
CHITRADURGA NEWS | 3 APRIL 2024
ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಬುಧವಾರ ಭೇಟಿ ನೀಡಿದರು. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಹಾಗೂ ಶಾಸಕ ಎಂ.ಚಂದ್ರಪ್ಪ ಜೊತೆ ಸೌಹಾರ್ದ ಮಾತುಕತೆ ನಡೆಸಿದರು.
ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಗೋವಿಂದ ಎಂ.ಕಾರಜೋಳ, ‘ನಾನು ಚಂದ್ರಪ್ಪ ಒಂದೇ ತಾಟಿನಲ್ಲಿ ಉಂಡವರು. ಕೆಲ ಪರಿಸ್ಥಿತಿ ಹಾಗೂ ಆವೇಶದಲ್ಲಿ ಕೆಲ ಮಾತುಗಳು ಬರುತ್ತವೆ. ಅವನ್ನು ಯಾರೂ ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ’ ಎಂದು ಮನವಿ ಮಾಡಿದರು.
‘ಸಹೋದರ ಚಂದ್ರಪ್ಪ ಸುಪುತ್ರ ರಘುಚಂದನ್ ಯುವಕ, ಆಶಾವಾದಿ. ಸತತ ಹೋರಾಟ ಮಾಡಿಕೊಂಡು ಬಂದವರು. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾವುದೋ ಲೆಕ್ಕಾಚಾರದಲ್ಲಿ ನನಗೆ ಟಿಕೆಟ್ ನೀಡಿದರು. ಆದರೆ, ನಾನು ಬೇಡ ಎಂದು ಹೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ನಾಯಕರು, ನಾನು ಯಾರ ಮಾತು ಮೀರುವುದಿಲ್ಲವೋ ಅವರು ನಿಲ್ಲಲೇಬೇಕು ಎಂದಾಗ ಅನಿವಾರ್ಯವಾಗಿ ಬಂದು ನಾಮಪತ್ರ ಸಲ್ಲಿಸಿದ್ದೇನೆ’ ಎಂದರು.

ಕ್ಲಿಕ್ ಮಾಡಿ ಓದಿ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ
‘ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಶಾಸಕರಾದ ಎಂ.ಚಂದ್ರಪ್ಪ ಹಾಗೂ ಅವರ ಪುತ್ರ ರಘುಚಂದನ್ ಇಬ್ಬರೂ ಬೆಂಬಲವಾಗಿ ನಿಂತಿದ್ದಾರೆ’ ಎಂದು ತಿಳಿಸಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಮಾತು ಕೊಟ್ಟಿದ್ದೇವೆ. ಜೀವ ಹೋದರೂ ಮಾತಿಗೆ ತಪ್ಪಲ್ಲ. ನಮ್ಮ ಮಾತಿಗೆ ಬದ್ಧರಾಗಿ ಗೋವಿಂದ ಎಂ.ಕಾರಜೋಳ ಅವರ ಪರವಾಗಿ ಚುನಾವಣೆ ನಡೆಸುತ್ತೇವೆ’ ಎಂದರು.
ಕ್ಲಿಕ್ ಮಾಡಿ ಓದಿ: ಅಖಾಡಕ್ಕೆ ರಾಜಾಹುಲಿ ಎಂಟ್ರಿ | ಶಮನವಾಯ್ತು ಚಿತ್ರದುರ್ಗ ಬಿಜೆಪಿ ಬಂಡಾಯ
‘ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುತ್ತೇವೆ. ಹೊರಗೊಂದು, ಒಳಗೊಂದು ಮಾಡುವುದಿಲ್ಲ. ಅವರು ಹೇಳಿದ ಕಡೆಗಳಲ್ಲಿ ಕೆಲಸ ಮಾಡುತ್ತೇನೆ. ನಾನು ರಾಜ್ಯಸಭೆ, ಪರಿಷತ್ ಆಸೆ ಇಟ್ಟುಕೊಂಡಿಲ್ಲ. ಜನರ ನಡುವೆ ಬೆಳೆದವರು. ಚುನಾವಣೆಯ ಮೂಲಕವೇ ರಾಜಕಾರಣ ಮಾಡುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮತ್ತಿತರರಿದ್ದರು.
ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಅನಿವಾರ್ಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನನ್ನ ಮಗನಿಗೆ ಇನ್ನೂ ವಯಸ್ಸಿದೆ. ಹಾಗಾಗಿ ಈ ಚುನಾವಣೆಯಲ್ಲಿ ಮೋದಿ ಗೆಲುವಿಗಾಗಿ ಕೆಲಸ ಮಾಡುತ್ತೇವೆ.
| ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
