
CHITRADURGA NEWS | 22 NOVEMBER 2025
ಚಿತ್ರದುರ್ಗ: ಕನ್ನಡ ಅನ್ನ ಕೊಡುವ ಮತ್ತು ಬದುಕು ನೀಡುವ ಭಾಷೆಯಾಗಬೇಕಾದರೆ ಪ್ರಭುತ್ವದ ಪಾತ್ರ ಅತ್ಯಂತ ಮಹತ್ವವಾದುದು ಎಂದು ಸಾಹಿತಿ ಜಡೇಕುಂಟೆ ಮಂಜುನಾಥ್ ಹೇಳಿದರು.
ಇದನ್ನೂ ಓದಿ: RTO ಕಚೇರಿ ಪ್ರಕರಣಗಳಲ್ಲಿ ಶೇ.50 ರಿಯಾಯಿತಿ | ಡಿಸೆಂಬರ್ 12 ಕೊನೆಯ ದಿನ
ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ನವೆಂಬರ್ ಬಂತೆಂದರೆ ಸಾಕು ಕನ್ನಡದ ಜಾಗೃತಿ ಪ್ರತಿಯೊಬ್ಬರಲ್ಲೂ ಪುಟಿದೇಳುತ್ತದೆ. ಇದಾಗ ಬಾರದು ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಮನೆ ಮಾತಾಗಿರಬೇಕು ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಮಾತನಾಡುವ ಜನ ನಾಲ್ಕಾರು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರು. ಆಗ ಆಲೂರು ವೆಂಕಟರಾಯರಂತಹ ಕನ್ನಡದ ಪಿತಾಮಹರು ಹೋರಾಟಕ್ಕೆ ಚಾಲನೆ ನೀಡಿ ಐದು ದಶಕಗಳಿಗೂ ಹೆಚ್ಚು ಕಾಲ ಹೋರಾಟ ಮಾಡಿ ಮೈಸೂರು ರಾಜ್ಯ ಸ್ಥಾಪನೆಗೆ ಕಾರಣರಾದರು. ಇದಾದ ನಂತರ ದೇವರಾಜು ಅರಸು ಮುಖ್ಯಮಂತ್ರಿ ಆದ ನಂತರ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಜಾಗತೀಕರಣದ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಲಾರಂಭಿಸಿದ ಕಾಲಘಟ್ಟದಲ್ಲಿ ಇಂಗ್ಲೀಷ್ ಕಲಿತವರಿಗೆ ಹೆಚ್ಚು ಉದ್ಯೋಗ ಸಿಗಲಾರಂಭಿಸಿದಾಗ ಕನ್ನಡದ ಅಭಿಮಾನದ ಪ್ರಶ್ನೆ ಅನ್ನ ಕೊಡುವ ಪ್ರಶ್ನೆಯಾಗಿ ಜನರ ಮನಸ್ಸಿನಲ್ಲಿ ಉಳಿದು ಹೋಯಿತು. ಕನ್ನಡ ಶಾಲೆಗಳು ಇಂದು ಅವನತಿಯ ಹಾದಿಯನ್ನು ಹಿಡಿದಿದೆ. ಇಂಗ್ಲೀಷ್ ವ್ಯಾಮೋಹ ಎಲ್ಲೆಡೆ ಮನೆ ಮಾಡಿದೆ ಎಂದರು.
ಕನ್ನಡತನವನ್ನು ಉಳಿಸಿಕೊಂಡು ಅನ್ನ ಕೊಡುವ ಭಾಷೆಯನ್ನು ಕಲಿಯಬೇಕು. ಆ ಮೂಲಕ ಬದುಕು ಕಟ್ಟಿಕೊಳ್ಳಲು ಇಂದಿನ ಯುವ ಪೀಳಿಗೆ ಮನಸ್ಸು ಮಾಡಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನ್ಯ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಕನ್ನಡತನವನ್ನು ಮರೆಯಬಾರದು ಎಂದರು.
ಹಿರಿಯೂರು ತಾಲ್ಲೂಕು ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್ ಮಾತನಾಡಿ, ಕನ್ನಡ ಹೃದಯದ ಭಾಷೆಯಾದಾಗ ಮಾತ್ರ ನಾವು ಕನ್ನಡಿಗರು ಗಟ್ಟಿಯಾಗಲು ಸಾಧ್ಯ. ತಮಿಳಿಗರು, ಮರಾಠಿಗರು ದೇಶದ ಯಾವುದೇ ರಾಜ್ಯಗಳಿಗೆ ಹೋದರೂ ಅವರು ಅವರ ತಾಯಿ ಭಾಷೆಯನ್ನೆ ಮಾತನಾಡುತ್ತಾರೆ. ಆದರೆ, ನಾವು ಕನ್ನಡಿಗರು ಕನ್ನಡವನ್ನು ಮರೆತಿದ್ದೇವೆ. ಇಂದಿನ ಪೀಳಿಗೆ ಇದನ್ನು ಗ್ರಹಿಸಬೇಕು ಎಂದರು. ಹೆಚ್ಚು ಹೆಚ್ಚು ಓದುವ ಕಡೆಗೆ ಮನಸ್ಸು ಮಾಡಬೇಕು ಎಂದರು.
ಇದನ್ನೂ ಓದಿ: ಅಡಿಕೆ ರೇಟ್ | ನವೆಂಬರ್ 21 | ಇಂದಿನ ಮಾರುಕಟ್ಟೆ ಬೆಲೆ
ಉಪಪ್ರಾಂಶುಪಾಲರಾದ ರುದ್ರಮುನಿ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕನ್ನಡ ಅರಿವು ಶಾಲಾ ಹಂತದಲ್ಲೇ ಗರಿಗೆದರಬೇಕು. ಆ ನಿಟ್ಟಿನಲ್ಲಿ ನಮ್ಮ ಹಿರಿಯೂರು ಶಿಕ್ಷಣ ಇಲಾಖೆ ಇಂತಹ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕೆಲಸ ಎಂದರು.
ಹರಿಯಬ್ಬೆ ಪಬ್ಲಿಕ್ ಶಾಲೆಗೆ ಇಲ್ಲಿನ ಗೆಳೆಯರ ಬಳಗ ಸಂಪೂರ್ಣ ಸಹಕಾರ ನೀಡುತ್ತಿದೆ. ಅನೇಕ ಮಹನೀಯರನ್ನು ಈ ಶಾಲೆ ಕರೆಸಲು ಇಲ್ಲಿನ ಅನೇಕರು ನೆರವಾಗಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಶಕ್ತಿಗೆ ಉತ್ತೇಜನ ನೀಡಲು ಗೋಡೆ ಪತ್ರಿಕೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ಉದ್ಯೋಗ ಖಾತರಿ ಯೋಜನೆ | ಕ್ರಿಯಾ ಯೋಜನೆ ಸೇರ್ಪಡೆಗೆ ನ.30 ರವರೆಗೆ ರೈತರಿಗೆ ಅವಕಾಶ
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಗೋವಿಂದರಾಜು ಬಿ.ಆರ್, ಸದಸ್ಯರಾದ ಸುಭಾನ್ ಸಾಬ್, ಶಿಕ್ಷಕರಾದ ವಿಜಯಕುಮಾರ್, ರಮೇಶ್.ಎಂ, ತಿಪ್ಪೇಸ್ವಾಮಿ.ಬಿ, ಪುಷ್ಪವತಿ.ಎನ್, ಭಾಗ್ಯಮ್ಮ. ಎಂ ಇದ್ದರು.
ರಮೇಶ್ ಸ್ವಾಗತಿಸಿದರು, ಸಪ್ತಗಿರಿ ವಂದಿಸಿದರು. ಬಿ.ಬಿ. ಜಾನ್ ನಿರೂಪಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
