
CHITRADURGA NEWS | 18 JULY 2025
ಚಿತ್ರದುರ್ಗ: ರೈತ ಸಂಘಗಳ ಸಮನ್ವಯ ಮತ್ತು ಅನುಷ್ಠಾನ ಸಮಿತಿ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ಎ.ಪಿ.ಎಂ.ಸಿ.ಯಿಂದ ಒನಕೆ ಓಬವ್ವ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಇಂದಿನ ಅಡಿಕೆ ಮಾರುಕಟ್ಟೆ | ಜುಲೈ 18 |ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

ಈ ವೇಳೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರಗಳಲ್ಲಿ ಕೇವಲ 900 ರೂ.ಗಳಿಗೆ ಸ್ಮಾರ್ಟ್ ಸಿಗುತ್ತದೆ. ಅದೇ ನಮ್ಮ ರಾಜ್ಯದಲ್ಲಿ ಹತ್ತು ಸಾವಿರ ರೂ.ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜನರ ತೆರಿಗೆ ಹಣದಲ್ಲಿ ದುಬಾರಿ ಸ್ಮಾರ್ಟ್ ಮೀಟರ್ ಖರೀಧಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು?
2003 ರಿಂದ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೆ ಬರುತ್ತಿವೆ. ತುಮಕೂರು, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ಹಾಸನ ಜಿಲ್ಲೆಗಳು ಅಭಿವೃದ್ದಿಯಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಚಿತ್ರದುರ್ಗ ಜಿಲ್ಲೆ ಇನ್ನು ಬರಗಾಲದಿಂದ ಹೊರಬರಲು ಆಗಿಲ್ಲ. ಸುಸ್ಥಿತಿಯಲ್ಲಿರುವ ಮೀಟರ್ ಗಳನ್ನು ಬಳಸಿ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿ ರೈತರನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸುವ ಕುತಂತ್ರ ನಡೆಸುತ್ತಿದೆ.
ಇದನ್ನೂ ಓದಿ: ಜು.22ರಂದು ಬೃಹತ್ ಉಚಿತ ಕಣ್ಣಿನ ತಪಾಸಣೆ
ಹಳ್ಳಿಗಳಲ್ಲಿ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲು ಬಿಡಬೇಡಿ. ಒಂದೊಮ್ಮೆ ಹಾಕಿದ್ದರೆ ಕಿತ್ತು ತನ್ನಿ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಿಂದಿರುಗಿಸೋಣ ಎಂದು ರೈತರನ್ನು ಜಾಗೃತಿಗೊಳಿಸಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, 45 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಪ್ರಕೃತಿ ವಿಕೋಪವಾದರೂ ಕೃಷಿಯನ್ನು ನಿಲ್ಲಿಸಿಲ್ಲ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಜಮೀನುಗಳನ್ನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡಲು ಹೊರಟಿರುವ ರಾಜ್ಯ ಸರ್ಕಾರ ಅವೈಜ್ಞಾನಿಕ ಕಾನೂನುಗಳನ್ನು ಜಾರಿಗೆ ತರುತ್ತಿದೆ.
ನೀರು, ವಿದ್ಯುತ್, ಬೆಂಬಲ ಬೆಲೆ ಕೇಳುತ್ತಿದ್ದೇವೆ. ಸ್ವಾಮಿನಾಥನ್ ವರದಿ ಜಾರಿಯಾಗುವತನಕ ಹೊಸ ಕಾಯಿದೆಗಳನ್ನು ಜಾರಿಗೆ ತರಬಾರದು. ಇಂಧನ ಹೊಂದಾಣಿಕೆ ಶುಲ್ಕವೆಂದು ಪ್ರತಿ ಯೂನಿಟ್‍ಗೆ 36 ಪೈಸೆ ವಿಧಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿ ರೈತರ ತಲೆ ಮೇಲೆ ಕಲ್ಲು ಹಾಕಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ರೈತರ ಬದುಕು ನಾಶವಾಗುತ್ತಿದೆ. ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್ ಅಳವಡಿಸಲು ಬಿಡಲ್ಲ. ಹಠ ಬಿಡದೆ ಹಾಕಿದರೆ ಸುಟ್ಟು ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಹೆಚ್ಚೆಸ್ವಿ ನುಡಿ ನಮನ | ಸಂಗೀತ ಕಟ್ಟಿ ಗಾಯನಕ್ಕೆ ತಲೆದೂಗಿದ ಕೋಟೆನಾಡು
ಈ ಸಂದರ್ಭದಲ್ಲಿ ರೈತ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಎಸ್.ಕೆ.ಕುಮಾರಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಬಿ.ಎಸ್.ರಂಗಸ್ವಾಮಿ, ಹೆಚ್.ಪ್ರಸನ್ನ, ಎಸ್.ಮಂಜುನಾಥ, ಕೆ.ರಾಜಪ್ಪ, ಎಸ್.ಗೋಪಾಲಪ್ಪ, ಜೆ.ತಿಮ್ಮಪ್ಪ, ಸಿದ್ದರಾಜು, ಆರ್.ಬಿ.ಲೋಕೇಶ್, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷೆ ಶಾಂತಮ್ಮ ಸೇರಿದಂತೆ ರೈತರು ಪಾಲ್ಗೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
