
CHITRADURGA NEWS | 13 FEBRUARY 2026
ಚಿತ್ರದುರ್ಗ: ನೀರಿಗಾಗಿ ಸಾವಿರಾರು ರೈತರು ಪಾದಯಾತ್ರೆ ನಡೆಸುವ ಮೂಲಕ ಆಳುವ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಸೇರುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನ ಪೂರ್ಣ | ಕರಾಳ ದಿನವೆಂದು ಆಚರಿಸುವುದು ಸೂಕ್ತ | ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯ
ಹಿರಿಯೂರು ಹಾಗೂ ಹೊಳಲ್ಕೆರೆಯಿಂದ ಪಾದಯಾತ್ರೆ ಆರಂಭಿಸಿದ್ದ ರೈತರು, ಶುಕ್ರವಾರ ಮಧ್ಯಾಹ್ನದ ವೇಳೆಗೆ ನಗರದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದರು.
ಸುಮಾರು 40 ಕಿ.ಮೀಗಿಂತಲೂ ಹೆಚ್ಚು ಪಾದಯಾತ್ರೆ ಮಾಡಿ ಬಂದಿದ್ದರೂ ರೈತರಲ್ಲಿ ಬಳಲಿಕೆಗಿಂತ ಆಕ್ರೋಶವೇ ಹೆಚ್ಚಾಗಿತ್ತು. ಕಳೆದೆರಡು ದಶಕಗಳಿಂದ ನಿರಂತರವಾಗಿ ವಂಚನೆ ಮಾಡಿಕೊಂಡು ಬಂದಿರುವ ಎಲ್ಲ ರಾಜಕೀಯ ಪಕ್ಷಗಳು, ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.
ರೈತರ ಪಾದಯಾತ್ರೆಯನ್ನು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳು ಕೂಡಾ ರೈತರನ್ನು ಹಿಂಬಾಲಿಸಿದವು. ಹಸಿರು ಶಾಲು ಹಿಡಿದು ತಿರುಗಿಸುತ್ತಾ ರೈತರು ನೀರಿಗಾಗಿ ಒಗ್ಗಟ್ಟು ಪ್ರದರ್ಶಿಸಿದ್ದು, ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಹೊಸ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ರೈತರ ಪ್ರತಿಭಟನೆಗಾಗಿ ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಪಾದಯಾತ್ರೆ ಮೂಲಕ ಆಗಮಿಸಿದ ರೈತರ ಮೊಗದಲ್ಲಿ ಬಳಲಿಕೆಗಿಂತ ಆಕ್ರೋಶವೇ ಹೆಚ್ಚಾಗಿತ್ತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 13 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ೫೩೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ದಶಕಗಳಿಂದ ಕುಂಟುತ್ತಾ ಸಾಗುತ್ತಿರುವ ಯೋಜನೆ ಪೂರ್ಣಗೊಳಿಸಿ ಬರದಿಂದ ನಲುಗಿ ಹೋಗಿರುವ ಜಿಲ್ಲೆಯ ರೈತರಿಗೆ ನೀರು ಹರಿಸಿ ಎಂದು ಒತ್ತಾಯಿಸಿದರು.
ಸದ್ಯದಲ್ಲೇ ಮಂಡನೆಯಾಗಲಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಯೋಜನೆಗಾಗಿ ೫ ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.
ಚಿತ್ರದುರ್ಗ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಸಾವಿರಾರು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯು ಜಿಲ್ಲೆಗೆ ಸಂಜೀವಿನಿಯಾಗಬೇಕಿತ್ತು. ಆದರೆ, 20 ವರ್ಷ ಕಳೆದರೂ ನೀರು ಹರಿಯದ ಕಾರಣ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಪ್ರಮುಖ ಬೇಡಿಕೆಗಳು:
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವ 5,300 ಕೋಟಿ ರೂ. ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕು.
ರಾಜ್ಯದ ಪಾಲು: ರಾಜ್ಯ ಸರ್ಕಾರವು ಬರುವ 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗಾಗಿ 5,000 ಕೋಟಿ ರೂ.ಗಳನ್ನು ಮೀಸಲಿಡಬೇಕು.
ಹನಿ ನೀರಾವರಿ: ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕಿನ ಪ್ರತಿಯೊಬ್ಬ ರೈತನ ಜಮೀನಿಗೂ ಹನಿ ನೀರಾವರಿ ಸೌಲಭ್ಯ ಒದಗಿಸಬೇಕು.
ಕೆರೆ ತುಂಬಿಸುವ ಯೋಜನೆ: ಜಿಲ್ಲೆಯ ಎಲ್ಲಾ ತಾಲೂಕುಗಳ (ಹೊಸದುರ್ಗ, ಮೊಳಕಾಲ್ಮೂರು, ಚಳ್ಳಕೆರೆ) ಬಿಟ್ಟು ಹೋಗಿರುವ ಕೆರೆಗಳನ್ನು ಯೋಜನೆಗೆ ಸೇರಿಸಿ ನೀರು ತುಂಬಿಸಬೇಕು.
ಗಾಯತ್ರಿ ಜಲಾಶಯ: ಹಿರಿಯೂರು ಭಾಗದ ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು.
ವಾಣಿ ವಿಲಾಸ ಸಾಗರ: ವಾಣಿ ವಿಲಾಸ ಜಲಾಶಯಕ್ಕೆ ಕನಿಷ್ಠ 5 ಟಿ.ಎಂ.ಸಿ. ನೀರನ್ನು ಮೀಸಲಿಡಬೇಕು.
ವಿಧಾನಸೌಧ ಮುತ್ತಿಗೆಯ ಎಚ್ಚರಿಕೆ:
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡರು ದೂರಿದ್ದಾರೆ. “ಈ ಕೂಡಲೇ ನಮ್ಮ ಬೇಡಿಕೆಗಳು ಈಡೇರದಿದ್ದರೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಚಿತ್ರದುರ್ಗದವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಷ್ಟಕ್ಕೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಬೆಂಗಳೂರಿನ ವಿಧಾನಸೌಧ ಮುತ್ತಿಗೆ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಮಗ್ರ ಕೃಷಿ ಪದ್ಧತಿಯಿಂದ ನಿರಂತರ ಆದಾಯ | ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ
ಹೋರಾಟದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಪುರ್ಲಹಳ್ಳಿ ರವಿಕುಮಾರ್, ಕೊಂಡಾಪುರ ಪರಮೇಶ್ವರ, ಡಿ.ಸಿ.ನಾಗರಾಜ್, ವೀರೇಶ್, ರಂಗಸ್ವಾಮಿ, ಕೇಶವಮೂರ್ತಿ, ಸಿ.ವೆಂಕಟೇಶ್, ಚಂದ್ರಪ್ಪ ಸೇರಿದಂತೆ ನೂರಾರು ರೈತ ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ರೈತರ ಬಳಿ ಬಂದು ಮನವಿ ಸ್ವೀಕರಿಸಿದ ಸಚಿವ ಸುಧಾಕರ್:
ಪ್ರತಿಭಟನಾ ನಿರತ ರೈತರ ಬಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಗಮಿಸಿ ರೈತರ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಸಚಿವ ಡಿ.ಸುಧಾಕರ್, ಸೋಮವಾರ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಜಿಲ್ಲೆಯ ಸಮಸ್ಯೆ ಮನವರಿಕೆ ಮಾಡಿ ಭದ್ರೆಗೆ ಅನುದಾನ ಕೇಳುತ್ತೇವೆ ಎಂದರು.
ಹೊಳಲ್ಕೆರೆ ತಾಲೂಕಿಗೆ ಸಮಗ್ರ ನೀರಾವರಿ ಹಾಗೂ ಹೊಸದುರ್ಗ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಬೇಡಿಕೆಗೆ ಪ್ರತಿಕ್ರಿಯಿಸಿ, ಮೊದಲ ಹಂತದಲ್ಲಿ ಜಿಲ್ಲೆಗೆ ನೀರು ಹರಿದು ಬರಲಿ. ಎರಡನೇ ಹಂತದಲ್ಲಿ ಬಾಕಿ ಕಾಮಗಾರಿಗಳನ್ನು ಮಾಡಿಸೋಣ ಎಂದರು.
ಸಚಿವರ ಭರವಸೆಗೆ ತೃಪ್ತರಾಗದ ರೈತರು, ನಿಮ್ಮ ಹೇಳಿಕೆ ಬೇಕಾಗಿಲ್ಲ. ನಮಗೆ ನೀರು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
