
CHITRADURGA NEWS | 10 FEBRUARY 2026
ಚಿತ್ರದುರ್ಗ: ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಹೊಸಪೇಟೆ-ಬೆಂಗಳೂರು ಹಾಗೂ ಶಿವಮೊಗ್ಗ-ಚೆನ್ನೈ ವಯಾ: ಚಿತ್ರದುರ್ಗ, ಬಳ್ಳಾರಿ, ರೇನುಗುಂಟ ರೈಲು ಸೇರಿ ನನೆಗುದಿಗೆ ಬಿದ್ದಿರುವ ರೈಲುಗಳನ್ನು ಪುನರಾರಂಭಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಲವೊಂದು ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಹಾಗೂ ಕೆಲವೊಂದು ನೂತನ ರೈಲುಗಳ ಓಡಾಟ ಪ್ರಾರಂಭಿಸುವ ಬಗ್ಗೆ, ಹಾಗೂ ರೈಲ್ವೆ ಮೇಲು ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣದ ಬಗ್ಗೆ ಇಂದು ನವದೆಹಲಿಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳರವರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | 10 ಫೆಬ್ರವರಿ | ಇಂದಿನ ಮಾರುಕಟೆಯಲ್ಲಿ ಅಡಿಕೆ ರೇಟ್
ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣದಲ್ಲಿ ವಾಸ್ಕೋಡಾಗಾಮ-ಯಶವಂತಪುರ ಎಕ್ಸ್ಪ್ರೆಸ್, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್, ಚಾಲುಕ್ಯ ಎಕ್ಸ್ಪ್ರೆಸ್, ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ಸಿದ್ದಗಂಗ ಇಂಟರ್‌ಸಿಟಿ, ವಾಸ್ಕೋಡಾಗಾಮ, ವಿಶ್ವಮಾನವ, ವಿಜಯಪುರ-ಹಾಸನ-ಮಂಗಳೂರು ರೈಲುಗಳ ನಿಲುಗಡೆ, ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ಸಿದ್ದಗಂಗ ಇಂಟರ್‌ಸಿಟಿ, ವಾಸ್ಕೋಡಾಗಾಮ, ಕಾರಟಗಿ-ಯಶವಂತಪುರ ರೈಲು ನಿಲುಗಡೆ, ಚಿಕ್ಕಜಾಜೂರಿನಲ್ಲಿ ಕರ್ನಾಟಕ ಸಂಪರ್ಕ ಕ್ರಾಂತಿ, ಚಳ್ಳಕೆರೆ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಸಾಯಿನಗರ ಶಿರಡಿ ರೈಲು, ಸಿಂಧನೂರು ಎಕ್ಸ್ಪ್ರೆಸ್ ಟ್ರೈನ್ ನಿಲುಗಡೆ ಒದಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಹಿಂದೆ ಇದ್ದ ಹುಬ್ಬಳ್ಳಿ-ಚಿತ್ರದುರ್ಗ ಪ್ಯಾಸೆಂಜರ್ ರೈಲು ಈಗ ಚಿಕ್ಕಜಾಜೂರುವರೆಗೆ ಮಾತ್ರ ಸಂಚರಿಸುತ್ತಿದೆ. ಇದನ್ನು ಚಿತ್ರದುರ್ಗದವರೆಗೆ ವಿಸ್ತರಿಸಬೇಕು. ಹೊಸದಾಗಿ ಬೀದರ್ ನಿಂದ ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ ಹಾಗೂ ವಿಜಯಪುರದಿಂದ ಚಿತ್ರದುರ್ಗ ಮಾರ್ಗವಾಗಿ ಮೈಸೂರಿಗೆ ಹಾಗೂ ಶಿವಮೊಗ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ನೂತನ ರೈಲು ಓಡಾಟ ಆರಂಭಿಸಬೇಕು ಎಂದು ಕಾರಜೋಳ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹೈಕಮಾಂಡ್ ನಮಗೆ ದೇವಸ್ಥಾನವಿದ್ದಂತೆ, ಅಲ್ಲಿ ಕಷ್ಟಸುಖ ಹಂಚಿಕೊಳ್ಳುತ್ತೇವೆ | ಸಚಿವ ಸತೀಶ್ ಜಾರಕಿಹೊಳಿ
ಚಳ್ಳಕೆರೆ ನಗರ ಪರಿಮಿತಿಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ 45 ಕ್ಕೆ ಮೇಲು ಸೇತುವೆ ನಿರ್ಮಾಣ, ರಾಮಗಿರಿ ಬಳಿ ಲೆವೆಲ್ ಕ್ರಾಸಿಂಗ್ 77 ಎ ಕ್ಕೆ ಮೇಲು ಸೇತುವೆ ನಿರ್ಮಾಣ, ಬೇಡರೆಡ್ಡಿಹಳ್ಳಿ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಚಿತ್ರದುರ್ಗ ನಗರದಲ್ಲಿ ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ರೈಲ್ವೆ ಸ್ಟೇಷನ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿದೆ ಎಂದಿದ್ದಾರೆ.
ಸಚಿವರ ಭೇಟಿ ವೇಳೆ ಎಲ್ಲಾ ರೈಲು ನಿಲ್ದಾಣಗಳು ಪ್ರಮುಖ ತಾಣಗಳಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಾಗಿವೆ. ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣಗಳಾಗಲಿವೆ ಎಂಬುದನ್ನು ಗಮನಕ್ಕೆ ತರಲಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯ ಅಷ್ಟೊಂದು ಸಮಪರ್ಕವಾಗಿಲ್ಲದ ಕಾರಣ ಬಹಳಷ್ಟು ಜನರು ರೈಲ್ವೆಯನ್ನೇ ನಂಬಿಕೊಂಡಿದ್ದಾರೆ, ಹತ್ತಿರದ ನಗರಗಳಿಗೆ ಸಂಪರ್ಕ ಸಾಧಿಸಲು ರೈಲ್ವೆ ಪ್ರಮುಖ ಮಾಧ್ಯಮವಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಂದ ಸರ್ವೋತ್ತಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು ಈಗಾಗಲೇ ತಾವು ಸಲ್ಲಿಸಿದ್ದ ಮನವಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ರೈಲುಗಳ ನಿಲುಗಡೆಗಳ ಕುರಿತು ಕಾರ್ಯಸಾಧ್ಯತಾ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ತಕ್ಷಣ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
