ಮುಖ್ಯ ಸುದ್ದಿ
ಲೋಕಸಭೆ ಚುನಾವಣೆಗೆ ದಿನಗಣನೆ | ಚಿತ್ರದುರ್ಗದಲ್ಲಿ ಶುರುವಾಯ್ತು ಟಿಕೇಟ್ ಅಂದರ್-ಬಾಹರ್ ಆಟ

CHITRADURGA NEWS | 22 FEBRUARY 2024
ಚಿತ್ರದುರ್ಗ: ಇನ್ನೇನು ವಾರ-ಒಪ್ಪತ್ತಿನಲ್ಲಿ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿ ನೀತಿ ಸಂಹಿತೆ ಜಾರಿ ಮಾಡಲಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀತಿ ಸಂಹಿತೆ ಜಾರಿ ಆಗುವುದರೊಳಗೆ ಆಗಬೇಕಾದ ತುರ್ತು ಕೆಲಸಗಳನ್ನು ಸರ್ಕಾರಗಳ ಮಟ್ಟದಲ್ಲಿ ತರಾತುರಿಯಲ್ಲಿ ಮುಗಿಸುವ ಪ್ರಯತ್ನದಲ್ಲಿವೆ.

ಈ ನಡುವೆ ಎಲ್ಲೆಡೆ ಟಿಕೇಟ್ ಆಕಾಂಕ್ಷಿಗಳ ಲಾಭಿ, ಒತ್ತಡ, ಬೇರೆ ಬೇರೆ ವಿಷಯಗಳನ್ನಿಟ್ಟು ಪಕ್ಷದ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ರೀತಿಯ ಕಾರ್ಯತಂತ್ರಗಳು ಜೋರಾಗಿ ನಡೆಯುತ್ತಿವೆ.
ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ

ಆದರೆ, ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಈ ಆಟ ಕೊಂಚ ಬೇರೆ ಆಯಾಮ ಪಡೆದುಕೊಂಡಿದೆ. ಹೊರಗಿನವರು, ಒಳಗಿನವರು ಎನ್ನುವ ಅಂಶ ಇಲ್ಲಿ ಬಿರುಸಿನ ಚರ್ಚೆಯಾಗಿದೆ.
ಕಳೆದ ಆರು ತಿಂಗಳಿಂದಲೇ ಹೊರಗಿನವರಿಗೆ ಯಾವ ಕಾರಣಕ್ಕೂ ಟಿಕೇಟ್ ಕೊಡಬಾರದು ಎನ್ನುವ ಕೂಗು ಜಿಲ್ಲೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಕಾಂಗ್ರೆಸ್‍ನ ಪ್ರಬಲ ಆಕಾಂಕ್ಷಿ, 2009ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಇಂಥದ್ದೊಂದು ಚರ್ಚೆಗೆ ತುಸು ವ್ಯಾಪಕತೆ ಕೊಟ್ಟಿದ್ದಾರೆ.
ಇದನ್ನೂ ಓದಿ: ವಾಣಿವಿಲಾಸ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಮೀಕ್ಷೆ
ಕಾಂಗ್ರೆಸ್ಸಿನಲ್ಲಿ ಶುರುವಾದ ಈ ಕಿಚ್ಚು ಕ್ರಮೇಣ ಬಿಜೆಪಿಯನ್ನೂ ಆಕ್ರಮಿಸಿಕೊಂಡಿದೆ. ಖುದ್ದು ಲೋಕಸಭಾ ಸದಸ್ಯ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿ, ಸ್ಥಳೀಯರು ಟಿಕೇಟ್ ಕೇಳುವುದನ್ನು ಗೌರವಿಸುತ್ತೇವೆ. ಪಕ್ಷ ಸ್ಥಳೀಯರಿಗೆ ಟಿಕೇಟ್ ಕೊಟ್ಟರೆ ಓಡಾಡಿ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಇದು ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೇಟ್‍ಗೆ ಕ್ಷೇತ್ರದ ಹೊರಗಿನ ಆಕಾಂಕ್ಷಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಂದು ಹಂತದಲ್ಲಿ ಪಕ್ಷಗಳ ಹೈಕಮಾಂಡ್‍ಗಳಿಗೂ ಈ ಅಂದರ್-ಬಾಹರ್ ಆಟವನ್ನು ನಿಯಂತ್ರಣ ಮಾಡುವ ಸವಾಲು ಎದುರಾಗಿದೆ.
ಈ ಕಾರಣಕ್ಕೆ ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ, ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿರಲಿಲ್ಲವೇ, ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿಲ್ಲವೇ, ರಾಹುಲ್ ಗಾಂಧಿ ಕೇರಳಾದಲ್ಲಿ ನಿಂತು ಗೆದ್ದಿಲ್ಲವೇ, ನಿರ್ಮಲಾ ಸೀತಾರಾಮನ್ ಯಾವ ರಾಜ್ಯದವರು ಎಂಬಿತ್ಯಾದಿ ಕಾರಣಗಳ ಸರಮಾಲೆಯೇ ಹರಿದು ಬರುತ್ತಿದೆ.
ಇದನ್ನೂ ಓದಿ: ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಒಂದು ತಿಂಗಳು ನೀರು
ಕಳೆದ ಚುನಾವಣೆಯಲ್ಲೂ ಸ್ಥಳೀಯರಿಗೆ ಟಿಕೇಟ್ ಕೊಡಬೇಕು ಎಂಬ ಬಲವಾದ ವಾದವಿದ್ದರೂ, ಪಕ್ಷಗಳ ಹೈಕಮಾಂಡ್ ಅಷ್ಟಾಗಿ ಗಮನಹರಿಸದೇ ಧಿಟ್ಟ ನಿರ್ಧಾರ ತೆಗೆದುಕೊಂಡು ಹೊರಗಿನವರಿಗೆ ಮಣೆ ಹಾಕಿತು. ಆದರೆ, ಈ ಬಾರಿ ಈ ಕೂಗು ಮತ್ತಷ್ಟು ವ್ಯಾಪಕತೆ ಪಡೆದುಕೊಂಡಿದೆ.
ಸ್ಥಳೀಯರು-ಹೊರಗಿನವರು ಎನ್ನುವ ವಾದವೇ ಒಂದಿಷ್ಟು ಮತಗಳನ್ನು ಚದುರಿಸುವ ತಂತ್ರವಾಗಿ ಹೋಗಿದೆ. ಇದರಿಂದ ಯಾವ ಪಕ್ಷ ಬೇಕಾದರೂ ಮುಗ್ಗರಿಸಬಹುದು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.
ಸದ್ಯ ಕಾಂಗ್ರೆಸ್‍ನಲ್ಲಿ ಎರಡು ಡಜನ್ ಆಕಾಂಕ್ಷಿಗಳಿದ್ದಾರೆ, ಬಿಜೆಪಿಯಲ್ಲಿ ಅರ್ಧ ಡಜನ್ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಸ್ಥಳೀಯರು, ಹೊರಗಿನವರು ಎರಡೂ ಇದ್ದಾರೆ. ಮುಂದೆ ಈ ವಾದ ಯಾವ ಹಂತ ತಲುಪಲಿದೆ ಎನ್ನುವುದನ್ನೂ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 1 ಲಕ್ಷ ಉದ್ಯೋಗಗಳಿಗೆ ಬೃಹತ್ ಉದ್ಯೋಗ ಮೇಳ
