CHITRADURGA NEWS | 06 SEPTEMBER 2026
ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ₹22,11,733.79 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ. ನಿಶಾನಿ ಜಯಣ್ಣ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ರೈತರ ದಶಕಗಳ ಕನಸು ನನಸು | ಚಿತ್ರದುರ್ಗದತ್ತ ಮುಖ ಮಾಡಿದ ಭದ್ರೆ
ನಗರದ ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಂಘದ 109ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, 1912ರ ಆಗಸ್ಟ್ 22ರಂದು ನೋಂದಣಿಯಾದ ಸಂಘವು ಕಳೆದ 109 ವರ್ಷಗಳಿಂದ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ. ಸದಸ್ಯರ ಸಹಕಾರ ಹಾಗೂ ಸಲಹೆಗಳಿಂದ ಸಂಘವು ಪ್ರಗತಿಯತ್ತ ಸಾಗುತ್ತಿದೆ ಎಂದರು.
2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘವು ₹66.13 ಲಕ್ಷ ಪಾವತಿಯಾದ ಷೇರು ಬಂಡವಾಳ ಹೊಂದಿದ್ದು, 2,601 ಸದಸ್ಯರನ್ನು ಹೊಂದಿದೆ. ಆಪದ್ಧನ ನಿಧಿಯಲ್ಲಿ ₹25.92 ಲಕ್ಷ ಹಾಗೂ ಇತರೆ ನಿಧಿಗಳಲ್ಲಿ ₹80.06 ಲಕ್ಷ ಇದೆ. ಕಳೆದ ಸಾಲಿನಲ್ಲಿ ₹5.02 ಕೋಟಿ ಇದ್ದ ಠೇವಣಿ ಪ್ರಸಕ್ತ ಸಾಲಿನಲ್ಲಿ ₹5.30 ಕೋಟಿಗೆ ಏರಿಕೆಯಾಗಿದ್ದು, ₹27.59 ಲಕ್ಷದಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಿಂದ ಬರಬೇಕಾದ ಸಾಲದ ಬಾಕಿ ₹3.07 ಕೋಟಿಯಿಂದ ₹4.19 ಕೋಟಿಗೆ ಏರಿಕೆಯಾಗಿದ್ದು, ₹1.12 ಕೋಟಿಯಷ್ಟು ಸಾಲ ವೃದ್ಧಿಯಾಗಿದೆ. ಈ ಪೈಕಿ ₹7.45 ಲಕ್ಷ, ಅಂದರೆ ಶೇ.1.78ರಷ್ಟು ಸಾಲ ಸುಸ್ತಿಯಲ್ಲಿದೆ ಎಂದು ತಿಳಿಸಿದರು. ಹಿರಿಯ ಸದಸ್ಯರಿಗೆ ಠೇವಣಿ ಮೇಲೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಪೌರ ಕಾರ್ಮಿಕರ ಬಗ್ಗೆ ಹಗುರ ಮಾತು | ಕೃಷ್ಣಭೈರೇಗೌಡರ ಕ್ಷಮೆಗೆ ಆಗ್ರಹ
ಸಂಘದ ನಿವ್ವಳ ಲಾಭವನ್ನು ಸಹಕಾರಿ ಕಾಯ್ದೆ, ನಿಯಮ ಹಾಗೂ ಸಂಘದ ಬೈಲಾ ಅನ್ವಯ ವಿಲೇವಾರಿ ಮಾಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ. ಕಳೆದ ಮಹಾಸಭೆಯ ತೀರ್ಮಾನದಂತೆ ಒಂದು ಷೇರಿನ ಮೌಲ್ಯವನ್ನು ₹5,000ಕ್ಕೆ ಹೆಚ್ಚಿಸಲು ಅನುಮತಿ ದೊರೆತಿದ್ದು, ಸದಸ್ಯರು ವ್ಯತ್ಯಾಸದ ಷೇರು ಹಣವನ್ನು ಡಿಸೆಂಬರ್ 31, 2026ರೊಳಗೆ ಜಮಾ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಹೈಟೆಕ್ ಸಹಕಾರ ಸಮುದಾಯ ಭವನಕ್ಕೆ ₹3 ಕೋಟಿ ಅಗತ್ಯ
ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಸಹಕಾರ ಸಮುದಾಯ ಭವನದ ಕಾಮಗಾರಿಗೆ ಈಗಾಗಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಿಂದ ₹1 ಕೋಟಿ ಸಾಲ ಪಡೆಯಲಾಗಿದೆ. ಭವನದ ನಿರ್ಮಾಣ ಪೂರ್ಣಗೊಳಿಸಲು ಇನ್ನೂ ₹2 ಕೋಟಿ ಅಗತ್ಯವಿದ್ದು, ಇದಕ್ಕೆ ಸದಸ್ಯರ ಅನುಮೋದನೆ ಪಡೆಯಲಾಯಿತು.
ಭವನದಲ್ಲಿ ಲಿಫ್ಟ್, ಸೆಂಟ್ರಲ್ ಎಸಿ ಹಾಗೂ ಸಂಘದ ಆದಾಯ ಹೆಚ್ಚಿಸುವ ಉದ್ದೇಶದಿಂದ ಸೋಲಾರ್ ವ್ಯವಸ್ಥೆ ಅಳವಡಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಂಘದ ಸದಸ್ಯರು ತಮ್ಮ ಷೇರು ಡಿವಿಡೆಂಡ್ ಮೊತ್ತವನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಲು ಸಮ್ಮತಿಸಿದರು.
ಇದನ್ನೂ ಓದಿ: ಯುವಕರ ಸಂಘಟನೆಗೆ ಆದ್ಯತೆ | ಭಾರತ ಜೋಡೋ ಸಂಘಟನೆ ಮೂಲಕ ಪಕ್ಷ ಬಲವರ್ಧನೆ
2025-26ನೇ ಸಾಲಿನಲ್ಲಿ ಸಂಘದ 19 ಸದಸ್ಯರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಸದಸ್ಯರ ಖಾತೆಯಿಂದ ಒಟ್ಟು ₹57,000 ಪಾವತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಸಂಘದ ಎಲ್ಲ ಸದಸ್ಯರು ಕನಿಷ್ಠ ವ್ಯವಹಾರ ನಡೆಸುವಂತೆ ಅಧ್ಯಕ್ಷರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಹಾಗೂ ಸಂಘದ ಸದಸ್ಯರ ಮಕ್ಕಳ ಪೈಕಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ, ನಿರ್ದೇಶಕರಾದ ಸಿ.ಹೆಚ್. ಸೂರ್ಯಪ್ರಕಾಶ್, ಬಿ.ವಿ. ಶ್ರೀನಿವಾಸಮೂರ್ತಿ, ಲಿಯಾಕತ್ ಅಲಿ ಖಾನ್, ಸಾಧಿಕ್ ಭಾಷಾ, ಜಿ. ಸುರೇಶ್ ಕುಮಾರ್ ಭಾಫ್ನಾ, ಜೆ.ಆರ್. ಹರೀಶ್ ಬಾಬು, ನಿಶಾನಿ ದಶರತ್, ಓ. ತಿಪ್ಪೇಸ್ವಾಮಿ, ಚಂದ್ರಪ್ಪ, ಎ. ಚಂಪಕ, ಸರ್ಕಾರಿ ನಾಮನಿರ್ದೇಶಿತ ಪಿ. ಷಬ್ಬೀರ್, ವೃತ್ತಿಪರ ನಿರ್ದೇಶಕ ಕೆ. ದೊರೆಸ್ವಾಮಿ, ಸಿ.ಕೆ. ಸತ್ಯಮೂರ್ತಿ, ಆರ್ಥಿಕ ಸಲಹೆಗಾರ ಮೊಹಮ್ಮದ್ ನಯೀಮ್ ಹಾಗೂ ಪ್ರಭಾರ ವ್ಯವಸ್ಥಾಪಕ ಮಂಜುನಾಥ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

