ಮುಖ್ಯ ಸುದ್ದಿ
ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ | 5 ನವಜೋಡಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ

CHITRADURGA NEWS | 05 FEBRUARY 2025
ಚಿತ್ರದುರ್ಗ: ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 35ನೇ ವರ್ಷದ 2ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 5 ಜೋಡಿಗಳ ವಿವಾಹ ನೆರವೇರಿತು.
Also Read: ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆಹಾಕಿದ ಮಹಾತಾಯಿ

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಸಂಬಂಧಗಳು ದುರಂತದ ಕಡೆಗೆ ಸಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಸಂಸಾರದಲ್ಲಿ ಹೆಂಡತಿ ಅಂದರೆ ಗುಲಾಮಳು ಎಂದು ಕೊಳ್ಳಬಾರದು. ದೇಶದ ಸಂಸ್ಕೃತಿಯಲ್ಲಿ ಹೆಣ್ಣಿಗೆ ಅಪಾರ ಗೌರವ ನೀಡಲಾಗಿದೆ. ಕುಟುಂಬದಲ್ಲಿ ಪತಿಯು ಸಹ ಅನೇಕ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾನೆ, ಹಾಗಾಗಿ ಗಂಡ-ಹೆಂಡತಿ ಮಧ್ಯೆ ಸಾಮರಸ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದು ಹೇಳಿದರು.
ವಿವಾಹ ಎನ್ನುವುದು ಪವಿತ್ರವಾದ ಸಂಬಂಧ. ಇದ್ದುದರಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮಠ ಎಂದರೆ ಮುರುಘಾಮಠವಾಗಿದೆ. ಮನುಷ್ಯ ಸರಳವಾಗಿ ಬದುಕಬೇಕು. ನವದಂಪತಿಗಳು ಇಂದು ಶ್ರೀಮಠದಲ್ಲಿ ಆದರ್ಶ ವಿವಾಹವಾಗಿ ಕುಟುಂಬಕ್ಕೆ ರಾಜ್ಯಕ್ಕೆ ಮಾದರಿಯಾಗಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.
ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಸ್ವರ್ಗ ಆಗಬೇಕು. ಅತ್ತೆ-ಸೊಸೆ ಪ್ರೀತಿಯಿಂದ ಮಾತನಾಡಬೇಕು. ಪ್ರತಿಯೊಬ್ಬರು ಒಬ್ಬರಿಗೊಬ್ಬರು ಗೌರವ ಕೊಡಬೇಕು. ಕುಟುಂಬ, ತಂದೆ-ತಾಯಿ ಎಲ್ಲರನ್ನು ಪ್ರೀತಿಯಿಂದ ನೋಡಬೇಕು. ಪರಸ್ಪರರ ಮಧ್ಯೆ ದುರಹಂಕಾರ ಮೂಡಬಾರದು ಎಂದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ಈ ವೇಳೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಶ್ರೀ ಮಠದಿಂದ ಹಾಗೂ ಲಿಂಗಾಯತ ನೌಕರರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಲಿಂಗಾಯತ ನೌಕರರ ಸಂಘದ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಕೆ.ಆರ್.ನಗರದ ಶರಣೆ ಜಯದೇವಿತಾಯಿ, ಬಸವ ಕಲ್ಯಾಣದ ಶರಣೆ ಚಿನ್ಮಯಿತಾಯಿ ಸೇರಿದಂತೆ ಇತರರು ಭಾಗವಹಿಸಿದ್ದರು.
Also Read: ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ
ಬೆಂಗಳೂರಿನ ಎಂ.ಸಿ.ಕೆ.ಎಸ್. ಫೌಂಡೇಶನ್, ಕಾರ್ಯಕ್ರಮದ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು, ವಿಜಯದೇವರು ಸ್ವಾಗತಿಸಿದರು, ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
