
CHITRADURGA NEWS | 03 OCTOBER 2035
ಚಿತ್ರದುರ್ಗ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವನೆ ಮನೆ ಮಾಡಿರುತ್ತದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣ ಪಾಲಯ್ಯ ತಿಳಿಸಿದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಜಯದೇವ ಜಂಗಿಕುಸ್ತಿ | ವಿವಿಧ ರಾಜ್ಯಗಳಿಂದ ಕುಸ್ತಿಪಟುಗಳು ಭಾಗೀ
ತಾಲೂಕಿನ ಮದಕರಿಪುರ ಗ್ರಾಮದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಈ ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತರ ಕೇಂದ್ರಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿತ್ತು. ಆದರೆ ಈಗ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಮೂಲಕ ಲೋಕ ಸೇವಾ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಸ್ಫೂರ್ತಿಯಾಗಿದೆ ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ಎನ್‍ಎಸ್‍ಎಸ್ ಸೇರಿದರೆ ಬರುವ ಲಾಭವಾದರೂ ಏನು ಎಂದು ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಪಾಲ್ಗೊಂಡ ನೀವುಗಳೇ ಉತ್ತರವಾಗಬಹುದು ಎಂದು ಭಾವಿಸುವೆ.
ಯಾಕೆಂದರೆ ನಿಮ್ಮಲ್ಲಿ ಈಗ ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಸಹಭೋಜನ, ಹೊಂದಾಣಿಕೆ, ಶ್ರಮದ ಮಹತ್ವ, ಭಾಷಣ ಕಲೆ, ಸಭಾ ಕಂಪನ ನಿವಾರಣೆ, ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ, ಆತ್ಮಸ್ಥೈರ್ಯ, ರಾಷ್ಟ್ರಭಕ್ತಿ ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ಈ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: ಗಾಂಧೀಜಿ ಜಯಂತಿ | ಸ್ವಚ್ಛತಾ ಶ್ರಮದಾನ | ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಇಲ್ಲಿ ರೂಢಿಸಿಕೊಂಡ ಈ ಉತ್ತಮ ಅಭ್ಯಾಸಗಳನ್ನು ಈ ಶಿಬಿರಕ್ಕೆ ಸೀಮಿತಗೊಳಿಸದೆ ಮುಂದೆಯೂ ನಿಮ್ಮ ಬದುಕಿನಲ್ಲಿ ಚಾಚು ತಪ್ಪದೇ ಪರಿಪಾಲಿಸಬೇಕು ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಏಳು ದಿನಗಳ ಕಾಲ ಯೋಗಾಭ್ಯಾಸ ಹೇಳಿಕೊಟ್ಟ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ.ತಿಪ್ಪೇಸ್ವಾಮಿ ಮಾತನಾಡಿ, ಯೋಗ ಒಂದು ಹಳೆಯ ಭಾರತೀಯ ಚಿಂತನೆ. ಆರೋಗ್ಯದ ಕುರಿತಾದ ವಿಜ್ಞಾನ ಮತ್ತು ಆಧ್ಯಾತ್ಮಿಕ ಮಾರ್ಗದ ಸಾಧನೆ. ಯೋಗವು ದೇಹ, ಮನಸ್ಸು ಮತ್ತು ಆತ್ಮ ಎಂಬ ಮೂರು ಮಾರ್ಗಗಳಲ್ಲಿ ಪೂರ್ಣತೆಯ ಅನುಭವಕ್ಕೆ ಒಯ್ಯುವುದು ಯೋಗ. ಯೋಗದಿಂದ ಏಕಾಗ್ರತೆ, ಉತ್ತಮ ಆರೋಗ್ಯ, ಮನಸ್ಸಿಗೆ ವಿಶ್ರಾಂತಿ ಪಡೆಯಬಹುದಾಗಿದೆ ಎಂದರು.
ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಟಿ.ಪೆನ್ನಯ್ಯ, ಜಿಲ್ಲಾ ಬಿಸಿಎಂ ಅಧಿಕಾರಿಗಳಾದ ಪುಷ್ಲತಾ ಬಾವಿಮಠ ಮಾತನಾಡಿದರು.
ಇದನ್ನೂ ಓದಿ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಸಮಾರಂಭದಲ್ಲಿ ಉಪನ್ಯಾಸಕರಾದ ಎಚ್.ಶ್ರೀನಿವಾಸ್, ಬುಡೇನ್ ಸಾಬ್, ಚಂದ್ರಶೇಖರಪ್ಪ, ಸಿ.ಕಲ್ಲಪ್ಪ, ಎ.ನಾಗರಾಜು, ಎಸ್.ಡಿ.ಬಸವರಾಜ, ರಾಜಭಕ್ಷಿ, ರಂಗಸ್ವಾಮಿ, ಶಿವಕುಮಾರ್, ಮಂಜುನಾಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಶಿಬಿರಾರ್ಥಿಗಳು, ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
