
CHITRADURGA NEWS | 20 MAY 2026
ಚಿತ್ರದುರ್ಗ: ಜಿಲ್ಲೆಯ ವಿವಿಧ ಕೆರೆಗಳಲ್ಲಿ ವಿವಿಧ ಯೋಜನೆಗಳಡಿ ನಡೆಯುತ್ತಿರುವ ಹೂಳು ಎತ್ತುವ ಹಾಗೂ ಮಣ್ಣು ಬಳಸಿಕೊಳ್ಳುವ ಕಾಮಗಾರಿಗಳು ಒಂದಕ್ಕೊಂದು ಓವರ್‍ಲ್ಯಾಪ್ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.20 | ಮೆಕ್ಕೆಜೋಳ, ರಾಗಿ ರೇಟ್..
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕೆರೆಗಳಲ್ಲಿ ಅಮೃತ ಸರೋವರ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಕೆರೆ ಹೂಳೆತ್ತುವ ಕಾರ್ಯಗಳು ಪ್ರಗತಿಯಲ್ಲಿವೆ. ಜೊತೆಗೆ ರೈತರು ಕೂಡ ತಮ್ಮ ಜಮೀನುಗಳಿಗೆ ಕೆರೆ ಮಣ್ಣನ್ನು ಕೊಂಡೊಯ್ಯುತ್ತಿದ್ದಾರೆ. ಆದರೆ, ಈ ಯಾವುದೇ ಯೋಜನೆಗಳ ಕಾಮಗಾರಿಗಳು ಒಂದೇ ವ್ಯಾಪ್ತಿಯಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಎಚ್ಚರಿಸಿದ ಅವರು, ಒಂದೇ ಕೆರೆಯಲ್ಲಿ ಬೇರೆ ಬೇರೆ ಇಲಾಖೆಗಳು ಕೆಲಸ ಮಾಡುವಾಗ ಸಮನ್ವಯ ಇರಬೇಕು. ಒಂದು ಯೋಜನೆಯಡಿ ಹೂಳೆತ್ತಲಾಗುತ್ತಿದೆ ಎಂದು ತೋರಿಸಿ, ಅದೇ ಜಾಗದಲ್ಲಿ ಮತ್ತೊಂದು ಯೋಜನೆಯಡಿ ಬಿಲ್ ಮಾಡುವಂತಹ ಲೋಪಗಳು ಕಂಡುಬರಬಾರದು. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ರೈತರು ತಮ್ಮ ಕೃಷಿ ಭೂಮಿಗೆ ಉಚಿತವಾಗಿ ಕೆರೆ ಮಣ್ಣನ್ನು ಕೊಂಡೊಯ್ಯಲು ಯಾವುದೇ ಅಡ್ಡಿಯಿಲ್ಲ. ಆದರೆ, ಅದಕ್ಕೆ ಕೆರೆಯ ಮಾಲೀಕತ್ವ ಹೊಂದಿರುವ ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕೃಷಿ ಉದ್ದೇಶ ಹೊರತುಪಡಿಸಿ, ವಾಣಿಜ್ಯ ಅಥವಾ ಇತರ ಉದ್ದೇಶಗಳಿಗಾಗಿ ಮಣ್ಣು ಬಳಸಿಕೊಳ್ಳುವುದಾದರೆ ನಿಯಮಾನುಸಾರ ರಾಯಲ್ಟಿ ಪಾವತಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: DIPLOMA ಕೃಷಿ ಕೋರ್ಸ್ ಪ್ರವೇಶ | ಅರ್ಜಿ ಅಹ್ವಾನ
ಕೆಲವು ಕಡೆಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ತೀವ್ರ ನಿಗಾವಹಿಸಬೇಕು. ಗ್ರಾಮೀಣ ಪ್ರದೇಶದ ಕೆರೆಗಳ ರಕ್ಷಣೆ ಮತ್ತು ಹೂಳೆತ್ತುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಅಧಿಕಾರಿಗಳು ನಿಯಮಿತವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ನಿಗದಿತ ತೂಕಕ್ಕಿಂತ ಹೆಚ್ಚುವರಿ ಅದಿರು ಸಾಗಿಸುವ ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ಅದಿರು ಲಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗಣಿ ಲಾರಿಗಳು ಸಾಗುವ ಮಾರ್ಗಗಳಲ್ಲಿ ತೀವ್ರ ಧೂಳಿನ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಬೆಳೆಗಳು ನಾಶವಾಗುತ್ತಿವೆ ಎಂದು ಗ್ರಾಮಸ್ಥರು ದೂರು ನೀಡುತ್ತಿದ್ದು, ಅದಿರು ಲಾರಿಗಳು ನಿಗದಿತ ಮಿತಿಗಿಂತ ಹೆಚ್ಚು ತೂಕ ಹೊತ್ತೊಯ್ಯುವುದಲ್ಲದೆ, ಅದಿರಿನ ಮೇಲೆ ನೀರು ಸಿಂಪಡಿಸದೆ ಮತ್ತು ತಾಡಪಲ್ ಮುಚ್ಚದೆ ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಲಾರಿಗಳ ವಿರುದ್ಧ ಸಾರಿಗೆ ಇಲಾಖೆಯು ನಿರಂತರ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ 12.7 ಮಿ.ಮೀ ಮಳೆ | 26 ಮನೆಗಳು ಹಾನಿ
ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಅನಧಿಕೃತ ಖನಿಜ ಸಾಗಣೆ ಸಂಪೂರ್ಣವಾಗಿ ತಡೆಗಟ್ಟಲು ಕಂದಾಯ, ಪೊಲೀಸ್, ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಂಟಿಯಾಗಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಬೇಕು.
ಖನಿಜ ಹಾಗೂ ಮರಳು ಸಾಗಣೆಯಲ್ಲಿ ಅಕ್ರಮ ತಡೆಯಲು ಪ್ರಮುಖ ಮಾರ್ಗಗಳಲ್ಲಿ ಆಯಕಟ್ಟಿನ ಜಾಗ ಗುರುತಿಸಿ ಜಂಟಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕು. ಕೇವಲ ಒಂದು ಇಲಾಖೆಗೆ ಸೀಮಿತವಾಗದೆ, ಪೆÇಲೀಸ್, ಅರಣ್ಯ ಮತ್ತು ಗಣಿ ಇಲಾಖೆಯ ಸಿಬ್ಬಂದಿ ಪಾಳಿ ಆಧಾರದ ಮೇಲೆ ದಿನದ 24 ಗಂಟೆಯೂ ನಿರಂತರವಾಗಿ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಎಂ.ಜೆ.ಮಹೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳಿಸಿಂಗೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

