Connect with us

    ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ದಿನಗಣನೆ | ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆ ಸಾಧ್ಯತೆ

    dc press meet

    ಮುಖ್ಯ ಸುದ್ದಿ

    ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ದಿನಗಣನೆ | ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆ ಸಾಧ್ಯತೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 31 MAY 2024
    ಚಿತ್ರದುರ್ಗ: ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಇವಿಎಂ ಮತ ಎಣಿಕೆ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ.

    ಏಪ್ರಿಲ್‌ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಎಣಿಕೆಯು ಜೂನ್‌ 4ರಂದು ಬೆಳಿಗ್ಗೆ 7ರಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತಎಣಿಕೆ ನಡೆಯಲಿದೆ.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮತ ಏಣಿಕೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14ಟೇಬಲ್‍ ನಿಗಧಿಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆಯಲಾಗುವುದು. ಬೆಳಿಗ್ಗೆ 8ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು ಎಂದರು.

    ಕ್ಲಿಕ್ ಮಾಡಿ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ

    ‘ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.

    ‘ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260ಮತಗಟ್ಟೆಗಳ ಎಣಿಕೆಯು 19ಸುತ್ತುಗಳಲ್ಲಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರದ 287ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242ಮತಗಟ್ಟೆಗಳ ಎಣಿಕೆಯು 18ಸುತ್ತುಗಳಲ್ಲಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299ಮತಗಟ್ಟೆಗಳ ಎಣಿಕೆಯು 22ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267ಮತಗಟ್ಟೆಗಳ ಎಣಿಕೆಯು 20ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240ಮತಗಟ್ಟೆಗಳ ಎಣಿಕೆಯು 18ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

    ‘ಮತಎಣಿಕೆ ಕಾರ್ಯಕ್ಕೆ ನಿಯೋಜಿತ ಏಜೆಂಟರುಗಳು ಜಿಲ್ಲಾ ಚುನಾವಣಾ ಶಾಖೆಯಿಂದ ನೀಡಲಾಗುವ ಗುರುತಿನ ಚೀಟಿಯನ್ನು ತೋರಿಸಿ, ಎಣಿಕೆ ದಿನದಂದು ಸಕಾಲದಲ್ಲಿದ್ದು ಪ್ರವೇಶ ಪಡೆಯಬಹುದಾಗಿದೆ. ಮೊಬೈಲ್ ಸೇರಿದಂತೆ ಬೇರೆ ಯಾವುದೇ ರೀತಿಯ ವಿದ್ಯುನ್ಮಾನ ಯಂತ್ರಗಳು, ನೀರಿನ ಬಾಟಲಿ, ಕತ್ತರಿ, ಚಾಕು ಅಥವಾ ಇನ್ನಿತರ ಹರಿತವಾದ ವಸ್ತುಗಳು, ಲೈಟರ್, ಬೆಂಕಿಪೊಟ್ಟಣ ಮುಂತಾದವುಗಳು ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ಮದ್ಯಪ್ರಿಯರೇ ಗಮನಿಸಿ…ನಾಳೆಯಿಂದ ಮದ್ಯ ಮಾರಾಟ ಬಂದ್‌

    ‘ಏಜೆಂಟರು ತಮಗೆ ನಿಗಧಿಪಡಿಸಿದ ಟೇಬಲ್‌ ಮತ್ತು ಕ್ಷೇತ್ರಕ್ಕೆ ನಿಗಧಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುವುದನ್ನು ನಿಷೇಧಿಸಿದೆ. ನಿಯಮ ಪಾಲಿಸದಿರುವ ಏಜೆಂಟರನ್ನು ಯಾವುದೇ ಮುನ್ಸೂಚನೆ ನೀಡದೆ ಎಣಿಕೆ ಕೇಂದ್ರದಿಂದ ಹೊರಕಳುಹಿಸಲಾಗುತ್ತದೆ’ ಎಂದರು.

    ‘ಎಣಿಕೆ ಕಾರ್ಯಕ್ಕೆ 141 ಮೈಕ್ರೋ ಅಬ್ಸವರ್ಸ್‌, 141 ಮೇಲ್ವಿಚಾರಕರು ಹಾಗೂ 154 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ಸಭೆ, ಸಮಾರಂಭ ಹಾಗೂ ವಿಜಯೋತ್ಸವಗಳನ್ನು ಆಚರಿಸುವಂತಿಲ್ಲ’ ಎಂದು ತಿಳಿಸಿದರು.

    ‘ಪ್ರತಿ ಸುತ್ತಿನ ಎಣಿಕೆ ಮುಗಿದ ನಂತರ, ಚುನಾವಣಾ ಆಯೋಗದ ಸಾಫ್ಟ್‌ವೇರ್‌ಗೆ ಅಪ್ಲೋಡ್ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೂ ಸಿ.ಸಿ.ಕ್ಯಾಮೆರಾ ಹಾಕಲಾಗಿದೆ. 20 ಅಭ್ಯರ್ಥಿಗಳು ಇದ್ದು, ಮಧ್ಯಾಹ್ನ 12.30 ರೊಳಗೆ ಫಲಿತಾಂಶ ಅಂತಿಮವಾಗುವ ಸಾಧ್ಯತೆಗಳಿವೆ’ ಎಂದರು.

    ‘6900ಪೋಸ್ಟಲ್ ಬ್ಯಾಲೆಟ್‌ಗಳಿದ್ದು, ಪ್ರತಿ ಟೇಬಲ್‌ಗೆ ಒಂದು ಸುತ್ತಿಗೆ 500 ಮತ ಪತ್ರ ಎಣಿಕೆ ಮಾಡಬೇಕು ಎನ್ನುವ ನಿಯಮವಿದೆ. ಇದಕ್ಕಾಗಿ 11ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. 8 ಗಂಟೆಗೆ ಪೋಸ್ಟಲ್‌ ಬ್ಯಾಲೆಟ್ ಹಾಗು ಮತಯಂತ್ರ ಮತಗಳ ಎಣಿಕೆ ಒಂದೇ ಬಾರಿ ಆರಂಭವಾಗಲಿದೆ’ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಮಾತನಾಡಿ, ‘ಎಣಿಕೆ ಕಾರ್ಯಕ್ಕೆ 800 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿಯೊಬ್ಬರ ಪಾಸ್ ನೋಡಿ ಒಳಗೆ ಬಿಡಲಾಗುತ್ತದೆ. ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಅನವಶ್ಯಕ ಚರ್ಚೆ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುವುದು, ಎಲ್ಲೆಂದರಲ್ಲಿ ಸುತ್ತಾಡುವುದು, ಗುಂಪು ಚರ್ಚೆ ಇವುಗಳನ್ನು ನಡೆಸಲು ಅವಕಾಶವಿರುವುದಿಲ್ಲ. ನಿಯೋಜಿತ ಏಜೆಂಟರು ತಮ್ಮ ಕೊಠಡಿಯನ್ನು ಬಿಟ್ಟು ಕೇಂದ್ರದಲ್ಲಿ ಸಂಚರಿಸಲು ಅವಕಾಶವಿರುವುದಿಲ್ಲ. ನಿಯಮ ಪಾಲಿಸದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ’ ಎಂದು ಹೇಳಿದರು.

    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಜೆ.ಸೋಮಶೇಖರ್, ಉಪವಿಭಾಗಾಧಿಕಾರಿ ಕಾರ್ತಿಕ್‌ ಇದ್ದರು.

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top