ಮುಖ್ಯ ಸುದ್ದಿ
ಗೋವಿಂದ ಕಾರಜೋಳ ಗೆಲುವಿಗೆ ಬಿಜೆಪಿ ನಾಯಕರು ಕೆಲಸ ಮಾಡಲಿಲ್ಲ | ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್

CHITRADURGA NEWS | 07 JUNE 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಚುನಾಯಿತಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಗೆಲುವು ಸಾಧಿಸುವುದು ಸ್ವತಃ ಬಿಜೆಪಿ ಕೆಲ ನಾಯಕರಿಗೆ ಇಷ್ಟ ಇರಲಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.
‘ಗೋವಿಂದ ಕಾರಜೋಳ ಅವರು ಗೆದ್ದರೆ ಎಲ್ಲದಕ್ಕೂ ಅವರ ಬಳಿ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಸರಿಯಾಗಿ ಕೆಲಸ ಮಾಡಲಿಲ್ಲ. ಜೆಡಿಎಸ್, ಆರ್‌ಎಸ್‌ಎಸ್, ಬಜರಂಗದಳ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳಿಂದ ಉತ್ತಮ ನಾಯಕನ ಆಯ್ಕೆಯಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕ್ಲಿಕ್ ಮಾಡಿ ಓದಿ:18 ವರ್ಷದ ಬಳಿಕ ಆಗ್ನೇಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ವಶಕ್ಕೆ

‘ಬಿಜೆಪಿಯ ಬಹುತೇಕ ನಾಯಕರ ಪಾತ್ರ ಈ ಚುನಾವಣೆಯಲ್ಲಿ ಇಲ್ಲ. ರಾಜಕೀಯ ಲಾಭ ಪಡೆಯುವ ಯಾವುದೇ ಮುಖಂಡರು ಕೆಲಸ ಮಾಡಿಲ್ಲ. ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದೆ. ಚುನಾವಣೆ ಹತ್ತಿರವಾದಂತೆ ಅಸಲಿ ಸತ್ಯ ಕಣ್ಣಿಗೆ ಕಾಣಿಸುತ್ತಾ ಬಂತು’ ಎಂದರು.
‘ಈ ಹಿನ್ನಲೆಯಲ್ಲಿ ಕುತಂತ್ರಿಗಳನ್ನು ಪಕ್ಷದಿಂದ ಹೊರಗೆ ಹಾಕಿ, ಗೆಲುವಿನ ಅವಲೋಕನ ಮಾಡಬೇಕು. ಗೆದ್ದ ನಂತರ ಕಹಿ ಮರೆಯುವುದು ಬೇಡ. ಕೆಲಸ ಮಾಡಿದವರ ಮನಸ್ಸಿಗೆ ಬೇಸರವಾಗುತ್ತದೆ. ನಾವು ಮಾಡಿದ ಕೆಲಸಕ್ಕೆ ಫಲ ಸಿಕ್ಕಿದ ಸಂತೋಷ ನಮ್ಮಲ್ಲಿದೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ:ಶೌಚಾಲಯದ ಬಳಿ ನವಜಾತ ಶಿಶು ಪತ್ತೆ | ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಘಟನೆ
‘ಗೋವಿಂದ ಕಾರಜೋಳ ಅವರನ್ನು ಜಿಲ್ಲೆಯ ಮತದಾರರು ಗೆಲ್ಲಿಸಿದ್ದಾರೆ. ಇದಕ್ಕೆ ಕಾರಣರಾದ ಎಲ್ಲ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ತಿಳಿಸುತ್ತೇವೆ. ಈ ಗೆಲುವು ನಮ್ಮೆಲ್ಲ ಕಾರ್ಯಕರ್ತರಿಗೆ ಸಂತಸವಾಗಿದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿದ್ದರಿಂದ ರಾಜ್ಯದಲ್ಲಿ ಫಲ ಸಿಕ್ಕಿದೆ. ಮದಕರಿ ನಾಯಕ ಥೀಮ್ ಪಾರ್ಕ್, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡಬೇಕು’ ಎಂದರು.
‘ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಾವು ಹೋಗಿಲ್ಲ, ನಮ್ಮನ್ನು ಕರೆದಿಲ್ಲ. ಲೋಕಸಭೆ ಚುನಾವಣೆಗೂ ಸ್ಥಳೀಯ ಮುಖಂಡರು ಯಾರೂ ನಮ್ಮನ್ನು ಕರೆದಿಲ್ಲ. ಅಭ್ಯರ್ಥಿ ಕರೆದು ಮಾತನಾಡಿದ್ದರಿಂದ ಕೆಲಸ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಕ್ಲಿಕ್ ಮಾಡಿ ಓದಿ: ಕೋಟೆನಾಡಿಗೆ ಐದು ದಿನ ‘ಯೆಲ್ಲೊ ಅಲರ್ಟ್’ | ಭಾರಿ ಮಳೆಯಾಗುವ ಸಾಧ್ಯತೆ
ಮುಖಂಡರಾದ ಗೋಪಾಲಸ್ವಾಮಿ ನಾಯಕ, ತಾಲೂಕು ಅಧ್ಯಕ್ಷ ತಿಮ್ಮಣ್ಣ, ಪ್ರತಾಪ್ ಜೋಗಿ, ಮಠದಹಟ್ಟಿ ವೀರಣ್ಣ ಇದ್ದರು.
