Connect with us

    18 ವರ್ಷದ ಬಳಿಕ ಆಗ್ನೇಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ವಶಕ್ಕೆ | ವೈಎಎನ್‌ಗೆ ಸೋಲಿನ ದಾರಿ ತೋರಿಸಿದ ಡಿಟಿಎಸ್‌ | ‘ಈ ಗೆಲುವು ನಿಮ್ಮದು’ ಎಂದು ಪೋಸ್ಟ್ ಹಾಕಿದ ಶ್ರೀನಿವಾಸ್‌

    MLC DTS-YAN

    ಮುಖ್ಯ ಸುದ್ದಿ

    18 ವರ್ಷದ ಬಳಿಕ ಆಗ್ನೇಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ವಶಕ್ಕೆ | ವೈಎಎನ್‌ಗೆ ಸೋಲಿನ ದಾರಿ ತೋರಿಸಿದ ಡಿಟಿಎಸ್‌ | ‘ಈ ಗೆಲುವು ನಿಮ್ಮದು’ ಎಂದು ಪೋಸ್ಟ್ ಹಾಕಿದ ಶ್ರೀನಿವಾಸ್‌

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 JUNE 2024
    ಚಿತ್ರದುರ್ಗ:‌ ಬಿಜೆಪಿ ಭದ್ರಕೋಟೆಯಾಗಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ‘ಕೈ’ ಪಡೆ ವಶಕ್ಕೆ ಪಡೆದಿದೆ. ಮೈತ್ರಿ ಅಭ್ಯರ್ಥಿಯಾಗಿ ಗೆಲುವಿನ ಹುಮ್ಮಸ್ಸಿನಲ್ಲಿ ಅಖಾಡಕ್ಕೆ ಧುಮುಕಿದ್ದ ಬಿಜೆಪಿಯು ವೈ.ಎ.ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಿ.ಟಿ.ಶ್ರೀನಿವಾಸ್‌ 18 ವರ್ಷದ ಬಳಿಕ ಸೋಲಿನ ದಾರಿ ತೋರಿಸಿದ್ದಾರೆ.

    ಆಗ್ನೇಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬೆಂಗಳೂರಿನ ಕಲಾ ಕಾಲೇಜು ಆವರಣದಲ್ಲಿ ಗುರುವಾರ ಬೆಳಿಗ್ಗೆ 8ಗಂಟೆಗೆ ಆರಂಭವಾಗಿತ್ತು. ಶುಕ್ರವಾರ ಮುಂಜಾನೆ ಫಲಿತಾಂಶ ಘೋಷಣೆಯಾಗಿದೆ.

    ಚಿತ್ರದುರ್ಗ(ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ), ಚಿಕ್ಕಬಳ್ಳಾಪುರ (ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ), ಕೋಲಾರ (ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್‌), ತುಮಕೂರು (ಪಾವಗಡ, ಮಧುಗಿರಿ, ಶಿರಾ, ಚಿಕ್ಕನಾಯಕನಳ್ಳಿ, ತಿಪಟೂರು, ತುರುವೆಕೆರೆ, ಕುಣಿಗಲ್‌, ಗುಬ್ಬಿ, ತುಮಕೂರು, ಕೊರಟಗೆರೆ) ಹಾಗೂ ದಾವಣಗೆರೆ ಜಿಲ್ಲೆ (ದಾವಣಗೆರೆ, ಹರಿಹರ, ಜಗಳೂರು ತಾಲೂಕು) ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ.

    ಕ್ಲಿಕ್ ಮಾಡಿ ಓದಿ: ಕೋಟೆನಾಡಿಗೆ ಐದು ದಿನ ‘ಯೆಲ್ಲೊ ಅಲರ್ಟ್’ | ಭಾರಿ ಮಳೆಯಾಗುವ ಸಾಧ್ಯತೆ

    ಈ ಜಿಲ್ಲೆಯ ವ್ಯಾಪ್ತಿಯುಳ್ಳ ಕ್ಷೇತ್ರದ ಚುನಾವಣೆ ಜೂನ್‌ 3ರಂದು ನಡೆದಿತ್ತು. ಐದು ಜಿಲ್ಲೆಗಳಿಂದ ಶೇ 95.27ರಷ್ಟು ಮತದಾನವಾಗಿದೆ. ಇಲ್ಲಿ ಮತದಾರರಾಗಿರುವ ಪ್ರೌಢಶಾಲಾ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಬೋಧಕ ವರ್ಗದವರು ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕಿರುವುದು ಫಲಿತಾಂಶದಲ್ಲಿ ಬಿಂಬಿತವಾಗಿದೆ.

    ಇದು ಪ್ರಾಶಸ್ತ್ಯದ ಮತದಾನ ಆಗಿದ್ದ ಕಾರಣ ಫಲಿತಾಂಶ ವಿಳಂಭವಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ 2,733 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ 1,973 ಮತಗಳನ್ನು ಪಡೆದು 760 ಮತಗಳ ಹಿನ್ನಡೆ ಅನುಭವಿಸಿದ್ದರು. ಒಟ್ಟು 25,309 ಮತಗಳಲ್ಲಿ 24 ಸಾವಿರಕ್ಕೂ ಅಧಿಕ ಮತ ಚಲಾವಣೆ ಆಗಿತ್ತು.

    ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವೈ.ಎ.ನಾರಾಯಣಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಕಾಂಗ್ರೆಸ್‍ನಿಂದ ಡಿ.ಟಿ.ಶ್ರೀನಿವಾಸ್, ಕಿಶನ್‌ ಎಂ.ಜಿ (ಕರ್ನಾಟಕ ರಾಷ್ಟ್ರ ಸಮಿತಿ), ಪಕ್ಷೇತರರು: ಜಿ.ಎಚ್‌.ಇಮ್ರಾಪುರ್, ಕಪನಿಗೌಡ, ಎನ್.ಇ.ನಟರಾಜ್, ವೈ.ಆರ್‌.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ, ಬಾಬು ಯೋಗೀಶ್‌ ಆರ್‌, ಲೋಕೇಶ್‌ ತಾಳಿಕಟ್ಟೆ, ವನಿತಾ ಎಸ್‌, ವಿನೋದ್‌ ಶಿವರಾಜ್, ಶ್ರೀನಿವಾಸ್‌ ಬಿ, ಸೈಯದ್‌ ಅಫ್ಕ್ ಅಹಮದ್ ಸೇರಿ 25 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರಿಗೆ ಶಿಕ್ಷಕ ಕ್ಷೇತ್ರದ ಮತದಾರರು ಮಣೆ ಹಾಕಿಲ್ಲ.

    ಕ್ಲಿಕ್ ಮಾಡಿ ಓದಿ: ಮೂರನೇ ಸ್ಥಾನ ತಂದ ಮೂರು ಅಂಕ | ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನ ಎಫೆಕ್ಟ್‌

    ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಆರಂಭದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ವೈ.ಎ.ನಾರಾಯಣಸ್ವಾಮಿ, ನಂತರದ ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿಯಿಂದ ಸ್ಪರ್ಧಿಸಿದರು. ಸತತ18 ವರ್ಷಗಳಿಂದ ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಈ ಬಾರಿ ಕೂಡ ಗೆಲುವಿನ ನಾಗಾಲೋಟ ತಡೆಯುವವರಿಲ್ಲ ಎನ್ನುವ ಉತ್ಸಾಹದಲ್ಲಿದ್ದರು.

    MLC DTS

    ಈ ಗೆಲುವು ನಿಮ್ಮದು ಎಂದು ಕೃತಜ್ಞತೆ ಸಲ್ಲಿಸಿದ ಡಿ.ಟಿ.ಶ್ರೀನಿವಾಸ್‌

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಜತೆಗೆ ತಮ್ಮ ಪ್ರಣಾಳಿಕೆಯಲ್ಲಿನ ಅಂಶಗಳನ್ನೂ ಮುಂದಿಟ್ಟು ಮತಯಾಚಿಸಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅವಧಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಪರವಾಗಿ ತೆಗೆದುಕೊಂಡ ನೀತಿ-ನಿರ್ಣಯಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ, ಕಾನೂನು ಸುವ್ಯವಸ್ಥೆ ಕಾಪಾಡುವಿಕೆ ಸೇರಿದಂತೆ ವಿವಿಧ ಹಂತಗಳಲ್ಲಿ ವೈಫಲ್ಯ ಕಂಡಿರುವ ಬಗ್ಗೆಯೂ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಜತೆಗೆ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಪರವಾಗಿ ಕೈಗೊಳ್ಳುವ ಯೋಜನೆಗಳ ಭರವಸೆಗಳನ್ನೂ ನೀಡಿದ್ದರು.

    ಆದರೆ ಶಿಕ್ಷಕರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದಾರೆ ಎನ್ನುವುದನ್ನು ಮತದಾರ ಮುಂದಿಡುವ ಪ್ರಯತ್ನ ಮಾಡಿದ್ದ ಶ್ರೀನಿವಾಸ್‌ ಲೆಕ್ಕಚಾರ ಸರಿಯಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿಯನ್ನೂ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಅಲ್ಲದೆ, ಕಳೆದ ಬಾರಿಸೋತ ತಮಗೆ ಈ ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

    ಪ್ರಚಾರಕ್ಕೆ ಪತ್ನಿ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಕೂಡ ಸಾಥ್ ನೀಡಿದ್ದರು. ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ್ ಅವರಿಗೆ ದಾವಣಗೆರೆ, ಚಿತ್ರದುರ್ಗದಲ್ಲಿ ಸಮುದಾಯದ ಮತಗಳನ್ನೂ ಅವರು ನೆಚ್ಚಿಕೊಂಡಿದ್ದರು. ಅತಿಥಿ ಶಿಕ್ಷಕರ ಕಾಯಂ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಿತ ಪಟ್ಟಿಗೆ ಸೇರಿಸುವುದು, ಕಾಲ್ಪನಿಕ ವೇತನ, 7ನೇ ವೇತನ ಆಯೋಗ ಮತ್ತಿತರ ವಿಚಾರಗಳನ್ನೂ ಪ್ರಚಾರದ ವೇಳೆ ಪ್ರಸ್ತಾಪಿಸಿದ್ದರು.

    ಬಿಜೆಪಿಯ ನಾರಾಯಣಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿದ್ದರಿಂದ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿಯನ್ನೂ ಈ ಬಾರಿ ಕಣಕ್ಕಿಳಿಸಿರಲಿಲ್ಲ. ಬದಲಿಗೆ ನಾರಾಯಣಸ್ವಾಮಿ ಅವರಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಬಿಜೆಪಿ ಹಾಗೂ ಜೆಡಿಎಸ್‌ನ ನಾಯಕರು ಜಂಟಿಯಾಗಿ ಪ್ರಚಾರ ನಡೆಸಿದ್ದರು. ಅಂತಿಮವಾಗಿ ವಿಜಯ ಮಾಲೆ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ ಒಲಿದಿದೆ.

    ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಕ್ಲಿನಿಕ್ ಪ್ರಾರಂಭ

    ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಡಿ.ಟಿ.ಶ್ರೀನಿವಾಸ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಗೆಲುವು ನಿಮ್ಮದು ಎಂದು ಪೋಸ್ಟ್‌ ಹಾಕಿ ಶಿಕ್ಷಕ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ‘ವಿಧಾನಪರಿಷತ್ ಚುನಾವಣೆ 2024ರ ಆಗ್ನೇಯ ಶಿಕ್ಷಕರ ಕ್ಷೇತ್ರದ ಎಲ್ಲ ನನ್ನ ಆತ್ಮೀಯ ಮತದಾರ ಶಿಕ್ಷಕ ಬಂಧುಗಳಿಗೆ ನಮ್ಮ ಅನಂತ ಅನಂತ ಧನ್ಯವಾದಗಳು. ನಮ್ಮ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್‌ ಪಕ್ಷದ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ನನ್ನ ವಿಶೇಷ ಧನ್ಯವಾದಗಳು. ನಮ್ಮ ಬೆಂಬಲವಾಗಿ ನಿಂತ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಶಾಸಕರುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ವಿಶೇಷವಾಗಿ ಕೋಲಾರ,ಚಿಕ್ಕಬಳ್ಳಾಪುರ ತುಮಕೂರು,ಚಿತ್ರದುರ್ಗ,ದಾವಣಗೆರೆ ಭಾಗದ ಎಲ್ಲಾ ಶಾಸಕರುಗಳಿಗೆ ಹಾಗೂ ಜಿಲ್ಲಾ ಮಂತ್ರಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

    ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮೊದಲ ಪ್ರಾಶಸ್ತ್ರದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. 4,622 ಮತಗಳ ಅಂತರದಿಂದ ಗೆದ್ದಿದ್ದಾರೆ. ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದ ಕಾಂಗ್ರೆಸ್‌ನ ಮರಿತಿಬ್ಬೇಗೌಡ ಸೋಲನುಭವಿಸಿದ್ದಾರೆ.

    ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್ ಎಲ್ ಭೋಜೇಗೌಡ 5,267 ಮತಗಳಿಂದ ಗೆಲುವು ಸಾಧಿಸಿದರು. ಮೊದಲ ಪ್ರಾಶಸ್ತ್ರ ಮತಗಳಲ್ಲೇ ಗೆಲುವು ಪಡೆದ ಅವರು, 9,829 ಮತ ಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ ಕೆ ಮಂಜುನಾಥ್ ಕುಮಾರ್ 4,562 ಮತ ಪಡೆದರು. 19,479 ಮತಳು ಚಲಾವಣೆ ಆಗಿದ್ದವು. ಅದರಲ್ಲಿ 821 ಮತಗಳು ಅಸಿಂಧುವಾಗಿದ್ದವು.

    ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್‌ ಗೆಲುವು ಸಾಧಿಸುತ್ತಿದ್ದಂತೆ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಮತದಾರರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top