CHITRADURGA NEWS | 24 JUNE 2026
ಚಿತ್ರದುರ್ಗ: ದೇಶದ ಸರ್ವತೋಮುಖ ಪ್ರಗತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಭಾರತ ಸರ್ಕಾರವು ಸುಲಭ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಮೂಲಕ ತೆರಿಗೆ ಸುಧಾರಣೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ ಅಧಿಕಾರಿ ರಾಮನಾಥನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ | AC ಡಾ.ಕೆ.ಜೆ.ಕಾಂತರಾಜ್ ಉದ್ಘಾಟನೆ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಹೊಸ ಆದಾಯ ತೆರಿಗೆ ಕಾಯ್ದೆ-2025′ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರವು ದೇಶದಲ್ಲಿ ‘ಸುಲಭ ವ್ಯಾಪಾರ ಮತ್ತು ಜೀವನ ನಿರ್ವಹಣೆ’ ಉತ್ತೇಜಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ತೆರಿಗೆ ಸುಧಾರಣೆಗಳನ್ನು ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಬಲಪಡಿಸಲು ಮತ್ತು 2047ರ ವೇಳೆಗೆ ಅಮೃತ ಕಾಲದ ಗುರಿ ತಲುಪಲು ಈ ತೆರಿಗೆ ವ್ಯವಸ್ಥೆಯು ಸಹಕಾರಿಯಾಗಲಿದೆ ಎಂದರು.
ಸುಮಾರು 60ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ‘ಆದಾಯ ತೆರಿಗೆ ಕಾಯ್ದೆ 1961’ರ ಅಡಿಯಲ್ಲಿ ಹಲವು ತಿದ್ದುಪಡಿಗಳು, ಕೋರ್ಟ್ ಪ್ರಕರಣಗಳು ಹಾಗೂ ಜಟಿಲ ನಿಯಮಗಳು ಸೃಷ್ಠಿಯಾಗಿದ್ದವು. ಇದರಿಂದಾಗಿ ತೆರಿಗೆದಾರರಲ್ಲಿ ಗೊಂದಲ ಹಾಗೂ ವ್ಯಾಜ್ಯಗಳು ಹೆಚ್ಚಾಗಿದ್ದವು.
ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ಸ್ಮರಣೆ
ಇವೆಲ್ಲವನ್ನೂ ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ಪ್ರಮುಖ ಉದ್ಯಮಿಗಳು, ತೆರಿಗೆದಾರರು ಹಾಗೂ ವಾಣಿಜ್ಯ ಸಂಘಟನೆಗಳ ಜೊತೆ ಸುದೀರ್ಘ ಚರ್ಚೆ ನಡೆಸಿ, ಅವರ ಸಲಹೆಗಳನ್ನು ಆಲಿಸಿದೆ. ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಮತ್ತು ಪಾರದರ್ಶಕವಾದ ಹೊಸ ಕಾಯ್ದೆ ಜಾರಿಗೆ ತರಲಾಗುತ್ತಿದ್ದು, ಇದು ಮುಂಬರುವ ಏಪ್ರಿಲ್ ತಿಂಗಳಿನಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.
ತೆರಿಗೆ ಇಲಾಖೆಯು ಸಾರ್ವಜನಿಕರೊಂದಿಗೆ ಅತ್ಯಂತ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಚ್ಛಿಸುತ್ತದೆ. ಸಾರ್ವಜನಿಕರು ಹಾಗೂ ತೆರಿಗೆದಾರರು ಯಾವುದೇ ಆತಂಕವಿಲ್ಲದೆ ತಮ್ಮ ಪ್ರಶ್ನೆಗಳು, ಗೊಂದಲಗಳು ಅಥವಾ ತಿದ್ದುಪಡಿಗಳ ಕುರಿತ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪ್ರತಿಯೊಂದು ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಿ, ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾಜ್ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ಜನರು ಹೆದರಬೇಕಾಗಿಲ್ಲ. ಫ್ಯಾಮಿಲಿ ಡಾಕ್ಟರ್ ನಮ್ಮ ಇಡೀ ಆರೋಗ್ಯದ ಇತಿಹಾಸ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುವಂತೆ, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಆರ್ಥಿಕ ಆರೋಗ್ಯ ಕಾಯುತ್ತದೆ ಹಾಗೂ ತಪ್ಪುಗಳಿದ್ದರೆ ಮುನ್ಸೂಚನೆ ನೀಡಿ ಸರಿಪಡಿಸಲು ನೆರವಾಗುತ್ತದೆ ಎಂದರು.
ಇದನ್ನೂ ಓದಿ: ಹೆಚ್ಚಿನ ಪ್ರೋಟೀನ್‍ಗಾಗಿ ಈ 6 ಆಹಾರಗಳನ್ನು ಕಪ್ಪು ಕಡಲೆಯೊಂದಿಗೆ ಸೇವಿಸಿ
1961ರ ಆದಾಯ ತೆರಿಗೆ ಕಾಯ್ದೆಗೆ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ‘ಆದಾಯ ತೆರಿಗೆ ಕಾಯ್ದೆ-2025′ ಆಗಿ ರೂಪಿಸಲಾಗಿದೆ. ಕಾನೂನಿನ ಕಠಿಣ ಭಾಷೆಯನ್ನು ಸರಳಗೊಳಿಸುವುದು ಹಾಗೂ ತೆರಿಗೆದಾರ ಸ್ನೇಹಿಯಾಗಿಸುವುದು ಈ ಹೊಸ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಇದುವರೆಗೆ ಜಾರಿಯಲ್ಲಿದ್ದ ‘ಹಣಕಾಸು ವರ್ಷ’ ಮತ್ತು ‘ಮೌಲ್ಯಮಾಪನ ವರ್ಷ’ ಎಂಬ ಗೊಂದಲಕಾರಿ ಪದಗಳ ಕೈಬಿಡಲಾಗಿದ್ದು, ಅದರ ಬದಲಿಗೆ ಸರಳವಾಗಿ ‘ಟ್ಯಾಕ್ಸ್ ಇಯರ್’ ಎಂಬ ಒಂದೇ ಪರಿಕಲ್ಪನೆ ಜಾರಿಗೆ ತರಲಾಗಿದೆ. ಉದಾಹರಣೆಗೆ ಟ್ಯಾಕ್ಸ್ ಇಯರ್ 2026-27 ರಲ್ಲಿ ಮಾಡುವ ವ್ಯವಹಾರಗಳಿಗೆ ಅದೇ ವರ್ಷದಲ್ಲೇ ರಿಟರ್ನ್ಸ್ ಸಲ್ಲಿಸಬಹುದಾಗಿದ್ದು, ಸಾಮಾನ್ಯ ಜನರಿಗೂ ಇದು ಸುಲಭವಾಗಿ ಅರ್ಥವಾಗಲಿದೆ.
ಹೊಸ ಕಾಯ್ದೆಯ ಸೆಕ್ಷನ್ 536(2) ರ ಪ್ರಕಾರ, ಹಳೆಯ ಕಾಯ್ದೆಯಡಿ ಬಾಕಿ ಇರುವ ಯಾವುದೇ ಅಸೆಸ್‌ಮೆಂಟ್‌ಗಳು, ಬೇಡಿಕೆಗಳು ಅಥವಾ ಅಪೀಲುಗಳು ಹಳೆಯ ಕಾಯ್ದೆಯ ನಿಯಮಗಳಡಿಯೇ ಮುಂದುವರಿಯಲಿವೆ. ಇದರಿಂದ ತೆರಿಗೆದಾರರಿಗೆ ಯಾವುದೇ ಹೊಸ ಕಾನೂನಿನ ಗೊಂದಲಗಳು ಎದುರಾಗುವುದಿಲ್ಲ ಎಂದರು.
ಇದನ್ನೂ ಓದಿ: ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ | AC ಡಾ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ತೆರಿಗೆದಾರರು ಇನ್ಮುಂದೆ ತಮ್ಮ ರಿಟರ್ನ್ಸ್ ಸಲ್ಲಿಸುವಾಗ ಮನೆ ಹಾಗೂ ಕಚೇರಿ ಎರಡೂ ವಿಳಾಸಗಳನ್ನು ನೀಡಲು ಹೊಸ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ದೇಣಿಗೆ ನೀಡಿ ತೆರಿಗೆ ವಿನಾಯಿತಿ ಪಡೆಯಲು ಇನ್ಮುಂದೆ ಕಡ್ಡಾಯವಾಗಿ ಯುಪಿಐ, ಚೆಕ್ ಅಥವಾ ಆರ್‌ಟಿಜಿಎಸ್‌ನ ವಹಿವಾಟು ಉಲ್ಲೇಖ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ. ಇದರಿಂದ ನಕಲಿ ದೇಣಿಗೆ ಹಾವಳಿಗೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಆದಾಯ ತೆರಿಗೆ ಅಧಿಕಾರಿ ಆರ್.ಪಿ.ಕುಮಾರಸ್ವಾಮಿ, ಇನ್‌ಕಮ್ ಟ್ಯಾಕ್ಸ್ ಪ್ರಾಕ್ಟಿಸ್ ಅಸೋಸಿಯೇಷನ್‌ನ ತಿಪ್ಪೇಸ್ವಾಮಿ, ಚಾರ್ಟೆಡ್ ಅಕೌಂಟೆಡ್‌ಗಳಾದ ಕಾರ್ತೀಕ್, ಜಗನ್ನಾಥ್ ಸೇರಿದಂತೆ ತೆರಿಗೆದಾರರು, ಸಾರ್ವಜನಿಕರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
