ಮುಖ್ಯ ಸುದ್ದಿ
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ | ಒಳಮಠ, ಹೊರಮಠದಲ್ಲಿ ವಿಶೇಷ ಪೂಜೆ

CHITRADURGA NEWS | 24 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯ ನಿಮಿತ್ತ ಸಂಪ್ರದಾಯದಂತೆ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ರಥೋತ್ಸವಕ್ಕೆ ಒಂದೆರಡು ದಿನ ಮುನ್ನವೇ ಆಗಮಿಸುವ ಶಾಮನೂರು ಶಿವಶಂಕರಪ್ಪ ಅವರು ತಿಪ್ಪೇರುದ್ರ ಸ್ವಾಮಿಗೆ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ. ಅದರಂತೆ ಈ ವರ್ಷವೂ ಆಗಮಿಸಿ ಒಳ ಮಠ ಹಾಗೂ ಹೊರ ಮಠಕ್ಕೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಅವರು,‘ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಂಬಂಧಿಕರೇ ಸ್ಪರ್ಧಾಳುಗಳಾಗಿದ್ದರೂ, ಸಂಬಂಧವೇ ಬೇರೆ, ರಾಜಕೀಯವೇ ಬೇರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ 5 ವರ್ಷದಿಂದ ಸಕ್ರಿಯವಾಗಿ ದಾವಣಗೆರೆ ಜಿಲ್ಲೆಯಲ್ಲಿ ಹಲವು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರು ನಮಗಿಂತ ಅವರನ್ನೇ ಹೆಚ್ಚು ಹುಡುಕಿಕೊಂಡು ಬರುತ್ತಿದ್ದಾರೆ. ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
ಬಿಜೆಪಿಯವರು ಹೇಳುವ ಹಾಗೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವುದು ಸಾಧ್ಯವಿಲ್ಲದ ಮಾತು. ನನ್ನ ಅಭಿಪ್ರಾಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 10 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಗೂಡ್ಸ್ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ | ಸ್ಥಳದಲ್ಲೇ ವಾಹನ ಚಾಲಕ ಮೃತ
ಲೋಕಸಭೆ ಚುನಾವಣೆ ಮುಕ್ತಾಯದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಯಾರೋ ಕೆಲವು ಹುಚ್ಚರು ಹೇಳುತ್ತಿದ್ದಾರೆ. ರಾಜ್ಯದಲ್ಲಿ 5ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತದೆ. ನಂತರ ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಮತ್ತೊಮ್ಮೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಲಂಚ ಹೊಡಿಯೋದು ಕಡಿಮೆಯಾಗಬೇಕು. ಎಲ್ಲ ಕಡೆ ಲಂಚದ ಹಾವಳಿ ಹೆಚ್ಚಾಗಿದ್ದು, ಹಾಗೇ ನೋಡಿದರೆ ಬಿಜೆಪಿಯವರಿಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಲಂಚ ಕಡಿಮೆ ಇದೆ ಎಂದರು.
ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜೆ.ಪಿ.ರವಿಶಂಕರ್, ದಾವಣಗೆರೆಯ ಆನಂದಪ್ಪ, ಸುರಭಿ ಶಿವಮೂರ್ತಿ, ಕುರುಡಿಗಿರಿ ಸ್ವಾಮಿ ಜತೆಗಿದ್ದರು.
