೀರ್ಘವಾಗಿ ಮಾತನಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ನಾವೂ ಕೂಡಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ್ದೇವೆ. ಡಿಸೆಂಬರ್‍ನಲ್ಲೇ ಸಭೆ ನಡೆಸಲು ತೀರ್ಮಾನ ಮಾಡಿದ್ದೆವು. ಆದರೆ, ಡಿಕೆಶಿ ಅವರು ಅದಕ್ಕೂ ಮೊದಲು ಅಧಿಕಾರಿಗಳ ಸಭೆ ನಡೆಸಿ ನಂತರ ಜನವರಿಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸೋಣ ಎಂದು ತಿಳಿಸಿದ್ದಾರೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಬಗ್ಗೆ ನಾವು ಉದಾಸೀನ ತೋರಿಲ್ಲ. ಅಧಿಕಾರಿಗಳ ಮೂಲಕ ಶೀಘ್ರ ಕಾರ್ಯನುನುಷ್ಠಾನಕ್ಕೆ ಒತ್ತಡ ಹೇರಿದ್ದೇವೆ. ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ತೊಡಕು ನಿವಾರಣೆ ಅಲ್ಲಿನ ಶಾಸಕರ ಸಮ್ಮುಖದಲ್ಲಿಯೇ ಆಗಬೇಕಿದೆ. ಈ ವಿಷಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇವೆ.
| ಬಿ.ಜಿ.ಗೋವಿಂದಪ್ಪ, ಹೊಸದುರ್ಗ ಶಾಸಕರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಅಬ್ಬಿನಹೊಳಲು ಸಮಸ್ಯೆ ಬಗೆಹರಿದಿದ್ದರೆ ಹೊಳಲ್ಕೆರೆ ತಾಲೂಕಿನ ಕೆರೆಗಳು ತುಂಬುತ್ತಿದ್ದವು. ಮುಂದಿನ ಬೇಸಿಗೆಯಲ್ಲಾದರೂ ಕಾಲುವೆ ನಿರ್ಮಾಣದ ಕೆಲಸ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲವೂ ಅಂತಿಮವಾಗುವಂತೆ ಜಿಲ್ಲೆಯ ಶಾಸಕರು, ಸಚಿವರು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

ಭದ್ರಾ ಮೇಲ್ದಂಡೆ ವಿಚಾರವಾಗಿ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ಭದ್ರಾ ಯೋಜನೆ ನೀರಿಗೆ ಮೇಲ್ಬಾಗದ ಅರಸಿಕೆರೆಯವರು ಕಣ್ಣು ಹಾಕುವ ಸಾಧ್ಯತೆಗಳು ಹೆಚ್ಚಿವೆ. ಕೊನೆಯ ಭಾಗಕ್ಕೆ ನೀರು ಹಾಯಿಸಲೇಬೇಕು. ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು ಭಾಗಕ್ಕೆ ನೀರು ಹೋಗಲೇಬೇಕು. ಈಗಾಗಲೇ ಹಂಚಿಕೆಯಾಗಿರುವ ನೀರು ಹೊಸದಾಗಿ ಬೇರೆ ತಾಲೂಕಿಗೆ ಹೋಗದಂತೆ ಎಚ್ಚರ ವಹಿಸಿದ್ದೇವೆ. ಅಗತ್ಯ ಬಂದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಿದ್ದರಿದ್ದೇವೆ.
| ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
