
CHITRADURGA NEWS | 18 JULY 2025
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಗುರುವಾರ ಸಂಜೆ ಭಾವಪರವಶ ತುಂಬಿದ ಮೌನಪ್ರಧಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇತ್ತೀಚೆಗೆ ಅಗಲಿದ ಹಿರಿಯ ಕವಿ, ಸಾಹಿತಿ, ನಾಟಕಗಾರದ ಹೆಚ್.ಎಸ್. ವೆಂಕಟೇಶಮೂರ್ತಿಯವರಿಗೆ ನುಡಿನಮನವನ್ನು ಅವರು ರಚಿಸಿರುವ ಭಾವಗೀತೆಗಳ ಮೂಲಕ ಸಲ್ಲಿಸಲಾಯಿತು.
ಇದನ್ನೂ ಓದಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ | ಜುಲೈ 21ರಂದು ಕೌನ್ಸಿಲಿಂಗ್

ಶ್ರೀ ಮುರುಘಾಮಠ, ದುರ್ಗದ ಸಿರಿ ಕಲಾ ಸಂಘ, ಹಂಸಜ್ಯೋತಿ ಟ್ರಸ್ಟ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್.ಎಸ್.ವಿ. ಅವರ ಗೀತೆಗಳನ್ನು ಆರಂಭಿಸುವುದಕ್ಕೂ ಮೊದಲು ಖ್ಯಾತ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಅವರು ಅಲ್ಲಮ ಪ್ರಭುಗಳ ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ ಅವು ಜಗಕಿಕ್ಕಿದ ಮಾಯೆ ಎನ್ನುವ ವಚನದೊಂದಿಗೆ ಗಾಯನ ಆರಂಭಿಸಿದರು.
ನಂತರದಲ್ಲಿ ಮುಕ್ತ ಧಾರವಾಹಿಯ ಮುಕ್ತ ಮುಕ್ತ ಶೀರ್ಷಿಕೆ ಗೀತೆ ಹಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದರು.
ದಾವಣಗೆರೆಯ ಡಾ.ಆನಂದ ಋಗ್ವೇದಿ ಮಾತನಾಡಿ, ಹೆಚ್.ಎಸ್.ವಿ. ಕೇವಲ ಕವನ ಬರೆಯಲಿಲ್ಲ. ನಾಟಕ, ಭಾವಗೀತೆ ಸೇರಿದಂತೆ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತಾವು ಬರೆದಂತೆ ಬದುಕಬೇಕೆಂಬ ಹಂಬಲ ಅವರಲ್ಲಿತ್ತು. ಅವರದು ಶ್ರೀಗಂಧವ್ರತದ ಬಾಳುವೆಯಾಗಿತ್ತು. ನಾನು ಅವರ ಸಿಸು ಮಗ ಎಂದ ಅವರು, ನನ್ನ ಅನೇಕ ಕಥೆ ಕವನಗಳನ್ನು ತಿದ್ದಿ ತೀಡಿ ಬರವಣೆಗೆಗೆ ಪ್ರೇರಣೆ ನೀಡಿದರಲ್ಲದೆ ಜನಪ್ರಿಯ ಕವಿಯಾಗಲು ಸಿನಿಮಾ ಗೀತೆಗಳನ್ನು ರಚಿಸಬೇಕೆಂದು ಹೇಳುತ್ತಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ: ಟಾಟಾಏಸ್ ಹರಿದು ಮೂರು ವರ್ಷದ ಮಗು ಮೃತ | ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿ ಘಟನೆ
ಹಿರಿಯ ಉಪನ್ಯಾಸಕಿ ಆರ್.ತಾರಣಿ ಶುಭದಾಯಿನಿ ಮಾತನಾಡಿ, ಈ ಸಮಾಗಮ ಸಂಗೀತ ಸಾಹಿತ್ಯದ ಅಪೂರ್ವ ಸಂಗಮ. ಹೆಚ್.ಎಸ್.ವಿ. ಅವರ ಆತ್ಮ ಇಲ್ಲಿ ಎಲ್ಲಿಯೋ ಸುಳಿದಾಡುತ್ತಿರಬಹುದು ಏನಿಸುತ್ತದೆ. ಚಿತ್ರದುರ್ಗಕ್ಕೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ನನ್ನ ಪದ್ಯಗಳನ್ನು ನೋಡಿ ಬಹುವಾಗಿ ಮೆಚ್ಚಿಕೊಂಡು ಹರಸಿದ್ದರು. ಕವಿಗೆ ಎಂದಿಗೂ ವಿದಾಯ ಎನ್ನುವುದಿಲ್ಲ. ಅವರು ತಮ್ಮ ಕಾವ್ಯ ಸಾಹಿತ್ಯದೊಂದಿಗೆ ಸದಾ ಜೀವಂತವಾಗಿರುತ್ತಾರೆ. ಸಮಗ್ರ ದೃಷ್ಟಿಕೋನ ವ್ಯಕ್ತಿತ್ವವುಳ್ಳ ಹೆಚ್.ಎಸ್.ವಿ. ಅವರೊಬ್ಬ ಜೀವಕಾರುಣ್ಯದ ಕವಿಯಾಗಿದ್ದರೆಂದರು.
ರಂಗಕರ್ಮಿ ಬೆಂಗಳೂರಿನ ಗುಂಡಣ್ಣ ಮಾತನಾಡಿ, ಹೆಚ್.ಎಸ್.ವಿ. ಮಿತಭಾಷಿ, ಭಾವಕವಿ, ವಿನಯವಂತಿಕೆ ಅವರಲ್ಲಿತ್ತು. ಅವರು ಗದ್ಯ ಪದ್ಯದ ಜತೆಗೆ ನಾಟಕಗಳನ್ನು ರಚಿಸಿದ್ದಾರೆ. ಅವೆಲ್ಲ ಓದುಗರಿಗೆ ಅಮೂಲ್ಯ ಕೊಡುಗೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಹೆಚ್ಚೆಸ್ವಿ ಅವರ ಕಾವ್ಯದಲ್ಲಿ ಭವ್ಯ ದಿವ್ಯ ಇದೆ ಅಂತ ಹೇಳುವುದಿಲ್ಲ ಅಲ್ಲಿ ತಾಯಿತನ ಇದೆ. ಅಂತಹ ಭಾವಸಂಪತ್ತಿನ ನೆನಪಿನ ಸುರಳಿ ಶ್ರೀಮಠದಲ್ಲಿ ಅನಾವರಣಗೊಂಡಿದೆ. ಇಂತಹ ಅಪರೂಪದ ಚೇತನಗಳ ಸ್ಮರಣೆ ಅತ್ಯಗತ್ಯ ಎಂದು ನುಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕಾರ್ಯಕ್ರಮ ಸಂಘಟಕರೂ ಹಾಗೂ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಪ್ರಾಸ್ತಾವಿಕವಾಗಿ, ಮಮತಾ ಅರಸೀಕೆರೆ ಮಾತನಾಡಿದರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಡಾ.ಬಿ.ರಾಜಶೇಖರಪ್ಪ, ಅನಂತರೆಡ್ಡಿ, ಸೈಯದ್ ಇಸಾಕ್, ಕೆ.ಎಂ. ವೀರೇಶ್, ಡಿ.ಎಸ್. ಸುರೇಶ್‌ಬಾಬು, ಮುರುಳಿ, ಟಿ.ಕೆ. ಬಸವರಾಜ್, ಎಸ್.ವಿ. ಗುರುಮೂರ್ತಿ, ಯಶೋದ ರಾಜಶೇಖರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
