ಮುಖ್ಯ ಸುದ್ದಿ
ಭಕ್ತರು ಇಚ್ಚಿಸುವವರೆಗೆ ಮಾತ್ರ ನಾನು ಸ್ವಾಮೀಜಿ ಆಗಿರುತ್ತೇನೆ | ಮಾಚಿದೇವ ಶ್ರೀ

ಚಿತ್ರದುರ್ಗ ನ್ಯೂಸ್.ಕಾಂ: ಭಕ್ತರು ಎಲ್ಲಿಯವರೆಗೆ ಇಚ್ಚಿಸುತ್ತಾರೋ ಅಲ್ಲೀವರೆಗೆ ಸ್ವಾಮೀಜಿಯಾಗಿರುತ್ತೇನೆ. ಹಾಗಾಗಿ ಭಕ್ತರು ಯಾರಾದರೂ ತಮ್ಮ ಮಕ್ಕಳನ್ನು ಮಠಕ್ಕೆ ನೀಡಿದರೆ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗುವುದು ಎಂದು ಮಡಿವಾಳ ಮಾಚಿದೇವ ಮಠದ ಬಸವ ಶ್ರೀ ಮಾಚಿದೇವ ಸ್ವಾಮೀಜಿ ಹೇಳಿದರು.
ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಮಡಿವಾಳ ಗುರುಪೀಠದಲ್ಲಿ ಶನಿವಾರ ನಡೆದ ಶ್ರೀಮಠದ ಶಂಕುಸ್ಥಾಪನೆಯ 15ನೇ ವರ್ಷ, ಶ್ರೀಗಳ ಜಂಗಮದೀಕ್ಷೆಯ 25ನೇ ವರ್ಷ ಹಾಗೂ 40ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾಯಕ ಜನೋತ್ಸವ-2024ರ ಸಾನ್ನಿಧ್ಯ ವಹಿಸಿ ಮಾತನಾಡಿರು.
ಶರಣರು, ಸಂತರು ಆದರ್ಶವಾಗಿ ಬದುಕಿದವರು. ತತ್ವ ಸಿದ್ದಾಂತಗಳಿಗಾಗಿ ಬದುಕನ್ನೇ ಮುಡುಪಾಗಿಟ್ಟವರು. ಮಡಿವಾಳ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು.

ಸಮುದಾಯದ ಸಂಘಟನೆಗಾಗಿ ನಿರಂತರ ಶ್ರಮಿಸುತ್ತಿದ್ದೇನೆ. 2009 ರಲ್ಲಿ ಮಠ ಶಂಕು ಸ್ಥಾಪನೆಯಾಯಿತು. ಎಲ್ಲಾ ಸಮುದಾಯಕ್ಕೂ ಒಬ್ಬ ಸ್ವಾಮೀಜಿಯನ್ನು ನೇಮಿಸಬೇಕೆಂಬ ಮಹದಾಸೆಯಿಂದ ಮುರುಘಾಮಠದ ಶರಣರು ನನ್ನನ್ನು ಮಡಿವಾಳ ಜನಾಂಗದ ಸ್ವಾಮೀಜಿಯನ್ನಾಗಿ ನೇಮಕ ಮಾಡಿದರು ಎಂದು ಸ್ಮರಿಸಿದರು.

ಮಡಿವಾಳ ಮಾಚಿದೇವ ಮಠದ ಬಸವ ಶ್ರೀ ಮಾಚಿದೇವ ಸ್ವಾಮೀಜಿ
ಪ್ರತಿ ವರ್ಷ ಜನವರಿ 6 ರಂದು ಮಠದಲ್ಲಿ ಕಾಯಕ ಜನೋತ್ಸವ ನಡೆಯುತ್ತದೆ. ಈ ವರ್ಷ ಬರಗಾಲ ಇರುವುದರಿಂದ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ನಾವು ಯಾರನ್ನು ಆಹ್ವಾನಿಸುವುದಿಲ್ಲ. ಮಠ ನಿಮ್ಮದು ಎಂದು ತಿಳಿದುಕೊಂಡು ಪ್ರತಿ ವರ್ಷವೂ ಬರಬೇಕು. ಭಕ್ತರಿಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.
ಇದನ್ನೂ ಓದಿ: ಕಾಯಕ ಜನೋತ್ಸವಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ
4 ಸಾವಿರ ಜನ ಕುಳಿತುಕೊಳ್ಳಬಹುದಾದ ವಿಶಾಲವಾದ ಸಭಾಂಗಣ ನಿರ್ಮಾಣಕ್ಕೆ ಮುಂದಾಗಿದ್ದು, ಭಕ್ತರು ತನು, ಮನ, ಧನ ನೀಡಿ ಅಭಿವೃದ್ಧಿಗೆ ಕೈ ಜೋಡಿಸಲು ಮನವಿ ಮಾಡಿದರು.
ಮುಖಂಡರಾದ ಯಡಿಯೂರ ಮೂಡಲಗಿರಿ ಮಾತನಾಡಿ, 12ನೇ ಶತಮಾನದ ಮಡಿವಾಳ ಮಾಚಿದೇವರ ವಚನಗಳನ್ನು ಇಂದಿನ ಪೀಳಿಗೆಗೆ ಅಭ್ಯಾಸ ಮಾಡಿಸಬೇಕು. ಮಡಿವಾಳ ಜನಾಂಗ ಎನ್ನುವ ಕಾರಣಕ್ಕಾಗಿ ನಮ್ಮನ್ನು ಬೇರೆಯವರು ನಿರ್ಲಕ್ಷ್ಯ ವಹಿಸುವಂತಾಗಿದೆ. ಆದ್ದರಿಂದ ಎಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಮಾತ್ರ ಕೀಳರಿಮೆಯಿಂದ ಹೊರಬರಲು ಸಾಧ್ಯ ಎಂದರು.
ಸಮಾಜದ ಮುಖಂಡರಾದ ಎಂ.ಕೆ.ಹನುಮಂತಪ್ಪ, ಫಕೀರಪ್ಪ, ಡಾ.ಸಂಗಮೇಶ್ ಕಳಾಲ್, ನಿಜಲಿಂಗಪ್ಪ, ಮಂಜುಳಮ್ಮ, ಮಧು ಶಾಮನೂರ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಮಡಿವಾಳ ಸಮಾಜದ ಮುಖಂಡರಾದ ಶಿವಲಿಂಗಪ್ಪ, ಕೆ.ಆರ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ವಕೀಲ ಸಿದ್ದನಕೊಪ್ಪಲು ಕುಮಾರ್ ಸ್ವಾಗತಿಸಿದರು. ಮಡಿವಾಳ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ನಿರೂಪಿಸಿದರು.
