ಮುಖ್ಯ ಸುದ್ದಿ
ಅತ್ಯುತ್ತಮ ಚುನಾವಣೆ ಕಾರ್ಯಕ್ಕೆ ಸಂದ ಗೌರವ | ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿವ್ಯಾಪ್ರಭು ಜಿ.ಆರ್.ಜೆ

CHITRADURGA NEWS | 25 JANUARY 2024
ಚಿತ್ರದುರ್ಗ: ಭಾರತ ಚುನಾವಣಾ ಆಯೋಗ ಅತ್ಯುತ್ತಮ ಚುನಾವಣಾ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದ ರಾಜ್ಯದ ಮೂವರಿಗೆ ಗುರುವಾರ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು.
2023ನೇ ಸಾಲಿನ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಖಾ ಸಿ ಹಾಗೂ ಸಾಮಾನ್ಯ ಪ್ರಶಸ್ತಿ ವರ್ಗದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಶ್ರೀಮತಿ ದಿವ್ಯಾ ಪ್ರಭು ಜಿ.ಆರ್.ಜೆ ಅವರು ಮತ್ತು ಉತ್ತಮ ಜನಜಾಗೃತಿ ಕೈಗೊಂಡಿದ್ದಕ್ಕಾಗಿ ವಿದ್ಯುನ್ಮಾನ (ರೇಡಿಯೋ ) ಪ್ರಶಸ್ತಿಗೆ ಬೆಂಗಳೂರಿನ ರೇಡಿಯೋ ಮಿರ್ಚಿ ಎಫ್ ಎಮ್ ಆಯ್ಕೆಯಾಗಿತ್ತು.
ಇದನ್ನೂ ಓದಿ: ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ ತರಬೇತಿ
ಸಿ.ಶಿಖಾ ಅವರು ಕಳೆದ 2023 ರ ಸಾಲಿನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಆಯೋಗ ಅವರನ್ನು ಹಾಗೂ ಇಲಾಖೆಯನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.
ದಿವ್ಯಾಪ್ರಭು ಜಿ.ಆರ್.ಜೆ ಅವರು ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ವಿಶೇಷ ಮತದಾರರ ನೋಂದಣಿ ಹೆಚ್ಚಳ ಸೇರಿದಂತೆ ಅವರು ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮರಾಗಿ ಗುರುತಿಸಿಕೊಂಡಿದ್ದನ್ನು ಆಯೋಗ ಪ್ರಶಸ್ತಿಗೆ ಪರಿಗಣಿಸಿದೆ.
ಆಯೋಗವು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರನ್ನು ಅಭಿನಂದಿಸಲು ಪ್ರತಿ ವರ್ಷ ಸಾಮಾನ್ಯ ವರ್ಗ, ವಿಶೇಷ ವರ್ಗ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
ಅದೇ ರೀತಿಯಲ್ಲಿ ಆಯೋಗವು ಮತದಾರರಲ್ಲಿ ಚುನಾವಣಾ ಜಾಗೃತಿ ಕುರಿತಂತೆ ಅತ್ಯುತ್ಮಮವಾಗಿ ಕಾರ್ಯನಿರ್ವಹಿಸುವ ಮಾಧ್ಯಮ ಸಂಸ್ಥೆಗಳಿಗೆ ಮುದ್ರಣ, ವಿದ್ಯುನ್ಮಾನ (ಟಿವಿ), ವಿದ್ಯುನ್ಮಾನ (ರೇಡಿಯೋ) ಸೇರಿದಂತೆ ಡಿಜಿಟಲ್ ಮಾಧ್ಯಮ (ಸಾಮಾಜಿಕ ಜಾಲತಾಣ) ಎಂದು ನಾಲ್ಕು ವರ್ಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ನಡೆದ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ರ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಸಿ.ಶಿಖಾ ಹಾಗೂ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ದಿವ್ಯಾ ಪ್ರಭು ಮತ್ತು ಬೆಂಗಳೂರಿನ ರೇಡಿಯೋ ಮಿರ್ಚಿ ಎಫ್ ಎಮ್ ತಂಡಕ್ಕೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಶುಭ ಕೋರಿದ್ದಾರೆ.
