CHITRADURGA NEWS | 13 FEBRUARY 2026
ಚಿತ್ರದುರ್ಗ: ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದರೆ ಮುಂದಿನ ಪೀಳಿಗೆಗೆ ದಾರಿ ಸುಲಲಿತವಾಗಿರುತ್ತದೆ. ನಮ್ಮ ಸಮುದಾಯ ಯಾರನ್ನು ದ್ವೇಷಿಸಲ್ಲ. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತದೆ. ಬೇರೆ ಸಮುದಾಯದವರನ್ನು ತುಳಿದು ಮೇಲೆ ಬರುವ ಚಿಂತನೆಯಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಇದನ್ನೂ ಓದಿ: ನೀರಿಗಾಗಿ ಸಾವಿರಾರು ರೈತರ ಪಾದಯಾತ್ರೆ | ಸರ್ಕಾರದ ವಿರುದ್ಧ ಆಕ್ರೋಶ | ವಿಧಾನಸೌಧ ಮುತ್ತಿಗೆ ಎಚ್ಚರಿಕೆ
ಜಿಲ್ಲಾ ಒಕ್ಕಲಿಗರ ಸಂಘದಿಂದ ನಗರದ ಬಿ.ಡಿ.ರಸ್ತೆಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನದ ಡೈನಿಂಗ್ ಹಾಲ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಒಟ್ಟಾಗಿರಿ. ಎಲ್ಲರನ್ನು ಸಹೋದರರಂತೆ ಕಾಣಿ. ಪ್ರತಿ ತಾಲ್ಲುಕಿನಲ್ಲಿಯೂ ಹಾಸ್ಟೆಲ್ ಮತ್ತು ಸಮುದಾಯ ಭವನಗಳನ್ನು ಕಟ್ಟಿಸಿ. ಶಿಕ್ಷಣದಿಂದ ಮಾತ್ರ ಒಕ್ಕಲಿಗ ಜನಾಂಗ ಮುಂದುವರೆಯಲು ಸಾಧ್ಯ. ಆಸ್ತಿ, ಅಂತಸ್ತಿಗಿಂತ ವಿದ್ಯೆಗೆ ಹೆಚ್ಚಿನ ಮಹತ್ವವಿದೆ.
40 ವರ್ಷಗಳ ಹಿಂದೆ ನಮ್ಮ ಸಮುದಾಯವನ್ನು ಕೇಳುವವರಿರಲಿಲ್ಲ.ಈಗ ಪರಿಸ್ಥಿತಿ ಬದಲಾಗಿದೆ. ಒಕ್ಕಲಿಗರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವರು ಅಧಿಕಾರ ಸಿಕ್ಕಾಗ ಮೈಮೇಲೆ ಹುಚ್ಚು ಬಂದಂತೆ ಆಡುತ್ತಾರೆ. ಕಳೆದುಕೊಂಡಾಗ ಮೂಲೆ ಸೇರುತ್ತಾರೆ. ಅಧಿಕಾರದಲ್ಲಿದ್ದಾಗ ಸಮುದಾಯಕ್ಕೆ ಏನು ಮಾಡಿದ್ದೇನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನ ಪೂರ್ಣ | ಕರಾಳ ದಿನವೆಂದು ಆಚರಿಸುವುದು ಸೂಕ್ತ | ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯ
ಬೆಂಗಳೂರು ಕಟ್ಟಿದ ಕೆಂಪೆಗೌಡರ ಪ್ರತಿಮೆ ವಿಧಾನಸೌಧದ ಮುಂದೆ ಇರಲಿಲ್ಲ. ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಮೆ ನಿರ್ಮಾಣವಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್‍ಗಳನ್ನು ಕಟ್ಟಿ. ಸಮಾಜದ ಅಭಿವೃದ್ದಿಗಾಗಿ ಪಕ್ಷ ಬೇಧ ಮರೆತು ಕೆಲಸ ಮಾಡಿದಾಗ ಶಾಶ್ವತವಾಗಿ ಹೆಸರು ಉಳಿಯುತ್ತದೆ. ಒಕ್ಕಲಿಗರ ನಿಗಮ ಮಂಡಳಿ ಸ್ಥಾಪಿಸಿ ನೂರು ಕೋಟಿ ರೂ.ಗಳನ್ನು ಕೊಟ್ಟಿದ್ದೇನೆ ಎಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯೆದಾನ ಮಾಡುತ್ತಿದ್ದ ಗುರುಕುಲ ಮತ್ತು ಆಶ್ರಮಗಳು ಈಗ ಮಠಗಳಾಗಿ ಶಿಕ್ಷಣಕ್ಕೆ ಒತ್ತು ಕೊಡುತ್ತಿವೆ. ಜಿಲ್ಲಾ ಒಕ್ಕಲಿಗರ ಸಂಘ ಅದ್ಬುತವಾದ ಡೈನಿಂಗ್ ಹಾಲ್ ಕಟ್ಟಿದೆ. ಇಲ್ಲಿ ನಿತ್ಯ ಕಲ್ಯಾಣ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿ ಬೆನ್ನುತಟ್ಟಿದಾಗ ಇನ್ನು ಹೆಚ್ಚಿನ ಸಾಧನೆ ಮಾಡಲು ನೆರವಾಗಲಿದೆ. ಶ್ರೇಷ್ಠ ಕೆಲಸ ನಿಮ್ಮ ಸಂಘದಿಂದ ನಡೆಯುತ್ತಿದೆ ಎಂದು ಪ್ರಶಂಶಿಸಿದರು.
ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಮೊಗ್ಗದ ಪ್ರತಿ ತಾಲ್ಲೂಕಿನಲ್ಲಿಯೂ ಒಕ್ಕಲಿಗರ ಸಮುದಾಯ ಭವನವಿದೆ. 1 ಲಕ್ಷ 72 ಸಾವಿರ ಮಕ್ಕಳು ಓದುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೊಡುಗೆಯಿದೆ. ಶಿಕ್ಷಣದ ಕಡೆ ಮಕ್ಕಳು ಹೆಚ್ಚಿನ ಗಮನಹರಿಸಬೇಕು. ದಾನಕ್ಕಿರುವ ಶ್ರೇಷ್ಠತೆ ಏನು ಎನ್ನುವುದು ಮುಖ್ಯ. ಸಮಾಜದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ನಂಬಿಕೆ, ಶ್ರದ್ದೆಯಿರಬೇಕು. ಜೊತೆಗೆ ಭಗವಂತನಲ್ಲಿ ಭಕ್ತಿಯೂ ಇಡಬೇಕೆಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 13 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ತಿಪಟೂರಿನಲ್ಲಿ ಅದ್ಬುತವಾದ ಕಲ್ಯಾಣ ಮಂಟಪ ಕಟ್ಟಲಾಗಿದೆ. ಅದೇ ರೀತಿ ಎಲ್ಲಾ ತಾಲ್ಲೂಕಿನಲ್ಲಿಯೂ ಕಲ್ಯಾಣ ಮಂಟಪ, ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್‍ಗಳ ನಿರ್ಮಾಣವಾಗಬೇಕು. ಒಕ್ಕಲಿಗರ ಸಂಘ ಮನಸ್ಸು ಮಾಡಿದರೆ ಏನು ಸಾಧನೆ ಬೇಕಾದರೂ ಮಾಡಬಹುದು ಎಂದು ಹೇಳಿದರು.
ಒಕ್ಕಲಿಗರ ಸಂಘ ಬೆಂಗಳೂರಿನ ಡಾ.ಜೆ.ರಾಜು ಮಾತನಾಡಿ, ಬಹುದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮಾಜವನ್ನು ವಿಭಜಿಸಿ ಜನಸಂಖ್ಯೆಯನ್ನು ಕಡಿಮೆಗೊಳಿಸುವ ಹುನ್ನಾರ ನಡೆಯುತ್ತಿದೆ. ಸಮುದಾಯದವರು ಸಂಘಟಿತರಾಗಿ ಸಕ್ರಿಯವಾಗಿರಬೇಕೆಂದು ಕರೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಆರ್.ಮಂಜುನಾಥ್ ಮಾತನಾಡುತ್ತ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿ ರಾಜ್ಯ ಸುತ್ತಾಡಿ ಒಕ್ಕಲಿಗ ಜನಾಂಗವನ್ನು ಒಂದುಗೂಡಿಸಿದರು. ಈಗ ಸಮುದಾಯದಲ್ಲಿ ಸಂಘಟನೆಯ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಮಗ್ರ ಕೃಷಿ ಪದ್ಧತಿಯಿಂದ ನಿರಂತರ ಆದಾಯ | ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ
ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಹಿರಿಯೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ರಾಮಚಂದ್ರಪ್ಪ ಸೇರಿದಂತೆ ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

