
ಚಿತ್ರದುರ್ಗ ನ್ಯೂಸ್.ಕಾಂ: ಕೋಟೆಯಲ್ಲಿ ಬುಧವಾರ ಬೆಳಗ್ಗೆ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ನಮಗೆಲ್ಲಾ ಗೊತ್ತೇ ಇರುವ ಕಥೆಯನ್ನು ಬೇರೋಂದು ಆಯಾಮದಲ್ಲಿ ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಗೂ ಶಿವ, ಪಾರ್ವತಿ, ಷಣ್ಮುಖ ಹಾಗೂ ಗಣೇಶನ ಕಥೆಗೂ ಏನೂ ಸಂಬಂಧ ಅಂತಿರಾ ಈ ಸುದ್ದಿ ಅಲ್ಲಲ್ಲ ಈ ಕಥೆ ಓದಿ..
ಪುರಾಣದಲ್ಲಿ ಶಿವ ಪಾರ್ವತಿಗೆ ಗಣೇಶ, ಷಣ್ಮುಖ ಇಬ್ಬರು ಮಕ್ಕಳು.

ಒಂದು ದಿನ ಭಕ್ತರೊಬ್ಬರು ಶಿವನಿಗೆ ಹಣ್ಣು ತಂದು ಕೊಡುತ್ತಾರೆ. ಸಹಜವಾಗಿ ಆ ಹಣ್ಣನ್ನು ಶಿವ ಪಾರ್ವತಿಗೆ ಕೊಡುತ್ತಾರೆ. ಆದರೆ, ಪಾರ್ವತಿ ಅದನ್ನು ತಾನು ತಿನ್ನದೆ ಮಕ್ಕಳಿಗೆ ಕೊಡಲು ಯೋಚನೆ ಮಾಡುತ್ತಾರೆ.
ಇಲ್ಲೊಂದು ಸಮಸ್ಯೆ ಬರುತ್ತದೆ ಒಂದೇ ಹಣ್ಣು ಇರುತ್ತದೆ. ಆಗ ಕತ್ತರಿಸಿ ಇಬ್ಬರಿಗೂ ಪಾಲು ಮಾಡಿ ಕೊಡಲು ಯೋಚಿಸುತ್ತಾರೆ. ಆದರೆ, ಹಣ್ಣು ತಂದವರು ಇದನ್ನು ಕತ್ತರಿಸಬಾರದು. ಒಂದು ಹಣ್ಣು ಪೂರ್ತಿ ಒಬ್ಬರೇ ತಿನ್ನಬೇಕು ಎನ್ನುತ್ತಾರೆ.
ಇದನ್ನೂ ಓದಿ: ಇಲ್ಲಿ ನಂದೇನು ಹೊಲ ಇಲ್ಲ, ಬೆಳೆ ವಿಮೆ ಬರಲ್ಲ; ರೈತರ ಹಿತವಷ್ಟೇ ಮುಖ್ಯ | ಡಿಸಿ ದಿವ್ಯಪ್ರಭು
ಆಗ ಒಂದು ಸ್ಪರ್ಧೆ ಇಡಲಾಗುತ್ತದೆ, ಯಾರೂ ಮೊದಲು ಇಡೀ ವಿಶ್ವ ಸುತ್ತಿಕೊಂಡು ಬರುತ್ತಾರೆ ಅವರಿಗೆ ಹಣ್ಣು ಎಂದು ತೀರ್ಮಾನ ಆಗುತ್ತದೆ.
ತಕ್ಷಣ ಷಣ್ಮುಖ ತನ್ನ ವಾಹನ ನವಿಲು ತೆಗೆದುಕೊಂಡು ಜಗತ್ತು ಸುತ್ತಲೂ ಪ್ರಾರಂಭಿಸುತ್ತರೆ. ಆದರೆ, ಗಣೇಶ ತನ್ನ ವಾಹನ ಇಲಿಯೊಂದಿಗೆ ತಂದೆ ತಾಯಿಯನ್ನೆ ಪ್ರದಕ್ಷಿಣೆ ಹಾಕುತ್ತಾರೆ ಎಂದು ಡಿಸಿ ದಿವ್ಯಪ್ರಭು ಕಥೆಯನ್ನು ನಿಲ್ಲಿಸಿದರು.
ಮುಂದುವರೆದು ಮಾತನಾಡುತ್ತಾ, ಈ ಕಥೆಯ ತಾತ್ಪರ್ಯ ಏನೆಂದರೆ, ಷಣ್ಮುಖ ಊರ ಜನರಲ್ಲೆಲ್ಲಾ ದೇವರು ಕಾಣುತ್ತಾ ಪ್ರವಾಸ ಮಾಡುತ್ತಾ ಹೋಗುತ್ತಾರೆ.
ಆದರೆ, ಗಣೇಶ ತಂದೆ ತಾಯಿಯಲ್ಲಿ ದೇವರನ್ನು ಕಾಣುತ್ತಾರೆ. ಇಲ್ಲಿ ಎರಡು ವಿಷಯಗಳು ಕೂಡಾ ನಮಗೆ ಅವಶ್ಯವಾಗಿವೆ.
ಗಣೇಶನಂತೆ ನಾವು ನಮ್ಮ ಊರಿನ ವಿಷಯಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಷಣ್ಮುಖನಂತೆ ಬೇರೆ ಊರುಗಳಿಗೂ ತೆರಳಿ ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬೇಕು ಎನ್ನುವ ಸಂದೇಶ ಕಥೆಯಲ್ಲಿದೆ ಎಂದರು.
ಸ್ಥಳೀಯ ಪ್ರವಾಸಿ ತಾಣಗಳ ವಿಹಾರಕ್ಕೆ ಹಾಗೂ ತಂದೆ ತಾಯಿಯಲ್ಲಿ ದೇವರಂತೆ ಕಾಣಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಗಣೇಶ.
ನೆರೆಯವರು, ಊರವರಲ್ಲೂ ದೇವರನ್ನು ಕಾಣಬೇಕು. ಜಗತ್ತನ್ನೆಲ್ಲಾ ಪ್ರವಾಸ ಮಾಡಿ, ಮಾಹಿತಿ ತಿಳಿದುಕೊಳ್ಳಬೇಕು ಎನ್ನುವುದಕ್ಕೆ ಷಣ್ಮುಖನ ಉದಾಹರಣೆಯನ್ನು ನೆರೆದವರು ಮೆಚ್ಚಿಕೊಂಡರು.
ಇದೇ ವೇಳೆ, ಮಕ್ಕಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಪ್ರವಾಸಿ ತಾಣಗಳನ್ನು ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್ ಬಾಟಲಿ ತಂದು ಎಲ್ಲೆಂದರಲ್ಲಿ ಬಿಸಾಡಬಾರದು. ಕೋಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ನಮ್ಮ ಜಿಲ್ಲೆಯನ್ನು ನೋಡಲು ಬೇರೆ ಊರು, ರಾಜ್ಯ, ಹೊರ ದೇಶಗಳಿಂದ ಜನ ಬರುತ್ತಾರೆ. ಅವರಿಗೆ ಸ್ವಚ್ಛವಾಗಿರುವಂತೆ ಕಾಣಬೇಕು. ನಮ್ಮ ಊರಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಬೇಕು ಎಂದು ತಿಳಿಸಿದರು.
ಪ್ರವಾಸೋದ್ಯಮ ಹಾಗೂ ಹಸಿರು ಹೂಡಿಕೆ ಎನ್ನುವ ಪರಿಕಲ್ಪನೆ ಅಡಿಯಲ್ಲಿ ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರವಾಸ ಕೇವಲ ಮನರಂಜನೆ ಅಲ್ಲ, ತಿಳುವಳಿಕೆ ಕೂಡಾ.
ಈ ನಿಟ್ಟಿನಲ್ಲಿ ವ್ಯಾಪಕವಾಗಿ ಆಚರಣೆ ಮಾಡಬೇಕಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಪುರಾತತ್ವ ಸ್ಥಳಗಳಿವೆ. ಕೋಟೆ ಬಹಳಷ್ಟು ಇತಿಹಾಸ ಹೊಂದಿದೆ ಎಂದು ಡಿಸಿ ದಿವ್ಯಪ್ರಭು ವಿವರಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
