
CHITRADURGA NEWS | 28 OCTOBER 2025
ಚಿತ್ರದುರ್ಗ: ಕನಕದಾಸರ ಜಯಂತಿಯನ್ನು ನವೆಂಬರ್ 08 ರಂದು ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ನವೆಂಬರ್ 11 ರಂದು ಒನಕೆ ಓಬವ್ವ ಜಯಂತಿ | ADC ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಕನಕದಾಸರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನ. 08 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು. ಸಮಾಜದವರ ಆಶಯದಂತೆ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತ ಬಳಿ ಬೃಹತ್ ವೇದಿಕೆ ನಿರ್ಮಿಸಿ, ಸಮಾರಂಭವನ್ನು ಅಂದು ಬೆಳಿಗ್ಗೆ 11.30 ಗಂಟೆಗೆ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳ ಗೀತ ಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಜಯಂತಿ ಅಂಗವಾಗಿ ಅಂದು ಕನಕ ವೃತ್ತ ಬಳಿಯ ಕನಕದಾಸರ ಪುತ್ಥಳಿಗೆ ಹಾಗೂ ಮಾಳಪ್ಪನಹಟ್ಟಿ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಲಾಗುವುದು.
ಇದನ್ನೂ ಓದಿ: ಬಾಲ್ಯ ವಿವಾಹವಾದರೆ ಪೋಕ್ಸೋ ಕೇಸ್ ದಾಖಲು | ನ್ಯಾ.ಎಂ.ವಿಜಯ್
ಹೀಗಾಗಿ ಎರಡೂ ವೃತ್ತಗಳಲ್ಲಿ ನಗರಸಭೆ ವತಿಯಿಂದ ಸ್ವಚ್ಛತೆ ಕೈಗೊಳ್ಳಬೇಕು. ಕನಕ ವೃತ್ತದಲ್ಲಿನ ನೀರಿನ ಕಾರಂಜಿಯನ್ನು ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ನಗರದ ಎಲ್ಲ ವೃತ್ತಗಳಲ್ಲಿಯೂ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಒಂದು ವೇಳೆ ನ. 08 ರಂದು ಮಳೆಯ ಪರಿಸ್ಥಿತಿ ಕಂಡುಬಂದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗುವುದು. ವೇದಿಕೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ, ಕನಕ ವೃತ್ತದಿಂದಲೇ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಪ್ರಾರಂಭಿಸಿ, ಪ್ರಮುಖ ರಸ್ತೆಗಳಲ್ಲಿ ಸಾಗಿ, ಕುರುಬರ ಹಾಸ್ಟೆಲ್ ವರೆಗೆ ನೆರವೇರಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈಗಾಗಲೆ ಜಿಲ್ಲೆಯಲ್ಲಿ ಡಿ.ಜೆ. ಯನ್ನು ಶಾಶ್ವತವಾಗಿ ನಿಷೇಧಿಸಲಾಗಿದ್ದು, ಸಮಾಜದವರ ಕೋರಿಕೆಯಂತೆ 04 ಸ್ಪೀಕರ್‍ಗಳನ್ನೊಳಗೊಂಡ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಅನುಮತಿಸಿದ ಸಾಮಥ್ರ್ಯಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್ ಬಳಸಿದ್ದು ಕಂಡುಬಂದಲ್ಲಿ, ಸಂಬಂಧಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ನವೆಂಬರ್ 12 ರಿಂದ ಚಿತ್ರದುರ್ಗದಲ್ಲಿ ಸ್ವದೇಶಿ ಮೇಳ | ಪೋಸ್ಟರ್ ಬಿಡುಗಡೆ
ಕನಕದಾಸರ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ಹಾಗೂ ಸಂಜೆ ನಗರದಲ್ಲಿ ಸೂಕ್ತ ಹಾಗೂ ಸುಗಮವಾಗಿ ಸಂಚಾರ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗದ ರೀತಿ ಪರ್ಯಾಯ ಮಾರ್ಗ ಬದಲಾವಣೆ ಕೈಗೊಳ್ಳಬೇಕು.
ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಸರ್ಕಾರ ಕನಕದಾಸರ ಜಯಂತಿ ದಿನದಂದು ರಜೆ ಘೋಷಿಸಿರುವುದು, ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಿ ಎಂದು, ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಕನಕದಾಸರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ, ಅಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತಪ್ಪದೆ ಜಯಂತಿ ಆಚರಣೆ ಕೈಗೊಳ್ಳಬೇಕು. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಸುತ್ತೋಲೆ ಮೂಲಕ ನಿರ್ದೇಶನ ನೀಡಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: BSC ನರ್ಸಿಂಗ್ ಸೀಟುಗಳಿಗೆ ಅರ್ಜಿ ಅಹ್ವಾನ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಡಿಡಿಪಿಐ ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್, ಖಜಾಂಚಿ ಮೃತ್ಯುಂಜಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಸೇರಿದಂತೆ ಸಮಾಜದ ಮುಖಂಡರಾದ ಎಸ್.ಬಿ.ಎಲ್. ಮಲ್ಲಿಕಾರ್ಜುನ್, ಓಂಕಾರಪ್ಪ, ಯೋಗೀಶ್ ಸಹ್ಯಾದ್ರಿ, ರಾಜಣ್ಣ, ಉಮೇಶ್, ಕೃಷ್ಣಮೂರ್ತಿ, ರಮೇಶ್, ಮಧು, ಈಶ್ವರಪ್ಪ ಮಾಳಪ್ಪನಹಟ್ಟಿ ಮುಂತಾದವರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
