CHITRADURGA NEWS | 01 JULY 2026
ಚಿತ್ರದುರ್ಗ: ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಹುಡುಕಿದರು, ಹಿತ್ತಲಗಿಡ ಮದ್ದಲ್ಲ ಹೀಗೆ ಅನೇಕ ಮಾತುಗಳಿಗೆ ಚಿತ್ರದುರ್ಗದ ನೆಲವನ್ನು ಸಾಕ್ಷಿಕರಿಸುತ್ತದೆ.
ಇದನ್ನೂ ಓದಿ: SIR | ಜಿಲ್ಲೆಯಾದ್ಯಂತ 32,797 ಗಣತಿ ನಮೂನೆಗಳ ವಿತರಣೆ | ಡಿಸಿ
ಈ ನೆಲದ ದಿಗ್ಗಜ ಸಾಹಿತಿ, ನಾಟಕಕಾರರು, ಬರಹಗಾರರನ್ನು ಸ್ಮರಿಸುವುದಕ್ಕಿಂತಲೂ ನೆರೆಹೊರೆಯ ಜನರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಹೃದಯವಂತರು ಕೋಟೆನಾಡಿನ ಜನ.
ನಮ್ಮ ನೆಲದ ಪ್ರತಿಭೆಗಳನ್ನು ಹೆಕ್ಕೆ ತೆಗೆಯುವಲ್ಲಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲವೆಂಬುದಕ್ಕೆ ನಮ್ಮೊಂದಿಗೆ ಸದಾ ಹೆಜ್ಜೆ ಹಾಕುವ ಕೆ.ಪಿ.ಓಂಕಾರಮೂರ್ತಿಯಲ್ಲಿ ಕಥೆಗಾರನಿದ್ದಾನೆಂಬುದನ್ನು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪರಿಚಯಿಸಿಕೊಟ್ಟಿರುವುದು.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಿತ್ರದುರ್ಗದ ಪ್ರಜಾವಾಣಿ ಸಹಾಯಕ ವರದಿಗಾರ ಕೆ.ಪಿ.ಓಂಕಾರಮೂರ್ತಿ ಸುದ್ದಿಮನೆಯ ‘ಡೆಡ್‍ಲೈನ್’ ಒತ್ತಡವನ್ನೇ ಕಥೆಯಾಗಿಸಿ, ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗೆದ್ದು ಮಧ್ಯಕರ್ನಾಟಕ ಪತ್ರಿಕಾ ಲೋಕದ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ.
ಇದನ್ನೂ ಓದಿ: ಮಾವು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದು ಒಳ್ಳೆಯದೇ?
ರಾಯಚೂರು ರಿಪೋರ್ಟರ್ಸ್ ಗಿಲ್ಡ್‍ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಹ್ವಾನಿಸಲಾಗಿದ್ದ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆಯಲ್ಲಿ ಅವರ ‘ಡೆಡ್‍ಲೈನ್’ ಕಥೆ ಪ್ರಥಮ ಸ್ಥಾನ ಪಡೆದು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿಗೆ ಪಾತ್ರವಾಗಿದೆ.
ನಾಯಕನಹಟ್ಟಿ ಸಮೀಪದ ಗೌರಿಪುರದ ಮಣ್ಣಿನಲ್ಲಿ ಹುಟ್ಟಿ ಅಕ್ಷರದ ಬೆನ್ನತ್ತಿದ ಓಂಕಾರಮೂರ್ತಿ ಅವರ ಪತ್ರಿಕೋದ್ಯಮ ಪಯಣವೇ ಒಂದು ರೋಚಕ ಕಾದಂಬರಿ. ಚಿತ್ರದುರ್ಗದ ‘ಪ್ರಜಾಪ್ರಗತಿ’ಯಿಂದ ಪತ್ರಿಕಾ ಬದುಕು ಆರಂಭಿಸಿದ ಅವರು, ಚಿತ್ರದುರ್ಗ, ಬೆಂಗಳೂರಲ್ಲಿ ವಿಜಯವಾಣಿ, ಮೈಸೂರು, ದಾವಣಗೆರೆಯಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಗಮನಸೆಳೆಯುವ ರೀತಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಚಿತ್ರದುರ್ಗದಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿ ಜನಮೆಚ್ಚಿದ ಬರಹಗಾರರಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ರಂಗಾಯಣ ಕಲಾವಿದರಿಂದ ಓಟ ನಾಟಕ ಪ್ರದರ್ಶನ
ವಿಜಯವಾಣಿಯ ಅಂಗಳದಲ್ಲಿ ಪಳಗಿ, ಮೈಸೂರು ಮತ್ತು ದಾವಣಗೆರೆಯ ವಿಜಯಕರ್ನಾಟಕದ ಪುಟಗಳಲ್ಲಿ ಅಕ್ಷರದ ಬೆಳೆ ತೆಗೆದು, ಈಗ ತಾಯಿ ಜಿಲ್ಲೆ ಚಿತ್ರದುರ್ಗಕ್ಕೆ ಮರಳಿ ಪ್ರಜಾವಾಣಿಯ ಮೂಲಕ ಜನಸಾಮಾನ್ಯರ ದನಿಯಾಗಿದ್ದಾರೆ. ಒಂದೇ ಜಿಲ್ಲೆಯಲ್ಲಿ ಮೂರು ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ದುಡಿದಿರುವುದು ವಿಶೇಷ.
ಪೂರ್ಣಚಂದ್ರ ತೇಜಸ್ವಿ ಅವರ ಕಾಡಿನ ಒಡಲು ಹೊಕ್ಕು ಬಂದಿರುವ ಓಂಕಾರಮೂರ್ತಿ, ವರದಿಗಾರಿಕೆಗೂ ಸಾಹಿತ್ಯದ ಸೊಬುಗು ತುಂಬಿದವರು. ಕರ್ವಾಲೊ ಮತ್ತು ಜುಗಾರಿ ಕ್ರಾಸ್ ಅವರ ಕೈಬಿಡದ ಸಂಗಾತಿಗಳು. ತೇಜಸ್ವಿ ಅವರಿಂದ ಪ್ರಭಾವಿತರಾಗಿರುವ ಅವರು, ನೇರ, ನಿಷ್ಠುರ ಮತ್ತು ಸರಳ ನಿರೂಪಣೆ ಮೂಲಕ ವರದಿ ಕಟ್ಟಿಕೊಡುವಲ್ಲಿ ಮುಂಚೂಣಿ.
ಮಾನವೀಯತೆಯೇ ಅವರ ವರದಿಗಳ ಜೀವಾಳ. ಪತ್ರಿಕಾ ವೃತ್ತಿಯಲ್ಲಿ ಬಿಡುವು ಸಿಕ್ಕಾಗಲೆಲ್ಲ ಪುಸ್ತಕದೊಳಗೆ ಮುಳುಗುವ ಅವರನ್ನು ನೋಡಿದರೆ ನಡೆಯುವ ಗ್ರಂಥಾಲಯ ಎನಿಸುತ್ತದೆ. ನಿರಂತರ ಓದು ಮತ್ತು ಬರಹವೇ ಅವರನ್ನು ಸಾಹಿತ್ಯ ವಲಯದಲ್ಲಿ ಚಿರಪರಿಚಿತರನ್ನಾಗಿ ಮಾಡಿದೆ.
ಇದೀಗ ಪ್ರಶಸ್ತಿ ಗೆದ್ದ ‘ಡೆಡ್‍ಲೈನ್’ ಕಥೆ, ಸುದ್ದಿಮನೆಯೊಳಗಿನ ವರದಿಗಾರನ ಮಾನಸಿಕ ತುಮುಲ, ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ, ಸಂಪಾದಕೀಯ ಒತ್ತಡಗಳ ನಡುವೆ ಸಿಕ್ಕಿಬಿದ್ದ ಪತ್ರಕರ್ತನ ಅಂತರಂಗದ ದನಿಯನ್ನು ದಾಖಲಿಸಿದೆ. ತೀರ್ಪುಗಾರರಾಗಿದ್ದ ಕಥೆಗಾರ ಮಹಾಂತೇಶ ನವಲಕಲ್ ಅವರು ವರದಿಗಾರಿಕೆಯ ಒಳಸುಳಿಗಳನ್ನು ಕಥೆಯಾಗಿಸಿರುವ ಪರಿ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ
ಕವನ ವಿಭಾಗದಲ್ಲಿ ಮೈಸೂರಿನ ದಿ ಟೈಮ್ಸ್ ಆಫ್ ಇಂಡಿಯಾ ವರದಿಗಾರ ಎಂ.ಶ್ರೀನಿವಾಸ ಅವರ ಮುಸ್ಸಂಜೆಯ ಕವನ ಪ್ರಥಮ ಸ್ಥಾನ ಪಡೆದಿದೆ. ಆಗಸ್ಟ್ ಕೊನೆಯ ವಾರ ರಾಯಚೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿದೆ. ಅಂದು ಓಂಕಾರಮೂರ್ತಿ ಅವರೊಂದಿಗೆ ಮೈಸೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನ ಪತ್ರಕರ್ತರು ಜೊತೆಯಾಗಲಿದ್ದಾರೆ.
ವರದಿಗಾರಿಕೆ ಮತ್ತು ಸಾಹಿತ್ಯವನ್ನು ಎರಡು ಕಣ್ಣುಗಳಂತೆ ಕಾಣುವ ಓಂಕಾರಮೂರ್ತಿ, ಕೇವಲ ವರದಿಗಾರರಲ್ಲ. ಅಕ್ಷರದ ಮೂಲಕ ಸಮಾಜ ತಿದ್ದುವ ಕಾಯಕಯೋಗಿ ಆಗಿದ್ದಾರೆ. ಗೌರಿಪುರದ ಹಳ್ಳಿಯಿಂದ ಹೊರಟು ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಕಲಂ ವೀರನಿಗೆ ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
