CHITRADURGA NEWS | 12 MAY 2026
ಚಿತ್ರದುರ್ಗ: ಕೊಡುಗೈ ದಾನಿ, ಸಾಹುಕಾರ, ಬಡವರ ಬಂಧು ಎಂದೇ ಹೆಸರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಅವರ ಅನುಪಸ್ಥಿತಿ ಅವರ ಸಾವಿರಾರು ಅಭಿಮಾನಿಗಳಿಗೆ ದುಃಖ ತರಿಸುತ್ತಿದೆ. ಅವರೊಂದಿಗೆ ಇದ್ದ ಒಡನಾಟವನ್ನು ನೆನೆ ನೆನೆದು ದುಃಖಿಸುತ್ತಿದ್ದಾರೆ. ಅವರ ಅಂತಿಮ ದರ್ಶನದ ಸಮಯದಲ್ಲಿ ಹಿರಿಯೂರು, ಚಳ್ಳಕೆರೆಯಲ್ಲಿ ಕಣ್ಣೀರಾದವರು ಅದೆಷ್ಟೋ ಮಂದಿ.
ಸುಧಾಕರ್ ಕಿರಿತಮ್ಮನಂತಿದ್ದ ಪಪ್ಪಿ:
ಸಚಿವ ಡಿ. ಸುಧಾಕರ್ ಜೊತೆಗೆ ಸಾಕಷ್ಟು ಸಲುಗೆ ಹೊಂದಿದ್ದ ಅವರ ಕಿರಿ ತಮ್ಮನಂತೆ ಸದಾ ಸಮೀಪದಲ್ಲಿರುತ್ತಿದ್ದ ಚಿತ್ರದುರ್ಗದ ಶಾಸಕರೂ, ಮೂಲತಃ ಚಳ್ಳಕೆರೆಯವರೇ ಆದ ಕೆ.ಸಿ.ವೀರೇಂದ್ರ(ಪಪ್ಪಿ) ಸುಧಾಕರ್ ಅಗಲಿಕೆಯ ದುಃಖದಿಂದ ಹೊರಬರಲಾಗದೆ ತೊಳಲಾಡುತ್ತಿದ್ದಾರೆ ಎನ್ನುವುದು ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ:ಸುಧಾಕರ್ ಗುಣಗಾನ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್
ಚಳ್ಳಕೆರೆಯಲ್ಲಿ ಸುಧಾಕರ್ ಅವರ ಅಂತಿಮ ದರ್ಶನದ ವೇಳೆಯೂ ಅವರ ಮುಖವನ್ನು ಪಪ್ಪಿ ತದೇಕ ಚಿತ್ತದಿಂದ ನೋಡುತ್ತಿದ್ದರು. ಅವರಿಬ್ಬರ ನಡುವಿನ ಸಂಬಂಧ ಹೇಗಿತ್ತು ಎನ್ನುವುದನ್ನು ನೋಡಲು ಈ ಒಂದು ಪೋಟೋ ಸಾಕು.
ಭಾವುಕ ಪೋಸ್ಟ್ ಹಾಕಿದ ಪಪ್ಪಿ:
ಸಚಿವ ಡಿ.ಸುಧಾಕರ್ ಅಂತ್ಯಕ್ರಿಯೆ ಮುಗಿದ ಮರು ದಿನ ಮಂಗಳವಾರ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಆ ಪೋಸ್ಟ್ ಪೂರ್ಣ ವಿವರ ಇಲ್ಲಿದೆ ನೋಡಿ..
ಅಣ್ಣ ನಿಮ್ಮನ್ನು ಕಳೆದುಕೊಂಡು ಎರಡು ದಿನಗಳಾದರೂ ಮನಸ್ಸಿನಲ್ಲಿರುವ ನೋವು ಇನ್ನೂ ಕಡಿಮೆಯಾಗುತ್ತಿಲ್ಲ…
ಇನ್ನೂ ಈಗಲೇ ಫೋನ್ ಮಾಡಿ “ಪಪ್ಪಿ… ಹೇ ಪಪ್ಪಿ …” ಅಂತ ಆತ್ಮೀಯವಾಗಿ ಕರೆಯುವ ಹಾಗೆ ಅನಿಸುತ್ತಿದೆ. ಆ ಧ್ವನಿ ಇನ್ನೂ ನನ್ನ ಕಿವಿಗಳಲ್ಲಿ ಮೊಳಗುತ್ತಲೇ ಇದೆ.
ಇದನ್ನೂ ಓದಿ: ಸಿದ್ಧಶಿಲಾ ಲೋಕಕ್ಕೆ ಸಚಿವ ಡಿ.ಸುಧಾಕರ್ | CM, DCM ಸೇರಿ ಹಲವು ಸಚಿವರು ಗಣ್ಯರಿಂದ ಅಂತಿಮ ದರ್ಶನ
ರಾತ್ರಿ ಹೊತ್ತಿನವರೆಗೂ ಮಾತನಾಡಿಸುತ್ತಾ, ಧೈರ್ಯ ತುಂಬುತ್ತಾ, ನಗಿಸುತ್ತಾ ಜೊತೆಗಿದ್ದ ನಿಮ್ಮ ನೆನಪುಗಳಿಂದ ಹೊರಬರಲು ಆಗುತ್ತಿಲ್ಲ.
ಎಲ್ಲಿ ನೋಡಿದರೂ ನಿಮ್ಮ ನಗು, ನಿಮ್ಮ ಮಾತುಗಳು ನೆನಪಾಗುತ್ತಿದೆ .
ನನ್ನ ಭುಜದ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತನಾಡುತ್ತಿದ್ದ ಕ್ಷಣಗಳೇ ಕಣ್ಣ ಮುಂದೆ ಬರುತ್ತಿವೆ.
ನನ್ನ ಮೇಲೆ ನೀವು ಇಟ್ಟಿದ್ದ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆ ಎಂದೆಂದಿಗೂ ಮರೆಯಲಾಗದು.
ಇದನ್ನೂ ಓದಿ: ಸಚಿವ ಸುಧಾಕರ್ ನಿಧನಕ್ಕೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ತೀವ್ರ ಸಂತಾಪ
ನೀವು ಕೇವಲ ನಾಯಕನಲ್ಲ… ನನ್ನ ಜೀವನದಲ್ಲಿ ಅಣ್ಣನ ಸ್ಥಾನದಲ್ಲಿದ್ದ ವ್ಯಕ್ತಿ.
“ಪಪ್ಪಿ, ಧೈರ್ಯವಾಗಿರು…” ಎಂದು ಮತ್ತೆ ಒಮ್ಮೆ ಕರೆ ಮಾಡಿ ಹೇಳಿಬಿಡ್ತೀರೋ ಅನ್ನೋ ಭಾವನೆಯಲ್ಲೇ ಇನ್ನೂ ಮನಸ್ಸು ಇದೆ…
ನಿಮ್ಮ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಇನ್ನೂ ಬಂದಿಲ್ಲ ಅಣ್ಣ…
ನಿಮ್ಮ ನೆನಪು ಸದಾ ಜೀವಂತ.
ಓಂ ಶಾಂತಿ
| ಕೆ.ಸಿ ವೀರೇಂದ್ರ ಪಪ್ಪಿ
ಪಪ್ಪಿ ಹಾಗೂ ಸುಧಾಕರ್ ಸ್ನೇಹ ಹೇಗಿತ್ತು ಈ ವೀಡಿಯೋ ನೋಡಿ

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
