ಮುಖ್ಯ ಸುದ್ದಿ
ನಿವೇಶನ ಹಂಚಿಕೆಗೆ ಆಗ್ರಹಿಸಿ ರಸ್ತೆ ಬಂದ್ | ಸರ್ಕಾರದ ವಿರುದ್ಧ ಆಕ್ರೋಶ

CHITRADURGA NEWS | 29 MARCH 2024
ಚಿತ್ರದುರ್ಗ: ನಿವೇಶನ ಹಂಚಿಕೆಗೆ ಆಗ್ರಹಿಸಿ ರಸ್ತೆ ಬಂದ್‌ಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಹೊಟ್ಟೆಪ್ಪನಹಳ್ಳಿ ಮಾರ್ಗದ ರಸ್ತೆ ಬಂದ್ ಮಾಡಿದ ಗ್ರಾಮದ ದಲಿತ ಕುಟುಂಬಗಳು, ನಿವೇಶನ ಹಂಚಿಕೆ ಮಾಡುವಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗ್ರಾಮದಲ್ಲಿ ಸರ್ಕಾರಿ ಭೂಮಿ ಇದ್ದರೂ ಸಹ ಗ್ರಾಮದ ಜನರಿಗೆ ವಾಸಿಸಲು ಸೂರು ನಿರ್ಮಿಸಿಕೊಳ್ಳಲು ನಿವೇಶನ ಇಲ್ಲದಂತಾಗಿದೆ. ಹಳೆ ಕಾಲೊನಿಯ ಒಂದೇ ಮನೆಯಲ್ಲಿ 3-4 ಕುಟುಂಬಗಳು ವಾಸಿಸುತ್ತಿವೆ. ಕುಟುಂಬಗಳ ಮಧ್ಯೆ ಇದೇ ವಿಚಾರಕ್ಕೆ ಜಗಳವೂ ನಡೆದಿದೆ. ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ನಿವೇಶನ ವಂಚಿತ ಕುಟುಂಬಗಳ ನಿವೇಶನ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುತ್ತದೆ. ನಿವೇಶನ ಹಂಚಲು ಗ್ರಾಮದ ಸರ್ವೆ ನಂ–105ರಲ್ಲಿ ಮೀಸಲಿರಿಸಿದ 5 ಎಕರೆ ಪ್ರದೇಶವನ್ನು ಗ್ರಾಮದ ಉಳ್ಳವರೇ ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದಲಿತ ಸಮುದಾಯದ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಕ್ಲಿಕ್ ಮಾಡಿ ಓದಿ: ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ
ಮುಖಂಡರಾದ ಎನ್. ಜಗದೀಶ್, ಸಿದ್ದಪ್ಪ, ರವೀಶ್, ಟಿ.ನಿಜಲಿಂಗಪ್ಪ, ಗೋವಿಂದಪ್ಪ, ಮಹಿಳಾ ಸಂಘದ ಪ್ರತಿನಿಧಿ ನಾಗವೇಣಿ, ಜಯಮ್ಮ, ಮಾರಕ್ಕ, ಗಂಗಮ್ಮ, ಯಶೋದಮ್ಮ, ಕಾವ್ಯಾ, ಶಾರದಮ್ಮ, ಇದ್ದರು.
