ಮುಖ್ಯ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಮಠಾಧೀಶರು | ಕಾಗಿನೆಲೆ ಸ್ವಾಮೀಜಿ ನೇತೃತ್ವದ ನಿಯೋಗ

ಚಿತ್ರದುರ್ಗ ನ್ಯೂಸ್.ಕಾಂ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಆಯೋಗದ ವರದಿಯನ್ನು ಪಡೆದು ಜಾರಿ ಮಾಡುವುದು, ಮಠಗಳಿಗೆ ಜಮೀನು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿವಿಧ ಮಠಾಧೀಶರು ಭೇಟಿಯಾಗಿ ಚರ್ಚಿಸಿದರು.
ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಠಾಧೀಶರು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಮಠಾಧೀಶರು
ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಬೇಕು ಎಂಬ ಮಠಾಧೀಶರ ಒತ್ತಾಯಕ್ಕೆ, ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ವರದಿ ನೀಡಲು ಎರಡು ತಿಂಗಳ ಕಾಲ ಅವಧಿ ವಿಸ್ತರಣೆಯಾಗಿದೆ. ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಅವರ ವರದಿಯನ್ನೇ ಕೊಡಲು ಸಾಧ್ಯವಿಲ್ಲ ಎಂದಿದ್ದು, ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು ಎಂದರು.

ಇದನ್ನೂ ಓದಿ: ಭಕ್ತರು ಇಚ್ಚಿಸುವವರೆಗೆ ಸ್ವಾಮೀಜಿ ಆಗಿರುತ್ತೇನೆ
ಶ್ರಮಿಕ ವರ್ಗದವರಿಗೆ ಗ್ಯಾರಂಟಿಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಠಗಳಿಗೆ ಜಮೀನು ಕೊಡುವ ಬಗ್ಗೆ ಸ್ವಾಮೀಜಿಗಳು ಪ್ರಸ್ತಾಪಿಸಿದರು. ತಹಸೀಲ್ದಾರ್ ಅವರು ಈ ಬಗ್ಗೆ ವರದಿ ನೀಡಲು ಸೂಚಿಸಿದ್ದು, ವರದಿಯನ್ನು ಶೀಘ್ರವಾಗಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸೂಚಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಮಠಾಧೀಶರು
ನಿಯೋಗದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಈಡಿಗರ ಗುರುಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀ ಬಸವ ಗುಂಡಯ್ಯ ಸ್ವಾಮೀಜಿ ಸೇರಿದಂತೆ ಮತ್ತಿತರೆ ಶ್ರೀಗಳಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ ಉಪ ಸ್ಥಿತರಿದ್ದರು.
