ಮುಖ್ಯ ಸುದ್ದಿ
ಕೋಟೆನಾಡಿಗೆ ಐದು ದಿನ ಯೆಲ್ಲೊ ಅಲರ್ಟ್ | ಭಾರಿ ಮಳೆಯಾಗುವ ಸಾಧ್ಯತೆ

CHITRADURGA NEWS | 07 JUNE 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೂ ಉತ್ತಮ ಮಳೆಯಾಗಿದೆ. ಹಲವೆಡೆ ಜಮೀನು, ಹೊಲ ಜಲಾವೃತವಾಗಿವೆ.
ಹೊಸದುರ್ಗ ಸುತ್ತಮುತ್ತ, ಚಿಕ್ಕಜಾಜೂರು, ನಾಯಕನಹಟ್ಟಿ, ಮೊಳಕಾಲ್ಮುರು, ಚಳ್ಳಕೆರೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಮುಂದಿನ ಐದು ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 10ರವರೆಗೆ ಚಿತ್ರದುರ್ಗ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ನಾಯಕನಹಟ್ಟಿ ಹೋಬಳಿಯಾದ್ಯಂತ ಹಲವಾರು ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಜೋರು ಮಳೆಯಿಂದ ರಸ್ತೆ, ತಗ್ಗು-ಗುಂಡಿಗಳಲ್ಲಿ ನೀರು ತುಂಬಿ ಹರಿಯಿತು.

ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಕ್ಲಿನಿಕ್ ಪ್ರಾರಂಭ
ನೆಲಗೇತನಹಟ್ಟಿ, ಎನ್.ಉಪ್ಪಾರಹಟ್ಟಿ, ಎತ್ತಿನಹಟ್ಟಿ, ಜೋಗಿಹಟ್ಟಿ, ಗೌಡಗೆರೆ, ಜಾಗನೂರಹಟ್ಟಿ, ನಾಯಕನಹಟ್ಟಿ ಪಟ್ಟಣ, ಮನುಮೈನಹಟ್ಟಿ, ಎನ್.ಮಹದೇವಪುರ, ಎನ್.ಗೌರಿಪುರ, ತೊರೆಕೋಲಮ್ಮನಹಳ್ಳಿ, ಗುಂತಕೋಲಮ್ಮನಹಳ್ಳಿ, ಎನ್.ದೇವರಹಳ್ಳಿ, ಮಲ್ಲೂರಹಳ್ಳಿ ಗ್ರಾಮಗಳಲ್ಲಿ ಉತ್ತಮವಾದ ಮಳೆಯಾಗಿದೆ.
ಗುಂತಕೋಲಮ್ಮನಹಳ್ಳಿ ಗ್ರಾಮದ ಬಳಿ ಬಿರುಸಾದ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ನೀರು ರೇಖಲಗೆರೆ ಕೆರೆಯತ್ತ ಸಾಗಿದೆ. ಇದೇ ವೇಳೆ ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸಂಚಾರ ಸ್ವಲ್ಪಹೊತ್ತು ಸ್ಥಗಿತವಾಗಿತ್ತು.
ಮುಂಗಾರಿನ ಮೊದಲ ಮಳೆ ಉತ್ತಮವಾಗಿ ಸುರಿದಿರುವುದರಿಂದ ಮುಂಚಿತವಾಗಿ ಕೃಷಿ ಕಾರ್ಯಗಳು ಆರಂಭವಾಗಲಿವೆ. ಶೇಂಗಾ ಬಿತ್ತನೆಗೆ ಮೇ ತಿಂಗಳು ಸೂಕ್ತವಾದ ಸಮಯ ಎಂದು ಕೃಷಿ ಇಲಾಖೆ ಸಲಹೆ ನೀಡಿದೆ. ಈ ಬಾರಿ ಮುಂಚಿತವಾಗಿ ಮಳೆಯಾಗಿರುವುದರಿಂದ ರೈತರು ಹೊಲ ಹಸನುಗೊಳಿಸಿ ಬಿತ್ತನೆ ನಡೆಸಲು ಸಹಕಾರಿಯಾಗಿದೆ. ಕೃಷಿ ಇಲಾಖೆ ಬಿತ್ತನೆ ಶೇಂಗಾಬೀಜ ವಿತರಣೆ ಕಾರ್ಯ ಆರಂಭಿಸಿದೆ.
ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಹಳ್ಳಗಳು ತುಂಬಿ ಹರಿದ ಪರಿಣಾಮ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕ್ಲಿಕ್ ಮಾಡಿ ಓದಿ: ಮೂರನೇ ಸ್ಥಾನ ತಂದ ಮೂರು ಅಂಕ | ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನ ಎಫೆಕ್ಟ್
ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ, ಕೇಶವಾಪುರ, ಹನುಮನಕಟ್ಟೆ, ಬಿಜ್ಜೆನಾಳ್ ಗ್ರಾಮಗಳಲ್ಲಿ ಬಿರುಸಿನ ವರ್ಷಧಾರೆಯಾಗಿದೆ. ಚಿಕ್ಕಂದವಾಡಿ ಗ್ರಾಮದಲ್ಲಿ ಮುಕ್ಕಾಲು ಗಂಟೆ ಕಾಲ ಬಿಸುರಿನ ಮಳೆಯಾಗಿ, ನಂತರ 15 ನಿಮಿಷ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ಗ್ರಾಮದ ಸಿಡೆಕೊಂಡೆಹಳ್ಳ ಹಾಗೂ ದೊಗರೆ ಹಳ್ಳಗಳು ತುಂಬಿ ಹರಿದಿವೆ.
ಸಮೀಪದ ಕೇಶವಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಕಲ್ಲೇರಂಗಪ್ಪನ ಗುಡ್ಡದ ಹಳ್ಳ ತುಂಬಿ ಹರಿಯುತ್ತಿದ್ದು, ಬೆಟ್ಟದ ತಪ್ಪಲಿಗೆ ಮೇಯಲು ಹೋಗಿದ್ದ ಕುರಿ ಹಾಗೂ ಮೇಕೆಗಳು ಪ್ರಯಾಸದಿಂದ ಹಳ್ಳವನ್ನು ದಾಟುತ್ತಿದ್ದ ದೃಶ್ಯ ಕಂಡು ಬಂದಿತು. ನೀರು ಕೇಶವಾಪುರ ಕೆರೆಗೆ ಹರಿಯುತ್ತಿದೆ. ಸಮೀಪದ ಅರಸನಘಟ್ಟ ಗ್ರಾಮದಲ್ಲೂ ಉತ್ತಮ ಮಳೆಯಾಗಿದ್ದು, ಗ್ರಾಮದ ಬೆಟ್ಟದ ತಪ್ಪಲಿನ ಗರಗದ ಹಳ್ಳ ತುಂಬಿ ಹರಿದು, ಸಮೀಪದ ಅಪ್ಪರಸನಹಳ್ಳಿ ಬಳಿಯ ಕಾಟಯ್ಯನ ಕೆರೆಗೆ ಹರಿಯುತ್ತಿದೆ.
ಚಿಕ್ಕಂದವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ನೀರು ನಿಂತ ಪರಿಣಾಮ, ಚಿಕ್ಕಂದವಾಡಿಯ ಹಳೆ ಗ್ರಾಮಕ್ಕಿದ್ದ ರಸ್ತೆ ಸಂಪರ್ಕ ಸ್ಥಗಿತಗೊಂಡಿತು. ಮಳೆ ನಿಂತ ಮುಕ್ಕಾಲು ಗಂಟೆ ನಂತರ ಅಂಡರ್ ಪಾಸ್‌ನಲ್ಲಿದ್ದ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಯಿತು. ಅಲ್ಲಿಯವರೆಗೂ ದ್ವಿಚಕ್ರ ವಾಹನಗಳ ಚಾಲಕರು ಪರದಾಡಿದರು.
ಹೊಸದುರ್ಗ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುಡುಗು ಸಹಿತ ಹದ ಮಳೆಯಾಗಿದೆ. 40 ನಿಮಿಷಗಳ ಕಾಲ ಒಂದೇ ಸಮನೆ ಮಳೆ ಸುರಿದಿದೆ.

ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿ ಗ್ರಾಮದ ಹಳ್ಳ ಹರಿಯುತ್ತಿರುವುದು
ಈಗಾಗಲೇ ಬಿತ್ತನೆ ಆರಂಭಿಸಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಸಾವೆ, ಹೆಸರು, ಶೇಂಗಾ ಹಾಗೂ ಈರುಳ್ಳಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿತ್ತು. ಮಳೆಯಾಗಿರುವುದರಿಂದ ಸಸಿ ಚಿಗುರೊಡೆಯಲು ಸಹಾಯವಾಗಿದೆ. ತೆಂಗು ಹಾಗೂ ಅಡಿಕೆ ತೋಟಗಳು ಒಣಗುತ್ತಿದ್ದವು. ಸತತ ಮಳೆಯಿಂದಾಗಿ ತೋಟಗಳು ಸ್ವಲ್ಪ ಚೇತರಿಸಿಕೊಳ್ಳುತ್ತಿವೆ.
ಸಿಡಿಲು ಬಡಿದು 4 ಮೇಕೆಗಳು ಮೃತಪಟ್ಟಿರುವ ಘಟನೆ ಶ್ರೀರಾಂಪುರ ಸಮೀಪದ ಸಿರಿಗೊಂಡನಹಳ್ಳಿ ಹಳ್ಳದಲ್ಲಿ ಗುರುವಾರ ಸಂಜೆ ನೆಡೆದಿದೆ. ಮೇಕೆಗಳು ದೊಡ್ಡತೇಕಲವಟ್ಟಿ ಗ್ರಾಮದ ಪರಮೇಶ್ವರಪ್ಪ ಹಾಗೂ ರಾಜಣ್ಣ ಎಂಬುವವರಿಗೆ ಸೇರಿದವು ಎನ್ನಲಾಗಿದೆ.
ಗುರುವಾರ ಸಂಜೆಯ ವೇಳೆ ಸಿರಿಗೊಂಡನಹಳ್ಳಿ ಹಳ್ಳದ ಸಮೀಪ ಮೇಕೆಗಳನ್ನು ಮೇಯಿಸಲು ಹೋದಾಗ 9 ಮೇಕೆಗಳಿಗೆ ಸಿಡಿಲು ಬಡಿದಿದ್ದು, ಈ ಪೈಕಿ ನಾಲ್ಕು ಮೇಕೆಗಳು ಮೃತಪಟ್ಟಿವೆ. ಉಳಿದ ಐದು ಮೇಕೆಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೊಳಕಾಲ್ಮುರ ತಾಲ್ಲೂಕಿನ ಬಿ.ಜಿ.ಕೆರೆ ಸುತ್ತಮುತ್ತ ಮಳೆ ರಭಸವಾಗಿ ಸುರಿದಿದೆ. ಬಿ.ಜಿ.ಕೆರೆ, ಹಿರೇಹಳ್ಳಿ, ಬುಕ್ಲೂರಹಳ್ಳಿ, ಮೊಗಲಹಳ್ಳಿ, ಮಾರಮ್ಮ ನಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿ, ರಾಂಪುರ, ನೇರ್ಲಹಳ್ಳಿ, ನೇತ್ರನಹಳ್ಳಿ ಮುಂತಾದ ಗ್ರಾಮಗಳ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ 45 ನಿಮಿಷಕ್ಕೂ ಹೆಚ್ಚು ಕಾಲ ಜೋರಾಗಿ ಸುರಿಯುತು. ನಂತರ ಜಿಟಿಜಿಟಿಯಾಗಿ ಒಂದು ಗಂಟೆ ಕಾಲ ಬಿದ್ದಿತು. ಕೋನಸಾಗರ ಕೆರೆಗೆ ನೀರು ಬರುತ್ತಿದೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.
3 ದಿನದ ಹಿಂದೆಯೂ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಚೆಕ್ ಡ್ಯಾಂಗಳಿಗೆ ನೀರು ಬಂದಿತ್ತು. ಅಂತರ್ಜಲದ ಮಟ್ಟ ಹೆಚ್ಚಳಕ್ಕೆ ಮಳೆಯಿಂದ ಅನುಕೂಲವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಲು ಸಹ ಸಹಕಾರಿಯಾಗಿದೆ.
