ಹೊಸದುರ್ಗ
ಶ್ರೀ ಲಕ್ಷ್ಮಿ ಕಟ್ಟೆ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ | ದೊಡ್ಡೆಡೆ ಸೇವೆ ವಿಶೇಷ

CHITRADURGA NEWS | 23 MARCH 2024
ಚಿತ್ರದುರ್ಗ: ಹೊಸದುರ್ಗದ ಎಸ್.ನೇರಲಕೆರೆಯಲ್ಲಿ ನೆಲೆಯೂರಿರುವ ಕೂರ್ಮಾವತಾರದ ಕಟ್ಟೆ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ಶುಕ್ರವಾರ ಲಕ್ಷ್ಮಿ ಕಲ್ಯಾಣೋತ್ಸವ, ಉಯ್ಯಾಲೋತ್ಸವ, ಗಜಾರೋಹಣೋತ್ಸವ, ಬಾಗಿನ ಸಮರ್ಪಣೆ ಹಾಗೂ ಬಳೆಬಾಸಿಂಗ ಕಾರ್ಯಕ್ರಮ ನಡೆದವು. ಶನಿವಾರ ಸೂರ್ಯಮಂಡಲೋತ್ಸವ, ಶ್ರೀಕೃಷ್ಣಗಂಧೋತ್ಸವ, ವಸಂತೋತ್ಸವದ ನಂತರ ಪುಬ್ಬ ನಕ್ಷತ್ರದಲ್ಲಿ ಮಧ್ಯಾಹ್ನ 12.30 ರಿಂದ 1.30 ರೊಳಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ್ಮಿ ಕಟ್ಟೆರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹಾಗೂ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: ಉಚಿತ ಕಂಪ್ಯೂಟರ್ ತರಬೇತಿ | ಬೇಸಿಗೆ ಶಿಬಿರ

ಹಾಸನ ಜಿಲ್ಲೆಯ ನುಗ್ಗೇಹಳ್ಳಿ ಪುರೋಹಿತರ ನೇತೃತ್ವದಲ್ಲಿ ವೈಕಾಸಾಗಮನ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಶ್ರಾವಣಮಾಸ, ವೈಕುಂಠ ಏಕಾದಶಿ, ಧನುರ್ಮಾಸ ಪೂಜೆ, ದಸರಾ ಉತ್ಸವ, ಅಂಬಿನೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಶನಿವಾರ ಅನ್ನದಾಸೋಹ ನಡೆಯುತ್ತದೆ ಎಂದರು.
ಆರೋಗ್ಯ ಸುಧಾರಣೆ, ಸಂತಾನ ಭಾಗ್ಯ, ಕಂಕಣ ಭಾಗ್ಯ ಹೀಗೆ ಹತ್ತು ಹಲವು ಕೋರಿಕೆಗಳನ್ನು ಈಡೇರಿಸುತ್ತಾ, ಹಲವು ವರ್ಷಗಳಿಂದ ಭಕ್ತರ ಮನದಲ್ಲಿ ನೆಲೆಯೂರಿದೆ ಕಟ್ಟೆ ರಂಗನಾಥ ಸ್ವಾಮಿ. ಪ್ರತಿ 5 ವರ್ಷಕೊಮ್ಮೆ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆಯಿಂದ ಭಕ್ತರು ಆಗಮಿಸುತ್ತಾರೆ. ದೇವರ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ವಾರದವರೆಗೂ ಇಲ್ಲೇ ಉಳಿದುಕೊಂಡು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ತಿರುಪತಿ ತಿಮ್ಮಪ್ಪ ಭಕ್ತರಿಗೆ ಬಲಗೈಯಲ್ಲಿ ಆಶೀರ್ವದಿಸಿದರೆ, ಕಟ್ಟೆರಂಗನಾಥ ಸ್ವಾಮಿ ಎಡಗೈಯಲ್ಲಿ ಭಕ್ತರನ್ನು ಆಶೀರ್ವದಿಸುತ್ತಾನೆ. ಈ ರೀತಿ ರಾಜ್ಯದಲ್ಲಿ ಬೇರೆಲ್ಲೂ ಇಲ್ಲ ಎನ್ನುತ್ತಾರೆ ಪುರೋಹಿತರಾದ ಕಾಂತರಾಜು, ಪ್ರಸನ್ನ, ರಾಮಚಂದ್ರಪ್ಪ.
ಇಷ್ಟಾರ್ಥ ಪೂರೈಸಿದ ಭಕ್ತರು ಹೆಚ್ಚಾಗಿ ಈ ದೇವರಿಗೆ ದೊಡ್ಡೆಡೆ ಸೇವೆ ಸಮರ್ಪಿಸುತ್ತಾರೆ. 36 ಸೇರು ಅಕ್ಕಿ, 36 ಸೇರು ಬೆಲ್ಲವನ್ನು ದೇವರ ಮುಂದೆ ರಾಶಿ ಹಾಕಿ ಅದರಲ್ಲಿ ಹಾಲು, ಮೊಸರು, ತುಪ್ಪ, ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಪೂಜಾ ಕಾರ್ಯದ ನಂತರ ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ಸೇವೆ ನಿತ್ಯವೂ ನಡೆಯುತ್ತಿರುತ್ತದೆ.
ಹಲವು ವರ್ಷಗಳ ಹಿಂದೆ ಕುರಿಗಾಹಿಗಳು ಕುರಿ ಮೇಯಿಸಿದ ನಂತರ ನೀರು ಕುಡಿಸಲು ಇಲ್ಲಿದ್ದ ಕಟ್ಟೆಗೆ ಬರುತ್ತಿದ್ದರು. ನಂತರ ಇದೇ ಸ್ಥಳದಲ್ಲಿ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಿಯೊಬ್ಬರು ಈ ಮಾರ್ಗವಾಗಿ ಬರುವಾಗ ಕತ್ತಲಾಗಿದ್ದರಿಂದ ಇಲ್ಲಿನ ಮರದ ಕೆಳಗೆ ವಿಶ್ರಾಂತಿ ಪಡೆದು, ಇಲ್ಲಿದ್ದ ಕಲ್ಲು ಜೋಡಿಸಿ ಒಲೆ ಹಚ್ಚಿದರು. ಕೂಡಲೇ ಕಲ್ಲು ಸಿಡಿಯಿತು. ‘ನಾನು ರಂಗನಾಥ ಸ್ವಾಮಿ’ ಎಂಬ ಧ್ವನಿ ಕೇಳಿಸಿತು. ಆಗ ವ್ಯಾಪಾರಿ ತನ್ನಿಂದಾದ ತಪ್ಪಿಗಾಗಿ ದೇವರಿಗೆ ದೇವಾಲಯ ನಿರ್ಮಿಸಿ, ತನ್ನೂರಿಗೆ ಹೋದರು. ಇಲ್ಲೇ ಪಕ್ಕದಲ್ಲಿ ಕಟ್ಟೆ ಇರುವುದರಿಂದ ಇದು ಕಟ್ಟೆ ರಂಗನಾಥ ಸ್ವಾಮಿ ಎಂದು ಪ್ರಖ್ಯಾತಿ ಪಡೆದಿದೆ ಎನ್ನುತ್ತಾರೆ ಕಟ್ಟೆ ರಂಗನಾಥಸ್ವಾಮಿ ಟ್ರಸ್ಟ್ ಸದಸ್ಯರು.
