
CHITRADURGA NEWS | 25 December 2025
ಜಿಲ್ಲಾ ಪೊಲೀಸ್ ಇಲಾಖೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ವಿವರ ಈ ಕೆಳಗಿನಂತಿದೆ.
ದಿನಾಂಕ 25.12.2025 ರಂದು ಬೆಳಗಿನ ಜಾವ ಸುಮಾರು 2.00 ಗಂಟೆ ವೇಳೆಯಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಗೊಂಡನಹಳ್ಳಿ ಸಮೀಪ ಎನ್.ಹೆಚ್-48 ರಸ್ತೆಯಲ್ಲಿ ಹಿರಿಯೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ HR-38-AB-3455 ನೇ ಕಂಟ್ರೈನರ್ ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಡಿವೈಡರ್ ಗೆ ಡಿಕ್ಕಿಪಡಿಸಿದ್ದು, ಡಿವೈಡರ್ ಹತ್ತಿ ರಸ್ತೆಯ ಇನ್ನೊಂದು ಬದಿಗೆ ಬಂದ ಲಾರಿಯು ಅದೇ ವೇಳೆಗೆ ಬೆಂಗಳೂರಿನಿಂದ ಹಿರಿಯೂರು ಮಾರ್ಗವಾಗಿ ಗೋಕರ್ಣಕ್ಕೆ ಸಂಚರಿಸುತ್ತಿದ್ದ KA-01-AE-5217 ನೇ ಸ್ಟ್ರೀಪರ್ ಕೋಚ್ ಬಸ್ಸಿಗೆ ಅಪಘಾತಪಡಿಸಿದ್ದರಿಂದ ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಹೋಗಿರುತ್ತದೆ ಹಾಗೂ ಲಾರಿಗೂ ಸಹ ಬೆಂಕಿ ಹತ್ತಿ ಲಾರಿಯ ಚಾಲಕನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.
ಇದನ್ನೂ ಓದಿ: ಬಸ್ ಬೆಂಕಿ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ | ತಾಯಿ ಮಗು ಸೇರಿ 6 ಮಂದಿ ದಹನ
ಅಪಘಾತಕ್ಕೆ ಒಳಗಾದ ಸೀಬರ್ಡ್ ಬಸ್ಸಿನ ವ್ಯವಸ್ಥಾಪಕರು ಪ್ರಯಾಣಿಸುತ್ತಿದ್ದ 29 ಜನ ಪ್ರಯಾಣಿಕರ ಪಟ್ಟಿಯನ್ನು ಒದಗಿಸಿರುತ್ತಾರೆ. ಇದರಲ್ಲಿ ಒಬ್ಬ ಪ್ರಯಾಣಿಕ ಪ್ರಯಾಣಿಸಿರುವುದಿಲ್ಲ. ತನಿಖೆಯ ವೇಳೆ ಪಟ್ಟಿಯಲ್ಲಿಲ್ಲದ 05 ವರ್ಷದ ಮಗು ಹಾಗೂ ಮಧ್ಯದಲ್ಲಿ ಹತ್ತಿದ 02 ವಯಸ್ಕ ಪ್ರಯಾಣಿಕರು ಹಾಗೂ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 33 ಜನ ಸದರಿ ಬಸ್ಸಿನಲ್ಲಿ ಪ್ರಯಾಣಿಸಿರುವುದು ಕಂಡುಬಂದಿರುತ್ತದೆ.
ಅಪಘಾತ ನಡೆದ ನಂತರ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಎಸ್ ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳು ಧಾವಿಸಿ, ಸ್ಥಳಿಯವಾಗಿ ಇದ್ದಂತಹ ಸಾರ್ವಜನಿಕರ ಸಹಾಯದೊಂದಿಗೆ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಅನುಕೂಲ ಮಾಡಿಕೊಡಲಾಯಿತು.
ಹತ್ತಿದ ಬೆಂಕಿಯನ್ನು ಸಂಪೂರ್ಣ ಶಮನಗೊಳಿಸಿದ ನಂತರ 04 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದ್ದು ಅವುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಒಂದು ಮೃತದೇಹಕ್ಕೆ ಅಂಟಿಕೊಂಡಂತೆ ಒಂದು ಮಗುವಿನ ಮೃತದೇಹವು ಕಂಡು ಬಂದಿರುತ್ತದೆ.
ಇದನ್ನೂ ಓದಿ: ಬಸ್‌ಗೆ ಬೆಂಕಿ | ಅಪಘಾತ ಸಂಭವಿಸಿದ್ದು ಹೇಗೆ ಗೊತ್ತಾ ?
ಸದರಿ ಅಪಘಾತದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಂದು ಮಗು ಮತ್ತು. 04 ಜನ ವಯಸ್ಮ ಪ್ರಯಾಣಿಕರು ಒಟ್ಟು 05 ಜನರು ಮೃತಪಟ್ಟಿದ್ದು, 28 ಜನರಿಗೆ ಗಾಯಗಳಾಗಿರುತ್ತವೆ. ಸದರಿ ಅಪಘಾತಕ್ಕೆ ಕಾರಣವಾಗಿದ್ದಲಾರಿಗೂ ಬೆಂಕಿ ಹತ್ತಿಕೊಂಡಿದ್ದರಿಂದ ಆ ಚಾಲಕನ ದೇಹ ಸಂಪೂರ್ಣ ಸುಟ್ಟು ಮೃತಪಟ್ಟಿರುತ್ತಾನೆ, ಹೀಗೆ ಈ ಅಪಘಾತದಲ್ಲಿ ಒಟ್ಟು 06 ಜನರು ಮೃತಪಟ್ಟಿರುತ್ತಾರೆ.
ಅಪಘಾತದಿಂದ ಗಾಯಗೊಂಡ ಗಾಯಾಳುಗಳು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ, ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆ, ಹಿರಿಯೂರು ಸರ್ಕಾರಿ ಆಸ್ಪತ್ರೆ, ಶಿರಾ ಸರ್ಕಾರಿ ಆಸ್ಪತ್ರೆ, ಶಿರಾ ಖಾಸಗಿ ಆಸ್ಪತ್ರೆ, ತುಮಕೂರು ಸರ್ಕಾರಿ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯ ಮತ್ತು ಸಕ್ತಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಸದರಿ ಗಾಯಾಳುಗಳ ಪೈಕಿ ಬಸ್ಸಿನ ಚಾಲಕ ಮಹಮದ್ ರಫೀಕ್ ಸೇರಿದಂತೆ ಒಟ್ಟು 04 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿರುತ್ತದೆ. ಉಳಿದ 24 ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ಆ ಪೈಕಿ 17 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ಅಪಘಾತಗೊಂಡ ಬಸ್ಸಿನಿಂದ SDRF ಮತ್ತು ಆಗ್ನಿಶಾಮಕ ದಳ, SOCO, FSL ಅಧಿಕಾರಿಗಳ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ಒಂದು ಚಿಕ್ಕ ಮಗುವಿನ ಮೃತ ದೇಹ ಸೇರಿದಂತೆ ಸುಟ್ಟು ಕರಕಲಾಗಿರುವ ಒಟ್ಟು 05 ಮೃತ ದೇಹಗಳು ಬಸ್ಸಿನಲ್ಲಿ ದೊರೆತಿರುತ್ತವೆ.
ಸದರಿ ಮೃತ ದೇಹಗಳನ್ನು ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಶವ ಪರೀಕ್ಷೆಗೊಳಪಡಿಸಬೇಕಾಗಿರುತ್ತದೆ. ಸದರಿ ಮೃತ ದೇಹಗಳನ್ನು ಮೃತರ ರಕ್ತ ಸಂಬಂಧಿಕರುಗಳ ಸಹಾಯದಿಂದ ಡಿ.ಎನ್.ಎ. ಪರೀಕ್ಷೆಗೊಳಪಡಿಸಿ ಗುರುತಿಸಬೇಕಾಗಿರುತ್ತದೆ.
ಇದನ್ನೂ ಓದಿ: ಬಸ್ ಗೆ ಬೆಂಕಿ | ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ | ಸೂಕ್ತ ಚಿಕಿತ್ಸೆಗೆ ಸೂಚನೆ
ಈ ಅಪಘಾತಕ್ಕೆ ಸಂಬಂಧಿಸಿದಂತೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.459/2025 50 281, 125(a), 106(1) 2.2.2 ವಿರುದ್ಧ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಅಪಘಾತದ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ, ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ ಹಾಗೂ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿ, ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತಾರೆ. ಹಾಲಿ ಸಂಚಾರ ವ್ಯವಸ್ಥೆ ಸುಗಮವಾಗಿರುತ್ತದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
