CHITRADURGA NEWS | 23 SEPTEMBER 2025
ಚಿತ್ರದುರ್ಗ: ಹಿರಿಯ ವಿದ್ಯಾರ್ಥಿಗಳ ಸಮಾವೇಶಗಳಿಂದ ವಿದ್ಯಾರ್ಥಿಗಳಾದ ನೀವು ಅವರುಗಳ ಸಾಧನೆಯ ಸ್ಪೂರ್ತಿ, ಪ್ರೇರಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರ ಸೇವಾ ಮನೋಭಾವ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ದಾರಿದೀಪ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಅಡಿಕೆ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲು
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ 2ನೇ ದಿನದ ಲಿಂ. ಶಿವಕುಮಾರ ಶ್ರೀಗಳ 34ನೇ ಶ್ರದ್ಧಾಂಜಲಿ ಪ್ರಯುಕ್ತ ಜರುಗಿದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶದಲ್ಲಿ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾಗುವುದಿಲ್ಲ. ವ್ಯಕ್ತಿಗಳ ಸಮೂಹದಿಂದ ಸಮಾಜ ರೂಪುಗೊಳ್ಳುತ್ತದೆ. ಪ್ರತಿಯೊಬ್ಬ ಶಿಕ್ಷಕರು ತಮ್ಮಲ್ಲಿರುವ ವಿಶಿಷ್ಟ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರೆ, ಅದು ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗುತ್ತದೆ. ಹಿರಿಯ ಗುರುಗಳು ಗಿಡ ನೆಟ್ಟು ಪೋಷಿಸಿದ ಮರಗಳು ಇಂದಿಗೆ ನೆರಳನ್ನು ನೀಡುತ್ತಿರುವಂತೆ, ನಮ್ಮ ಶಿಕ್ಷಕರೂ ಮಕ್ಕಳಿಗೆ ನೆರವಾಗಬೇಕು ಎಂದು ಹಿತವಚನ ನೀಡಿದರು.
ಉತ್ತಮ ಸಾಧನೆಗಳ ಮೂಲಕ ತಮ್ಮ ವೃತ್ತಿಜೀವನವನ್ನು ಮೆರಗುಗೊಳಿಸಿದ ಶಿಕ್ಷಕರು, ನಿವೃತ್ತಿಯ ನಂತರವೂ ಶಾಲೆಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಬೇಕೆಂಬ ಮನೋಭಾವವನ್ನು ಹಂಚಿಕೊಂಡರು. ಶಿಕ್ಷಕ ವೃತ್ತಿಗೆ ಅಂತ್ಯವಿಲ್ಲ. ನಿವೃತ್ತಿ ಆದ ಬಳಿಕವೂ ಸಮಾಜದ ಜೊತೆ, ಮಕ್ಕಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದು ಅಗತ್ಯ. ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದು ವಿಶೇಷ ತರಗತಿ ತೆಗೆದುಕೊಂಡು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರೆ, ಅದು ಅವರ ಭವಿಷ್ಯ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ಒಳ ಮೀಸಲಾತಿಯಲ್ಲಿ ಅನ್ಯಾಯ | ಜಾತಿ ಸಮೀಕ್ಷೆಯಲ್ಲಾದರೂ ಛಲವಾದಿಗಳಿಗೆ ನ್ಯಾಯ ಸಿಗಲಿ
ಹರಿಹರ ಶಾಸಕ ಹರೀಶ್ ಮಾತಾಡಿ ನಮ್ಮ ಸಮಾಜ ತನ್ನ ಸ್ವಂತ ಶಕ್ತಿಯಿಂದಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಬೆಳೆಯಲು ಸಾಧ್ಯವೆಂದು ಸದಾ ಬೋಧಿಸಿದ್ದೇ ಶಿವಕುಮಾರ ಶ್ರೀಗಳು. ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ಶ್ರೀಗಳು ನೀಡಿದ ಸಂದೇಶವು ಸಮಾಜಕ್ಕೆ ದಿಕ್ಕು ನೀಡಿದಂತಾಗಿದೆ ಎಂದರು.
ಬೆಂಗಳೂರು ಡಿ.ವೈ.ಎಸ್.ಪಿ ಹೆಚ್. ಜಯರಾಜ್ ಅವರು ಮಾತನಾಡಿ ನನಗೆ ಎಂ.ಎ. ಕಾಲೇಜಿನಲ್ಲಿ ದೊರೆತ ಶಿಕ್ಷಣವೇ ಇಂದು ಈ ಹುದ್ದೆಯನ್ನು ಅಲಂಕರಿಸಲು ನೆರವಾಗಿದೆ. ಸಿರಿಗೆರೆ ಮಠದ ಆಶ್ರಯ, ದಾಸೋಹ ಮತ್ತು ಸಂಸ್ಕಾರಗಳು ಜೀವನದ ಏಳಿಗೆಗೆ ಕಾರಣೀಯವಾಗಿವೆ ಎಂದರು.
ಸಿ.ಎಫ್.ಟಿ.ಆರ್.ಇ ಮೈಸೂರಿನ ವಿಜ್ಞಾನಿ ರುದ್ರಗೌಡ ಪೊಲೀಸ್ ಪಾಟೀಲ ಮಾತನಾಡಿ ಮಾಕನೂರು ಮಲ್ಲಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದ ಬಿಇಡಿ ಶಿಕ್ಷಣವೇ ನನಗೆ ವಿಜ್ಞಾನಿಯಾಗಿ ಬೆಳೆಯಲು ಸ್ಪೂರ್ತಿಯಾಗಿದೆ. ತರಳಬಾಳು ಸಂಸ್ಥೆ ಶಿಸ್ತು ಮತ್ತು ಸಮಯಕ್ಕೆ ಹೆಸರುವಾಸಿಯಾಗಿದೆ. ಹೈಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕಲಿತ ಸಂಸ್ಕಾರವೇ ನನ್ನ ಪ್ರಸ್ತುತ ದಿನಗಳಲ್ಲಿ ಉತ್ತಮ ಅಕಾರಿಯಾಗಲು ಪ್ರೇರಣೆಯಾಗಿದೆ ಎಂದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಬಿ.ಎಸ್.ಗಿರಿಜಾ ಮಾತನಾಡಿ ನಮ್ಮ ಜೀವನ ರೂಪುಗೊಳ್ಳಲು ಪಠ್ಯದ ಜೊತೆಗೆ ಸಂಸ್ಕಾರ, ಶಿಸ್ತು ರೂಢಿಸಿಕೊಳ್ಳಲು ಶ್ರೀಮಠದ ಶಿಕ್ಷಣ ಕಾರಣವಾಗಿದೆ. ನಾನು ಆರೋಗ್ಯತಜ್ಞೆಯಾಗಿ ಹೊರಹೊಮ್ಮಿರುವುದಕ್ಕೆ ಈ ವಿದ್ಯಾಸಂಸ್ಥೆಯೇ ಕಾರಣ. ಹಿರಿಯರ ಪ್ರೋತ್ಸಾಹದ ಮಾತುಗಳನ್ನು ನಾವು ಗಮನಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಈರುಳ್ಳಿ ಬೆಲೆ ಕುಸಿತ | ಈರುಳ್ಳಿ ಸುರಿದು ಜಿಲ್ಲಾಡಳಿತದ ವಿರುದ್ದ ಆಕ್ರೋಶ
ಕನ್ನಡ ಪ್ರಾಧ್ಯಾಪಕ ಡಾ. ಬಿ.ವಿ.ವಸಂತ್‌ಕುಮಾರ್ ಮಾತನಾಡಿ ಶ್ರೀ ಸಂಸ್ಥೆಯು ಹಿಂದುಳಿದ ದೂರದೃಷ್ಠಿಯಿಂದ ನಾನಾ ಭಾಗಗಳಲ್ಲಿ ಶಾಲೆ ಹಾಗೂ ಉಚಿತ ಹಾಸ್ಟೆಲ್ ಸ್ಥಾಪಿಸಿ, ಶಿಕ್ಷಣ ನೀಡಿ ಗ್ರಾಮಿಣ ವಿದ್ಯಾರ್ಥಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಂತಹ ವಿದ್ಯಾರ್ಥಿಗಳನ್ನು ಕೊಟ್ಟ ಶ್ರೀಮಠಕ್ಕೆ ನಾನು ಎಂದೆಂದಿಗೂ ಚಿರಋಣಿ. ರಾಷ್ಟ್ರ ಉಳಿಯಲು ಉತ್ತಮ ಶಿಕ್ಷಣ ಅತ್ಯವಶ್ಯಕ. ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿ ಅವುಗಳನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯ್ಯಣ್ಣ, ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ವಿಶಾಲಾಕ್ಷಿ, ದಾವಣಗೆರೆ ಪಶು ವೈದ್ಯಕೀಯ ಇಲಾಖೆಯ ಪಿ.ಮಹೇಶ್‌ಗೌಡ, ಶ್ರೀಸಂಸ್ಥೆಯ ಆಡಳಿತಾಧಿಕಾರಿ ಡಾ.ಹೆಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಎಸ್ ಜತ್ತಿ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನಿವೃತ್ತ ನೌಕರರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
