ಮುಖ್ಯ ಸುದ್ದಿ
ಚಿತ್ರದುರ್ಗ ಬಂದ್ | ಇಡೀ ದಿನ ಏನೇನಾಯ್ತು | ಯಾರು ಏನು ಹೇಳಿದ್ರು | ಸಂಪೂರ್ಣ ವರದಿ ಇಲ್ಲಿದೆ

CHITRADURGA NEWS | 23 JANUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ವಿರೋಧಿಸಿ, ಕಾಮಗಾರಿ ತ್ವರಿತಗೊಳಿಸಲು ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಚಿತ್ರದುರ್ಗ ನಗರ ಬಂದ್ ಆಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು, ರೈತರು ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಮಧ್ಯಾಹ್ನದವರೆಗೆ ಮುಖ್ಯ ರಸ್ತೆಗಳನ್ನು ಬಂದ್ ಮಾಡುವಲ್ಲಿ ಸಂಘಟಕರು ಯಶಸ್ವಿಯಾದರು.
ಇದನ್ನೂ ಓದಿ: ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರ ಸ್ವೀಕಾರ
ಬೆಳಗ್ಗೆ 6 ಗಂಟೆಗೆ ಬೀದಿಗಿಳಿದ ರೈತರು, ಕಾರ್ಮಿಕರು, ಕನ್ನಡಪರ ಹೋರಾಟಗಾರರು, ಅಂಗಡಿ ಮುಂಗಟ್ಟುಗಳು ತೆರೆಯದಂತೆ ನೋಡಿಕೊಂಡರು. ಬಸ್ಸುಗಳು ಮುಖ್ಯ ರಸ್ತೆಗೆ ಬರಲೇ ಇಲ್ಲ. ಹೋಟೆಲ್, ಖಾಸಗಿ ಶಾಲೆಗಳು, ಬೈಕ್ ಶೋ ರೂಂಗಳು ಸೇರಿದಂತೆ ಬಹುತೇಕರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದರು.

ಚಿತ್ರದುರ್ಗ ನಗರ ಬಂದ್
ನಗರದ ಗಾಂಧಿ ವೃತ್ತ, ಪ್ರವಾಸಿ ಮಂದಿರದ ವೃತ್ತ, ಮೆದೇಹಳ್ಳಿ ರಸ್ತೆ, ಬಿ.ಡಿ.ರಸ್ತೆಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಬಂದ್ ಆಚರಿಸಿದರು.
ಭೀಮಸಮುದ್ರ ರಸ್ತೆಯಲ್ಲಿ ಬಂದ್ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದ ಗಾರ್ಮೆಂಟ್ಸ್ ಬಳಿ ಕರವೇ ಕಾರ್ಯಕರ್ತರು ಪ್ರತಿಭಟಿಸಿ ಕಾರ್ಮಿಕರನ್ನು ಹೊರಗೆ ಬರುವಂತೆ ಮಾಡಿದರು.
ಇದನ್ನೂ ಓದಿ: ಶ್ರೀರಾಮಲಲ್ಲಾ ದರ್ಶನವಾಗುತ್ತಲೇ ನೂರಾರು ಸಂತರ ಆನಂದಭಾಷ್ಪ
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮುಖ್ಯ ರಸ್ತೆ ಸಂಪೂರ್ಣ ಬಂದಗ್ ಆಗಿತ್ತು. ಕೆಲ ಶಾಲೆಗಳು ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಟೋ, ಬಸ್ ಸೇವೆ ಇಲ್ಲದೆ ಪರದಾಡಬೇಕಾಯಿತು.
ಮಾಹಿತಿ ಇಲ್ಲದೆ ನಗರಕ್ಕೆ ಬಂದ ಗ್ರಾಮೀಣ ಭಾಗದ ಜನತೆ ಹಾಗೂ ಬೇರೆ ಜಿಲ್ಲೆಯ ವಾಹನಗಳು ಚಿತ್ರದುರ್ಗ ನಗರದೊಳಗೆ ಸಂಚರಿಸುವಾಗ ಪ್ರತಿಭಟನೆಯ ಬಿಸಿ ಎದುರಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಟಾನ ಕುರಿತು ಸರಕಾರಕ್ಕೆ ಬದ್ಧತೆ ಇದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಯೋಜನೆ ಕಾಮಗಾರಿ ವೀಕ್ಷಣೆಗೆ ದಿನಾಂಕ ನಿಗಧಿಪಡಿಸಿದ್ದರು, ಆದರೆ ಇಡೀ ದಿನ ಕಾಮಗಾರಿ ವೀಕ್ಷಣೆ ಮಾಡಬೇಕು ಎನ್ನುವ ಕಾರಣಕ್ಕೆ ನಾವೇ ಮುಂದೂಡಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿನಾಂಕ ನಿಗಧಿ ಮಾಡಲಿದ್ದಾರೆ. ಬರುವ ಬಜೆಟ್‍ನಲ್ಲಿ ಯೋಜೆನೆಗೆ ಪೂರಕ ಅನುದಾನ ಮೀಸಲಿರಿಸುತ್ತೇವೆ.
| ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ.
ಜಿಲ್ಲಾ ನೀರಾವರಿ ಅನುμÁ್ಠನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಮುಖಂಡರಾದ ಜೆ.ಯಾದವರೆಡ್ಡಿ, ಬಸ್ತಿಹಳ್ಳಿ ಸುರೇಶ್ ಬಾಬು, ರೈತ ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ಹೊರಕೇರಪ್ಪ, ಲಕ್ಷ್ಮಿಕಾಂತ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಧನಂಜಯ ಹಂಪಯ್ಯನಮಾಳಿಗೆ, ಕರುನಾಡ ವಿಜಯಸೇನೆಯ ಕೆ.ಟಿ.ಶಿವಕುಮಾರ್, ಕರವೇ ರಮೇಶ್, ಅಣ್ಣಪ್ಪ, ಕಾರ್ಮಿಕ ಮುಖಂಡರದ ಸುರೇಶ್ ಬಾಬು, ಬಸವರಾಜು, ಟಿ.ಆರ್.ಉಮಾಪತಿ, ಸತ್ಯಕೀರ್ತಿ, ವೈ.ತಿಪ್ಪೇಸ್ವಾಮಿ, ವಕೀಲರು, ಪತ್ರಕರ್ತರು ಸೇರಿದಂತೆ ನೂರಾರು ಮಂದಿ ಬಂದ್‍ನಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗ ನಗರ ಬಂದ್
ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ಕೊಟ್ಟಿದ್ದು ಭಜನೆ ಮಾಡಲು ಅಲ್ಲ
ಮಾಜಿ ಸಂಸದರಿಗೆ ಬಂದ್ ಬಿಸಿ:
ರಾಜ್ಯ ಹಾಗೂ ಕೇಂದ್ರ ಎರಡೂ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರು ಬಂದ್ ಆಚರಣೆ ಮಾಡುತ್ತಿದ್ದರು. ಇದೇ ವೇಳೆಗೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಗಾಂಧಿ ವೃತ್ತಕ್ಕೆ ಆಗಮಿಸಿ ಬಂದ್‍ಗೆ ಬೆಂಬಲ ಸೂಚಿಸಿ ಮಾತನಾಡಲು ಆರಂಭಿಸಿದರು.
ಈ ವೇಳೆ ರೈತರು, ಕನ್ನಡಪರ ಹೋರಾಟಗಾರರು ಬಿ.ಎನ್.ಚಂದ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನೀವು ಐದು ವರ್ಷ ಅಧಿಕಾರದಲ್ಲಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗಾಗಿ ಏನು ಮಾಡಿದ್ದೀರಿ ಹೇಳಿ. ಈಗ ಲೋಕಸಭೆ ಚುನಾವಣೆ ಹತ್ತಿರವಾಗಿದೆ ಎಂದು ಬಂದಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಬಿ.ಎನ್.ಚಂದ್ರಪ್ಪ ಅನಿವಾರ್ಯವಾಗಿ ಮಾತು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ತೆರಳಿದರು. ಮಾಜಿ ಸಚಿವ ಎಚ್.ಆಂಜನೇಯ ಕೂಡಾ ಪರಿಸ್ಥಿತಿ ಅರಿತು ಅಲ್ಲಿಂದ ನಿರ್ಗಮಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ. ಘೋಷಣೆ ಮಾಡಿದೆ. ಆದರೆ, ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ 1200 ಕೋಟಿ ರೂ. ನೀಡಿದೆ. 21 ಸಾವಿರ ಕೋಟಿ ರೂ. ಗಾತ್ರದ ಯೋಜನೆಯನ್ನು ಕೇಂದ್ರ 16500 ಕೋಟಿಗೆ ಕಡಿತಗೊಳಿಸುವುದು ಬೇಡ. 2025ಕ್ಕೆ ಈ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ. ಅದರಂತೆ ನಮ್ಮ ಸರ್ಕಾರ ಕೂಡಾ ಮುಂದಿನ ಎರಡು ಬಜೆಟ್‍ಗಳಲ್ಲಿ ಅನುದಾನ ಒದಗಿಸುವಂತೆ ಮಾಡಲು ಜಿಲ್ಲೆಯ ಎಲ್ಲ ಶಾಸಕರು ಹೋರಾಡುತ್ತೇವೆ.
| ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ:
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದಾಸೀನದಿಂದಾಗಿ ನನೆಗುದಿಗೆ ಬಿದ್ದಿದೆ. ಕಾಮಗಾರಿ ಆರಂಭವಾಗಿ 23 ವರ್ಷ ಕಳೆದಿದ್ದರೂ ಮುಕ್ತಾಯದ ಹಂತ ತಲುಪಿಲ್ಲ. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯನ್ನು ರೈತರು ಖಂಡಿಸಿ ಮನವಿ ಸಲ್ಲಿಸಿದರು.
ಶೋಷಿತರ ಭದ್ರ ನೆಲೆಯಾಗಿರುವ ಪ್ರದೇಶಕ್ಕೆ ನೀರಾವರಿ ಜಾರಿ ವಿಚಾರದಲ್ಲಿ ಸರ್ಕಾರಗಳು ತಳೆದಿರುವ ನಿಲುವುಗಳು ನಿಜಕ್ಕೂ ಆಘಾತಕಾರಿ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ವರ್ಗಾವಣೆ
ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಕೆರೆ ತುಂಬಿಸುವ ಹಾಗೂ ಹನಿ ನೀರಾವರಿ ಯೋಜನೆಗೆ ಆರಂಭದಲ್ಲಿ 6 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಸರ್ಕಾರದ ಇಚ್ಚಾಶಕ್ತಿ ಕೊರತೆ ಹಾಗೂ ವಿಳಂಬ ಧೋರಣೆಯಿಂದಾಗಿ ಅದೀಗ 22 ಸಾವಿರ ಕೋಟಿಗೆ ತಲುಪಿದೆ.
ತರಿಕೆರೆ ತಾಲೂಕಿನ ಅಬ್ಬಿನಹೊಳಲು ಬಳಿ ಕೇವಲ 1.6 ಕಿಮೀ ಉದ್ದದ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ಕೆಲ ರೈತರು ಅಡ್ಡಿ ಪಡಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇದು ಸಮಸ್ಯೆಯಾಗಿ ಉಳಿದಿದೆ. ಓರ್ವ ಜನಪ್ರತಿನಿಧಿಯ ಹಠದ ಮುಂದೆ ಇಡೀ ಸರ್ಕಾರವೇ ಮಂಡಿಯೂರಿದೆ. ಇದೊಂದು ಸಮಸ್ಯೆಯಿಂದಾಗಿ ಯೋಜನಾ ವೆಚ್ಚ ಹೆಚ್ಚಳವಾಗುತ್ತಲೇ ಹೋಗುತ್ತಿದ್ದು ಸರ್ಕಾರಕ್ಕೆ ಈ ಸಂಗತಿ ಅರಿವಾಗದೇ ಇರುವುದು ಶೋಚನೀಯ.
ಕೇಂದ್ರದ 5300 ಕೋಟಿ ರುಪಾಯಿ ಅನುದಾನ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮುಂದೆ 2025 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಲಿಖಿತವಾಗಿ ಹೇಳಿಕೆ ನೀಡಿದೆ. 2025 ರ ವೇಳೆಗೆ ಕಾಮಗಾರಿ ಮುಗಿಸುವ ಭರವಸೆಯ ರಾಜ್ಯ ಸರ್ಕಾರ ನೀಡಿದೆಯಾದರೂ ಅನುದಾನ ಬಿಡುಗಡೆ, ಬಾಕಿ ಉಳಿದಿರುವ ಕಾಮಗಾರಿ ಪ್ರಮಾಣ ನೋಡಿದರೆ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿಯುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.
ಬಹಳ ಧೀರ್ಘ ಕಾಲದ ಹೋರಾಟ ಹಾಗೂ ಯೋಜನೆ ಇದು ಎನ್ನುವುದು ನನ್ನ ಗಮನದಲ್ಲಿದೆ. 2-3 ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿ ಆ ಭಾಗದಲ್ಲಿರುವ ಸಮಸ್ಯೆ ಬಗೆಹರಿಸುವುದು ಹಾಗೂ ಬಾಕಿ ಕಾಮಗಾರಿ ಮುಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ. ಆನಂತರ ರೈತರ ಸಭೆ ಕರೆದು ಮಾತನಾಡುತ್ತೇನೆ.
| ಟಿ.ವೆಂಕಟೇಶ್, ಜಿಲ್ಲಾಧಿಕಾರಿ.
ಕೇಂದ್ರ ಸರ್ಕಾರ ಈ ಅಂಶ ಮುಂದಿಟ್ಟುಕೊಂಡು ಅನುದಾನ ಬಿಡುಗಡೆಗೆ ಮತ್ತಷ್ಟು ವಿಳಂಬ ಮಾಡುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತಿಸಬೇಕು. ಕೇಂದ್ರದ ಅನುದಾನ ಕಾಯದೆ ರಾಜ್ಯ ಸರ್ಕಾರ ಅನುದಾನ ಕಾಯ್ದರಿಸಿಕೊಂಡು ಕಾಮಗಾರಿಗೆ ಚುರುಕಿನ ವೇಗ ನೀಡಬೇಕು. ಕೇಂದ್ರ ಎತ್ತಿರುವ ತಾಂತ್ರಿಕ ಸಮಸ್ಯೆಗಳ ತಕರಾರುಗಳ ರಾಜ್ಯ ಸರ್ಕಾರ ಸರಪಡಿಸಿಕೊಳ್ಳಲಿ.
ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಮುಖ್ಯ ಕಾಲುವೆ ಕಾಮಗಾರಿ ಶೇ.80 ರಷ್ಟು ಮುಗಿದಿದ್ದು ಬರಪೀಡಿತ ತಾಲೂಕುಗಳಾದ ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ 69 ಸಾವಿರ ಹೆಕ್ಟೇರ್ ಪ್ರದೇಶದ ಹನಿ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿಯೂ ವಿಳಂಭ ನೀತಿ ಅನುಸರಿಸಲಾಗುತ್ತಿದೆ. ತರಿಕೆರೆ ಭಾಗದಲ್ಲಿ ಈಗಾಗಲೇ ಹನಿ ನೀರಾವರಿ ಅಳವಡಿಕೆ ಕಾರ್ಯ ಪ್ರಾರಂಭಿಸಲಾಗಿದೆ. ಇದೇ ಮಾದರಿ ಈ ಮೂರು ತಾಲೂಕುಗಳಲ್ಲಿ ಕೈಗೆತ್ತಿಕೊಳ್ಳಬೇಕೆಂದು ನೀರಾವರಿ ಅನುμÁ್ಠನ ಹೋರಾಟ ಸಮಿತಿ ಆಗ್ರಹಿಸಿದೆ.

ಚಿತ್ರದುರ್ಗ ನಗರ ಬಂದ್
ಹೋರಾಟಗಾರರ ಪ್ರಮುಖ ಬೇಡಿಕೆಗಳು:
- ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.
- ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ಪ್ರದೇಶದ ಕಾಮಗಾರಿಗಳ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು.
ಹೊಳಲ್ಕೆರೆ ತಾಲೂಕಿನ ಕೆರೆಗಳ ತುಂಬಿಸಲು ಮುಂಬರುವ ಮಳೆಗಾಲದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಬೇಕು.
ಟೆಂಡರ್ ಕರೆದು ಹನಿ ನೀರಾವರಿ ಕಾಮಗಾರಿಗಳ ಆರಂಭಿಸಬೇಕು. - ಮುಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ನಿಗಧಿಗೊಳಿಸಲಾದ ಅನುದಾನದಲ್ಲಿ ಸಿಂಹಪಾಲು ಭದ್ರಾ ಮೇಲ್ದಂಡೆಗೆ ವಿನಿಯೋಗಿಸಬೇಕು.
