
CHITRADURGA NEWS | 11 FEBRUARY 2026
ಚಿತ್ರದುರ್ಗ: ಇಂದಿನ ಆಧುನಿಕ ಯುಗದಲ್ಲಿ ಅಂತರ್ಜಾಲದ ಬಳಕೆ ಅನಿವಾರ್ಯವಾಗಿದ್ದರೂ, ಅದರ ಹಿಂದಿರುವ ಸೈಬರ್ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಸೈಬರ್ ವಂಚನೆ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಹೇಳಿದರು.
ಇದನ್ನೂ ಓದಿ: ಹೈಕಮಾಂಡ್ ನಮಗೆ ದೇವಸ್ಥಾನವಿದ್ದಂತೆ, ಅಲ್ಲಿ ಕಷ್ಟಸುಖ ಹಂಚಿಕೊಳ್ಳುತ್ತೇವೆ | ಸಚಿವ ಸತೀಶ್ ಜಾರಕಿಹೊಳಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಪೋಷಣೆ ವಿಚಾರದಲ್ಲಿ ಪೋಷಕರಿಗೆ ತಾಳ್ಮೆ ಕಡಿಮೆಯಾಗುತಿದ್ದು. ಮಕ್ಕಳಿಗೆ ಕಥೆ ಹೇಳಿ ಊಟ ಮಾಡಿಸುವ ಬದಲು ತಾಯಂದಿರು ಇಂದು ಮಕ್ಕಳ ಕೈಗೆ ಮೊಬೈಲ್ ನೀಡುತಿದ್ದಾರೆ. ಪಬ್‌ಜಿಯಂತಹ ಆನ್‌ಲೈನ್ ಗೇಮ್‌ಗಳಿಗೆ ದಾಸರಾಗಿ ರಾಜ್ಯದಲ್ಲಿ ಕೆಲ ಯುವಕರು ಜೀವ ಕಳೆದುಕೊಂಡಿರುವುದು ಕಳವಳಕಾರಿ ಸಂಗತಿ.
ಮಕ್ಕಳಿಗೆ ಮೊಬೈಲ್ ನೀಡುವ ಬದಲು ಅವರೊಂದಿಗೆ ಸಮಯ ಕಳೆಯಬೇಕು ಮತ್ತು ದೈಹಿಕ ಆಟಗಳಿಗೆ ಪ್ರೋತ್ಸಾಹ ನೀಡಬೇಕು. ಮೊಬೈಲ್ ಗೀಳು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದು ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 10 ಫೆಬ್ರವರಿ | ಇಂದಿನ ಮಾರುಕಟೆಯಲ್ಲಿ ಅಡಿಕೆ ರೇಟ್
ಸೈಬರ್ ವಿಭಾಗದ ಪೊಲೀಸ್ ಉಪನಿರೀಕ್ಷಕ ಕಾಂತರಾಜು ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಂಚಕರು ಮುಂಬೈ ಅಥವಾ ದೆಹಲಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ, ಅಕ್ರಮ ವಹಿವಾಟಿನ ಹೆಸರಿನಲ್ಲಿ ಜನರನ್ನು ಮನೆಯಲ್ಲೇ ಬಂಧಿಯಾಗಿರಿಸುವ ‘ಡಿಜಿಟಲ್ ಅರೆಸ್ಟ್’ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲೆಯ ವೈದ್ಯರೊಬ್ಬರು ಇಂತಹ ಜಾಲಕ್ಕೆ ಸಿಲುಕಿ ಬರೋಬ್ಬರಿ ರೂ.1.27 ಕೋಟಿ ಕಳೆದುಕೊಂಡಿರುವುದು ಆಘಾತಕಾರಿ ವಿಷಯ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಕ್ಷಣ ಸಾಲ ಅಥವಾ ಹೆಚ್ಚಿನ ಲಾಭದ ಆಮಿಷಗಳಿಗೆ ಮರುಳಾಗಬಾರದು. ನಕಲಿ ಸಾಲದ ಆಪ್‌ಗಳು ಗ್ಯಾಲರಿ ಪ್ರವೇಶ ಪಡೆದು, ಪೋಟೋಗಳನ್ನು ಮಾರ್ಫಿಂಗ್ ಮಾಡಿ ಬ್ಲಾಕ್‌ಮೇಲ್ ಮಾಡುತ್ತವೆ. ಆದರಿಂದ ಆರ್‌ಬಿಐ ರಿಜಿಸ್ಟರ್ ಆಪ್‌ಗಳಲ್ಲಿ ಮಾತ್ರ ಸಾಲ ಪಡೆಯಿರಿ.
ಕಳೆದ ವರ್ಷ ಜಿಲ್ಲೆಯ ಇಂಜಿನಿಯರ್ ಒಬ್ಬರು ಆನ್‌ಲೈನ್ ಹೂಡಿಕೆ ಜಾಳಕ್ಕೆ ಬಿದ್ದು ರೂ.77 ಲಕ್ಷ ಕಳೆದುಕೊಂಡಿರುವುದನ್ನು ಕಾಣಬಹುದು. ಪೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಪಿನ್ ನಮೂದಿಸಬಾರದು.
ಇದನ್ನೂ ಓದಿ: OTP ಬಂದರೆ ಎಚ್ಚರ | ಮಾತೃವಂದನಾ ಯೋಜನೆ ಹೆಸರಲ್ಲಿ ವಂಚನೆ
ಪಿನ್ ಎಂಬುದು ಕೇವಲ ಹಣ ಕಳುಹಿಸಲು ಮಾತ್ರ ಬಳಕೆಯಾಗುತ್ತದೆ ಎಂಬ ಕನಿಷ್ಟ ಜ್ಞಾನ ಇರಬೇಕು ಹಾಗೂ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಹೈ-ಪ್ರೊಫೈಲ್ ಸೃಷ್ಟಿಸಿ ಮದುವೆಯ ಆಮಿಷವೊಡ್ಡಿ ಹಣ ಲೂಟಿ ಮಾಡುವ ಜಾಲದ ಬಗ್ಗೆಯೂ ಪೊಲೀಸ್ ಉಪನಿರೀಕ್ಷಕ ಕಾಂತರಾಜು ಮಾಹಿತಿ ನೀಡಿದರು.
ಸಾರ್ವಜನಿಕರ ಸುರಕ್ಷತೆಗಾಗಿ ಸೈಬರ್ ಕ್ರೈಂ ಪೊಲೀಸ್ ಇಲಾಖೆಯ ಕೆಲವು ಸೂತ್ರಗಳು
ಸೈಬರ್ ವಂಚನೆ ನಡೆದ ತಕ್ಷಣ ಅಥವಾ ಹಣ ಕಳೆದುಕೊಂಡ ಮೊದಲ ಎರಡು ಗಂಟೆಗಳಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚು.
ಹುಟ್ಟಿದ ದಿನಾಂಕ ಬದಲಿಗೆ ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆ ಮತ್ತು ವಿಶೇಷ ಅಕ್ಷರಗಳನ್ನೊಳಗೊಂಡ ಸಂಕೀರ್ಣ ಪಾಸ್‌ವರ್ಡ್ ಬಳಸಿಬೇಕು. ಅಪರಿಚಿತ ನಂಬರ್‌ಗಳಿಂದ ಬರುವ ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ, ಇದು ಹನಿ ಟ್ರ್ಯಾಪ್ ಜಾಲವಿರಬಹುದು. ವಾಟ್ಸಾಪ್ ಮತ್ತು ಇಮೇಲ್‌ಗಳಿಗೆ ದ್ವಿಹಂತದ ದೃಢೀಕರಣ ಸಕ್ರಿಯಗೊಳಿಸಿ.
ಇದನ್ನೂ ಓದಿ: ಸರ್ಕಾರಿ ನೌಕರರಿಂದ ಸರ್ವೋತ್ತಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಎಪಿಕೆ ಫೈಲ್‌ಗಳ ಬದಲಿಗೆ ಕೇವಲ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗಳಿಂದ ಮಾತ್ರ ಅಧಿಕೃತ ಆಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿ. ಸಾರ್ವಜನಿಕರ ವೈ-ಫೈ, ರೈಲ್ವೆ ನಿಲ್ದಾಣ ಅಥವಾ ಕೆಫೆಗಳಲ್ಲಿ ಸಿಗುವ ಉಚಿತ ವೈ-ಫೈ ಬಳಸಿ ಬ್ಯಾಂಕಿಂಗ್ ವ್ಯವಹಾರ ನಡೆಸಬೇಡಿ. ಸಾರ್ವಜನಿಕರು ಸಾಮಾಜಿಕ ಜಾಲತಾಣ ಪ್ರವಾಸಕ್ಕೆ ಹೋದಾಗ ಆ ಮಾಹಿತಿಯನ್ನು ತಕ್ಷಣವೇ ಹಂಚಿಕೊಳ್ಳಬೇಡಿ. ಅದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇರುವ ಸುಳಿವು ನೀಡಿದಂತಾಗುತ್ತದೆ ಎಂದು ಉಪನಿರೀಕ್ಷಕ ಕಾಂತರಾಜು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ ಅಧಿಕಾರಿಗಳಾದ ಮುಖೇಶ್, ಟಿ.ಟಿ.ಮನೋಜ್, ಜಿಲ್ಲಾಧಿಕಾರಿಗಳ ಕಚೇರಿ ಪ್ರದೀಪ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
