CHITRADURGA NEWS | 06 SEPTEMBER 2026
ಚಿತ್ರದುರ್ಗ: ಕಾಂಗ್ರೆಸ್ ಸಿದ್ಧಾಂತ ಹಾಗೂ ಯುವ ಸಂಘಟನೆಗಳ ಮೂಲಕ ಯುವಜನತೆಯನ್ನು ಬಲಪಡಿಸಿ, ಪಕ್ಷದ ತತ್ವಗಳನ್ನು ತಳಮಟ್ಟಕ್ಕೆ ತಲುಪಿಸಲು ಯುವ ಕಾಂಗ್ರೆಸ್ ಆದ್ಯತೆ ನೀಡಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದರು.
ಇದನ್ನೂ ಓದಿ: ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ | ಅಂಚೆ ವಿಭಾಗದಿಂದ ಆಹ್ವಾನ
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಎಂ. ನಿಶ್ಚಿತ್ (ಚಿಂಟು) ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಯುವಜನತೆಯನ್ನು ಒಗ್ಗೂಡಿಸುವ ಉದ್ದೇಶದಿಂದ ‘ಭಾರತ ಜೋಡೋ ಸಂಘಟನೆ’ ರೂಪಿಸಲಾಗಿದ್ದು, ರಾಹುಲ್ ಗಾಂಧಿ ಅವರ ಪಾದಯಾತ್ರೆಯ ಆಶಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಯುವ ಸಂಘಟನೆಗಳನ್ನು ರಚಿಸಲಾಗುತ್ತಿದೆ ಎಂದರು.
ಪ್ರತಿಯೊಂದು ಯುವ ಸಂಘಕ್ಕೆ ವಾರ್ಷಿಕ ₹10 ಲಕ್ಷ ನೆರವು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಅನುದಾನವನ್ನು ಕ್ರೀಡಾ ಚಟುವಟಿಕೆಗಳು, ಗಿಡ ನೆಡುವಿಕೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಉಲ್ಲಾಸ್ ತಿಳಿಸಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ಬಗ್ಗೆ ಹಗುರ ಮಾತು | ಕೃಷ್ಣಭೈರೇಗೌಡರ ಕ್ಷಮೆಗೆ ಆಗ್ರಹ
‘ಭಾರತ ಜೋಡೋ ಸಂಘಟನೆ’ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸಲು ಹಾಗೂ ಪಕ್ಷದ ಬೆಂಬಲಿಗರನ್ನು ಸಂಘಟಿಸಲು ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು. ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಸಾಮಾನ್ಯ ಕಾರ್ಯಕರ್ತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಯುವಕರಿಗೆ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದರು.
ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಿಶ್ಚಿತ್ ಮಾತನಾಡಿ, ತಮ್ಮ ಮೇಲೆ ನಂಬಿಕೆಯಿಟ್ಟು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಯುವ ಕಾಂಗ್ರೆಸ್ ಹಾಗೂ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಅವರು ತಮ್ಮಲ್ಲಿರುವ ಯುವಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್ ಮಾತನಾಡಿ, ಸಂವಿಧಾನದ ರಕ್ಷಣೆ, ಯುವಜನತೆಯ ರಾಜಕೀಯ ಭಾಗವಹಿಸುವಿಕೆ ಹಾಗೂ ಪಕ್ಷ ಸಂಘಟನೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ನಿಶ್ಚಿತ್ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.
ಇದನ್ನೂ ಓದಿ: ಬಯಲುಸೀಮೆಯ ಬರದ ಹಣೆಪಟ್ಟಿ ಅಳಿಸುವತ್ತ ಭದ್ರೆ ಹೆಜ್ಜೆ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ವಹಿಸಿದ ಪಾತ್ರವನ್ನು ಸ್ಮರಿಸಿದ ಅವರು, ಸಂವಿಧಾನವು ವಿವಿಧ ಧರ್ಮ, ಭಾಷೆ ಹಾಗೂ ಸಮುದಾಯಗಳ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದ ಜತೆಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮಧುಗೌಡ, ವೆಂಕಟೇಶ್, ದಾದಾಪೀರ್, ಲಕ್ಷ್ಮೀಕಾಂತ್, ರಘುಗೌಡ, ದರ್ಶನ್ ಗೌಡ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

