CHITRADURGA NEWS | 29 JULY 2026
ಚಿತ್ರದುರ್ಗ: ಬಸವಾದಿ ಶರಣರ ವೈಚಾರಿಕ ಚಿಂತನೆಗಳು ಹಾಗೂ ಹಡಪದ ಅಪ್ಪಣ್ಣನವರ ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾನಿಷ್ಠೆ ಇಂದಿನ ಆಧುನಿಕ ಬದುಕಿಗೆ ಅತ್ಯಂತ ಪ್ರಸ್ತುತ ಎಂದು ದಾವಣಗೆರೆ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಂತೋಷ್ ಎಸ್. ಹೇಳಿದರು.
ಇದನ್ನೂ ಓದಿ: ಹಿರಿಯೂರು ಉಪಚುನಾವಣೆ | ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕೆಪಿಸಿಸಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ಅವರ ಪ್ರತಿಯೊಂದು ವಿಚಾರ ಹಾಗೂ ನಿರ್ಧಾರಗಳಿಗೆ ನೆರಳಾಗಿ ನಿಂತವರು ಅಪ್ಪಣ್ಣನವರು. ಸಮಾಜದಲ್ಲಿದ್ದ ಅಪಶಕುನ ಹಾಗೂ ಅಂಧಶ್ರದ್ಧೆಯಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದರು ಎಂದು ಬಣ್ಣಿಸಿದರು.
ಅಪ್ಪಣ್ಣನವರು ಹಾಗೂ ಅವರ ಧರ್ಮಪತ್ನಿ ಲಿಂಗಮ್ಮನವರ ಸತಿ-ಪತಿಗಳ ಒಕ್ಕೂಟದ ಭಕ್ತಿಯು ಶರಣರ ಪಾಲಿಗೆ ಮಾದರಿಯಾಗಿತ್ತು. ಪ್ರತಿಯೊಬ್ಬರೂ ಶರಣರ ವಚನಗಳ ತತ್ವ ಸಂದೇಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯನ್ನು ಮೊದಲ ಆದ್ಯತೆಯಲ್ಲಿ ಬರ ಘೋಷಿಸಿ | ಆರ್.ಅಶೋಕ್
ಆತ್ಮಾವಲೋಕನಕ್ಕೆ ಹಡಪದ ಅಪ್ಪಣ್ಣ ವಚನಗಳೇ ದಾರಿದೀಪ ಇನ್ನೊಬ್ಬರ ಲೋಪದೋಷಗಳನ್ನು ಹುಡುಕುವ ಮೊದಲು ಮಾನವನು ತನ್ನನ್ನು ತಾನು ಅರಿಯಬೇಕು ಹಾಗೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಶಿವಶರಣ ಹಡಪದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಉಪನ್ಯಾಸಕ ಸಂತೋಷ್ ಎಸ್. ಅಭಿಪ್ರಾಯಪಟ್ಟರು.
770 ಅಮರ ಗಣಂಗಳಲ್ಲಿ 60 ಮಹಿಳೆಯರಿದ್ದು, ಅವರಲ್ಲಿ 30 ಜನ ವಚನಕಾರ್ತಿಯರಾಗಿದ್ದರು. ಅಕ್ಕಮಹಾದೇವಿ ಹಾಗೂ ನೀಲಾಂಬಿಕೆಯವರ ನಂತರ ಮೂರನೇ ಸಾಲಿನಲ್ಲಿ ನಿಲ್ಲುವ ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮತಾಯಿಯವರು ಸಂಸಾರಿಯಾಗಿದ್ದುಕೊಂಡೇ ಜಂಗಮತ್ವವನ್ನು ಮೆರೆದ ಶ್ರೇಷ್ಠ ಶರಣೆ ಎಂದು ಸ್ಮರಿಸಿದರು.
ಹಡಪದ ಅಪ್ಪಣ್ಣನವರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಷಟ್‌ಸ್ಥಲ ಹಾಗೂ ಬೆಳಗಿನ ವಚನಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಶೋಷಣೆಯನ್ನು ಕಟುವಾಗಿ ವಿರೋಧಿಸಿದ್ದಾರೆ. ‘ತನ್ನ ತಾನರಿಯದೆ, ತನ್ನ ತಾನೋಡದೆ, ಅನ್ಯರ ಸುದ್ದಿಯ ನಡೆ-ನುಡಿಗಳಿಗೆ ಬಿದ್ದಿರುವ ಕುನ್ನಿಗಳಿಗೆ ಲಿಂಗವೂ ಇಲ್ಲ, ಗುರುವೂ ಇಲ್ಲ ಎಂದು ವಚನದ ಮೂಲಕ ಅವರು ಸಮಾಜವನ್ನು ಎಚ್ಚರಿಸಿದ್ದಾರೆ ಎಂದರು.
ಅಲ್ಲಮಪ್ರಭುಗಳು ಮತ್ತು ಸಿದ್ಧರಾಮರು ಕಲ್ಯಾಣಕ್ಕೆ ಬಂದಾಗ, ಬಸವಣ್ಣನವರ ನಿಷ್ಠಾವಂತ ಶರಣರಾಗಿ ಹಾಗೂ ಜ್ಞಾನ-ಭಕ್ತಿಗಳ ನಡುವಿನ ಕೊಂಡಿಯಾಗಿ ಹಡಪದ ಅಪ್ಪಣ್ಣನವರು ನಿರ್ವಹಿಸಿದ ಪಾತ್ರ ಅಪಾರವಾದದ್ದು ಎಂದು ಅವರು ಬಣ್ಣಿಸಿದರು
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 29 | ರಾಗಿ, ಶೇಂಗಾ ರೇಟ್….
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ತಹಶೀಲ್ದಾರ್ ತನುಜಾ.ಟಿ.ಎಸ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದ ಸ್ವಾಮಿ, ಜಿಲ್ಲಾ ಹಡಪದ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ನಾಗರಾಜ, ತಾಲ್ಲೂಕು ಸಂಘದ ಸಮಾಜ ಸಂಘದ ಅಧ್ಯಕ್ಷ ವೃಷಬೇಂದ್ರಪ್ಪ, ಮಾಜಿ ಜಿ.ಪಂ.ಸದಸ್ಯ ಪಾಪಣ್ಣ, ಮುಖಂಡರಾದ ಚನ್ನವೀರಪ್ಪ, ಶ್ರೀನಿವಾಸ್, ಎನ್.ಡಿ.ಕುಮಾರ್, ಡಿ.ಓ.ಮೊರಾರ್ಜಿ, ರೇವಪ್ಪ, ಧನಂಜಯ, ಲಿಂಗರಾಜ್,ಚನ್ನಬಸಪ್ಪ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

