
ಚಿತ್ರದುರ್ಗ ನ್ಯೂಸ್.ಕಾಂ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾನು ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ಮಾಡಿಕೊಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ರಾಮಪ್ಪ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಿಂದ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. 2018ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೇಟ್ ಕೇಳಿದ್ದೆ ಎಂದರು.
ಚುನಾವಣೆಗೆ ಆಕಾಂಕ್ಷಿಗಳು ನೂರು ಜನರು ಇರಬಹುದು. ಆದರೆ, ಅಂತಿಮ ತೀರ್ಮಾನವನ್ನು ಪಕ್ಷ ಕೈಗೊಳ್ಳಲಿದೆ. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಅನೇಕರು ಟಿಕೆಟ್ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೇಂದ್ರ ಸಚಿವರ ಕಾರ್ಯವೈಖರಿ ಬಗ್ಗೆ ಆಕ್ಷೇಪ:
ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸೆ ಕೂಡ ಬಿಡುಗಡೆ ಆಗಿಲ್ಲ. ಕೇಂದ್ರ ಸಚಿವರೂ ಆಗಿರೂವ ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆ ಎಂದು ಡಾ.ರಾಮಪ್ಪ ಪ್ರಶ್ನಿಸಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹಿರಿಯೂರು ಮತ್ತು ಚಿತ್ರದುರ್ಗ ಮಧ್ಯೆ ಕೆಲ ಭಾಗದಲ್ಲಿರುವ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದೆ. ಈ ಬಗ್ಗೆ ಸಚಿವರು ಹಾಗೂ ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಯೋಜನೆ ಜಾರಿಯಾದರೆ ಮೂರು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೈಗಾರಿಕೆ ಸ್ಥಾಪನೆ ಆಗುತ್ತಿಲ್ಲ. ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿ ತರುವಲ್ಲಿ ಲೋಕಸಭಾ ಸದಸ್ಯರು ವಿಫಲ ಆಗಿದ್ದಾರೆ. ಅವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.

ಇದನ್ನೂ ಓದಿ: ಲೋಕಸಭೆ ಚುನಾವಾಣೆ: ಅಖಾಡಕ್ಕಿಳಿದ ಆರ್.ಬಿ.ತಿಮ್ಮಾಪುರ ಅಂಡ್ ಸನ್
2016ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬಗ್ಗೆ ಚರ್ಚೆಯಾಗಿತ್ತು. ಇದು ಬಂದರೆ ಇನ್ನೂ ಅನುಕೂಲ ಆಗುತ್ತದೆ. ಸಂಸದರಿಗೆ ಸಮಯ ಮೀರಿದೆ. ಕೌಶಲಾಭಿವೃದ್ಧಿ ಕಡೆಗೂ ಗಮನ ಹರಿಸುತ್ತಿಲ್ಲ. ಲೋಕಸೇವಾ ಆಯೋಗದ ಪರೀಕ್ಷಾ ತೇರ್ಗಡೆ ಹೊಂದಿರುವ ಕನ್ನಡಿಗರ ಸಂಖ್ಯೆ ತೀರಾ ವಿರಳ. ಈ ಪರೀಕ್ಷೆಗೆ ಪೂರಕವಾದ ಕೌಶಲಾಭಿವೃದ್ಧಿ ನೀಡಬೇಕು ಎಂದು ಹೇಳಿದರು.
ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಂಧನ ಸಚಿವರು ಕಲ್ಲಿದ್ದಲು ತರಲು ದೆಹಲಿಯಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಇನ್ನೂ ಹೆಚ್ಚಿನ ಸೌರ ವಿದ್ಯುತ್ ಉತ್ಪಾದನಾ ಕಡೆಗೆ ಕೆಲಸ ಮಾಡಲಾಗುತ್ತಿದೆ. ಮೊಳಕಾಲ್ಮುರು ತಾಲ್ಲೂಕು ಹಿಂದುಳಿದಿದೆ. ಇಲ್ಲಿಗೆ ಒಂದು ದೊಡ್ಡ ಕೈಗಾರಿಕೆ ತಂದರೆ ಜನರಿಗೆ ಉದ್ಯೋಗ ಸಿಗಲಿದೆ. ನಾನು ಸಂಸದನಾದರೆ ಆದರೆ ಈ ವಿಚಾರಗಳತ್ತ ಗಮನ ಹರಿಸಲಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮುಖಂಡರಾದ ಮೈಲಾರಪ್ಪ, ಸಂಪತ್‍ಕುಮಾರ್, ಮುದಸಿರ್ ನವಾಜ್ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
