CHITRADURGA NEWS | 17 JANUARY 2026
ಚಿತ್ರದುರ್ಗ: ಜಿಲ್ಲೆಯ ರೈತರು, ಕಾರ್ಮಿಕರು, ಶ್ರಮಿಕರ ದಶಕಗಳ ಕನಸು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡು 16 ವರ್ಷ ಪೂರೈಸುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ಬೇಸರದ ವಿಷಯ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.
ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ, ಮಕ್ಕಳ ಸಂತೆ | ಸಂಸದ ಬಸವರಾಜ ಬೊಮ್ಮಾಯಿ ಭಾಗೀ
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಜಾರಿಯಿಂದ ಲಕ್ಷಾಂತರ ಜನರ ಬದುಕು ಹಸನುಗೊಳ್ಳಲಿದೆ. ಆದರೆ, ಯೋಜನೆ ಜಾರಿ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಧ್ಯೆ ಇರುವ ಕಂದಕ ಬಯಲುಸೀಮೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಂಬಂಧ ಕೊಟ್ಟ ಮಾತು ಈಡೇರಿಸಬೇಕಿದೆ. ಬಜೆಟ್‌ನಲ್ಲಿ 5,300 ಕೋಟಿ ರೂ. ಯೋಜನೆಗೆ ಘೋಷಿಸಿದ್ದರೂ ಈವರೆಗೆ ಬಿಡುಗಡೆ ಮಾಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಷ್ಟ್ರದ ಬಹುದೊಡ್ಡ ಯೋಜನೆ ಆಗಿರುವ ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆ. 5 ರಿಂದ 21 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕೊಟ್ಟ ಮಾತಿನಂತೆ ಹಾಗೂ ಬಜೆಟ್ ಘೋಷಿಸಿದಂತೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಕಾಮಗಾರಿ ವೇಗ ಪಡೆದುಕೊಳ್ಳುತ್ತಿತ್ತು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 17 | ಹತ್ತಿ ರೇಟ್ ಎಷ್ಟಿದೆ?
ಕಾಮಗಾರಿ ಗುತ್ತಿಗೆ ಪಡೆದಿರುವವರು ತೀವ್ರ ಸಂಕಷ್ಟದಲ್ಲಿದ್ದೂ ಕೆಲಸ ಮುಂದುವರಿಸುತ್ತಿದ್ದಾರೆ. ಹಣ ಬಿಡುಗಡೆ ಮಾಡುವುದು ಯೋಜನೆ ತ್ವರಿತಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕೆಂದು ತಿಳಿಸಿದರು.
ಫೆಬ್ರವರಿ ತಿಂಗಳೊಳಗೆ ಪ್ರಾಯೋಗಿಕವಾಗಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ವಿಷಯವೇ ರೋಮಾಂಚನ. ಈ ಮೂಲಕ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನಡೆಸಿದ ಚಳವಳಿ ಸಾರ್ಥಕತೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರದಲ್ಲಿ ಮಂಡಿಸುವ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. ಈ ಮೂಲಕ ಜಿಲ್ಲೆಯ ಜನರಿಗೆ ಕೊಟ್ಟ ಮಾತನ್ನು ಎರಡು ಸರ್ಕಾರ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರೊ.ರವಿವರ್ಮಕುಮಾರ್ ಮಾತನಾಡಿ, ನ್ಯಾಯಾಲಯದ ಮೆಟ್ಟೀಲು ಏರಿ ಹೇಮಾವತಿ ನೀರನ್ನು ಶಿರಾಕ್ಕೆ ಕೊಡಿಸಿದ್ದೇನೆ. ಅದೇ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಬಹುದೇ ಎಂಬ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೇಕಾಗಿದೆ ಎಂದರು.
ಇದನ್ನೂ ಓದಿ: ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದ 28 ಸಂಸದರು ಲೋಕಸಭೆಯಲ್ಲಿ ಯೋಜನೆ ಕುರಿತು ಧ್ವನಿಯೆತ್ತಿದರೆ 5,300 ಕೋಟಿ ರೂ. ಬಿಡುಗಡೆ ಖಚಿತ. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ತರುವ ರೀತಿ ಹೋರಾಟ ರೂಪಿಸಬೇಕು. ನನಗೆ 75, ಕೋದಂಡರಾಮಯ್ಯ ಅವರಿಗೆ 86. ಈ ವಯಸ್ಸಿನಲ್ಲೂ ನಾವೇ ಹೋರಾಟ ಮಾಡಬೇಕಾ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ, ಮುಖಂಡರಾದ ಆರ್.ಶೇಷಣ್ಣಕುಮಾರ್, ಡಿ.ದುರುಗೇಶ್, ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ರಾಘವೇಂದ್ರ ನಾಯ್ಕ, ಕೂನಿಕೆರೆ ರಾಮಣ್ಣ, ಸಂಪತ್‌ಕುಮಾರ್, ಟಿ.ಶಫಿಉಲ್ಲಾ, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್ ಇತರರು.
ರೈಲಿನಲ್ಲಿ ಓಡಾಡುವಾಸೆ
1996ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ವೇಳೆ ಕೊಟ್ಟ ಮಾತಿನಂತೆ ಭದ್ರಾ ಮೇಲ್ದಂಡೆ ಮತ್ತು ನೇರ ರೈಲು ಮಾರ್ಗ ಯೋಜನೆಗಾಗಿ ಶ್ರಮಿಸಿದ್ದೇನೆ. ಆದರೆ, 2004ರಲ್ಲಿ ಯೋಜನೆಗೆ ಮಂಜೂರಾತಿ ದೊರೆತ ಬಳಿಕ ನನ್ನನ್ನು ಎಂಪಿ ಚುನಾವಣೆಯಲ್ಲಿ ಸೋಲಿಸಿದ್ದು ನೋವು ತರಿಸಿತ್ತು. ಈ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿದಿದ್ದೇ. ಆದರೆ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇ ಎಂದು ಪಿ.ಕೋದಂಡರಾಮಯ್ಯ ಹೇಳಿದರು. ಈಗ ಕಾಲುವೆಯಲ್ಲಿ ಭದ್ರಾ ನೀರು ಹರಿಯುವ ದೃಶ್ಯ ಕಣ್ಣಾರೆ ಕಂಡು ಸಂಭ್ರಮಿಸಿದ್ದೇನೆ. ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಂಡರೇ ರೈಲಿನಲ್ಲಿ ಒಮ್ಮೆ ಓಡಾಡಿದರೆ ಜೀವನ ಸಾರ್ಥಕ ಎಂದು ಭಾವುಕರಾದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
