
ಚಿತ್ರದುರ್ಗ ನ್ಯೂಸ್.ಕಾಂ
ಆನೆ ಎಂದರೆ ಸಾಕು ಅದೊಂದು ಕೌತುಕ, ವಿಸ್ಮಯ, ದೈವ ಸ್ವರೂಪ, ಪ್ರೀತಿ, ಕಾಳಜಿ..ಹೀಗೆ ಮನುಷ್ಯನಿಗೂ ಆನೆಗೂ ಕರುಳ ಬಳ್ಳಿ ಸಂಬಂಧ. ದಸರಾ ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿರಾಜಮಾನವಾದ ಚಿನ್ನದ ಅಂಬಾರಿಯನ್ನು ಹೊತ್ತ ‘ಅಭಿಮನ್ಯು’ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುವುದು ವಿಶ್ವ ವಿಖ್ಯಾತಿಗಳಿಸಿದೆ. ಇದೇ ರೀತಿ ಅರೆ ಮಲೆನಾಡು ಹೊಳಲ್ಕೆರೆಯಲ್ಲಿ ‘ಕಂಬಳಿ ಆನೆ’ ಖ್ಯಾತಿಗಳಿಸಿದೆ.
ಏನಿದು ಕಂಬಳಿ ಆನೆ ಎಂಬ ಪ್ರಶ್ನೆ ಮೂಡುವುದು ಸಹಜ. ನಿಮ್ಮ ಎಲ್ಲ ಪ್ರಶ್ನೆಗೆ ಉತ್ತರ ಮುಂದಿನಂತೆ. ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಮಂಗಳವಾರ ಕಿರು ದೀಪಾವಳಿ ಮತ್ತು ಕಾರ್ತೀಕೋತ್ಸವದ ಅಂಗವಾಗಿ ‘ಕಂಬಳಿ ಆನೆ’ ಮೆರವಣಿಗೆಯ ವಿಶಿಷ್ಟ ಆಚರಣೆ ನಡೆಯಿತು.

ಇದನ್ನೂ ಓದಿ: ಚಿತ್ರದುರ್ಗ– ತುಮಕೂರು ನಡುವೆ ಏರ್‌ಪೋರ್ಟ್; ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಚಿಂತನೆ
ಕಪ್ಪು ಕಂಬಳಿಯಿಂದ ಆನೆಯ ಬೃಹತ್ ಪ್ರತಿಕೃತಿ ರಚಿಸಿ ಅದರ ಮೇಲೆ ವೆಂಕಟೇಶ್ವರ ಸ್ವಾಮಿಯನ್ನು ಕೂರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಗೆ ಸುಮಾರು 12 ಅಡಿ ಎತ್ತರದ ಆನೆ ಪ್ರತಿಕೃತಿಯನ್ನು ಬಂಡಿಯ ಮೇಲೆ ರಚಿಸಲಾಗುತ್ತದೆ. ಆನೆ ಮಾದರಿಯ ಹೊಟ್ಟೆಯೊಳಗೆ ಒಣಗಿದ ಬಾಳೆ ಸರಬು ತುಂಬಲಾಗುತ್ತದೆ. ನಂತರ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಆನೆಗೆ ಕಣ್ಣುಗಳನ್ನು ಚಿತ್ರಿಸಿ ಮೈಮೇಲೆ ವಿವಿಧ ಚಿತ್ರಗಳ ಅಲಂಕಾರ ಮಾಡಲಾಗುತ್ತದೆ. ಇದು ನೋಡಲು ಬೃಹತ್ ಆನೆಯಂತೆ ಕಾಣುತ್ತದೆ.
ಇದನ್ನೂ ಓದಿ: ದುರ್ಗದ ಭೂಗರ್ಭದಲ್ಲಿ ಬಹು ಬೇಡಿಕೆಯ ನಿಕ್ಷೇಪ ಪತ್ತೆ; ಪುರ್ಲಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ
ಆನೆ ಪ್ರತಿಕೃತಿಗೆ ಬೃಹತ್ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ನಂತರ ಪ್ರತಿಕೃತಿ ಮೇಲೆ ದೇವರ ಮೂರ್ತಿ ಕೂರಿಸಿ, ಅದನ್ನು ರಥದ ರೀತಿಯ ಬಂಡಿಯಲ್ಲಿ ಗ್ರಾಮದ ತುಂಬ ಭಕ್ತರು ಎಳೆಯುತ್ತಾರೆ. ಈ ಊರಿನಲ್ಲಿ ‘ಕಂಬಳಿ ಆನೆ’ ಮೆರವಣಿಗೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಹಿಂದೆ ಜೀವಂತ ಆನೆಯ ಮೇಲೆ ವೆಂಕಟೇಶ್ವರ ಸ್ವಾಮಿಯ ಮೂರ್ತಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದರಂತೆ. ಆದರೆ ಬರಬರುತ್ತ ಆನೆಯನ್ನು ಕರೆಸುವುದು ಕಷ್ಟವಾಯಿತಂತೆ. ಆಗ ಸಂಪ್ರದಾಯ ಬಿಡಬಾರದು ಎಂದು ಆನೆಯ ಪ್ರತಿಕೃತಿಯನ್ನು ರಚಿಸಿ ಅದರ ಮೇಲೆ ದೇವರನ್ನು ಕೂರಿಸಿ ಮೆರವಣಿಗೆ ಮಾಡುವುದು ರೂಢಿಯಾಯಿತು’ ಎನ್ನುತ್ತಾರೆ ಪ್ರತಿಕೃತಿ ರೂಪಿಸುವ ರಾಮಚಂದ್ರಪ್ಪ, ವೆಂಕಟೇಶ್ ಹಾಗೂ ಅರ್ಚಕ ರಾಜಪ್ಪ, ಗ್ರಾಮದ ರಂಗಯ್ಯ, ಸಿ.ಆರ್.ಗೋವಿಂದಪ್ಪ, ದಯಾನಂದ್, ಗುಡೇಗೌಡರ ತಿಮ್ಮಪ್ಪ ಹಾಗೂ ತಿಪ್ಪೇಶ್.
ಹಿಂದೆ ಕಪ್ಪು ಕಂಬಳಿ ಹೆಚ್ಚು ಸಿಗುತ್ತಿದ್ದರಿಂದ ಆನೆಯ ಮಾದರಿ ಸಿದ್ಧಪಡಿಸಲು ಕಂಬಳಿ ಬಳಸುತ್ತಿದ್ದರು. ಆದರೆ ಈಗ ಕಂಬಳಿ ಬಳಕೆ ಕಡಿಮೆಯಾಗಿರುವುದರಿಂದ ಕಂಬಳಿ ಜತೆಗೆ ಕಪ್ಪು ಬಟ್ಟೆ ಬಳಸಿ ಆನೆಯ ಮಾದರಿ ಸಿದ್ಧಪಡಿಸುತ್ತಾರೆ. ಮೊದಲು ಪ್ರತೀ ವರ್ಷ ತೇಗದ ಮರ, ಬಿದಿರಿನ ದೆಬ್ಬೆಗಳಿಂದ ಆನೆಯ ಸೊಂಡಿಲು, ಕಿವಿ, ಕಾಲು, ಬಾಲ ರಚಿಸುತ್ತಿದ್ದರು. ಈಗ ಕಬ್ಬಿಣದ ಸರಳುಗಳಿಂದ ಆನೆಯ ಪ್ರತಿಕೃತಿ ರಚಿಸಿದ್ದು, ಕಪ್ಪು ಬಟ್ಟೆಯಿಂದ ಮುಚ್ಚಿ ಆನೆಯ ರೂಪ ಕೊಡಲಾಗುತ್ತಿದೆ. ದಸರಾ ಜಂಬೂಸವಾರಿ ಮಾದರಿಯಲ್ಲಿ ಮೆರವಣಿಗೆ ಗ್ರಾಮದಲ್ಲಿ ಸಾಗಿದ್ದು ವಿಶೇಷ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
